“ಆ ದಿನಗಳು’ ಚೇತನ್ “ಅತಿರಥ’ ಎಂಬ ಸಿನಿಮಾ ಮಾಡುತ್ತಿರೋದು, ಆ ಸಿನಿಮಾವನ್ನು ಮಹೇಶ್ ಬಾಬು ನಿರ್ದೇಶಿಸುತ್ತಿದ್ದಾರೆ ಎಂಬುದು ಗೊತ್ತಿದೆ. ಈಗ ಆ ಚಿತ್ರದ ಚಿತ್ರೀಕರಣ ಸಂಪೂರ್ಣ ಮುಗಿದಿದ್ದು, ಚಿತ್ರದ ಆಡಿಯೋ ಬಿಡುಗಡೆ ಇತ್ತೀಚೆಗೆ ನಡೆದಿದೆ. ಪುನೀತ್‌ರಾಜಕುಮಾರ್ ಹಾಗೂ ಅಶ್ವಿನಿ ಪುನೀತ್‌ರಾಜಕುಮಾರ್ ಆಡಿಯೋ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು.
ಚಿತ್ರದ ಹಾಡು ಹಾಗೂ ಛಾಯಾಗ್ರಹಣವನ್ನು ಮೆಚ್ಚಿಕೊಂಡು ಚಿತ್ರತಂಡದ ಬೆನ್ನು ತಟ್ಟಿದರು. ಪುನೀತ್ ರಾಜಕುಮಾರ್ ಆಡಿಯೋ ಬಿಡುಗಡೆಗೆ ಬಂದಿದ್ದರಿಂದ ಸಹಜವಾಗಿಯೇ ನಾಯಕ ಚೇತನ್ ಖುಷಿಯಾಗಿದ್ದರು. “ನಾನು ಅಮೆರಿಕಾದಲ್ಲಿದ್ದಾಗ “ಭಕ್ತ ಪ್ರಹ್ಲಾದ’ ಪಾತ್ರವನ್ನು ಏಕಪಾತ್ರಾಭಿನಯ ಮಾಡುತ್ತಿದ್ದೆ. ಭಾರತಕ್ಕೆ ಬಂದ ನಂತರ ನಿಜವಾದ ಪ್ರಹ್ಲಾದ ಯಾರು ಎಂದು ಗೊತ್ತಾಗಿ ಪುನೀತ್ ಅವರನ್ನು ಭೇಟಿಯಾದೆ. ಈಗ ಅವರ ಜೊತೆ ಒಳ್ಳೆಯ ಸ್ನೇಹವಿದೆ’ ಎಂದರು. ಇನ್ನು, ಚಿತ್ರದ ಬಗ್ಗೆ ಮಾತನಾಡಿದ ಚೇತನ್, ಚಿತ್ರದಲ್ಲಿ ಸಾಕಷ್ಟು ಹೊಸ ವಿಷಯಗಳನ್ನು ಹೇಳಿದ್ದೇವೆ. ಮುಖ್ಯವಾಗಿ ಶಿಕ್ಷಣ ಕ್ಷೇತ್ರದಲ್ಲಿ ನಡೆಯುತ್ತಿರುವ ಮೋಸ ಸೇರಿದಂತೆ ಸಾಕಷ್ಟು ವಿಷಯಗಳನ್ನು ಹೇಳಿದ್ದೇವೆ. ನಾನಿಲ್ಲಿ ವಾಹಿನಿ ಪತ್ರಕರ್ತನಾಗಿ ಕಾಣಿಸಿಕೊಂಡಿದ್ದು,
ಮಾಧ್ಯಮದ ಶಕ್ತಿ ಏನೆಂಬುದನ್ನು ಕೂಡಾ ಇಲ್ಲಿ ತೋರಿಸಿದ್ದೇವೆ’ ಎಂದರು.
ನಾಯಕಿ ಲತಾ ಹೆಗಡೆಗೆ ಮೊದಲ ಸಿನಿಮಾದಲ್ಲೇ ಒಳ್ಳೆಯ ತಂಡದ ಜೊತೆ ಸಿನಿಮಾ ಮಾಡಿದ ಖುಷಿ ಇದೆಯಂತೆ. ಮಹೇಶ್ ಬಾಬು ಅವರ ಈ ಹಿಂದಿನ ಸಿನಿಮಾಗಳನ್ನು ನೋಡಿದಾಗಲೇ ಇವರ ಜೊತೆ ಕೆಲಸ ಮಾಡಬೇಕೆಂಬ ಆಸೆ ಇತ್ತಂತೆ. ಅದು ಈಗ ಈಡೇರಿದೆ ಎಂಬುದು ಅವರ ಮಾತು. ನಿರ್ದೇಶಕ ಮಹೇಶ್ ಬಾಬು ತಮಗೆ ಮೊದಲು ಅವಕಾಶ ನೀಡಿದ ರಾಜ್ ಸಂಸ್ಥೆಯನ್ನು ನೆನಪಿಸಿಕೊಳ್ಳುತ್ತಲೇ ಮಾತಿಗಿಳಿದ ಮಹೇಶ್ ಬಾಬು, “ಚಿತ್ರದಲ್ಲಿ ಸಾಮಾಜಿಕ ಸಂದೇಶವಿರುವ ವಿಷಯವನ್ನು ಕಮರ್ಷಿಯಲ್ ಆಗಿ ಹೇಳಿದ್ದೇವೆ. ಈ ಚಿತ್ರಕ್ಕಾಗಿ ಮೂರು ವರ್ಷ ಕಾದ ನಿರ್ಮಾಪಕರಿಗೆ ನಾನು ಥ್ಯಾಂಕ್ಸ್ ಹೇಳಬೇಕು. ಅವರ ಸಿನಿಮಾ ಪ್ರೀತಿಯಿಂದ ಸಿನಿಮಾ ಚೆನ್ನಾಗಿ ಮೂಡಿಬಂದಿದೆ’ ಎಂಬುದು ಮಹೇಶ್ ಬಾಬು ಮಾತು. “ಅತಿರಥ’ ಚಿತ್ರದ ಮೂಲಕ ಸಾಧು ಕೋಕಿಲ ಅವರ ಪುತ್ರ ಸುರಾಗ್ ಸಂಗೀತ ನಿರ್ದೇಶಕರಾಗಿ ಲಾಂಚ್ ಆಗುತ್ತಿದ್ದಾರೆ. “ಸಂಗೀತ ಎಂಬುದು ನನಗೆ ತಾತ, ತಂದೆಯಿಂದಲೇ ಬಂದಿದೆ. ಈಗ “ಅತಿರಥ’ದ ಮೂಲಕ ಸಂಗೀತ ನಿರ್ದೇಶಕನಾಗುವ ಅವಕಾಶ ಸಿಕ್ಕಿದೆ’ ಎನ್ನುತ್ತಾ ಕಾರ್ಯಕ್ರಮಕ್ಕೆ ಪುನೀತ್ ಬಂದ ಸಂತಸ ಹಂಚಿಕೊಂಡರು. ಸಾಧುಕೋಕಿಲ ಕೂಡಾ ತಮ್ಮ ಮಗನಿಗೆ ಎಲ್ಲರ ಪ್ರೋತ್ಸಾಹವಿರಲಿ ಎಂದರು. ಈ ಚಿತ್ರವನ್ನು ಪ್ರೇಮ್ ಮೈಸೂರು, ಡಾ.ವೇಣುಗೋಪಾಲ್ ಹಾಗೂ ಗಂಡಸಿ ಮಂಜುನಾಥ್ ಸೇರಿ ನಿರ್ಮಿಸಿದ್ದಾರೆ.