ಬಂಟ್ವಾಳ: ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಪಾಣೆಮಂಗಳೂರು ಸೇತುವೆಯಲ್ಲಿ ಶನಿವಾರ ತಡರಾತ್ರಿ ಒಂದೇ ಕುಟುಂಬದ ಮೂವರು ನೇತ್ರಾವತಿ ನದಿಗೆ ಹಾರಿದ್ದು, ಕೊಡಗು ಜಿಲ್ಲೆಯ ವಿರಾಜಪೇಟೆ ಮೂಲದವರೆಂದು ಗುರುತಿಸಲಾಗಿದೆ.
ನದಿಗೆ ಹಾರಿದವರಲ್ಲಿ ಒಬ್ಬ ಮಹಿಳೆಯನ್ನು ಸ್ಥಳೀಯರು ರಕ್ಷಿಸಿದ್ದು, ಆದರೆ ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮೃತರನ್ನು ಕವಿತಾ ಮಂದಣ್ಣ ಎಂದು ಗುರುತಿಸಲಾಗಿದೆ. ಅವರ ಇಬ್ಬರು ಮಕ್ಕಳಾದ ಕೌಶಿಕ್ ಹಾಗೂ ಕಲ್ಪಿತಾ ನದಿಗೆ ಹಾರಿದ್ದಾರೆ ಎನ್ನಲಾಗಿದ್ದು, ಅವರ ಸುಳಿವು ಇನ್ನೂ ಪತ್ತೆಯಾಗಿಲ್ಲ. ಅವರಿಗಾಗಿ ನದಿಯಲ್ಲಿ ಹುಡುಕಾಟ ನಡೆದಿದೆ.
ಕವಿತಾ ಮಂದಣ್ಣ ಅವರ ಪತಿ ಕಿಶನ್ ಆತ್ಮಹತ್ಯೆ ಮಾಡಿಕೊಂಡಿದ್ದು, ಅವರ ಸಾವಿನ ಶಾಕ್ ನಿಂದ ಈ ಕುಟುಂಬ ಮಂಗಳೂರು ಕಡೆಗೆ ಆಗಮಿಸಿದ್ದು, ಪತ್ರ ಬರೆದಿಟ್ಟು ನದಿಗೆ ಹಾರಿಗೆ ಎಂದು ಪೊಲೀಸ್ ಮೂಲಗಳು ತಿಳಿಸಿದೆ.
ಕೆಎ 08 ಎಂಎ 0489 ನೋಂದಣಿಯ ಕಾರಿನಲ್ಲಿ ಬಂದಿದ್ದ ಮೂವರು ಪಾಣೆಮಂಗಳೂರಿನ ನೇತ್ರಾವತಿ ನದಿಯ ಸೇತುವೆ ಬಳಿ ವಾಹನ ನಿಲ್ಲಿಸಿ ನದಿಗೆ ಹಾರಿದ್ದರು.
ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.