31 ವರ್ಷದ ಹಿಂದೆ ಆರಂಭವಾಗಿರುವ ವಾರಾಹಿ ಯೋಜನೆಯೇ ಇನ್ನೂ ಪೂರ್ತಿಯಾಗಿಲ್ಲ. 24 ಕೋಟಿ ರೂಪಾಯಿಯಿಂದ ಆರಂಭವಾದ ಯೋಜನೆ 786 ಕೋಟಿ ಗೇರಿದೆ. ಹೀಗಿರುವಾಗ 13,780 ಕೋಟಿ ಖರ್ಚು ಮಾಡುವ ಎತ್ತಿನಹೊಳೆ ಯೋಜನೆ ಇನ್ನು 25 ವರ್ಷಗಳಲ್ಲಿ ಎಷ್ಟು ಲಕ್ಷ ಕೋಟಿ ತಲುಪಬಹುದು? ಯಾರಿಗೆಲ್ಲ ರಾಜಕೀಯ ಅಸ್ತ್ರವಾಗಬಹುದು? ಎಷ್ಟು ಮತಗಳನ್ನು ಸೃಷ್ಟಿಬಹುದು?
ನೇತ್ರಾವತಿ ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ನದಿಯಾಗಿದ್ದು,ಇದನ್ನು ಆಶ್ರಯಿಸಿಕೊಂಡು ಸಾವಿರಾರು ಜನರು ಬದುಕು ಕಟ್ಟಿಕೊಂಡಿದ್ದಾರೆ. ಹೆಚ್ಚಿನವರ ಕೃಷಿಗೆ ನೇತ್ರಾವತಿಯೇ ಆಧಾರ. ನೇತ್ರಾವತಿಯ ಉಪನದಿಗಳು ಈಗಾಗಲೇ ಬಡಕಲಾಗಿವೆ. ನೇತ್ರಾವತಿ ನದಿ ಮೂಲದ ಸೂಕ್ಷ್ಮಪ್ರದೇಶ ಮತ್ತು ಮಳೆಕಾಡು ಗಳು ನೆಮ್ಮದಿಯನ್ನು ಕಳೆದುಕೊಳ್ಳುತ್ತಾ ಬರುತ್ತಿದು,ª ನದಿಯ ಜೀವಂತಿಕೆಗೆ ಹೊಡೆತ ಬೀಳುತ್ತಿದೆ. ಮುಂದಿನ ದಿನಗಳಲ್ಲಿ ನೇತ್ರಾವತಿ ನದಿಯು ದ.ಕ. ಜಿಲ್ಲೆಗೆ ಸರಿಯಾಗಿ ಹರಿಯದೇ ತನ್ನ ತನುವನ್ನು ಕಳೆದುಕೊಳ್ಳುವ ಅಪಾಯವಿದೆ.ಹೀಗಿರುವಾಗ ಈಗಾಗಲೇ ಸಾಕಷ್ಟು ಬಡಕಲಾಗಿರುವ ಈ ನದಿಯ ಮೇಲೆ ಇನ್ನಷ್ಟು ಮಾರಣಾಂತಿಕ ಏಟು ಬೀಳುವ ಯೋಜನೆಗಳನ್ನು ಹೇರಿದರೆ ಭವಿಷ್ಯವೇನಾಗಬಹುದು ?
ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯ ಜನರ ಪರಿಸ್ಥಿತಿಯೂ ಚಿಂತಾಜನಕವಾಗಿದೆ.ಈ ಜಿಲ್ಲೆಗಳಿಗೆ ನೀರಿನ ವ್ಯವಸ್ಥೆ ಮಾಡಬೇಕಾದ ಅನಿವಾರ್ಯತೆ ಇದೆ. ಆದರೆ ರಾಜ್ಯ ಸರಕಾರ ಆ ಜಿಲ್ಲೆಗಳಿಗೆ ನೀರೇ ಇಲ್ಲದ ಎತ್ತಿನಹೊಳೆ ಯೋಜನೆಯ ಮೂಲಕ ನೀರಾವರಿ ವ್ಯವಸ್ಥೆ ಯನ್ನು ಮಾಡುತ್ತೇವೆ ಎನ್ನುವಾಗ ಆಶ್ಚರ್ಯವಾಗುತ್ತಿದೆ.ಈ ವಿಫಲ ಯೋಜನೆಯನ್ನು ಇಷ್ಟೆಲ್ಲ ಆಸಕ್ತಿಯಿಂದ ಜಾರಿ ಮಾಡುವುದನ್ನು ನೋಡುವಾಗ ಹಲವಾರು ಪ್ರಶ್ನೆಗಳು ಎದುರಾಗುತ್ತಿವೆ.
2013ರಲ್ಲಿ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಪಕ್ಷವು ಎತ್ತಿನಹೊಳೆ ಎಂಬ ಈ ಅಸಂಬದ್ಧ ಯೋಜನೆಯನ್ನು ಜಾರಿಗೆ ತಂದು ಗೊಂದಲದ ಗೂಡಿಗೆ ವೇದಿಕೆ ಕಟ್ಟಿತ್ತು. ಈ ಯೋಜನೆಯು ಸಫಲವೇ, ವಿಫಲವೇ ಎಂಬ ಯಾವ ಲೆಕ್ಕಾಚಾರವನ್ನೂ ಹಾಕಿ ಕೊಳ್ಳದೆ ಮತ ಗಳಿಸುವ ದೃಷ್ಟಿಯಿಂದ ಯೋಜನೆಯ ಪರವಾಗಿ ಕಾಳಜಿ ವಹಿಸಿತು. 2014ರಲ್ಲಿ ಅಂದರೆ ಈಗಿರುವ ರಾಜ್ಯ ಸರಕಾರ ಈ ಯೋಜನೆಯನ್ನು ತನ್ನ ಸ್ವಪ್ರತಿಷ್ಠೆಗೆ ಬಳಸಿಕೊಂಡು ಕಾಮಗಾರಿ ಆರಂಭಿಸಿತು. ಯೋಜನೆಯ ಪರಿಷ್ಕೃತ ವರದಿಯನ್ನು ತಿರುಚಿ ಪರಿಸರ ಅಧ್ಯಯನ, ಸಾಮಾಜಿಕ ಅಧ್ಯಯನವನ್ನೂ ಮಾಡದೆ ಬೃಹತ್ ನೀರಾವರಿ ಯೋಜನೆ ಎಂದು ಬಯಲು ಸೀಮೆಯ ಜನರಿಗೆ ಭರವಸೆಗಳನ್ನು ನೀಡುತ್ತಾ ಬಂತು. ಆಗ ದ.ಕ. ಜಿಲ್ಲೆಯಲ್ಲಿ ಯೋಜನೆಯ ವಿರುದ್ಧ ಪ್ರತಿಭಟನೆ, ರಸ್ತೆತಡೆ, ಬಂದ್ ಎಲ್ಲವೂ ಆಗಿ ಆಕ್ರೋಶ ವ್ಯಕ್ತವಾಯಿತು. ಈ ಯೋಜನೆಯ ವೈಫಲ್ಯದ ಬಗ್ಗೆ ಭಾರತೀಯ ವಿಜ್ಞಾನ ಸಂಸ್ಥೆಯ ಜಲ ತಜ್ಞರು ಕೂಡಾ ಸರಕಾರಕ್ಕೆ ವರದಿ ಸಲ್ಲಿಸಿದ್ದರು. ಕರ್ನಾಟಕ ನೀರಾವರಿ ನಿಗಮ ಹೇಳಿರುವ ಪ್ರಕಾರ ಎತ್ತಿನಹೊಳೆಯಲ್ಲಿ 24 ಟಿ.ಎಂ.ಸಿ. ನೀರು ಲಭ್ಯವಿಲ್ಲ. 9 ಟಿ.ಎಂ.ಸಿ. ನೀರು ಮಾತ್ರ ಲಭ್ಯವಿದ್ದು ತಿರುವು ಮಾಡಲು 0.84 ಟಿ.ಎಂ.ಸಿ ನೀರು ಮಾತ್ರ ಸಿಗಲಿದೆ. ಆದುದರಿಂದ 13,780 ಕೋಟಿ ರೂ. ಖರ್ಚುಮಾಡಿ ಪಶ್ಚಿಮಘಟ್ಟದ ಹಾಗೂ ನೇತ್ರಾವತಿ ನದಿ ಮೂಲದ ಸೂಕ್ಷ್ಮ ಜೀವ ವೈವಿಧ್ಯತೆ ಇರುವ ಪ್ರದೇಶಕ್ಕೆ ಈ ಯೋಜನೆಯಿಂದ ಇನ್ನಷ್ಟು ಸಮಸ್ಯೆಗಳನ್ನು ತರಬೇಡಿ, ಯೋಜನೆ ಯನ್ನು ಕೈಬಿಡಿ ಎಂದು ಜಲತಜ್ಞರು ವರದಿ ನೀಡಿದ್ದರೂ ಸರಕಾರ ಅದನ್ನು ತಿರಸ್ಕರಿಸಿ ಯೋಜನೆ ಮಾಡಿಯೇ ತೀರುವುದೆಂಬ ಹಠಕ್ಕೆ ಬಿದ್ದಿತ್ತು. ಯೋಜನೆಯ ವಿಳಂಬ, ರಾಜಕಾರಣಿಗಳ ನೀರಿನ ಸುಳ್ಳು ಹೇಳಿಕೆಗಳು, ಮತಗಳಿಕೆಗಾಗಿ ನೀರಾವರಿ ನೆಪ ಹೇಳುವ ಸಚಿವರು, ಬಯಲು ಸೀಮೆಯ ಶಾಶ್ವತ ನೀರಾವರಿ ಹೋರಾಟ ಗಾರರ ಎತ್ತಿನಹೊಳೆ ಯೋಜನಾ ವ್ಯಾಪ್ತಿ ಪ್ರದೇಶದ ಸಮೀಕ್ಷೆ, ನೀರಿಲ್ಲವೆಂಬ ಜಲ ತಜ್ಞರ ವೈಜ್ಞಾನಿಕ ವರದಿ ಇವೆಲ್ಲವನ್ನೂ ಕಂಡು ಬಯಲು ಸೀಮೆಯ ಜನರಿಗೆ ಎತ್ತಿನಹೊಳೆ ಯೋಜನೆ ಕೇವಲ ಹಣಗಳಿಸುವ ಯೋಜನೆ ಎಂದು ಮನವರಿಕೆಯಾಗಿ ವಿರೋಧಿಸಲಾರಂಭಿಸಿ ದರು. ಕರಾವಳಿಯಲ್ಲೂ, ಮಲೆನಾಡಿನಲ್ಲೂ, ಬಯಲು ಸೀಮೆಯಲ್ಲೂ ಜನ ವಿರೋಧವಿದೆ ಎಂದಾದರೆ ಈ ಯೋಜನೆ ಯಾರಿಗಾಗಿ? ಯಾವಾಗ ಎರಡೂ ಕಡೆಯಿಂದಲೂ ವಿರೋಧ ವ್ಯಕ್ತವಾಯಿತೋ ಆಗ ಲಾಭಕ್ಕಾಗಿ ರಾಜಕೀಯ ಲಾಭದ ಲೆಕ್ಕಾಚಾರ ಶುರುವಾಯಿತು. ರಾಜ್ಯದ ಮೂರು ಪ್ರಮುಖ ಪಕ್ಷಗಳು ಈ ವಿವಾದದ ಮಡುವಿಗೆ ಧುಮುಕಿ ಪರಸ್ಪರ ಕೆಸರೆರಚಿ ಕೊಂಡವು. ಏತಕ್ಕಾಗಿ ಈ ಯೋಜನೆಯನ್ನು ಮಾಡಿ ಜನರಿಗೆ ವಂಚಿಸುತಿದ್ದೀರಿ ಎಂದು ವಿರೋಧ ಪಕ್ಷವೂ ಪ್ರಶ್ನೆ ಮಾಡಲಿಲ್ಲ. ಏಕೆ ಪ್ರಶ್ನಿಸಲಿಲ್ಲ ವೆಂದರೆ ಈ ಯೋಜನೆಯನ್ನು ಅನುಷ್ಠಾನಕ್ಕೆ ತಂದಿರು ವವರೇ ವಿರೋಧ ಪಕ್ಷದಲ್ಲಿ ಕುಳಿತವರು. ಯಾವ ಸೈದ್ಧಾಂತಿಕ ನಿಲುವು ಗಳಿಂದ ತಾವೇ ಆರಂಭಿಸಿದ ಯೋಜನೆಯನ್ನು ವಿರೋಧಿ ಸು ವುದು? ಆರಂಭದಲ್ಲೇ ಕಮೀಷನ್ ಲಾಭದ ಲೆಕ್ಕಾಚಾರದಿಂದ ಎಲ್ಲ ಪಕ್ಷಗಳೂ ಈ ಯೋಜನೆಯ ಲಾಭ ಮಾಡಿಕೊಂಡಿರುವಾಗ ವಿರೋಧಿಸುವುದಾದರೂ ಹೇಗೆ? ಆಡಳಿತ ಪಕ್ಷದ ಎಲ್ಲ ಪ್ರತಿನಿಧಿಗಳು ಜೊತೆಗೆ ನೇತ್ರಾವತಿ ನದೀ ತಟದಲ್ಲೇ ಹುಟ್ಟಿ ಬೆಳೆದ ಕರಾವಳಿಯ ಎಲ್ಲಾ ಜನಪ್ರತಿನಿಧಿಗಳು ಅಧಿಕಾರದ ಲಾಲಸೆಯಿಂದ ತಮಗೆ ಮತ ನೀಡಿರುವ ಜನರ ಕುಡಿಯುವ ನೀರಿನ ಶಾಶ್ವತ ಸಮಸ್ಯೆ ಸೃಷ್ಟಿಯಾಗಲಿಯೆಂದು ತಿಳಿದಿದ್ದರೂ ಯೋಜನೆಯ ಪರ ನಿಂತರು.ಜನತೆಗೆ ವಂಚನೆ ಮಾಡಿಯೂ ಸ್ವಘೋಷಿತ ಸಂಭಾವಿತ ರೆನಿಸಿಕೊಂಡರು. ಇನ್ನು ಕೆಲವು ರಾಜಕಾರ ಣಿಗಳು ಬಯಲು ಸೀಮೆಯಲ್ಲಿ ಯೋಜನೆ ಪರವಾಗಿಯೂ ಕರಾವಳಿಗೆ ಬಂದಾಗ ಯೋಜನೆಯ ವಿರುದ್ಧವೂ ತಮ್ಮ ದಂದ್ವ ನಿಲುವನ್ನು ವ್ಯಕ್ತಪಡಿಸಿ ನರಿ ಬುದ್ಧಿ ತೋರಿಸಿದರು.
ಇಲ್ಲಿನ ರಾಜಕಾರಣಿಗಳ ಒಳ ಮರ್ಮ ಏನು ಎಂಬುದು ಈಗ ಜನರಿಗೆ ಅರ್ಥವಾಗಿದೆ. 31 ವರ್ಷದ ಹಿಂದೆ ಆರಂಭವಾಗಿರುವ ವಾರಾಹಿ ಯೋಜನೆಯೇ ಇನ್ನೂ ಪೂರ್ತಿಯಾಗಿಲ್ಲ. 24 ಕೋಟಿ ರೂಪಾಯಿಯಿಂದ ಆರಂಭವಾದ ಯೋಜನೆ 786 ಕೋಟಿ ಗೇರಿದೆ. ಹೀಗಿರುವಾಗ 13,780 ಕೋಟಿ ಖರ್ಚು ಮಾಡುವ ಎತ್ತಿನಹೊಳೆ ಯೋಜನೆ ಇನ್ನು 25 ವರ್ಷಗಳಲ್ಲಿ ಎಷ್ಟು ಲಕ್ಷ ಕೋಟಿ ತಲುಪಬಹುದು? ಯಾರಿಗೆಲ್ಲ ರಾಜಕೀಯ ಅಸ್ತ್ರವಾಗಬಹುದು? ಎಷ್ಟು ಮತಗಳನ್ನು ಸೃಷ್ಟಿಬಹುದು? ಎತ್ತಿನಹೊಳೆ ವಿಚಾರದಲ್ಲಿ ಮೂರು ಪ್ರಧಾನ ಪಕ್ಷಗಳು ಪಾರದರ್ಶಕವಾಗಿಲ್ಲ. ಪ್ರತಿಯೊಂದು ಪಕ್ಷವೂ ಅಪರಾಧಿ ಸ್ಥಾನದಲ್ಲಿರುವುದನ್ನು ರಾಜ್ಯದ ಜನತೆ ಅರಿತಿದ್ದಾರೆ.
ಯೋಜನೆ ನೆಪದಲ್ಲಿ ಎಲ್ಲ ನದಿಗಳನ್ನು ತಡೆದು, ಎಲ್ಲ ಕಾಡನ್ನು ಕಡಿದು ಹಾಕಿದರೆ ಭವಿಷ್ಯದಲ್ಲಿ ಮಳೆಯೇ ಆಗದೆ ಕುಡಿಯಲು ನೀರು ಸಿಗದಿದ್ದರೆ ಜನರು ಏನು ಮಾಡಬೇಕು? ನೋಟಾ ಅಭಿಯಾನ ನದಿ ತಿರುವು ಯೋಜನೆಯನ್ನು ಬೆಂಬಲಿಸಿ ನದಿ ಹಾಗೂ ಪಶ್ಚಿಮಘಟ್ಟವನ್ನು ನಾಶ ಮಾಡಿದ ಮೂರು ಪ್ರಮುಖ ಪಕ್ಷಗಳನ್ನು ತಿರಸ್ಕರಿಸಿ ನೋಟಾ ಮತ ಚಲಾವಣೆಗೆ ಸಹ್ಯಾದ್ರಿ ಸಂಚಯ ಮತ್ತು ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟದಂತಹ ಪರಿಸರ ಪರ ಸಂಘಟನೆಗಳು ಒತ್ತಾಯಿಸುತ್ತಿವೆ. ಅದೇ ರೀತಿ ಎತ್ತಿನಹೊಳೆ ಯೋಜನೆಯ ಫಲಾನುಭವಿಗಳೆಂದೆನಿಸಿಕೊಂಡಿರುವ ಕೋಲಾರ, ಚಿಕ್ಕಬಳ್ಳಾಪುರದಲ್ಲೂ ಅಲ್ಲಿನ ಜನತೆ ನೋಟಾ ಮತ ಹಾಕಿ ರಾಜಕೀಯ ಪಕ್ಷಗಳಿಗೆ ಬಹಿಷ್ಕಾರ ಹಾಕಲು ತಯಾರಾಗಿದ್ದಾರೆ. ನೋಟಾಕ್ಕೆ ಮತ ಹಾಕಿದರೆ ಲಾಭ ಏನು ಎಂಬುದು ಪ್ರಮುಖ ಪ್ರಶ್ನೆ. ದ.ಕ.ಜಿಲ್ಲೆಯಲ್ಲಿ ನೋಟಾ ಏಕೆ ಪ್ರಮುಖವಾಗುತ್ತಿದೆ ಎಂದರೆ ನೇತ್ರಾವತಿಯನ್ನು, ಪಶ್ಚಿಮ ಘಟ್ಟವನ್ನು ಉಳಿಸಲಾಗದ ಯಾವ ಪಕ್ಷಗಳೂ ನಮಗೆ ಅಗತ್ಯವಿಲ್ಲ. ನೇತ್ರಾವತಿ ಯೋಜನೆಯಿಂದಾಗಿ ಕುಡಿಯಲು ನೀರೇ ಲಭ್ಯವಿಲ್ಲ ಮತ್ತು ಪಶ್ಚಿಮಘಟ್ಟ ನಾಶ ದಿಂದಾಗಿ ಮಳೆಯೇ ಇಲ್ಲವೆಂದಾದರೆ ಯಾವ ಅಭಿವೃದ್ಧಿ ಮಾಡಿ ಏನು ಪ್ರಯೋಜನ ಎಂಬುದು ನೋಟಾ ಮತದಾರರ ಪ್ರಶ್ನೆ. (NOTA-Netravati-yannu Oggattagi Tammadendu Anumodisona) ನೋಟಾ ಮತದಾನ ಮಾಡಿ ನೇತ್ರಾವತಿಯ ವಿನಾಶಕ್ಕೆ ಕಾರಣರಾದವರಿಗೆ ಬುದ್ಧಿಕಲಿಸೋಣವೆಂದು ಪರಿಸರಾಸಕ್ತರ ಹಾಗೂ ನೇತ್ರಾವತಿ ಹೋರಾಟಗಾರರ ಅಭಿಪ್ರಾಯ. ಎಲ್ಲ ಪಕ್ಷಗಳು ನೀರಾವರಿ ವಿಚಾರದಲ್ಲಿ ಸುಳ್ಳು ಭರವಸೆ ನೀಡಿರುವ ಕಾರಣಕ್ಕಾಗಿ ಬಯಲುಸೀಮೆಯವರು ನೋಟಾ ಬೆಂಬಲಿಸುತ್ತಿದ್ದಾರೆ.
ದ.ಕ. ಜಿಲ್ಲೆಯಲ್ಲಿ ನೋಟಾ ಮತ ಹೆಚ್ಚಾದಷ್ಟೂ ಅದು ನೇತ್ರಾ ವತಿ ಯೋಜನೆಯ ವಿರುದ್ಧ ಎದ್ದಿರುವ ಆಕ್ರೋಶದ ಪ್ರತೀಕ. ನೋಟಾಕ್ಕೆ ಎಷ್ಟೇ ಮತ ಲಭಿಸಲಿ ಆದರೆ ಯಾರಾದರೊಬ್ಬ ಅಭ್ಯರ್ಥಿ ಗೆಲ್ಲುತ್ತಾನೆ ಎಂಬುದು ಹಲವರ ಪ್ರಶ್ನೆ. ನೋಟಾ ಮತ ಚಲಾವಣೆ ಸೋಲು ಗೆಲುವಿಗೋಸ್ಕರ ಅಲ್ಲ. ರಾಜಕೀಯ ನಾಯಕರಿಗೆ ಬುದ್ಧಿ ಕಲಿಸಲು ನೋಟಾಕ್ಕೆ ಮತಹಾಕಬೇಕು. ಮುಂದಿನ ದಿನಗಳಲ್ಲಿ ಪಕ್ಷಗಳಿಗೆ ಒಂದು ಎಚ್ಚರಿಕೆಯ ಗಂಟೆಯಾಗಿ ನೋಟಾ ಮತ ಪ್ರಮಾಣವಿರಬೇಕು. ಸಾವಿರಾರು ಜನರು ನೇತ್ರಾವತಿಯ ಜತೆಗೆ ಅವಿನಾಭಾವ ಸಂಬಂಧವನ್ನು ಹೊಂದಿದ್ದಾರೆ ಎಂದು ಚರಿತ್ರೆಯಲ್ಲಿ ದಾಖಲೆಯಾದರೆ ಅದುವೇ ನೇತ್ರಾವತಿಯ ಗೆಲುವಿಗೆ ಸಾಕ್ಷಿ. ಎತ್ತಿನಹೊಳೆ ಯೋಜನೆ ವಿಚಾರದಲ್ಲಿ ಎಲ್ಲಾ ಸರಕಾರಗಳು ಬಯಲುಸೀಮೆ ಹಾಗೂ ಕರಾವಳಿ ಜಿಲ್ಲೆಯವರಿಗೆ ವಂಚನೆ ಮಾಡಿರುವುದರಿಂದ ಈ ವಿಧಾನ ಸಭಾ ಚುನಾವಣೆಯಲ್ಲಿ ನದಿ ಹಾಗೂ ನೀರಿನ ವಿಚಾರದಲ್ಲಿ ಸಾವಿರಾರು ಮತಗಳು ನೋಟಾಕ್ಕೆ ಬಿದ್ದರೆ ಅಭ್ಯರ್ಥಿಗಳಿಗೆ ಅಳಿವು ಉಳಿವಿನ ಪ್ರಶ್ನೆ ಎದುರಾಗಲಿದೆ. ರಾಜಕಾರಣಿಗಳು ಇನ್ನಾದರೂ ನೀರಿನ ವಿಚಾರದಲ್ಲಿ ಜನರೊಂದಿಗೆ ಪಾರದರ್ಶಕ ಹಾಗೂ ಪ್ರಾಮಾಣಿಕವಾಗಿದ್ದು ನೀರಾವರಿ ಯೋಜನೆಗಳ ಬಗ್ಗೆ ಜನರಿಗೆ ನಂಬಿಕೆ, ವಿಶ್ವಾಸ ಹುಟ್ಟುವಂತಹ ಕೆಲಸ ಮಾಡಲಿ.
ದಿನೇಶ್ ಹೊಳ್ಳ