ರಾಜ್ಯದಲ್ಲಿ ವೈದ್ಯಕೀಯ ಶಿಕ್ಷಣ ವೆಚ್ಚ ಇಳಿಕೆಗೆ ರಾಜ್ಯ ಸರಕಾರ ಗಂಭೀರ ಚಿಂತನೆ ನಡೆಸಿದೆ ಎಂಬ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಹೇಳಿಕೆ ವೈದ್ಯಕೀಯ ಶಿಕ್ಷಣ ಪಡೆಯುವ ಆಕಾಂಕ್ಷಿ ವಿದ್ಯಾರ್ಥಿಗಳು ಮತ್ತವರ ಹೆತ್ತವರಲ್ಲಿ ಹೊಸ ಆಶಾವಾದ ಮೂಡಿಸಿದೆ.
ಉಕ್ರೇನ್ ವಿರುದ್ಧ ರಷ್ಯಾ ಸೇನಾ ದಾಳಿ ಆರಂಭಿಸಿದ ಬಳಿಕ ರಾಜ್ಯದ ಮಾತ್ರವಲ್ಲದೆ ದೇಶಾದ್ಯಂತದ ಭಾರೀ ಸಂಖ್ಯೆಯ ವಿದ್ಯಾರ್ಥಿಗಳು ಉಕ್ರೇನ್‌ನಲ್ಲಿ ಶಿಕ್ಷಣ ಪಡೆಯುತ್ತಿರುವ ವಿಚಾರ ಮುನ್ನೆಲೆಗೆ ಬಂದಿತ್ತು. ಯುದ್ಧ ತೀವ್ರಗೊಳ್ಳುತ್ತಿದ್ದಂತೆಯೇ ಈ ವಿದ್ಯಾರ್ಥಿಗಳನ್ನು ಸ್ವದೇಶಕ್ಕೆ ಕರೆತರಲು ಸರಕಾರ ಹರಸಾಹಸ ಪಡುವಂತಾಗಿತ್ತು. ಇಷ್ಟು ಸಂಖ್ಯೆಯ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣ ಪಡೆಯಲು ಉಕ್ರೇನ್ ಸಹಿತ ವಿದೇಶಗಳಿಗೆ ತೆರಳಲು ಕಾರಣವೇನು ಎಂಬ ಚರ್ಚೆ ಆರಂಭಗೊಂಡಾಗ ವಿದೇಶಗಳಲ್ಲಿ ವೈದ್ಯಕೀಯ ಶಿಕ್ಷಣ ವೆಚ್ಚ ಕಡಿಮೆ ಎಂಬುದು ಸಾಬೀತಾಗಿತ್ತು. ವೈದ್ಯಕೀಯ ಕಾಲೇಜುಗಳಲ್ಲಿ ಸರಕಾರಿ ಕೋಟಾದಡಿ ಶಿಕ್ಷಣ ಶುಲ್ಕ ಕಡಿಮೆ ಇದೆಯಾದರೂ ಖಾಸಗಿ ಸಂಸ್ಥೆಗಳಲ್ಲಿ ಶುಲ್ಕ, ಟ್ಯೂಷನ್ ಫೀ ಆದಿಯಾಗಿ ಇನ್ನಿತರ ವೆಚ್ಚಗಳೆಲ್ಲ ಸೇರಿದರೆ ಲಕ್ಷಾಂತರ ರೂ. ವೆಚ್ಚವಾಗುತ್ತಿದೆ.
ಸರಕಾರಿ ಕೋಟಾದಡಿ ಸೀಟು ಸಿಗದ ವಿದ್ಯಾರ್ಥಿಗಳು ತಮ್ಮ ವೈದ್ಯಕೀಯ ಶಿಕ್ಷಣದ ಕನಸನ್ನು ನನಸಾಗಿಸಲು ವಿದೇಶಗಳತ್ತ ಮುಖ ಮಾಡುವುದು ಸಾಮಾನ್ಯ ವಾಗಿದೆ. ಇದರ ಬೆನ್ನಲ್ಲೇ ದೇಶದಲ್ಲಿ ವೈದ್ಯಕೀಯ ಶಿಕ್ಷಣ ವೆಚ್ಚವನ್ನು ಕಡಿಮೆಗೊಳಿಸಬೇಕು ಎಂಬ ಆಗ್ರಹ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ, ರಾಷ್ಟ್ರೀಯ ವೈದ್ಯಕೀಯ ಮಂಡಳಿ ದೇಶದಲ್ಲಿ ವೈದ್ಯಕೀಯ ಶಿಕ್ಷಣ ವೆಚ್ಚವನ್ನು ಕಡಿಮೆ ಮಾಡುವ ಬಗ್ಗೆ ಚಿಂತನೆ ನಡೆಸಿದೆ. ಈ ಬಗ್ಗೆ ಸ್ವತಃ ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದರು. ಈಗ ಮುಖ್ಯಮಂತ್ರಿ ರಾಜ್ಯದಲ್ಲೂ ವೈದ್ಯಕೀಯ ಶಿಕ್ಷಣ ವೆಚ್ಚದ ಇಳಿಕೆ ಸಂಬಂಧ ಗಂಭೀರ ಚಿಂತನೆ ನಡೆದಿದೆ ಮತ್ತು ರಾಜ್ಯದಲ್ಲಿ ಎ, ಬಿ, ಸಿ ಕೆಟಗರಿ ಆಧಾರದಲ್ಲಿ ವೈದ್ಯಕೀಯ ಶಿಕ್ಷಣ ವೆಚ್ಚವನ್ನು ಕಡಿಮೆ ಮಾಡಲು ಸರಕಾರ ಉದ್ದೇಶಿಸಿದೆ ಎಂದಿರುವುದು ವಿದ್ಯಾರ್ಥಿಗಳ ಪಾಲಿಗೆ ಸಂತಸದ ವಿಚಾರ.
ವೈದ್ಯಕೀಯ ಶಿಕ್ಷಣ ಪ್ರವೇಶಕ್ಕಾಗಿ ನಡೆಸಲಾಗುವ ನೀಟ್ ಬಗ್ಗೆಯೂ ವಿವಿಧ ರಾಜ್ಯಗಳಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಈ ಪರೀಕ್ಷೆ ಕಠಿನವಾಗಿದ್ದು, ದ್ವಿತೀಯ ಪಿಯುಸಿಯಲ್ಲಿ ಗರಿಷ್ಠ ಅಂಕಗಳನ್ನು ಪಡೆದ ವಿದ್ಯಾರ್ಥಿಗಳು ಕೂಡ ನೀಟ್‌ನಲ್ಲಿ ಎಡವುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ. ಭಾರತದಲ್ಲಿ ಅತ್ಯುಚ್ಚ ಮಟ್ಟದ ವೈದ್ಯಕೀಯ ಶಿಕ್ಷಣ ಲಭಿಸುತ್ತಿದೆಯಾದರೂ ಪ್ರವೇಶ ಪರೀಕ್ಷೆ ಮತ್ತು ಶಿಕ್ಷಣ ವೆಚ್ಚದ ಹೊರೆಯಿಂದಾಗಿ ಪ್ರತಿಭಾನ್ವಿತರು ವೈದ್ಯಕೀಯ ಶಿಕ್ಷಣ ಪಡೆಯಲು ಸಾಧ್ಯವಾಗುತ್ತಿಲ್ಲ. ವೈದ್ಯಕೀಯ ಸೀಟುಗಳ ಕೊರತೆಯೂ ಪ್ರತಿಭಾ ಪಲಾಯನಕ್ಕೆ ಕಾರಣವಾಗುತ್ತಿದೆ.
ಇವೆಲ್ಲದರತ್ತ ಕೇಂದ್ರ, ರಾಜ್ಯ ಸರಕಾರ ಹಾಗೂ ರಾಷ್ಟ್ರೀಯ ವೈದ್ಯಕೀಯ ಮಂಡಳಿ ತುರ್ತು ಗಮನಹರಿಸುವ ಅಗತ್ಯವಿದೆ. ಸಾಮಾನ್ಯ ವರ್ಗದ ಪ್ರತಿಭಾವಂತ ವಿದ್ಯಾರ್ಥಿಗಳು ದೇಶದಲ್ಲಿ ವೈದ್ಯಕೀಯ ಶಿಕ್ಷಣ ಪಡೆದು ಸಮಾಜಕ್ಕೆ ಸೇವೆ ಸಲ್ಲಿಸುವಂತಾಗಲು ಅವಕಾಶ ಮಾಡಿಕೊಡಬೇಕು. ಶಿಕ್ಷಣದ ಹಂತದಲ್ಲಿಯೇ ಹಣ ವಿಜೃಂಭಿಸಿದರೆ ಅಷ್ಟೊಂದು ವೆಚ್ಚ ಮಾಡಿ ವೈದ್ಯಕೀಯ ಪದವಿ ಪಡೆದು ಆತ ವೈದ್ಯನಾಗಿ ಮಾನವೀಯ ಸೇವೆ ಸಲ್ಲಿಸುವುದಾದರೂ ಹೇಗೆ ಎಂಬ ಬಗ್ಗೆ ಚಿಂತನೆ ನಡೆಸುವುದು ಕೂಡ ಇಂದಿನ ತುರ್ತು.