Advertisement
ತಾಲೂಕು ಕೇಂದ್ರದಿಂದ 12 ಕಿ.ಮೀ. ಇರುವ ಆವಣಿ ಕ್ಷೇತ್ರವು ಜಿಲ್ಲೆಯ ಪ್ರಮುಖ ಪ್ರಾಚೀನ ಸ್ಥಳ. ದೇಶದ ಹಿಂದೂ ಧಾರ್ಮಿಕ ಕ್ಷೇತ್ರಗಳ ಪೈಕಿ ಆವಣಿಯನ್ನು ಅವಂತಿಕಾ ಕ್ಷೇತ್ರವೆನ್ನಲಾಗುತ್ತದೆ. ಗ್ರಾಮದ ಬೆಟ್ಟದ ನೈಋತ್ಯದಲ್ಲಿನ ದೊಡ್ಡ ಆವರಣದಲ್ಲಿ ರಾಮೇಶ್ವರ ದೇಗುಲಗಳ ಸಮೂಹ ಇದೆ.
Related Articles
Advertisement
ಪೂರ್ವಾಭಿಮುಖವಾಗಿರುವ ಈ ದೇಗುಲದ ಗರ್ಭಗೃಹವು ಚೌರಸವಾಗಿದ್ದು, ಎತ್ತರವಾದ ಪಾಣಿಪೀಠದ ಮೇಲೆ ಕಪ್ಪುಶಿಲೆಯ ನುಣುಪಾದ ಬಾಣಲಿಂಗವನ್ನು ಪ್ರತಿಷ್ಠಾಪಿಸಲಾಗಿದೆ. ಇದರ ಮುಂಭಾಗದಲ್ಲಿರುವ ಅರ್ಧಮಂಟಪದ ಎಡಭಾಗದಲ್ಲಿ ಕಾಮಾಕ್ಷಿಯ ವಿಗ್ರಹ ಪ್ರತಿಷ್ಠಾಪಿಸಲಾಗಿದೆ.
ಗರ್ಭಗೃಹದ ಮೇಲೆ ವೇಸರ ಅಥವಾ ದ್ರಾವಿಡ ಶೈಲಿಯ ಶಿಖರವಿದೆ. ನವರಂಗ, ತಗ್ಗಾದ ಅಲಂಕೃತ ಛಾವಣಿ, ನಾಲ್ಕು ವೃತ್ತಾಕಾರದ ಮಧ್ಯಭಾಗ ಹಾಗೂ ದಿಂಬಿನಾಕಾರದ ಪೀಠಗಳನ್ನು ಹೊಂದಿರುವ ಗಂಗರ ಕಾಲದ ಚಿಕ್ಕ ಸ್ತಂಭಗಳಿವೆ.
ನವರಂಗದ ಎಡಭಾಗದಲ್ಲಿ ಕಿರುಕೊಠಡಿಯಲ್ಲಿ ಚಂಡೀಕೇಶ್ವರನ ಪ್ರತಿಮೆ ಇದೆ. ನವರಂಗದ ಬಲಭಾಗದಲ್ಲಿ ಎತ್ತರ ಜಗತಿಯ ಮೇಲೆ ಸಪ್ತಮಾತೃಕೆಯರ ಆಕರ್ಷಕ ಬಿಡಿಶಿಲ್ಪಗಳನ್ನು ಇಡಲಾಗಿದೆ. ಇದರ ಬಳಿಯಲ್ಲಿಯೇ ತ್ರಿಭುವನ ಕರ್ತಾರನ ಕಿರು ಭಕ್ತ ಶಿಲ್ಪವನ್ನೂ ಇಡಲಾಗಿದೆ.
ರಾಮೇಶ್ವರ ದೇಗುಲದ ಸಂಕೀರ್ಣದ ಮಧ್ಯಭಾಗದಲ್ಲಿ ಪಾರ್ವತಿ, ಲಕ್ಷ್ಮಣೇಶ್ವರ, ರಾಮೇಶ್ವರ ಮತ್ತು ಭರತೇಶ್ವರ, ಶತೃಘ್ನೇಶ್ವರ, ಆಂಜನೇಶ್ವರ, ಸುಗ್ರೀವೇಶ್ವರ ಮತ್ತು ಅಂಗದೇಶ್ವರ, ಅಂಜನೇಶ್ವರ ದೇವಾಲಯವಿದೆ.
ಇದು ಶತೃಘ್ನೇಶ್ವರ ದೇಗುಲದ ರೀತಿಯ ವಾಸ್ತು ರಚನೆಯನ್ನೇ ಹೊಂದಿದೆ. ಅಲ್ಲದೇ, ಗರ್ಭಗೃಹ ಮತ್ತು ಚಿಕ್ಕ ನವರಂಗಗಳು ಮಾತ್ರ ಇರುವ ಈ ದೇವಾಲಯದಲ್ಲಿ ಸ್ತಂಭಗಳು ಅಷ್ಟಕೋನಾಕಾರವಾಗಿದೆ. ಮಾನಸ್ತಂಭದ ಶೈಲಿಯಲ್ಲಿಯೇ ಇದೆ. ಇಂತಹ ಪ್ರಾಚೀನ ದೇವಾಲಯದ ಪ್ರಮುಖ ದೇಗುಲಗಳ ನಾಲ್ಕು ಗೋಪುರಗಳು ಶಿಥಿಲಗೊಂಡಿವೆ.
ಆಗಿನ ಕಾಲದಲ್ಲಿ ಇಟ್ಟಿಗೆ ಸಿಮೆಂಟ್ ಮತ್ತಿತರ ವಸ್ತುಗಳಿಂದ ನಿರ್ಮಿಸಿರುವ ಗೋಪುರಗಳು ಮಳೆಗಾಲದಲ್ಲಿ ನೀರು ಸೋರಿಕೆಯಾಗಿ ದಿನೇದಿನೆ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿವೆ. ಅಲ್ಲದೇ, ಗೋಪುರಗಳಲ್ಲಿನ ಚಿತ್ರಗಳಲ್ಲಿ ಮಣ್ಣು ಪುಡಿಯಾಗಿ ಉದುರುತ್ತಿರುವ ಪರಿಸ್ಥಿತಿ ಉಂಟಾಗಿದೆ. ಆದರೆ, ದೇಗುಲ ಸಂರಕ್ಷಣೆ ಮಾಡುತ್ತಿರುವ ಪ್ರಾಶ್ಚವಸ್ತು ಇಲಾಖೆ ಅಧಿಕಾರಿಗಳು ಮೌನವಹಿಸಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಆವಣಿ ಶ್ರೀರಾಮಲಿಂಗೇಶ್ವರ ಸ್ವಾಮಿ ದೇಗುಲದ ಸಂಕೀರ್ಣದಲ್ಲಿರುವ ಗೋಪುರಗಳ ಶಿಥಿಲಾವಸ್ಥೆಯ ಕುರಿತು ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ದೇಗುಲದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಪ್ರಾಶ್ಚವಸ್ತು ಇಲಾಖೆಯ ಹೆಸರು ಹೇಳಲು ಇಚ್ಛಿಸದ ಸಿಬ್ಬಂದಿ ಉದಯವಾಣಿಗೆ ತಿಳಿಸಿದರು.
* ಎಂ.ನಾಗರಾಜಯ್ಯ