ಕುಮಟಾ: ಹವಾಮಾನ ವೈಪರಿತ್ಯದಿಂದ ಏಕಾಏಕಿ ಸುರಿಯುತ್ತಿರುವ ಅಕಾಲಿಕ ಮಳೆಯಿಂದಾಗಿ ಬೆಳೆದು ನಿಂತ ಹಾಗೂ ಕಟಾವಾದ ಭತ್ತದ ತೆನೆಗಳು ನೀರಿನಲ್ಲಿ ನೆನೆದು ರೈತರ ಮುಖದಲ್ಲಿ ನಿರಾಸೆ ಮೂಡಿಸಿದೆ.
ತಾಲೂಕಿನ ಕೂಜಳ್ಳಿ, ಮಿರ್ಜಾನ ಮತ್ತು ಗೋಕರ್ಣ ಹೋಬಳಿಗಳು ಸೇರಿದಂತೆ ಸುಮಾರು 4,264 ಹೆಕ್ಟೇರ್ ಜಾಗ ಭತ್ತದ ಕೃಷಿ ಅವಲಂಬಿತ ಪ್ರದೇಶವಾಗಿದ್ದು, ರೈತರು ಭತ್ತದ ಕೃಷಿಯನ್ನೇ ನಂಬಿ ಜೀವನ ಸಾಗಿಸುತ್ತಿದ್ದಾರೆ. ಈಗಾಗಲೇ ಮುಂಗಾರು ಬೆಳೆಯಾಗಿ ಬೆಳೆದ ಬಹುತೇಕ ಗದ್ದೆಗಳಲ್ಲಿ ಭತ್ತದ ತೆನೆಗಳು ಕಟಾವ್ ಹಂತಕ್ಕೆ ಬಂದು ನಿಂತಿದೆ. ಅಲ್ಲದೇ, ಕೆಲ ಪ್ರದೇಶಗಳಲ್ಲಿ ಭತ್ತದ ಕಟಾವ್ ಕೂಡ ಆಗಿದೆ. ಈ ಸಂದರ್ಭದಲ್ಲಿ ಏಕಾಏಕಿ ಸುರಿಯುತ್ತಿರುವ ಮಳೆಯಿಂದಾಗಿ ಹಿಂಗಾರು ಬೆಳೆ ಅವಲಂಬಿತ ರೈತರ ಮೊಗದಲ್ಲಿ ಮಂದಹಾಸ ಅಡಗಿದೆ. ಇದೇ ರೀತಿ ಮಳೆ ಮುಂದುವರೆದರೆ ರೈತರು ಬೆಳೆದ ಬೆಳೆಗಳು ಸಂಪೂರ್ಣ ನಾಶವಾಗಿ, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗುವುದರಲ್ಲಿ ಯಾವುದೇ ಸಂಶಯವಿಲ್ಲ.
ಕೆಲವು ದಿನಗಳ ಹಿಂದೆ ಸುರಿದ ಬಾರಿ ಗಾಳಿ ಮಳೆಯಿಂದಾಗಿ ಹಲವು ಕಡೆ ಬೆಳೆದ ಸಣ್ಣ ತಳಿಯ ಬತ್ತಗಳು ಸಂಪೂರ್ಣ ಅಡ್ಡಬಿದ್ದು,ತೆನೆಗಳು ಮಣ್ಣು ಕಚ್ಚುವಂತಾಗಿತ್ತು. ಅಷ್ಟಾಗಿ ಕೆಲ ದಿನಗಳ ನಂತರ ಮಳೆ ಕಡಿಮೆ ಆಯಿತೇನೋ ಅಂದುಕೊಳ್ಳುವಷ್ಟರಲ್ಲಿ ಮತ್ತೆ ಅಕಾಲಿಕ ಮಳೆ ಪ್ರಾರಂಭವಾಗಿದೆ. ರೈತರ ಪಾಲಿಗಿದು ಸುಟ್ಟ ಗಾಯದ ಮೇಲೆ ಬರೆ ಎಳೆದ ನೋವಾಗಿ ಪರಿಣಮಿಸಿದೆ.
ನಮ್ಮ ಗ್ರಾಮದ ಹೆಚ್ಚಿನ ಸಂಖ್ಯೆಯ ರೈತರು ಭತ್ತದ ಬೆಳೆಗಾರರಾಗಿದ್ದು, ಈ ಹಿಂದೆ ಸುರಿದ ಭೀಕರ ಮಳೆಯಿಂದಾಗಿ ಬೆಳೆದು ನಿಂತ ತೆನೆಗಳು ಬಹಳಷ್ಟು ಉದುರಿ, ಮಣ್ಣ ಪಾಲಾಗಿದೆ. ಇದು ಬೆಳೆ ಕಟಾವಿನ ಸಮಯವಾಗಿದ್ದರಿಂದ ನಮ್ಮ ಭಾಗದಲ್ಲಿ ಈಗಾಗಲೆ 15 ಎಕರೆಗೂ ಅಧಿಕ ಗದ್ದೆಗಳನ್ನು ಕೊಯ್ದು ಒಣಹಾಕಲಾಗಿದೆ. ಸುರಿದ ಅಕಾಲಿಕ ಮಳೆಯಿಂದ ಹುಲ್ಲು ಹಾಗೂ ಭತ್ತ ಮುಗ್ಗಿ, ಬಹಳಷ್ಟು ರೈತರು ನಷ್ಟ ಅನುಭವಿಸುವಂತಾಗಿದೆ
. –ನಾಗೇಶ ಗೌಡ, ಬತ್ತದ ಬೆಳೆಗಾರ, ವಕ್ಕನಳ್ಳಿ.
-ಕೆ.ದಿನೇಶ ಗಾಂವ್ಕರ