ತುಮಕೂರು: ಜಿಲ್ಲೆಯಲ್ಲಿ ಭಾನುವಾರ 94 ಹೊಸ ಕೋವಿಡ್-19 ಪ್ರಕರಣ ದೃಢಪಟ್ಟಿದ್ದು, ಒಟ್ಟು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 2603ಕ್ಕೆ ಏರಿಕೆಯಾಗಿದ್ದು ಸೋಂಕಿನಿಂದ ಒಂದೇ ದಿನ ಐವರು ಮೃತಪಟ್ಟಿದ್ದು ಮೃತರ ಸಂಖ್ಯೆ 79ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗೇಂದ್ರಪ್ಪ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಭಾನುವಾರ ತುಮಕೂರು -30, ಕುಣಿಗಲ್-7, ತಿಪಟೂರು-12, ಮಧುಗಿರಿ-7, ಪಾವಗಡ-11, ಗುಬ್ಬಿ- 7, ತುರುವೇಕೆರೆ-3, ಚಿಕ್ಕನಾಯಕನ ಹಳ್ಳಿ-1, ಕೊರಟಗೆರೆ-8, ಶಿರಾ-8 ಒಟ್ಟು 94 ಮಂದಿಯಲ್ಲಿ ಕೋವಿಡ್-19 ಸೋಂಕಿರುವುದು ದೃಢಪಟ್ಟಿದೆ ಎಂದರು.
ಜಿಲ್ಲೆಯಲ್ಲಿ ಈವರೆಗೆ 46072 ಜನರ ಗಂಟಲು ದ್ರವ ಪರೀಕ್ಷೆ ಮಾಡಲಾಗಿದ್ದು, ಅದರಲ್ಲಿ 40200 ಜನರಿಗೆ ನೆಗೆಟಿವ್ ಎಂದು ವರದಿ ಬಂದಿದೆ. ಅದರಲ್ಲಿ ನಿಗಾವಣೆಯಲ್ಲಿ 4930 ಜನರಿದ್ದು ಪ್ರಥಮ ಸಂಪರ್ಕ 3262, ದ್ವಿತೀಯ 1668 ಮಂದಿ. ಇನ್ನೂ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ 980 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಐಸಿಯುನಲ್ಲಿ 7 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಕೋವಿಡ್ ಸೋಂಕಿಗೆ ಜಿಲ್ಲೆಯಲ್ಲಿ ಭಾನುವಾರ ಐವರು ಬಲಿಯಾಗಿದ್ದಾರೆ. ಅದರಲ್ಲಿ ತುಮಕೂರು ನಗರದ ಕೋತಿತೋಪು ಬಡಾವಣೆಯ 44 ವರ್ಷದ ವ್ಯಕ್ತಿ, ನಗರದ ಸಿದ್ಧಗಂಗಾ ಬಡಾವಣೆಯ 60 ವರ್ಷದ ವೃದ್ಧ, ಗಾಂಧಿನಗರ ಬಡಾವಣೆಯ 68 ವರ್ಷದ ವೃದ್ಧ, ಪಾವಗಡ ತಾಲೂಕಿನ ಮಹದೇವನಗರ ಬೀದಿ ಬಡಾವಣೆಯ 52 ವರ್ಷದ ವ್ಯಕ್ತಿ, ಶಿರಾ ತಾಲೂಕಿನ ಕಚೇರಿ ಮೊಹಲ್ಲಾ ಬಡಾವಣೆಯ 72 ವರ್ಷದ ವೃದ್ಧ ಕೋವಿಡ್ ಗೆ ಬಲಿಯಾಗಿದ್ದಾರೆ ಎಂದು ಹೇಳಿದರು.