Advertisement

ಕಾಲ ಮಿಂಚಿ ಹೋಗಿದೆ ಆದರೂ ಆಸೆ ಜೊತೆಗಿದೆ!

05:57 PM Nov 21, 2017 | |

ನೀನೂ, ನಿನ್ನ ಗೆಳತಿಯೂ ಅದೇನನ್ನೋ ಅವಸರದಿಂದ ಚರ್ಚಿಸುತ್ತಿದ್ದಾಗಲೇ ನಾನು ಬಂದುಬಿಟ್ಟಿದ್ದೆ. ಆವತ್ತು ಏನೋ ಹೇಳಲು ಹೊರಟು, ಹೇಳಲಾಗದೆ ನೀನು ಚಡಪಡಿಸಿದ್ದೆ. ನನ್ನ ಪರಿಸ್ಥಿತಿ ಕೂಡ ಹಾಗೆಯೇ ಆಗಿತ್ತು. ನಿನ್ನನ್ನು ಕಂಡಕ್ಷಣ ಮಾತುಗಳೆಲ್ಲಾ ಮರೆತುಹೋಗಿದ್ದವು!

Advertisement

ನೀ ಸಿಗುತ್ತೀಯಾ ಅಂತ ಬರೆಯಲೋ, ಇಲ್ಲಾ ನಾನೇ ನಿನ್ನನ್ನು ಕಳೆದುಕೊಂಡೆ ಅಂತ ಬರೆಯಲೋ? ತಿಳಿಯುತ್ತಿಲ್ಲ. ಹೇಗೆ ನೋಡಿದರೂ, ತಪ್ಪು ನನ್ನದೇ, ಅವತ್ತು ಕಾಲೇಜಿನಲ್ಲಿ ನಡೆದ ಹೊಸ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ನಿನ್ನ ಮುದ್ದು ಮುಖ ನೋಡಿ ನಾ ನಕ್ಕಿದ್ದೆ. ಆಗ ನಾಚಿಕೆಯಿಂದ ನಿನ್ನೆರಡು ಕೈಗಳಿಂದ ಮುಖ ಮುಚ್ಚಿಕೊಂಡಾಗಲೇ ನಾನು ನಿನಗೆ ಕ್ಲೀನ್‌ಬೌಲ್ಡ್‌ ಆಗಿದ್ದೆ. ಆದರೆ ಹೇಳಿಕೊಳ್ಳಲಾಗಿರಲಿಲ್ಲ.

ನಾ ಹೇಳದಿದ್ದರೇನಂತೆ ನೀನು ನಿನ್ನ ಪ್ರಯತ್ನವನ್ನು ಮುಂದುವರಿಸಿದ್ದೆ. ನಾನು ಕ್ಲಾಸ್‌ಗೆ ಹೋಗುವಾಗ ದಾರಿಯಲ್ಲಿ ನನಗೊಂದು ಕಿರುನಗೆಯನ್ನು ಬೀರಿಯೇ ಮುಂದೆ ಸಾಗುತ್ತಿದ್ದೆ. ಒಂದು ದಿನ ನಾನು ಕಾಣದಿದ್ದರೆ ನೀನು ಹೇಗೆ ಚಡಪಡಿಸುತ್ತಿದ್ದೆ ಎಂಬುದನ್ನು ಮರೆಯಲ್ಲಿ ನಿಂತು ಗಮನಿಸಿದ್ದೇನೆ, ನಸು ನಕ್ಕಿದ್ದೇನೆ. ಕಾರಿಡಾರಿನಲ್ಲಿ ನೀನು ಎದುರಾದಾಗ ನಿನ್ನ ಮನದ ನಿಷ್ಕಲ್ಮಶ ಭಾವನೆಗಳನ್ನು ಆ ನಿನ್ನ ಸುಂದರ ಕಣ್ಣುಗಳೇ ಹೇಳಿಬಿಡುತ್ತಿದ್ದವು.

ಆದರೆ, ನಾನು ಏನೂ ತಿಳಿಯದವನಂತೆ ನಟಿಸಿ ಮುಂದೆ ಹೋಗಿ ಬಿಡುತ್ತಿದ್ದೆ. ನಿನಗೆ ಪೇಪರ್‌ ಓದುವ ಹವ್ಯಾಸವಿಲ್ಲದಿದ್ದರೂ ನಾನು ಬರುವ ಮೊದಲೇ ಲೈಬ್ರರಿಯಲ್ಲಿ ನೀನು ಹಾಜರಿರುತ್ತಿದ್ದೆ. ನಿನಗೆ ನೆನಪಿದೆಯಾ? ಒಂದ್ಸಲ ನಿನ್ನ ಗೆಳತಿ, ಅದೇ ಆ ಕುಳ್ಳಿ, ಏನೋ ಹೇಳಬೇಕೆಂದು ನನ್ನ ಹತ್ತಿರ ಬಂದಾಗ ನೀನು ಅವಳನ್ನು ತಡೆದು “ಕ್ಲಾಸಿಗೆ ಟೈಮಾಯ್ತು ಬೇಗ ಬಾ’ ಎಂದು ದರದರನೆ ಎಳದುಕೊಂಡು ಹೋಗಿದ್ದೆ.

ಅಂದು ನೀನು ಅವಳನ್ನು ತಡೆಯಬಾರದಿತ್ತೇನೋ? ನಾನು ಕೂಡ ಯಾಕೋ ಆ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ. ಅವತ್ತು ನಾನು ಲ್ಯಾಬ್‌ ಮುಗಿಸಿಕೊಂಡು ಮನೆಗೆ ಹೊರಟಾಗ, “ಇದೇ ಸರಿಯಾದ ಸಮಯ. ನಿನ್ನ ಮನಸ್ಸಿನಲ್ಲಿರುವುದನ್ನು ಈಗಲೇ ಅವನಿಗೆ ಹೇಳಿ ಬಿಡು. ಮತ್ತೆ ಇಂಥ ಅವಕಾಶ ಸಿಗುವುದಿಲ್ಲ’ ಇಲ್ಲವೊ ಗೊತ್ತಿಲ್ಲ ಎಂದು ಆ ಕುಳ್ಳಿ ನಿನ್ನನ್ನು ಒತ್ತಾಯಿಸುತ್ತಿದ್ದುದನ್ನು ದೂರದಿಂದಲೇ ಗಮನಿಸಿದೆ.

Advertisement

ನಾನು ಹತ್ತಿರ ಬರುತ್ತಲೇ ನೀನು ತಡಬಡಿಸಿದ್ದೆ. ಅವತ್ತು ನನಗೂ ಹಾಗೇ ಆಗಿತ್ತು. ಒಮ್ಮೆ ನೀನು ಅರ್ಧದಲ್ಲಿಯೇ ಕ್ಲಾಸ್‌ ಬಿಟ್ಟು ಅಳುತ್ತಾ ಹೋಗುತ್ತಿದ್ದರೂ, ಸೌಜನ್ಯಕ್ಕಾಗಿಯಾದರೂ ಏನಾಯಿತೆಂದು ವಿಚಾರಿಸದ ಅಯೋಗ್ಯ ನಾನು!  ಆಗ ನಾನು ನಿನ್ನನ್ನು ತುಂಬಾ ನಿರ್ಲಕ್ಷಿಸಿದ್ದೆ. ಆದರೆ ಅದ್ಯಾಕೋ ಇತ್ತೀಚೆಗೆ ನಿನ್ನ ನೆನಪುಗಳ ಬುತ್ತಿ ದಿನೇ ದಿನೇ ಜಾಸ್ತಿಯಾಗುತ್ತಿದೆ. ಮರೆತಂತಾದರು ಥಟ್ಟನೆ ನೆನಪಾಗುತ್ತೀಯಾ.

ಈಗ ನೀನು ನನ್ನೆದುರಿಗೆ ಬರುವ ದೊಡ್ಡ ಮನಸ್ಸು ಮಾಡುತ್ತೀಯಾ? ಕ್ಯಾಂಟೀನ್‌ನಲ್ಲಿ ನಿನ್ನ ಜೊತೆ ಉಪ್ಪಿಟ್ಟು ತಿನ್ನಬೇಕೆಂದು ಆಸೆಯಾಗುತ್ತಿದೆ. ಏನು ಮಾಡುವುದು, ಕಾಲ ಮಿಂಚಿ ಹೋಗಿದೆ. ಆದರೂ ನೀನು ಮತ್ತೆ ಸಿಗುತ್ತೀಯ ಎಂದು ನನ್ನ ಮನಸ್ಸು ಹೇಳುತ್ತಿದೆ. ನಾನು ನಿರಾಶಾವಾದಿಯಲ್ಲ, ನಿನಗಾಗಿ ಕಾಯುತ್ತಿರುತ್ತೇನೆ. ಇದನ್ನು ಓದಿದ ಮೇಲಾದರೂ ನೀನು ನನ್ನ ಬಳಿ ಬಂದೇ ಬರುತ್ತೀಯಾ ಎಂಬ ಭರವಸೆಯಿಂದ ಕಾದಿರುತ್ತೇನೆ.
ಇಂತಿ ನಿನ್ನ ಬರುವಿಕೆಯಲ್ಲಿ
* ನಾಗರಾಜ್‌ ಬಿ. ಚಿಂಚರಕಿ

Advertisement

Udayavani is now on Telegram. Click here to join our channel and stay updated with the latest news.

Next