ಚಿಕ್ಕಮಗಳೂರು: ಅಯ್ಯೋ ಮಾಸ್ಕ್ ಮರೆತು ಬಂದ್ವಿ…ಮಾಸ್ಕ್ ವಾಹದಲ್ಲಿದೆ. ಮರೆತು ಅರ್ಧದಾರಿಗೆ ಬಂದಿದ್ವಿ ಮತ್ತೇ ವಾಪಸ್ ಹೋಗ್ಬೇಕು ಅಂತ ತಂದಿಲ್ಲ…ಜೇಬಲ್ಲಿದೆ ಈಗ ಧರಿಸುತ್ತೇವೆ..ಮಟ್ಟಿಲು ಹತ್ತಕ್ಕಾಗಲ್ಲ, ಮಾತಾಡಕ್ಕಾಗಲ್ಲ ಅಂಥ ಮಾಸ್ಕ್ ಧರಿಸಿಲ್ಲ, ಯಾರೂ ಹಾಕಿಲ್ಲ ಅದಕ್ಕೆ ನಾವು ಹಾಕಿಲ್ಲ ಎಂದು ವಾರಾಂತ್ಯದಲ್ಲಿ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಬಂದ ಪ್ರವಾಸಿಗರು ಸಬೂಬು ಹೇಳುತ್ತಿದ್ದಾರೆ.
ಮಾಸ್ಕ್ ಧರಿಸದೆ ಸ್ವತ್ಛಂದವಾಗಿ ವಿಹರಿಸುವ ಪ್ರವಾಸಿಗರೇ ಜನತೆಗೆ ತಲೆನೋವಾಗಿದ್ದಾರೆ. ರಾಜ್ಯದಲ್ಲಿ ಕೊರೊನಾ ಸೋಂಕು ಎರಡನೇ ಅಲೆಯ ಭಯ ಎಲ್ಲರನ್ನೂ ಕಾಡುತ್ತಿದೆ. ಜಿಲ್ಲೆಯಲ್ಲಿ ಶೂನ್ಯವಾಗಿದ್ದ ಕೊರೊನಾ ಸೋಂಕಿತರ ಸಂಖ್ಯೆ ಎರಡಂಕಿ ದಾಟುತ್ತಿದ್ದು, ಎರಡನೇ ಅಲೆಯ ಭಯ ಜಿಲ್ಲೆಯ ಜನತೆಯಲ್ಲಿದೆ. ಸರ್ಕಾರ ಕೆಲವು ನಿಯಮಗಳನ್ನು ರೂಪಿಸಲು ಚಿಂತಿಸುತ್ತಿದೆ. ಇಂತಹ ಸಂದರ್ಭದಲ್ಲಿ ರಾಜ್ಯ ಹೊರರಾಜ್ಯಗಳಿಂದ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಬರುವ ಪ್ರವಾಸಿಗರು ಕನಿಷ್ಟ ಮಾಸ್ಕ್ ಧರಿಸದೆ ಕೊರೊನಾಕ್ಕೆ ಡೋಂಟ್‌ಕೇರ್ ಎನ್ನುವಂತೆ ವರ್ತಿಸುತ್ತಿರುವುದು ಸ್ಥಳೀಯರಿಗೆ ಆತಂಕ ತಂದೊಡ್ಡಿದೆ.
ಈ ಹಿಂದೆ ಜಿಲ್ಲೆಯಲ್ಲಿ ಕೊರೊನಾ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮುಳ್ಳಯ್ಯನಗಿರಿ, ಬಾಬಾಬುಡನ್‌ಗಿರಿ, ಮಾಣಿಕ್ಯಧಾರಾ, ಕೆಮ್ಮಣ್ಣಗುಂಡಿ ಸೇರಿದಂತೆ ವಿವಿಧ ಪ್ರವಾಸಿ ತಾಣಗಳಿಗೆ ವಾರಾಂತ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ. ಕೊರೊನಾ ಎರಡನೇ ಅಲೆ ಭಯವಿದ್ದು ಪ್ರವಾಸಿಗರು ಕನಿಷ್ಟ ಮಾಸ್ಕ್ ಧರಿಸದೆ ಓಡಾಡುತ್ತಿರುವುದರಿಂದ ಜಿಲ್ಲೆಯಲ್ಲೂ ಕೊರೊನಾ ಸೋಂಕು ಹೆಚ್ಚಳಕ್ಕೆ ಕಾರಣವಾಗಬಹುದೆಂಬ ಆತಂಕವಿದ್ದು ಮಾಸ್ಕ್ ಧರಿಸದ ಪ್ರವಾಸಿಗರನ್ನು ಪ್ರಶ್ನಿಸಿದರೆ ಕುಂಟು ನೆಪ ಹೇಳುತ್ತಾರೆಂದು ಸ್ಥಳೀಯರು ಆರೋಪಿಸುತ್ತಾರೆ.
ಕೋವಿಡ್ ಎರಡನೇ ಅಲೆ ನಿಯಂತ್ರಣಕ್ಕೆ ದೈಹಿಕ ಅಂತರ, ಮಾಸ್ಕ್ಧರಿಸಬೇಕೆಂದು ಹೇಳುತ್ತಿದ್ದರೂ ಮಾಸ್ಕ್ ಧರಿಸದೆ ಮುಳ್ಳಯ್ಯನಗಿರಿಗೆ ಬಂದ ಸಾಕಷ್ಟು ಪ್ರವಾಸಿಗರು ಮಾಸ್ಕ್ ಧರಿಸಿದ್ದು ಕಂಡು ಬರುತ್ತಿಲ್ಲ. ಯಾಕೆ ಮಾಸ್ಕ್ ಹಾಕಿಲ್ಲವೆಂದು ಕೇಳಿದರೆ ಸಬೂಬು ನೀಡುತ್ತಾರೆ. ಇಂತಹ ಜನಸಂದಣಿ ಪ್ರದೇಶದಲ್ಲಿ ಮಾಸ್ಕ್ ಧರಿಸದೆ ಬೇಕಾಬಿಟ್ಟಿ ಓಡಾಡಿದ್ದರೆ ಒಬ್ಬರಿಂದ ಮತ್ತೋಬ್ಬರಿಗೆ ಕೊರೊನಾ ಹರಡಬಹುದು. ಸರ್ಕಾರ ಮತ್ತೆ ಲಾಕ್‌ಡೌನ್ ಮಾಡುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಪ್ರವಾಸಿಗರು ಮುಖಕ್ಕೆ ಮಾಸ್ಕ್ ಧರಿಸಿ ದೈಹಿಕ ಅಂತರ ಕಾಪಾಡಿಕೊಳ್ಳಬೇಕೆಂದು ಸ್ಥಳೀಯ ನಿವಾಸಿ ಮಧು ಸೂಧನ್ ತಿಳಿಸಿದರು.