ಬೆಂಗಳೂರು: ಮತದಾನದ ದಿನ ಹತ್ತಿರವಾಗುತ್ತಿದ್ದಂತೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ಕೆ.ಹರಿಪ್ರಸಾದ್ ಅವರು ತಮ್ಮ ಪ್ರಚಾರ ಕಾರ್ಯವನ್ನು ಬಿರುಸುಗೊಳಿಸಿದ್ದು, ಶುಕ್ರವಾರ ಪ್ರಧಾನಿ ಮತ್ತು ಬಿಜೆಪಿ ವಿರುದ್ಧ ವಾಗ್ಧಾಳಿ ನಡೆಸಿದರು.
ಕ್ಷೇತ್ರದ ವ್ಯಾಪ್ತಿಯ ವಿಜಯನಗರ, ಗೋವಿಂದರಾಜ ನಗರ ಹಾಗೂ ಜಯನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಭರ್ಜರಿ ರೋಡ್ ಶೋ ನಡೆಸಿ, ಗಂಗೋಂಡನಹಳ್ಳಿಯ ಮಕ್ಕಾ ಮಸ್ಜಿದ್ ಸೇರಿ ಮೂರು ಮಸೀದಿಗಳಿಗೆ ಭೇಟಿ ನೀಡಿ ಮತ ಯಾಚಿಸಿದರು. ಈ ವೇಳೆ ಗೋವಿಂದರಾಜ ನಗರದ ಮಾಜಿ ಶಾಸಕರಾದ ಪ್ರಿಯ ಕೃಷ್ಣ ಸಾಥ್ ನೀಡಿದರು.
ಈ ವೇಳೆ ಬಿಜೆಪಿ ವಿರುದ್ಧ ವಾಗ್ಧಾಳಿ ನಡೆಸಿದ ಹರಿಪ್ರಸಾದ್, ಕೇಂದ್ರ ಸರಕಾರದ ಚುಕ್ಕಾಣಿ ಹಿಡಿದಿರುವ ಪ್ರಧಾನಿ ನರೇಂದ್ರ ಮೋದಿ, ತಮಗೆ ತಾವೇ ದೇಶದ ಚೌಕಿದಾರ ಎನ್ನುವ ಬಿರುದು ಕೊಟ್ಟುಕೊಂಡಿದ್ದಾರೆ. ಐಟಿ ಹಾಗೂ ಇ.ಡಿ ಅಧಿಕಾರಿಗಳನ್ನು ತಮ್ಮ ಅನುಕೂಲಕ್ಕೆ ಬಳಸುತ್ತಿರುವ ಈ ಚೌಕಿದಾರರಿಗೆ ಸರಿಯಾದ ಪಾಠ ಕಲಿಸುವುದಕ್ಕೆ ಉತ್ತಮ ಅವಕಾಶ ಬಂದೊದಗಿದೆ. ನಗರದ ಜ್ವಲಂತ ಸಮಸ್ಯೆಗಳ ಬಗ್ಗೆ ಪ್ರಧಾನಿ ಮಾತನಾಡುತ್ತಲೇ ಇಲ್ಲ ಎಂದರು.
5 ವರ್ಷಗಳಲ್ಲಿ ಶೂನ್ಯ ಸಾಧನೆ ನೀಡಿರುವ ಪ್ರಧಾನಿ ಮೋದಿ, ಸಂವಿಧಾನವನ್ನೇ ಬದಲಿಸುವ ಮಾತನ್ನಾಡಿದ್ದಾರೆ. ದೇಶ ಪ್ರೇಮದ ಬಗ್ಗೆ ದೊಡ್ಡ ದೊಡ್ಡ ಹೇಳಿಕೆ ನೀಡುತ್ತಿರುವ ಅವರು, ಬಿರಿಯಾನಿ ತಿನ್ನಲು ಪಾಕಿಸ್ತಾನಕ್ಕೆ ಹೋಗಿದ್ದರೇ ಎಂದು ಪ್ರಶ್ನಿಸಿದರು. ಇಂತಹ ಕೋಮುವಾದಿ ಪಕ್ಷಕ್ಕೆ ಸರಿಯಾದ ಪಾಠ ಕಲಿಸುವ ಅವಕಾಶ ಬಂದಿದೆ ಎಂದರು.
ಪ್ರಿಯ ಕೃಷ್ಣ ಅವರು ಮಾತನಾಡಿ, ಜಾತಿ ಧರ್ಮಗಳ ಮಧ್ಯೆ ಸಾಮರಸ್ಯ ಹಾಗೂ ಅವುಗಳ ಅಭಿವೃದ್ಧಿಗೆ ಶ್ರಮಿಸುವ ಪಕ್ಷ ಕಾಂಗ್ರೆಸ್. ಕಾಂಗ್ರೆಸ್ ವತಿಯಿಂದ ಅನುಭವ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ಪ್ರಮುಖ ಸ್ಥಾನ ಹೊಂದಿರುವ ಬಿ.ಕೆ.ಹರಿಪ್ರಸಾದ್ ಅವರನ್ನು ಕಣಕ್ಕೆ ಇಳಿಸಲಾಗಿದೆ. ಈ ಬಾರಿ ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಪರಿಸ್ಥಿತಿಗಳು ಬದಲಾಗಿವೆ.
ಬದಲಾಗಿರುವ ಪರಿಸ್ಥಿತಿಯನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುವುದು ನಮ್ಮ ಗುರಿಯಾಗಿದೆ. ಆ ನಿಟ್ಟಿನಲ್ಲಿ ದಕ್ಷಿಣ ಲೋಕಸಭಾ ಕ್ಷೇತ್ರದ ಎಲ್ಲಾ ಕಾಂಗ್ರೆಸ್ ನಾಯಕರೂ ಕೂಡಾ ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸುತ್ತಿದ್ದು ನಮ್ಮ ಅಭ್ಯರ್ಥಿಯ ಗೆಲುವು ನಿಶ್ಚಿತ ಎಂದರು.
ಸಂಜೆ ಜಯನಗರದ ಭೈರಸಂದ್ರ ವಾರ್ಡ್ ಹಾಗೂ ಇನ್ನಿತರ ಪ್ರದೇಶಗಳಲ್ಲಿ ನಡೆಸಿದ ರೋಡ್ ಶೋನಲ್ಲಿ ಶಾಸಕಿ ಸೌಮ್ಯ ರೆಡ್ಡಿ, ಮಾಜಿ ಸಚಿವ ಮತ್ತು ಬಿಟಿಎಂ ಲೇಔಟ್ ಶಾಸಕ ರಾಮಲಿಂಗಾ ರೆಡ್ಡಿ, ಬಿಬಿಎಂಪಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಹಾಗೂ ಕಾರ್ಯಕರ್ತರು ಭಾಗವಹಿಸಿ ಮತಯಾಚಿಸಿದರು.