Advertisement
ಮೂರು ದಿನಗಳಿಂದ ಸದಾಶಿವನಗರದಲ್ಲಿರುವ ಶಿವಕುಮಾರ್ ನಿವಾಸ, ಆರ್.ಟಿ.ನಗರದಲ್ಲಿರುವ ದ್ವಾರಕನಾಥ್ ನಿವಾಸ, ಆರ್.ಆರ್.ನಗರದಲ್ಲಿರುವ ಗ್ಲೋಬಲ್ ಕಾಲೇಜು ಹಾಗೂ ಬೆಂಗಳೂರಿನ ಧವನಂ ಜ್ಯುವೆಲರ್ಸ್ ಹಾಗೂ ಎನ್.ಆರ್.ಕಾಲೋನಿಯಲ್ಲಿರುವ ಶರ್ಮಾ ಟ್ರಾವೆಲ್ಸ್ ಮಾಲೀಕ ಸುನೀಲ್ ಶರ್ಮಾ ಮನೆ ಮತ್ತು ಕಚೇರಿ ಹಾಗೂ ಮೈಸೂರಿನಲ್ಲಿ ಮಾವ ತಿಮ್ಮಯ್ಯ ಮನೆ ಹಾಗೂ ಹಾಸನದಲ್ಲಿ ಸಚಿನ್ ನಾರಾಯಣ ನಿವಾಸಗಳ ಮೇಲಿನ ದಾಳಿಯನ್ನು ಸಹ ಮುಂದುವರಿಸಲಾಗಿದೆ ಎಂದು ಐಟಿ ಅಧಿಕಾರಿಗಳು ತಿಳಿಸಿದ್ದಾರೆ.
ಮಾಹಿತಿ ಸಂಗ್ರಹಿಸಿದರು. ಬುಧವಾರ ಬೆಳಗ್ಗೆ 7 ಗಂಟೆಯಿಂದ ಡಿ.ಕೆ. ಶಿವಕುಮಾರ್ ಅವರ ಸದಾಶಿವನಗರದ ನಿವಾಸದಲ್ಲಿ ದಾಳಿ ನಡೆಸಿದ ಅಧಿಕಾರಿಗಳು ವಿವಿಧ ದಾಖಲೆಗಳ ಪರಿಶೀಲನೆ ನಡೆಸಿದ್ದಲ್ಲದೆ ಅಲ್ಲೇ ವಾಸ್ತವ್ಯ ಹೂಡಿದ್ದರು. ಶುಕ್ರವಾರ 7 ಗಂಟೆಯಿಂದ ಮತ್ತೆ ಶೋಧ ಕಾರ್ಯ ನಡೆಸಿದಲ್ಲದೆ, ಬೆಂಗಳೂರಿನ ವಿವಿಧೆಡೆ, ಮೈಸೂರಿನ ಸಂಬಂಧಿಕರ ಮನೆಯಲ್ಲಿ ದೊರೆತ ಆಸ್ತಿ ಪತ್ರಗಳು, ಬ್ಯಾಂಕ್‌ಗಳ ಪಾಸ್ ಬುಕ್, ಆನ್‌ಲೈನ್ ಮೂಲಕ ಹಣ ವರ್ಗಾವಣೆ ಕುರಿತ ದಾಖಲೆಗಳ ಬಗ್ಗೆ ಹೇಳಿಕೆ ದಾಖಲಿಸಿಕೊಂಡರು. ಪ್ರತಿ ಹೇಳಿಕೆ ವಿಡಿಯೋ ಚಿತ್ರೀಕರಿಸಿಕೊಳ್ಳಲಾಯಿತು ಎಂದು ಮೂಲಗಳು ತಿಳಿಸಿವೆ. ಮೊಬೈಲ್ ಜಾಮರ್ ಅಳವಡಿಕೆ: ದಾಳಿ ಹಾಗೂ ಕಾರ್ಯಾಚರಣೆಯ ಮಾಹಿತಿ ಬಹಿರಂಗಗೊಳ್ಳದಂತೆ ಎಚ್ಚರಿಕೆ ವಹಿಸಿರುವ ಅಧಿಕಾರಿಗಳು, ಶಿವಕುಮಾರ್ ಮನೆಗೆ ಮೊಬೈಲ್ ಜಾಮರ್‌ಗಳನ್ನು ಅಳವಡಿಸಿದ್ದರು.
Related Articles
Advertisement
ಕಂಪ್ಯೂಟರ್‌ಗಳಲ್ಲಿ ಮಾಹಿತಿ ಎಂಟ್ರಿ: ದಾಳಿ ಸಂದರ್ಭದಲ್ಲಿ ವಶಕ್ಕೆ ಪಡೆದ ದಾಖಲೆ ಮತ್ತಿತರ ವಸ್ತುಗಳನ್ನು ಆದಾಯ ತೆರಿಗೆ ಇಲಾಖೆ ಕೇಂದ್ರ ಕಚೇರಿಗೆ ರವಾನಿಸಲಾಗಿದೆ. ಪ್ರತಿಯೊಂದು ದಾಖಲೆಗಳನ್ನು ಇಲ್ಲಿನ ಕಂಪ್ಯೂಟರ್‌ಗಳಲ್ಲಿ ಅಧಿಕಾರಿಗಳು ದಾಖಲಿಸಿದರು. ಶಿವಕುಮಾರ್ ಅವರಿಂದ ಸಂಗ್ರಹಿಸಿದ ಮಾಹಿತಿಗಳನ್ನು ಸಹ ಸಂಪೂರ್ಣವಾಗಿ ದಾಖಲಿಸಿದರು ಎಂದು ತಿಳಿದು ಬಂದಿದೆ.
ಜ್ಯೋತಿಷಿ ದ್ವಾರಕನಾಥ್, ಶರ್ಮಾ ನಿವಾಸದಲ್ಲೂ ಮುಂದುವರಿದ ದಾಳಿಜ್ಯೋತಿಷಿ ದ್ವಾರಕನಾಥ್ ಮನೆ ಮೇಲೆ ಶುಕ್ರವಾರವೂ ದಾಳಿ ಮುಂದುವರಿದು, ಗುರುವಾರ ಪತ್ತೆಯಾದ ನೂರಾರು ಕೋಟಿ ರೂ. ಮೌಲ್ಯದ ಆಸ್ತಿಯ ದಾಖಲೆಗಳ ಜತೆಗೆ ಶುಕ್ರವಾರವೂ ಎರಡು ಸಾವಿರ ಮುಖ ಬೆಲೆಯ 75 ಲಕ್ಷ ರೂ. ನಗದು ಹಾಗೂ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳು ಪತ್ತೆಯಾಗಿವೆ ಎಂದು ಮೂಲಗಳು ತಿಳಿಸಿವೆ. ಶಿವಕುಮಾರ್ ಆಪ್ತ ಶರ್ಮಾ ಟ್ರಾವೆಲ್ಸ್‌ನ ಸುನೀಲ್ ಶರ್ಮಾ ಮನೆ ಮೇಲಿನ ದಾಳಿ ಶುಕ್ರವಾರವೂ ಮುಂದುವರಿದಿತ್ತು.
ಎನ್.ಆರ್.ಕಾಲೋನಿಯಲ್ಲಿರುವ ಬೃಹತ್ ಬಂಗಲೆಯಲ್ಲಿ ಭಾರಿ ಭದ್ರತೆಯಲ್ಲಿ 8 ಮಂದಿ ಐಟಿ ಅಧಿಕಾರಗಳು ಶೋಧ ಕಾರ್ಯ ನಡೆಸಿದರು. ಅಲ್ಲಿ ಎರಡು ಲಾಕರ್‌ಗಳು ಪತ್ತೆಯಾಗಿದ್ದು, ಅಪಾರ ಪ್ರಮಾಣದ ಚಿನ್ನಾಭರಣ, ನಗದು ಪತ್ತೆಯಾಗಿದೆ. ಸ್ಥಳೀಯ ಮಾರ್ವಾಡಿಗಳನ್ನು ಕರೆತಂದು ಚಿನ್ನಾಭರಣ ಪರಿಶೀಲನೆ ನಡೆಸಲಾಯಿತು ಎಂದು ಹೇಳಲಾಗಿದೆ. ಹಾಸನದಲ್ಲಿ ತಡರಾತ್ರಿವರೆಗೆ ತಪಾಸಣೆ
ಹಾಸನ: ಹಾಸನದ ಎಸ್‌ಬಿಜಿ ಗ್ರೂಪ್ಸ್‌ನ ಮಾಲೀಕ ಚೇತನ್ ನಾರಾಯಣ್ ನಿವಾಸದಲ್ಲಿ ಆದಾಯ ತೆರಿಗೆ ಅಧಿಕಾರಿಗಳು ಸತತ ಮೂರನೇ ದಿನವೂ ತಪಾಸಣೆ ಮುಂದುವರಿಸಿದ್ದು, ಶುಕ್ರವಾರ ತಡ ರಾತ್ರಿವರೆಗೂ ತಪಾಸಣೆ ನಡೆದಿದೆ. ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರೊಂದಿಗೆ ವ್ಯಾವಹಾರಿಕ ಸಂಬಂಧ ಹೊಂದಿರುವ ಚೇತನ್ ನಾರಾಯಣ್ ಅವರ ನಿವಾಸಕ್ಕೆ ಬುಧವಾರ ಬೆಳಗ್ಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರು. ಅಂದಿನಿಂದ ಶುಕ್ರವಾರ ರಾತ್ರಿವರೆಗೂ ಅವರ ನಿವಾಸದಲ್ಲಿ ತಪಾಸಣೆ ಮುಂದುವರಿದಿದೆ. ಲಭ್ಯವಾದ ಮಾಹಿತಿ ಪ್ರಕಾರ ಸುಮಾರು 8 ಲಕ್ಷ ರೂ.ನಗದು, 3 ಕೆ.ಜಿ.ಚಿನ್ನಾಭರಣಗಳು ಹಾಗೂ ಆಸ್ತಿಗೆ ಸಂಬಂಧಿಸಿದ ಅಪಾರ ದಾಖಲೆಗಳನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಐಟಿ- ಇಡಿ ಕಾರ್ಯವ್ಯಾಪ್ತಿ
ಐಟಿ ಕಾರ್ಯವ್ಯಾಪ್ತಿ
ಮೊದಲ ಹಂತ: ದಾಳಿ
ಎರಡನೇ ಹಂತ: ಸಮನ್ಸ್ ಜಾರಿಗೊಳಿಸಿ ವಿಚಾರಣೆಗೆ ಕರೆಯುವುದು. ಆಗ ದಾಳಿ ಸಂದರ್ಭದಲ್ಲಿ ಪತ್ತೆಯಾದ ಹಾಗೂ ವಶಕ್ಕೆ ಪಡೆದುಕೊಂಡ ಬೆಲೆ ಬಾಳುವ ವಸ್ತುಗಳ (ಹಣ, ಚಿನ್ನಾಭರಣ, ಆಸ್ತಿಪತ್ರ, ದಾಖಲೆ) ಮೂಲಗಳ ಬಗ್ಗೆ ಸ್ಪಷ್ಟನೆ ನೀಡುವಂತೆ ಸೂಚಿಸಲಾಗುವುದು.
– ಡಿ.ಕೆ.ಶಿವಕುಮಾರ್ ನಿವಾಸವಷ್ಟೇ ಅಲ್ಲದೆ ಅವರ ಸಂಬಂಧಿಗಳು, ಪರಿಚಿತರಿಗೆ ಸೇರಿದ ಸ್ಥಳಗಳಲ್ಲಿ ತಪಾಸಣೆ ವೇಳೆ ಪತ್ತೆಯಾದ ದಾಖಲೆಗಳಲ್ಲಿ ಶಿವಕುಮಾರ್ ಹೆಸರು ಉಲ್ಲೇಖವಾಗಿದ್ದರೆ ಅದಕ್ಕೂ ಮೂಲ ಬಹಿರಂಗಪಡಿಸುವಂತೆ ಸೂಚಿಸಲಾಗುವುದು.
– ಆಸ್ತಿ ಮೂಲವನ್ನು ಸ್ಪಷ್ಟಪಡಿಸಲು ಐಟಿ ಇಲಾಖೆ ಬಯಸಿದರೆ ಕಾಲಾವಕಾಶ ನೀಡಬಹುದು
– ಕಾಲಾವಧಿಯೊಳಗೆ ಆಸ್ತಿ, ಹಣ, ದಾಖಲೆಯ ಮೂಲವನ್ನು ಬಹಿರಂಗಪಡಿಸದಿದ್ದರೆ ಈ ಬಗ್ಗೆ ಐಟಿ ಇಲಾಖೆಯು ಜಾರಿ ನಿರ್ದೇಶನಾಲಯಕ್ಕೆ ಮಾಹಿತಿ ನೀಡಲಿದೆ
– ಇಂತಹ ದಾಳಿ ನಡೆದಾಗ ಐಟಿ ಅಧಿಕಾರಿಗಳು ಸ್ವಯಂಪ್ರೇರಿತವಾಗಿ ಎಫ್ಐಆರ್ ದಾಖಲಿಸಿಕೊಂಡು ಬಂಧಿಸಲು ಈ ಹಿಂದೆ ಅವಕಾಶವಿರಲಿಲ್ಲ. ಆದರೆ 2016ರ ನವೆಂಬರ್‌ನಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಬೇನಾಮಿ ಆಸ್ತಿ ವಹಿವಾಟು ನಿಯಂತ್ರಣ ಕಾಯ್ದೆಯಡಿ ಮೂರು ತಿಂಗಳಲ್ಲಿ ದಾಳಿಗೆ ಒಳದಾದವರು ಮೂಲದ ಬಗ್ಗೆ ಸ್ಪಷ್ಟನೆ ನೀಡದಿದ್ದರೆ ಸ್ವಯಂಪ್ರೇರಿತವಾಗಿ ಐಟಿ ಅಧಿಕಾರಿಗಳು ಎಫ್ಐಆರ್ ದಾಖಲಿಸಿಕೊಂಡು ಬಂಧಿಸಲು ಅವಕಾಶವಿದೆ ಇಡಿ ಕಾರ್ಯವ್ಯಾಪ್ತಿ
– ಐಟಿ ದಾಳಿಗೆ ಒಳಗಾದ ಡಿ.ಕೆ.ಶಿವಕುಮಾರ್ ಉದ್ಯಮಿಯೂ ಆಗಿರುವುದರಿಂದ ಜಾರಿ ನಿರ್ದೇಶನಾಲಯ ಮಧ್ಯಪ್ರವೇಶಿಸಲು ಅವಕಾಶ ಇದೆ.
– ದಾಳಿ ವೇಳೆ ಪತ್ತೆಯಾದ ವಸ್ತುಗಳ ಮೂಲ ಒಂದೊಮ್ಮೆ ಶಿವಕುಮಾರ್ ತಿಳಿಸದಿದ್ದರೆ ಆ ಬಗ್ಗೆ ಐಟಿ ಇಲಾಖೆಯು ಪತ್ರ ಬರೆಯುತ್ತಿದ್ದಂತೆ ಇಡಿ ಎಫ್ಐಆರ್ ದಾಖಲಿಸಿಕೊಂಡು ಅಗತ್ಯಬಿದ್ದರೆ ಬಂಧಿಸಲಿದೆ.
– ದಾಳಿ ವೇಳೆ ಪತ್ತೆಯಾದ ವಸ್ತು, ದಾಖಲೆಗಳ ಮೂಲವನ್ನು ಬಹಿರಂಗಪಡಿಸುವ ಸಂಬಂಧ ಇಡಿಗೆ ಅಗತ್ಯವೆನಿಸಿದಷ್ಟು ದಿನ
ಬಂಧನದಲ್ಲಿರಿಸಿಕೊಳ್ಳಬಹುದು
– ಆರೋಪ ಪಟ್ಟಿ ಸಲ್ಲಿಸುವವರೆಗೆ ಅವರನ್ನು ಬಂಧನದಲ್ಲಿ ಇರಿಸಿಕೊಳ್ಳಲು ಅವಕಾಶವಿದೆ
– ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ ಉಲ್ಲಂಘನೆಯಾಗಿದ್ದರೂ ಇಡಿ ನೇರವಾಗಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಿದೆ.