Advertisement

ಕಾಲಮಿತಿಯಲ್ಲಿ ಕೆರೆ ಅಭಿವೃದ್ಧಿ ಅನುಮಾನ

02:43 PM Apr 27, 2019 | pallavi |

ರಾಣಿಬೆನ್ನೂರ: ಬೇಸಿಗೆಯಲ್ಲಿ ಕುಡಿಯುವ ನೀರಿಗಾಗಿ ಜನ-ಜಾನುವಾರು ಪರಿತಪಿಸುವುದು ಸಾಮಾನ್ಯ ಎನ್ನವುಂತಾಗಿದ್ದು, ನೀರಿನ ಬವಣೆ ನೀಗಿಸಲು ಗಂಗಾಜಲ ದೊಡ್ಡ ಕೆರೆ ಅಭಿವೃದ್ಧಿಗೆ ಸರ್ಕಾರ ಮುಂದಾಗಿದ್ದು, ಕಾಮಗಾರಿ ಮಾತ್ರ ಮಂದಗತಿಯಲ್ಲಿ ಸಾಗುತ್ತಿದೆ.

Advertisement

ಕೇಂದ್ರ ಪುರಸ್ಕೃತ ಅಮೃತ್‌ ಯೋಜನೆಯಡಿ 29.82 ಕೋಟಿ ರೂ. ಅನುದಾನದಲ್ಲಿ 2018ರ ಅ. 5ರಂದು ಶಾಸಕ ಆರ್‌. ಶಂಕರ್‌ ಹಾಗೂ ಸಂಸದ ಶಿವಕುಮಾರ ಉದಾಸಿ ಅವರು ಗಂಗಾಜಲ ಕೆರೆ ನಿರ್ಮಾಣಕ್ಕೆ ಚಾಲನೆ ನೀಡಿದ್ದರು. ಕಾಮಗಾಗಾರಿ ಪ್ರಾರಂಭವಾಗಿ 6 ತಿಂಗಳು ಗತಿಸಿದರೂ ಶೇ.20ರಷ್ಟು ಸಹ ಕಾಮಗಾರಿ ನಡೆದಿಲ್ಲ. ಕೆಲ ದಿನಗಳಿಂದ ಕಾಮಗಾರಿಯೂ ಸ್ಥಗಿತಗೊಂಡಿದ್ದು, 24 ತಿಂಗಳಲ್ಲಿ ಪೂರ್ಣಗೊಳಿಸಬೇಕಿದ್ದ ಕಾಮಗಾರಿ ನಿರೀಕ್ಷಿತ ಕಾಲಮಿತಿಯೊಳಗೆ ಪೂರ್ಣಗೊಳ್ಳುವ ಲಕ್ಷಣಗಳೇ ಗೋಚರಿಸುತ್ತಿಲ್ಲ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆ ಎದುರಾಗಿದೆ ಎಂದು ಸಾರ್ವಜನಿಕರು ದೂರುವಂತಾಗಿದೆ.

260 ಎಕರೆ ವಿಶಾಲ ಪ್ರದೇಶದಲ್ಲಿ ಕೆರೆ ನಿರ್ಮಾಣ ನಡೆಯುತ್ತಿದ್ದು, ತಾಲೂಕಿನ ಹಲವು ಗ್ರಾಮಗಳಿಗೆ ಅನುಕೂಲವಾಗಲಿದೆ. ಜಿಲ್ಲಾಡಳಿತ, ನಗರಸಭೆ, ಕರ್ನಾಟಕ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಕೇಂದ್ರ ಸರ್ಕಾರದ ಹಣಕಾಸು ನಿಗಮ ಶೇ.50, ರಾಜ್ಯ ಸರ್ಕಾರ ಶೇ.30, ನಗರಸಭೆ ಶೇ.20 ಅನುದಾನದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಒಟ್ಟು 29.82 ಕೋಟಿ ರೂ. ಅನುದಾನದಲ್ಲಿ ಕೆರೆ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ.

ಕೆರೆಯ ಹೂಳು ತೆಗೆದು. ಏರಿ ಅಭಿವೃದ್ಧಿ ಪಡಿಸುವುದು. ವಿಹಾರಕ್ಕಾಗಿ ವಾಕಿಂಗ್‌ ಪಾಥ್‌, ಕೆರೆ ಸಂಪರ್ಕಕಕ್ಕೆ ರಸ್ತೆ ಅಭಿವೃದ್ಧಿ ಪಡಿಸುವುದು. ಕೆರೆಯ ಸೀಮಾ ರೇಖೆ ಗುರುತು ಮಾಡುವುದು, ಜಲಾನಯನ ಪ್ರದೇಶ ಅಭಿವೃದ್ಧಿ ಪಡಿಸುವುದು. ಕೆರೆಯ ಸುತ್ತ ಗಿಡ-ಮರ ಬೆಳೆಸುವುದು. ಕೆರೆಯಿಂದ ಶುದ್ಧಿಕರಣ ಘಟಕಕ್ಕೆ ನೀರು ಸರಬರಾಜು ಮಾಡಿ ಬೇಸಿಗೆ ಕಾಲದಲ್ಲಿ ನಗರಕ್ಕೆ ಶುದ್ಧ ಕುಡಿಯುವ ನೀರು ಪೂರೈಸುವ ಕುರಿತು ನೀಲಿ ನಕ್ಷೆ ತಯಾರಿಸಿ ಲಕ್ಷ್ಮೀ ಸಿವಿಲ್ ಎಂಜಿನಿಯರಿಂಗ್‌ ಕಂಪನಿಗೆ ಗುತ್ತಿಗೆ ನೀಡಲಾಗಿದ್ದು, 24 ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸಲು ಕರಾರು ಮಾಡಲಾಗಿದೆ. ಆದರೆ, ಕಾಮಗಾರಿ ಆರಂಭಗೊಂಡು 6 ತಿಂಗಳು ಗತಿಸಿದರೂ ಶೇ.20ರಷ್ಟು ಸಹ ಕಾಮಗಾರಿ ಮುಗಿಯದಿರುವುದರಿಂದ ಜನತೆಗೆ ನಿರಾಸೆ ಮೂಡಿಸುತ್ತಿದೆ.

ಪ್ರವಾಸಿತಾಣಕ್ಕೆ ಒತ್ತು: ಕೆರೆಯ ಸುತ್ತಮುತ್ತ ಗಿಡ-ಮರಗಳನ್ನು ಬೆಳೆಸಿ ವಾಯುವಿಹಾರಕ್ಕೆ ಹಚ್ಚ ಹಸಿರಿನ ವಾತಾವರಣ ನಿರ್ಮಾಣ ಮಾಡಲಾಗುವುದು. ಪ್ರವಾಸಿಗರಿಗಾಗಿ ಬೊಟಿಂಗ್‌ ವ್ಯವಸ್ಥೆ, ಪಕ್ಷಿಗಳ ವಾಸತಾಣ, ಪ್ರವಾಸಿಗರನ್ನು ಸೆಳೆಯಲು ಕೆರೆಯ ಮಧ್ಯದಲ್ಲಿ ದ್ವೀಪದಂತೆ ನಡುಗಡ್ಡೆ ನಿರ್ಮಿಸಿ ಗಿಡಗಳನ್ನು ನೆಡುವುದು. ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಮಾಡಿ ಪ್ರವಾಸಿ ತಾಣಕ್ಕೆ ವಿಶೇಷ ಒತ್ತು ನೀಡಲಾಗಿದೆ.

ಕೇಂದ್ರದ ಅಮೃತ್‌ ಮತ್ತು ರಾಜ್ಯ ಸರ್ಕಾರದ ಯೋಜನೆಯಡಿ 29.82 ಕೋಟಿ ರೂ.ಗಳಲ್ಲಿ ಗಂಗಾಜಲ ದೊಡ್ಡ ಕೆರೆಯ ಅಭಿವೃದ್ಧಿಗೆ ಕೊಲ್ಲಾಪುರದ ಎಂಜಿನಿಯರಿಂಗ್‌ ಕಂಪನಿಗೆ ಗುತ್ತಿಗೆ ನೀಡಲಾಗಿದೆ. ಕಾಮಗಾರಿ ಪ್ರಗತಿಯಲ್ಲಿದೆ. ಕಾರಣಾಂತರದಿಂದ ಸ್ವಲ್ಪ ವಿಳಂಬವಾಗಿದ್ದು, ಸರ್ಕಾರದ ನಿರ್ದೇಶನದಂತೆ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸಲಿದ್ದಾರೆ.
•ಡಾ| ಎನ್‌.ಮಹಂತೇಶ, ರಾಣಿಬೆನ್ನೂರ ನಗರಸಭೆ ಪೌರಾಯುಕ್ತರು
ಮಳೆಗಾಲ ಆರಂಭವಾಗುವ ಮುನ್ನ ಕೆರೆ ಹೂಳು ತೆಗೆಯುವ ಕೆಲಸ ಮುಗಿಸಬೇಕು. ಹೀಗೆ ವಿಳಂಬ ಮಾಡಬಾರದು ಎಂದು ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಿದ್ದೇನೆ. ಕಾಲಮಿತಿಯೊಳಗೆ ಕಾಮಗಾರಿ ಪೂರ್ಣಗೊಳಿಸುವ ಭರವಸೆ ನೀಡಿದ್ದಾರೆ.
•ಆರ್‌. ಶಂಕರ್‌ ರಾಣಿಬೆನ್ನೂರ ಶಾಸಕ
ಗಂಗಾಜಲ ದೊಡ್ಡ ಕೆರೆ ಅಭಿವೃದ್ಧಿಗೆ ಕಾಮಗಾರಿಯು ಪ್ರಗತಿಯಲ್ಲಿದ್ದು, ಕೆರೆ ಹೂಳು ತೆಗೆಯುವುದು, ಕೆರೆಯ ಏರಿ ಅಭಿವೃದ್ಧಿ ಪಡಿಸುವುದು ಸೇರಿದಂತೆ ಕೆರೆಯ ಸೀಮಾ ರೇಖೆ ಗುರುತು ಮಾಡಲಾಗಿದೆ. ಈಗಾಗಲೆ ಕಾಮಗಾರಿಗೆ 8 ಕೋಟಿ ಅನುದಾನದ ಖರ್ಚು ಮಾಡಲಾಗಿದೆ. ತಾಂತ್ರಿಕ ಸಮಸ್ಯೆಯಿಂದ ಕಾಮಗಾರಿ ಪ್ರಗತಿ ವಿಳಂಬವಾಗಿದೆ. ಕಾರ್ಮಿಕರ ಕೂಲಿ ಪಾವತಿಸುವಲ್ಲಿ ವಿಳಂಬವಾಗಿದ್ದು, ಸದ್ಯದಲ್ಲಿ ಕೆಲಸ ಚುರುಕುಗೊಳ್ಳುವುದು.
•ಉಮೇಶ ಮುತ್ತಪ್ಪನವರ, ಎಇಇ, ಮೂಲಸೌಕರ್ಯ ಅಭಿವೃದ್ಧಿ-ಹಣಕಾಸು ನಿಗಮ
ಗಂಗಾಜಲ ದೊಡ್ಡ ಕೆರೆ ಅಭಿವೃದ್ಧಿ ಕಾಮಗಾರಿ ಪೂರ್ಣಗೊಳಿಸಲು ಅಧಿಕಾರಿಗಳ ಮೇಲೆ ಒತ್ತಡ ತರಲಾಗುವುದು. ಸರ್ಕಾರ ನಮ್ಮದೇ ಇದೆ. ಸಂಬಂಧಪಟ್ಟ ಸಚಿವರ ಗಮನಕ್ಕೆ ತರಲಾಗುವುದು. ನನ್ನ ಶಕ್ತಿ ಮೀರಿ ತಾಲೂಕಿನ ಅಭಿವೃದ್ಧಿಗೆ ಶ್ರಮಿಸುವೆ.
•ಕೆ.ಬಿ.ಕೋಳಿವಾಡ, ಮಾಜಿ ಸಭಾಧ್ಯಕ್ಷರು
ಮಂಜುನಾಥ ಎಚ್. ಕುಂಬಳೂರ
Advertisement
Advertisement

Udayavani is now on Telegram. Click here to join our channel and stay updated with the latest news.

Next