Advertisement
ಬೆಂಗಳೂರಿನ ವಿಶಿಷ್ಟ ವೈಭವದ ಪರಿಚಯ ನನಗಾಗಿದ್ದು ಪೂನಾದಲ್ಲಿ. ಇಂಜಿನಿಯರಿಂಗ್ ಮುಗಿಸಿದ ನನಗೆ ಪೂನಾದ ಒಂದು ದ್ವಿಚಕ್ರ ವಾಹನ ತಯಾರಿಕೆಯ ಕಂಪೆನಿಯೊಂದರಲ್ಲಿ ಕೆಲಸ ಸಿಕ್ಕಿತ್ತು. ದೇಶದ ಹಲವು ಪ್ರತಿಷ್ಠಿತ ಕಾಲೇಜಿನ ಹುಡುಗರು ನಮ್ಮ ಜೊತೆಗೆ ಟ್ರೇನಿಯಾಗಿ ಸೇರಿದ್ದರು. ಅದರಲ್ಲಿ ಮಧುಕರ ಎನ್ನುವ ಮುಂಬಯಿಯ ಹುಡುಗನಿದ್ದ. ಅವನು ಮುಂಬಯಿ ಐಐಟಿಯಲ್ಲಿ ಓದಿ ಬಂದಿದ್ದ. ದೊಡ್ಡ ವಾರಾಂತ್ಯದ ರಜೆಯೊಂದು ಬಂದಾಗ ಅವನು ಬೆಂಗಳೂರಿಗೆ ಹೋಗಿ ಬಂದ. ಅಲ್ಲಿಂದ ಬಂದವನೇ ಕೆಲಸಕ್ಕೆ ರಾಜೀನಾಮೆ ಕೊಟ್ಟುಬಿಟ್ಟ. ನಾನು ಕಾರಣವೇನೆಂದು ಕೇಳಿದ್ದಕ್ಕೆ, “”ಬೆಂಗಳೂರು ಏನು ಸಖತ್ ಆಗಿದೆ ಗೊತ್ತಾ? ಎಲ್ಲಿ ನೋಡಿದ್ರೂ ಪಬ್‌ಗಳು ಸಿಗ್ತವೆ. ಈ ಊರಾಗೆ ಒಂದು ಒಳ್ಳೆ ಪಬ್ ಬೇಕಂದ್ರೂ ಹತ್ತು ಕಿಲೋಮೀಟರ್ ದೂರ ಹೋಗಬೇಕು. ಇಂಥಾ ಊರಾಗೆ ನಾನ್ಯಾಕೆ ಟೈಮ್ ವೇಸ್ಟ್ ಮಾಡ್ಲಿ? ಅಲ್ಲಿಗೆ ಹೋಗಿ ಯಾವುದಾದರೂ ಕೆಲಸಕ್ಕೆ ಟ್ರೈ ಮಾಡ್ತೀನಿ” ಎಂದು ಬಹುಗಂಭೀರವಾಗಿ ಹೇಳಿದ್ದ. ಬದುಕಿನಲ್ಲಿ ಯಾವತ್ತೂ “ಎಣ್ಣೆ’ ಹಾಕದ ನಾನು ತಬ್ಬಿಬ್ಟಾಗಿ ಅವನನ್ನು ನೋಡಿ¨ªೆ.
Related Articles
Advertisement
ಬೆಂಗಳೂರಿನ ಗೆಳೆಯರ ಜೊತೆಯಲ್ಲಿ ರಸ್ತೆಗಳಲ್ಲಿ ಅಡ್ಡಾಡುವಾಗ ಒಂದು ವಿಚಿತ್ರ ಅನುಭವ ಆಗುತ್ತಿತ್ತು. ಅವರೆಲ್ಲ ಆ ರಸ್ತೆಯ ಅವಸ್ಥೆಯನ್ನು ಉಗಿಯುತ್ತ ರಸ್ತೆ ಎಷ್ಟು ಕಚಡಾ ಆಗಿದೆ! ಎಲ್ಲಿ ನೋಡಿದ್ರೂ ಕುಣಿ ಬಿದ್ದವೆ. ಈ ಸರಕಾರ ಸರಿ ಇಲ್ಲ ಎಂದು ಆವೇಶದಿಂದ ಮಾತಾಡುತ್ತಿದ್ದರು. ಆದರೆ, ನನಗೆ ಆ ರಸ್ತೆ ಸೊಗಸಾಗಿದೆ ಎಂದು ಅನ್ನಿಸುತ್ತಿತ್ತು. ನಮ್ಮ ಊರಿನ ರಸ್ತೆಗಳು ಎಂದೂ ತಾರನ್ನು ಕಾಣದ, ಉಬ್ಬು-ತಗ್ಗಿನ ಮಣ್ಣಿನ ರಸ್ತೆಗಳು ಆಗಿದ್ದವು. ಆದ್ದರಿಂದ ನನಗೆ ಬೆಂಗಳೂರಿನ ರಸ್ತೆಯ ಚಿಕ್ಕಪುಟ್ಟ ಕುಣಿಗಳು ಅಂತಹ ಪ್ರಮಾದವೆಂದೇನೂ ಕಾಣಿಸುತ್ತಿರಲಿಲ್ಲ. ಅದರ ಮೇಲೆ ಸೊಗಸಾಗಿ ನಡೆಯಬಹುದಲ್ಲ ಎಂದನ್ನಿಸುತ್ತಿತ್ತು. ಬೈಕು, ಕಾರುಗಳನ್ನು ಓಡಿಸಿದ ಅನುಭವ ನನ್ನದಾಗಿರಲಿಲ್ಲವಾದ್ದರಿಂದ ಅವರ ದೃಷ್ಟಿಯಿಂದ ನಾನು ಜಗತ್ತನ್ನು ನೋಡುತ್ತಿರಲಿಲ್ಲ. ಒಂದು ದಿನ ನನ್ನ ಅನಿಸಿಕೆಯನ್ನು ಹತ್ತಿಡಲಾರದೆ ಅವರ ಮುಂದೆ ಹೇಳಿಬಿಟ್ಟೆ. ಬೆಂಗಳೂರಿನ ಗೆಳೆಯರೆÇÉಾ ನನ್ನ ಮೇಲೆ ಎಗರಿ ಬಿದ್ದರು. “ಈ ರಸ್ತೆ ಚೆನ್ನಾಗಿದೆಯಾ? ನಿಂಗೆ ತಲೆಯಲ್ಲಿ ಸೆಗಣಿ ತುಂಬಿದೆಯಾ? ಕುಣಿ ಕಾಣಿಸಲ್ವಾ? ಹಳ್ಳಿ ಗಮಾರ ನೀನು’ ಎಂದು ಹರಿಹಾಯ್ದು ಬಿಟ್ಟರು. ಅಂದಿನಿಂದ ಒಂದು ಬಗೆಯ ಕೀಳರಿಮೆ ನನ್ನನ್ನು ಕಾಡಲು ಶುರುವಿಟ್ಟುಕೊಂಡಿತು.
ಬೆಂಗಳೂರಿನ ಗೆಳೆಯನೊಬ್ಬ ಹೇಳಿದ ಒಂದು ಘಟನೆ ಮಾತ್ರ ನನ್ನನ್ನು ಅÇÉಾಡಿಸಿಬಿಟ್ಟಿತ್ತು. ಅವನ ತಂದೆ ಚಿತ್ರದುರ್ಗದ ಕಡೆಯ ಹಳ್ಳಿಯವರು. ಸಾಕಷ್ಟು ಹೊಲ-ಮನೆಗಳಿದ್ದರೂ ಅದನ್ನು ತೊರೆದು ಬೆಂಗಳೂರಿಗೆ ಬಂದು ನೆಲೆಸಿದ್ದರು. ಆ ಕಾರಣಕ್ಕಾಗಿ ಅವರ ತಂದೆಯ ದ್ವೇಷವನ್ನು ಕಟ್ಟಿಕೊಂಡಿದ್ದರು. ಸುಮಾರು ಇಪ್ಪತ್ತು ವರ್ಷವಾದರೂ ಅವರು ಮಗನನ್ನು ನೋಡಲು ಬೆಂಗಳೂರಿಗೆ ಬಂದಿರಲಿಲ್ಲ. ಕಡೆಗೆ ಮುಪ್ಪಿನÇÉೊಮ್ಮೆ ತಮ್ಮ ದ್ವೇಷವನ್ನು ಕೊನೆಗಾಣಿಸುವ ಸಲುವಾಗಿ ಬೆಂಗಳೂರಿನ ಬಸ್ಸನ್ನು ಹತ್ತಿ ಬೆಳಿಗ್ಗೆಯ ಹೊತ್ತಿಗೆ ಮೆಜೆಸ್ಟಿಕ್‌ಗೆ ಬಂದಿಳಿದರು. ಟೆಲಿಫೋನ್ ಬಳಕೆಯಲ್ಲಿಲ್ಲದ ಕಾಲವದು. ಬೆಂಗಳೂರಿನ ವಿಶಾಲತೆಯನ್ನು ಕಲ್ಪನೆಯೂ ಮಾಡಿಕೊಂಡಿರದಿದ್ದ ಅವರು ಮಗನ ಮನೆಯ ವಿಳಾಸವನ್ನು ಬರೆದುಕೊಳ್ಳದೆ ಬಂದು ಬಿಟ್ಟಿದ್ದರು. ಅಲ್ಲಿಯೇ ಹತ್ತಿರದಲ್ಲಿದ್ದ ಆಟೋದವರ ಬಳಿಗೆ ಹೋಗಿ, “ನಮ್ಮ ಶೇಷಗಿರಿ ಮನೆಗೆ ಕರಕೊಂಡು ಹೋಗಪ್ಪಾ…’ ಎಂದು ಕೇಳಿದರಂತೆ. ಅದಕ್ಕೆ ಆಟೋದವರು ವಿಳಾಸ ಹೇಳದೆ, “ಹೆಂಗೆ ಕರಕೊಂಡು ಹೋಗೋದು ಅಜ್ಜ?’ ಎಂದು ನಗೆಯಾಡಿದರಂತೆ. “ಚಿತ್ರದುರ್ಗದ ಜಿÇÉೆಯವನಪ್ಪಾ ನಮ್ಮ ಹುಡುಗ. ಹೊಯ್ಸಳ ಬ್ರಾಹ್ಮಣರ ಮನೆತನದವನು. ಊರಲ್ಲಿ ಸಾಕಷ್ಟು ಹೊಲ-ಮನೆ ಅದಾವೆ’ ಎಂದರೆ ಅದಕ್ಕೂ ನಕ್ಕರಂತೆ. ಕೊನೆಗೆ ಏನೂ ಮಾಡಲೂ ತೋಚದೆ ಚಿತ್ರದುರ್ಗದ ಬಸ್ಸನ್ನು ಹಿಡಿದು ವಾಪಸು ಹೋಗಿಬಿಟ್ಟರಂತೆ.
ವ್ಯಕ್ತಿಗಿಂತ ವಿಳಾಸನೇ ಮುಖ್ಯ ಆಗಿದೆ ಆ ಊರಾಗೆ. ಅಂತಹ ಊರಲ್ಲಿ ನಾನು ಮತ್ತೆ ಕಾಲಿಡಲ್ಲ ಎಂದು ಹಳ್ಳಿಗೆ ಹೋಗಿ ಕೂಗಾಡಿದರಂತೆ.
ಈ ಅಜ್ಜನ ಪರಿಸ್ಥಿತಿ ನನ್ನನ್ನು ಬಹುದಿನಗಳವರೆಗೆ ಕಾಡಿತು. ನಮ್ಮೂರಲ್ಲಿ ಯಾರೇ ಬಸ್ ನಿಲ್ದಾಣದಲ್ಲಿ ಇಳಿದು ನಮ್ಮಪ್ಪನ ಹೆಸರನ್ನು ಹೇಳಿದರೆ ಸಾಕಿತ್ತು. ಯಾರಾದರೂ ಮನೆಗೆ ಕರೆದುಕೊಂಡು ಬರುತ್ತಿದ್ದರು. ಕೇವಲ ಅಪ್ಪನ ಹೆಸರು ಮತ್ತು ಊರಿನ ಹೆಸರನ್ನು ಬರೆದ ಅಂಚೆಯ ಕಾಗದ ತಪ್ಪದಂತೆ ಮನೆಗೆ ಬಂದು ಬೀಳುತ್ತಿತ್ತು. ಹಾಗಂತ ನಮ್ಮಪ್ಪ ಶ್ರೀಮಂತನೇನೂ ಆಗಿರಲಿಲ್ಲ. ಮಧ್ಯಮ ವರ್ಗದ, ಬಹು ಸಾಧಾರಣ ವ್ಯಕ್ತಿ. ಊರಲ್ಲಿ ಹತ್ತು ಸಾವಿರಕ್ಕೂ ಮೀರದ ಜನಸಂಖ್ಯೆ ಇರುವ ಕಾರಣದಿಂದ ಅವೆಲ್ಲವೂ ಸಾಧ್ಯವಾಗುತ್ತಿತ್ತು ಎನ್ನುವ ವಾಸ್ತವ ಸ್ವೀಕರಿಸುವುದು ನನಗೆ ಕಷ್ಟವಾಗುತ್ತಿತ್ತು. ವ್ಯಕ್ತಿಗಿಂತಲೂ ವಿಳಾಸವೇ ಮುಖ್ಯವಾದ ಈ ಊರನ್ನು ಬಂದು ಸೇರಿಕೊಂಡು ಬಿಟ್ಟೆ ಎನ್ನುವ ಅಸಮಾಧಾನ ನನ್ನನ್ನು ಕಾಡುತ್ತಿತ್ತು. ಆ ಅಜ್ಜನಿಗೆ ಆದ ಅವಮಾನ ನಮ್ಮಪ್ಪನಿಗೂ ಆದ ಅವಮಾನದಂತೆ ಭಾಸವಾಗಿ ಕುಸಿಯುತ್ತಿ¨ªೆ.
ಆದರೆ, ಕೆಲವೇ ವರ್ಷಗಳಲ್ಲಿ ಬೆಂಗಳೂರಿನ ಅನಾಮಿಕತೆಯೇ ಅದರ ಶಕ್ತಿಯೆಂದು ಗೋಚರಿಸತೊಡಗಿತು. ಅದು ನನ್ನ ವಿಭಿನ್ನ ಲೈಂಗಿಕತೆಯನ್ನು ಸ್ವೀಕರಿಸುವ, ಅದರ ಅರ್ಥವನ್ನು ಅನ್ವೇಷಿಸುವ ಸಮಯದಲ್ಲಿ ನನಗೆ ತಿಳಿಯಲಾರಂಭಿಸಿತು. ಈ ಊರಿನಲ್ಲಿ ಯಾರೂ ನನ್ನನ್ನು ಹೆಸರು, ಜಾತಿ ಮತ್ತು ಆಸ್ತಿಯ ಹಿನ್ನೆಲೆಯಿಂದ ಗುರುತಿಸುವುದಿಲ್ಲ ಎಂಬ ಸಂಗತಿಯೇ ನನಗೆ ಬೆಂಗಳೂರನ್ನು ಪ್ರೀತಿಸಲು ಪ್ರೇರೇಪಣೆ ನೀಡಲಾರಂಭಿಸಿದವು. ಎಷ್ಟೊಂದು ಸುಲಭವಾಗಿ “ಗೇ’ ಎಂದು ಹೇಳಿಕೊಂಡು ಈ ಊರಿನಲ್ಲಿ ಬದುಕುತ್ತಿದ್ದೇನೆ! ಇಂತಹ ಸಾಧನೆ ನನ್ನೂರಿನಲ್ಲಿ ಇದ್ದುಕೊಂಡು ಮಾಡಲು ಖಂಡಿತ ಸಾಧ್ಯವಾಗುತ್ತಿರಲಿಲ್ಲ ಎಂಬ ಜ್ಞಾನೋದಯ ನನಗಾಗಿದೆ.
ಬೆಂಗಳೂರಿನಲ್ಲಿ ಇರಲಾರಂಭಿಸಿ ಆಗಲೇ ಇಪ್ಪತ್ತೈದು ವರ್ಷಕ್ಕೂ ಹೆಚ್ಚು ಕಾಲವಾಯ್ತು. ಒಂದು ಊರಿನಲ್ಲಿ ಹತ್ತು ವರ್ಷಕ್ಕೂ ಹೆಚ್ಚು ಕಾಲವಿದ್ದೂ ಅದನ್ನು ಪ್ರೀತಿಸುವುದಿಲ್ಲವೆಂದರೆ ನಮಗೆ ಬದುಕುವ ಕಲೆ ಗೊತ್ತಿಲ್ಲವೆಂದೇ ಅರ್ಥ. ಅಂತಹ ಆಷಾಢಭೂತಿತನದ ಜೀವನ ನನಗೆ ಸಾಧ್ಯವಿಲ್ಲ. ಯಾವುದೇ ಸ್ಥಳಕ್ಕೂ ತನ್ನದೇ ಆದ ಧನಾತ್ಮಕ ಮತ್ತು ಋಣಾತ್ಮಕ ಗುಣಗಳಿದ್ದೇ ಇರುತ್ತವೆ. ಅವೆರಡಕ್ಕೂ ಹೊಂದಿಕೊಂಡು ಬದುಕುವುದನ್ನು ಕಲಿತರೆ ಮಾತ್ರ ನಮ್ಮ ಮನಸ್ಸು ನೆಮ್ಮದಿಯಿಂದ ಇರಲು ಸಾಧ್ಯ. ಅದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಸಾಧ್ಯವಾಗದೆ ಹೋದರೆ ಆ ಊರನ್ನು ಬಿಟ್ಟು ಬೇರೆ ಕಡೆಗೆ ನೆಲೆಸಲು ಹೋಗಬೇಕು. ಗೊಣಗಾಡುತ್ತ ಬದುಕುವುದು ಮನಸ್ಸಿನ ಆರೋಗ್ಯಕ್ಕೆ ಒಳ್ಳೆಯದಲ್ಲ.
ನಾನಂತೂ ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೂ ಗೊಣಗುವುದನ್ನು ನಿಲ್ಲಿಸಿಬಿಟ್ಟಿದ್ದೇನೆ. ನನ್ನ ಮನೆ ಬನ್ನೇರುಘಟ್ಟ ರಸ್ತೆಯಲ್ಲಿದೆ. ಹದಿನಾರು ವರ್ಷ ಕೆಲಸ ಮಾಡಿದ ಆಫೀಸು ವ್ಹೆ„ಟ್‌ಫೀಲ್ಡ್‌ನಲ್ಲಿತ್ತು. ಪ್ರತಿನಿತ್ಯ ಬೆಳಿಗ್ಗೆ ಎಂಟಕ್ಕೆ ಹೊರಟರೆ ರಾತ್ರಿ ಹತ್ತಕ್ಕೆ ವಾಪಸಾಗುತ್ತಿ¨ªೆ. ರಸ್ತೆಯಲ್ಲಿಯೇ ನಾಲ್ಕು ಗಂಟೆಗೂ ಹೆಚ್ಚು ಕಾಲ ವಾಹನ ಚಲಾಯಿಸುತ್ತ ಇರುತ್ತಿ¨ªೆ. ಆ ಅವಸ್ಥೆಗೆ ಬೇಸರಗೊಂಡು ಒಂದು ಉಪಾಯ ಕಂಡುಕೊಂಡೆ. ಒಬ್ಬ ಚಾಲಕನನ್ನು ನೇಮಿಸಿಕೊಂಡೆ. ಅವನು ಗಾಡಿ ಚಲಾಯಿಸುತ್ತಿದ್ದರೆ, ನನ್ನ ಪಾಡಿಗೆ ನಾನು ಆ ನಾಲ್ಕು ತಾಸು ಜಗತ್ತನ್ನೇ ಮರೆತು ಲ್ಯಾಪ್‌ಟಾಪಿನಲ್ಲಿ ಕತೆ ಬರೆಯುತ್ತಿ¨ªೆ. ಅವೆÇÉಾ ಕತೆಗಳನ್ನು ಸೇರಿಸಿ ಒಂದು ಕಥಾಸಂಕಲನವನ್ನು ಮಾಡಿ, ಅದನ್ನು ಬೆಂಗಳೂರಿನ ಟ್ರಾಫಿಕ್ ಜಾಮಿಗೆ ಪ್ರೀತಿಯಿಂದ ಅರ್ಪಿಸಿದ್ದೇನೆ. ಅನಂತರ ಟ್ರಾಫಿಕ್ ಜಾಮ್ ನೋಡಿದ ತಕ್ಷಣ ಕತೆ ಬರೆಯುವ ಉತ್ಸಾಹ ನನಗೆ ನುಗ್ಗಿ ಬರುತ್ತದೆ.
ಈಗಂತೂ ಬೆಂಗಳೂರನ್ನು ಬಿಟ್ಟು ಇರುವುದು ನನಗೆ ಸಾಧ್ಯವಿಲ್ಲ. ಜಗತ್ತಿನ ಮೂಲೆ ಮೂಲೆಗೆ ಹೋಗುತ್ತೇನಾದರೂ, ಮತ್ತೆ ಕೆಲವೇ ದಿನಗಳಲ್ಲಿ ಬೆಂಗಳೂರಿನ ಆಸೆಗೆ ವಾಪಸು ಓಡಿ ಬರುತ್ತೇನೆ. ಈ ಸ್ವಭಾವವನ್ನು ಒಂದು ರೂಪಕದ ಮೂಲಕ ಹೇಳಬÇÉೆ. ಇಡೀ ಜಗತ್ತನ್ನು ಒಂದು ಕೇರಂ ಬೋರ್ಡ್ ಎಂದು ಊಹಿಸಿಕೊಳ್ಳಿ. ಆ ಬೋರ್ಡಿನ ಮಧ್ಯಭಾಗವನ್ನು ಬೆಂಗಳೂರು ಮಾಡಿಕೊಂಡು ನಾನು ಕೆಂಪು ಬಣ್ಣದ ಕಾಯಿ ಆಗುತ್ತೇನೆ. ನೀವು ಎಷ್ಟೇ ಬಲವನ್ನು ಉಪಯೋಗಿಸಿ ಅತ್ಯಂತ ಜಾಣತನದಲ್ಲಿ ನನ್ನನ್ನು ಜಗತ್ತಿನ ನಾಲ್ಕು ದಿಕ್ಕಿಗೆ ಓಡಾಡಿಸಿ ಕುಣಿಯಲ್ಲಿ ಬೀಳಿಸಿದರೂ, ಮತ್ತೆ ಬೆಂಗಳೂರಿನ ಮಧ್ಯೆ ಬಂದು ಕುಳಿತುಕೊಳ್ಳುವ ಅಧಿಕಾರ ನನಗಿದೆ.
– ವಸುಧೇಂದ್ರ