ಸಮುದಾಯ ತಂಡ ಮಂಗಳೂರು ಹಾಗೂ ನಿರ್ದೇಶಕ ಮೋಹನ ಚಂದ್ರ (ಮೋಚ) ಇವರಿಬ್ಬರ ಪ್ರಯತ್ನದ ಇತ್ತೀಚಿನ ತಿರುಕನ ಕನಸು ನಾಟಕದ ಪ್ರದರ್ಶನ ಪುರಭವನದಲ್ಲಿ ನಡೆಯಿತು. ನಾಟಕ ಪ್ರಸ್ತುತ ದೇಶದ ರಾಜಕೀಯ ನೋಟದ ಅಲೆಗಳನ್ನೇ ವ್ಯಂಗ್ಯ ವಿಡಂಬನಾತ್ಮಕವಾಗಿ ಮತ್ತು “ಏಕಪಕ್ಷೀಯ’ವಾಗಿ ಹೆಚ್ಚು ಹೊಂದಿತ್ತು.
ಮರಾಠಿ ಮತ್ತಿತರ ಕೆಲವು ಭಾಷೆಗಳಿಗೆ ಹೋಲಿಸಿದರೆ ಕನ್ನಡದಲ್ಲಿ ರಾಜಕೀಯ ಪರಿಣಾಮ ತೊರ್ಪಡಿಸುವ ನಾಟಕಗಳು ಸ್ವಲ್ಪ ಕಡಿಮೆಯೇ. ರಾಜಕೀಯ ಸಿದ್ಧಾಂತದ ಒಲವನ್ನು ರಂಗದಲ್ಲಿ ತರುವುದು ಪ್ರಯೋಗಾತ್ಮಕವಾಗಿ ಅಲ್ಲದಿದ್ದರೂ ಒಂದಿಷ್ಟು ಸಾಮಾಜಿಕ ನೆಲೆಗಟ್ಟಿನ ಚಿಂತನೆಯಲ್ಲಿ ಕಷ್ಟ ಸಾಧ್ಯವೇ. ಇವುಗಳ ಪ್ರಭಾವದಿಂದಾಗಿ ರಾಜಕೀಯ ಸ್ಥಿತಿಗತಿಗಳು ಬದಲಾಗುವ ದಿನಗಳಂತೂ ಸಂಪೂರ್ಣ ಮರೆಯಾಗಿದೆ.
ತುಂಬಾ ಹಳೆ ಜಾಡು ಎನ್ನಬಹುದಾದ ತಿರುಕನೊಬ್ಬ ಅನಿವಾರ್ಯವಾಗಿ ರಾಜನಾಗುವ, ಧನಿಕನಾಗುವ ಕಥಾನಕ, ಜೊತೆಗೆ ಸುತ್ತಲಿನ ಸಮಾಜ ಮಾನವ ಸ್ವಭಾವದ ಆಸೆ ದುರಾಸೆ ಕಾಮ ಪ್ರೇಮ ಅಧಿಕಾರದ ಲೋಲುಪತೆಗಳು ಇವಿಷ್ಟೇ ಇಲ್ಲಿನ ಕಥಾವಸ್ತು. ಆದರೆ ಅದು ಸುತ್ತಿದ್ದು ಮಾತ್ರ ಪ್ರಸ್ತುತ ದೇಶದ ಆಡಳಿತದ “ಯೋಚನೆ ಯೋಜನೆ’ಗಳ ಸುತ್ತ. ಅದರಲ್ಲಿ ಒಂದಿಷ್ಟು ಹೌದೆನಿಸಿದರೂ ಮತ್ತೂಂದಿಷ್ಟು ಕೇವಲ ಚಪ್ಪಾಳೆ ಶಿಳ್ಳೆಗೆ ಹೇಳಿ ಮಾಡಿಸಿದಂತಿತ್ತು. ಬಹುಶಃ ನಿರ್ದೇಶಕ ತಂಡಕ್ಕೆ ಮಾತ್ರವಲ್ಲ ಅಂದಿನ ಅಲ್ಲಿಯ ಬಹುತೇಕ ಪ್ರೇಕ್ಷಕರಿಗೂ ಇದೇ ಬೇಕಾಗಿರುವಂತೆ ಕಾಣುತ್ತಿತ್ತು. ಇದೊಂದು ಸ್ಪಷ್ಟ ಉದ್ದೇಶದ, ದೃಷ್ಟಿಕೋನದ ಕಥಾನಕ ಹೆಣೆದಂತೆ ಕಾಣುತ್ತಿತ್ತು ವಿನಃ ನಾಟಕದ ಸಹಜ ನಡೆಗಾಗಿ ಅಲ್ಲವೇ ಅಲ್ಲ. ಜೊತೆಗೆ ಸಾಗಿದ ಕೆಲವು ಸ್ಥಳೀಯ ರಾಜಕೀಯ ಪ್ರೇರಿತವಾದ ದಿನ ನಿತ್ಯದ ವಿದ್ಯಮಾನಗಳು ಜಾತಿ ಪದ್ಧತಿಯ ಏರುಪೇರು, ಬಹಳ ಮುಖ್ಯವಾಗಿ ಮಾಧ್ಯಮ ಕ್ಷೇತ್ರದ ಇಂದಿನ ವೈಪರಿತ್ಯಗಳು… ನಡು ನಡುವೆ ಹಾಸ್ಯದ ತುಣುಕುಗಳಂತೆ ಅನೇಕ ಬಾರಿ ಹೌದಲ್ಲ ಹೀಗೂ ಉಂಟೆ!ಎಂದೆನಿಸುವಂತೆ ಬಂದು ಹೋದರೂ, ನಾಟಕದ ಓಟದ ಜತೆಗೆ ಆಯೋಜಕರ ಆಶಯವನ್ನು ಮತ್ತೆ ಮತ್ತೆ ಪ್ರತಿಪಾದಿಸುತ್ತಿತ್ತು.
ನಾಟಕಗಳನ್ನು ಅಭಿವ್ಯಕ್ತಿ ಮಾಧ್ಯಮದ ಒಂದು ಪ್ರಬಲ ಅಂಗವಾಗಿ ನಾಟಕವಾಗಿಯಷ್ಟೇ ನೋಡಬೇಕೆನ್ನುವುದು ಸರಿ ಎಂದಾದರೂ ಜೊತೆಗೆ ಸಾಮಾಜಿಕ ನೆಲೆಯ ಭಾವನಾತ್ಮಕ ನಂಬಿಕೆ ವಿಷಯದಲ್ಲಿ ಅದರಲ್ಲೂ ದೇವದಿಂಡಿರುಗಳನ್ನು ರಂಗಕ್ಕೆ ತರುವಾಗ ಅದರಲ್ಲೂ ಇಂತಹ ವಿಚಾರಗಳಲ್ಲಿ ಮಾನವ ಅತಿ ಸೂಕ್ಷ್ಮತೆಗೆ ಸಾಗುತ್ತಿರುವ ಈ ದಿನಗಳಲ್ಲಿ ಒಂದಿಷ್ಟು ಎಚ್ಚರ ವಹಿಸುವುದು ಸಹ ಅಗತ್ಯ. ಈ ಹಿನ್ನೆಲೆಯಲ್ಲಿ ತಿರುಕನ ಕನಸು ಕೆಲವೆಡೆ ಸ್ವಲ್ಪ ಬದಲಾವಣೆ ಆಗಲೇ ಬೇಕಾಗಿದೆ ಸುಸೂತ್ರವಾಗಿ ಹೆಚ್ಚು ಸಾರ್ವಜನಿಕ ಪ್ರದರ್ಶನ ಕಾಣಬೇಕಾಗಿರುವಾಗ. ಅತ್ಯುತ್ತಮ ಲೈವ್ ಮ್ಯೂಸಿಕ್ ಹಾಡು ಹೊರತುಪಡಿಸಿದರೆ ನಾಟಕದ ಇತರೆಲ್ಲ ಅಗತ್ಯದ ಪೂರಕತೆಗಳು ಸಾಧರಣವೆನಿಸುವಂತ್ತಿತ್ತು ತಿರುಕನ ಕನಸು ನನಸಾಗುವ ನಡುವೆ.
ಕಲ್ಲಚ್ಚು ಮಹೇಶ ಆರ್. ನಾಯಕ್