Advertisement

ಪೊಲೀಸ್ ಅಧಿಕಾರಿಯ ಸಮಯಪ್ರಜ್ಞೆ ಶ್ರವಣ ದೋಷದ ಯುವಕನನ್ನು 10 ವರ್ಷಗಳ ಬಳಿಕ ಮನೆ ಸೇರಿಸಿತು

10:49 PM May 11, 2020 | Hari Prasad |

ಭೋಪಾಲ್: ದಿಗ್ಬಂಧನದಿಂದಾಗಿ ದೇಶಾದ್ಯಂತ ವಲಸೆ ಕಾರ್ಮಿಕರು ಉದ್ಯೋಗವಿಲ್ಲದೆ ತಮ್ಮ ಊರುಗಳಿಗೆ ತೆರಳುತ್ತಿರುವುದು ಸಾಮಾನ್ಯವಾಗಿದೆ.

Advertisement

ಇಂತಹ ಪರಿಸ್ಥಿತಿಯಲ್ಲಿ ಮಾತು ಮತ್ತು ಶ್ರವಣ ದೌರ್ಬಲ್ಯ ಹೊಂದಿದ್ದ ಯುವಕನೊಬ್ಬ ಪೊಲೀಸ್‌ ಅಧಿಕಾರಿಯ ಪ್ರಯತ್ನದಿಂದಾಗಿ 10 ವರ್ಷದ ಬಳಿಕ ತನ್ನ ಹೆತ್ತವರನ್ನು ಸೇರಿದ ಅಪರೂಪದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಇತ್ತೀಚೆಗೆ ಮಹಾರಾಷ್ಟ್ರದಿಂದ 100 ಕಿ.ಮೀ. ಪ್ರಯಾಣಿಸಿ ವಲಸೆ ಕಾರ್ಮಿಕರು ಮಧ್ಯಪ್ರದೇಶದ ಸೆಂಧ್ವಾ ನಗರಕ್ಕೆ ತಲುಪಿದ್ದಾರೆ. ಇವರ ಜೊತೆಯಲ್ಲಿ 500 ವಲಸೆ ಕಾರ್ಮಿಕರ ತಂಡವಿತ್ತು. ಎಲ್ಲರ ಮಾಹಿತಿಯನ್ನು ಕರ್ತವ್ಯದಲ್ಲಿದ್ದ ಪೊಲೀಸ್‌ ಇನ್ಸ್‌ ಪೆಕ್ಟರ್‌ ವಿನೋದ್‌ ಕುಮಾರ್‌ ಯಾದವ್‌ ಸಂಗ್ರಹಿಸಿದರು.

ಆದರೆ 20 ವರ್ಷದ ಒಬ್ಬ ಯುವಕನಿಗೆ ತನ್ನ ಸ್ವ ವಿವರವನ್ನು ನೀಡಲು ಸಾಧ್ಯವಾಗಲಿಲ್ಲ. ಈ ವೇಳೆ ಪೆನ್ನು ಕೊಟ್ಟು ನಿನ್ನ ಹೆಸರು ಬರೆದುಕೊಡು ಎಂದರು ಯಾದವ್‌. ಆ ಯುವಕ ‘ಉರವೆ’ ಎಂದು ತನ್ನ ಹೆಸರನ್ನು ಬರೆದ.

ಮಧ್ಯಪ್ರದೇಶ ಹಾಗೂ ಛತ್ತೀಸ್‌ಗಢದಲ್ಲಿ ಹೆಚ್ಚು ಜನರು ಈ ಹೆಸರನ್ನು ಸರ್ನೆಮ್‌ ಆಗಿ ಇಟ್ಟುಕೊಳ್ಳುತ್ತಾರೆ. ತತ್‌ಕ್ಷಣ ವಿನೋದ್‌ ಕುಮಾರ್‌ ತಮ್ಮ ಸ್ನೇಹಿತ ಆದಾಯ ತೆರಿಗೆ ಅಧಿಕಾರಿ ಯುವರಾಜ್‌ ಅವರನ್ನು ಸಂಪರ್ಕಿಸಿದರು.

Advertisement

ಅವರ ಜತೆ ಯುವಕನ ಫೋಟೊ ಹಂಚಿಕೊಂಡರು. ಎಲ್ಲ ವ್ಯಾಟ್ಸಪ್‌ ಗುಂಪುಗಳಲ್ಲಿ ಯುವಕನ ಫೋಟೊ ವೈರಲ್‌ ಆಯಿತು. ಅಂತಿಮವಾಗಿ ಛತ್ತೀಸ್‌ಗಢದ ಕೊರ್ಬಾ ಜಿಲ್ಲೆಯ ಪೊಲೀಸ್‌ ಪೇದೆಯೊಬ್ಬರು ಯಾದವ್‌ ಅವರಿಗೆ ದೂರವಾಣಿ ಮಾಡಿ ಯುವಕನ ತಂದೆಯನ್ನು ಪರಿಚಯಿಸಿದರು.

ಯುವಕ ಚಿಕ್ಕವನಿದ್ದಾಗ (2010ರಲ್ಲಿ) ವಲಸೆ ಕಾರ್ಮಿಕರ ಜತೆ ನಾಪತ್ತೆಯಾಗಿದ್ದ, ಆತನ ನಿಜವಾದ ಹೆಸರು ಲಕ್ಷ್ಮೀ ದಾಸ್‌ ಎಂದು ಯುವಕನ ತಂದೆ ವೀಡಿಯೊ ಕಾಲ್‌ ಮೂಲಕ ಇನ್ಸ್‌ಪೆಕ್ಟರ್‌ ಯಾದವ್‌ಗೆ ತಿಳಿಸಿದರು.

ಹೀಗೆ ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿಯೊಬ್ಬರ ಸಕಾಲಿಕ ಸಮಯಪ್ರಜ್ಞೆ ಹತ್ತು ವರ್ಷ ಮನೆಯವರಿಂದ ದೂರವಾಗಿದ್ದ ಯುವಕ ಲಕ್ಷ್ಮೀ ದಾಸನನ್ನು ಮತ್ತೆ ಹೆತ್ತವರ ಮಡಿಲಿಗೆ ಸೇರುವಂತೆ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next