Advertisement

ವಿಷಯ ಏನಪಾ ಅಂದ್ರೆ, ಕಾಕು ಬ್ರಹ್ಮನಿಗೇ ಟೋಪಿ…

04:05 PM May 21, 2018 | Harsha Rao |

ಮೊನ್ನೆ ಶುಕ್ರವಾರ, ಮಟ ಮಟ ಮಧ್ಯಾಹ್ನ 3 ಗಂಟೆಯ ಮುಹೂರ್ತ. ನನಗೆ ಒಂದು ಕರೆ, ಮೊಬಾಯಿಲಿನಲ್ಲಿ. 
“ಆಪ್‌ ಜಯದೇವ್‌ ಪ್ರಷಾದ್‌ ಜೀ ಹೈ’? – ಮಾತು ರಾಷ್ಟ್ರಭಾಷೆ ಹಿಂದಿಯಲ್ಲಿ.
“ಜೀ ಹಾಂ, ಹೈ’ 
“ಸರ್‌, ಹಮ್‌ ಎಚ್‌ಡಿಎಫ್ಸಿ ಲೈಫ್ ಇನ್ಶೂರೆನ್ಸ್‌ ಸೇ ಬಾತ್‌ ಕರ್‌ ರಹೇ ಹೈ’ – ಈ ರೀತಿ ಮಾತು ಆರಂಭಿಸಿದ ಆತ ನನ್ನ ಇನ್ಶೂ ರೆನ್ಸ್‌ ಪಾಲಿಸಿ ನಂಬರ್‌, ವಿಳಾಸ , ಜನ್ಮ ದಿನಾಂಕಗಳನ್ನು ಸರಿಯಾ ಗಿಯೇ ತಿಳಿಸಿ ನನಗೆ ಪಾಲಿಸಿ ಮಾರಿದ ಏಜೆಂಟರ ಬಗ್ಗೆ ಮಾತು ಹೊರಳಿಸಿದ. ನಿಮಗೆ ಆ ಏಜೆಂಟರಿಂದ ಯಾವುದೇ ಸರ್ವಿಸ್‌ ಸಿಗುತ್ತದೆಯೇ ಎಂಬುದು ಮೊದಲ ಪ್ರಶ್ನೆ. ಸ್ವಾಭಾವಿಕ ವಾಗಿಯೇ ನಾನು “ಇಲ್ಲ’ ಎಂದು ಉತ್ತರಿಸಿದೆ. ಒಮ್ಮೆ ಪಾಲಿಸಿ ಮಾರಿಯಾದ ಮೇಲೆ ಅದರಲ್ಲಿ ಸರ್ವಿಸ್‌ ಕೊಡುವಂತದ್ದು ಎಂತದ್ದೂ ಮಣ್ಣಂಗಟ್ಟಿ ಇರುವುದಿಲ್ಲ ಎಂಬ ಸರಳ ಸತ್ಯ ನಮಗೆಲ್ಲರಿಗೂ ಗೊತ್ತು; ಇದ್ದರೂ ಕೂಡಾ ಯಾವ ಏಜೆಂಟ ನಾದರೂ ನಿಮ್ಮನ್ನು ಸಂಪರ್ಕಿಸುವುದು ಇನ್ನೊಂದು ಹೊಸ ಪಾಲಿಸಿಗಾಗಿ ಮಾತ್ರ ಎಂಬುದು ಕೂಡಾ ನಮಗೆ ಗೊತ್ತು ಆದರೆ, ಈ ಇನ್ಶೂರೆನ್ಸ್‌ ಕಂಪೆನಿಯವರಿಗೆ ಅದಿನ್ನೂ ಜ್ಞಾನೋದಯ ವಾದಂತಿಲ್ಲ. ಸರ್ವಿಸ್‌ ಎಂಬುದು ಏಜೆಂಟರಿಗೆ ಕಮಿಶನ್‌ ನೀಡಲು ಇನ್ನೊಂದು ಹೆಡ್ಡಿಂಗ್‌ ಅಷ್ಟೆ. 

Advertisement

“ದೇಖೀಯೇ ಯಹೀ ತೋ ದಿಕ್ಕತ್‌ ಹೈ, ನೀವುಗಳು ಅರ್ಜಿಗೆ ಸಹಿ ಹಾಕಿ, ಚೆಕ್‌ ಸಮೇತ ಏಜೆಂಟರಿಗೆ ಕೊಟ್ಟು ಕೈ ಮುಗಿಯುತ್ತೀರಿ. ಅದರಲ್ಲಿ ಏನು ಬರೆದಿದೆ, ನೀವು ಯಾವುದಕ್ಕೆ ಸಹಿ ಹಾಕಿದ್ದೀರಿ ಎಂದು ನೋಡಿದ್ದೀರಾ?’ ಸ್ವಲ್ಪ ಜೋರಾಗಿಯೇ ಕೇಳಿದ ಆತ.

ಅರೆ, ಇದು ನನ್ನದೇ ಡಯಲಾಗ್‌ ನನಗೇ ತಿರುಗಿಸುತ್ತಿ¨ªಾನಲ್ವಾ ಅಂತ ಅಚ್ಚರಿಯಾಯಿತು. ಕಳೆದ ಹತ್ತು ವರ್ಷಗಳಲ್ಲಿ ಈ ಡೈಯ ಲಾಗನ್ನು ಕನಿಷ್ಠ ಸಚಿನ್‌ ಸೆಂಚುರಿ ಹೊಡೆದಷ್ಟು ಬಾರಿಯಾದರೂ ಹೊಡೆದಿದ್ದೇನು. ಒಂದು ಅಂಡರ್‌ವೆàರ್‌ ಖರೀದಿ ಮಾಡುವಾ ಗಲೂ ಅದರ ಬಣ್ಣಗಳ ಮೇಲೆಯೇ ಒಂದು ಪಿಎಚ್‌ಡಿ ಮಾಡುವ ನಮ್ಮ ಮಂದಿ ಒಂದು ವಿಮಾ ಪಾಲಿಸಿಯ ಮೇಲೆ ಸಾವಿರಗಟ್ಟಲೆ ಸುರಿಯುವಾಗ ಯಾವುದೇ ಯೋಚನೆ ಮಾಡುವುದಿಲ್ಲ! 

ಅದಿರಲಿ, ಫೋನ್‌ ಮಾಡಿದಾತ ಹೇಳಿದ್ದು ಇಷ್ಟು: 
ನನ್ನ ಪಾಲಿಸಿಯ ಮೇಲೆ ಪ್ರತಿ ವರ್ಷ ಬೋನಸ್‌ ಸಿಗುತ್ತದೆ. ಅದು ನಾನೇ ಸಹಿ ಹಾಕಿ ಕೊಟ್ಟ ಡಿಕ್ಲರೇಶನ್‌ ಪ್ರಕಾರ ನನ್ನ ಏಜೆಂಟರ ಖಾತೆಗೆ ಹೋಗುತ್ತದೆ. ಅಲ್ಲಿಂದ ಏಜೆಂಟ ನನಗೆ ಅದನ್ನು ವರ್ಗಾಯಿಸಬೇಕು. ಆದರೆ ಬಹುತೇಕ ಏಜೆಂಟರು ಅದನ್ನು ತಾವೇ ನುಂಗಿ ಹಾಕುತ್ತಾರೆ. ಪಾಲಿಸಿದಾರರಿಗೆ ನೀಡುವುದೇ ಇಲ್ಲ. ಈಗಾಗಲೇ ರೂ. 30,000 ಬೋನಸ್‌ ಆ ರೀತಿ ಗುಳುಂ ಆಗಿದೆ. ಇದೀಗ ರೂ. 1,03,000ರ ಬೋನಸ್‌ ಚೆಕ್‌ ರೆಡಿಯಾಗುತ್ತಿದೆ, ನನ್ನ ಏಜೆಂಟರ ಹೆಸರಿನಲ್ಲಿ. ಅದೂ ಕೂಡಾ ಗುಳುಂ ಆಗಬಾರದು ಎಂದು ಇದ್ದರೆ ನನ್ನ ಪಾಲಿಸಿಯಲ್ಲಿ ಬೋನಸ್‌ ಪಡೆಯುವವರ ಹೆಸರನ್ನು ಏಜೆಂಟರ ಹೆಸರಿನಿಂದ ನನ್ನ ಹೆಸರಿಗೆ ವರ್ಗಾಯಿಸಬೇಕು. ಅದು ಈ ಕ್ಷಣವೇ ಮಾಡಬೇಕು.

ಯಡ್ನೂರಪ್ಪನವರಿಗಾದರೂ 4 ದಿನಗಳ ಟೈಮ್‌ ಇತ್ತು ಆದರೆ ನನಗೆ ಈ ಕೆಲಸ ಮಾಡಲು ಇವತ್ತೇ ಕೊನೇ ದಿನಾಂಕ. ಸಂಜೆ 5 ಗಂಟೆಯ ಒಳಗಾಗಿ ಪ್ಯಾನ್‌ ಕಾರ್ಡ್‌ ಕಾಪಿ, 2 ಫೋಟೋ, ವಿಳಾಸ ಪುರಾವೆಯ ಜೊತೆಗೆ ಖಾಲಿ ಹಾಳೆಯಲ್ಲಿ ಅರ್ಜಿ ಬರೆದು ಅವರಿಗೆ ಕಳುಹಿಸತಕ್ಕದ್ದು. ನಾಳೆ ತಡವಾಗುತ್ತದೆ. ಈಗಲೇ ಎಮ ರ್ಜೆನ್ಸಿಯಾಗಿ ಮಾಡಬೇಕು. ಇಲ್ಲಾಂದ್ರೆ ಆ ಮೂವತ್ತು ಸಾವಿರದ ಹಾಗೆ ಈ ಒಂದು ಲಕ್ಷ ಐದು ಸಾವಿರಕ್ಕೂ ಎಳ್ಳು ನೀರು ಬಿಡಿ.
ಹಾಂ, ಇನ್ನೂ ಒಂದು ಮುಖ್ಯ ವಿಚಾರ. ಇವೆÇÉಾ ದಾಖಲಾ ತಿಯ ಜೊತೆಗೆ ರೂ. 30,200ರ ಒಂದು ಚೆಕ್‌ ಇರಿಸಲು ಮರೆಯಬಾರದು. ಇದು ಏಜೆಂಟ್‌ ಅವರಲ್ಲಿ ಇಟ್ಟ ಕಾಶನ್‌ ಡೆಪಾ ಸಿಟ್‌. ಈಗ ಬೋನಸ್‌ ನನ್ನ ಹೆಸರಿಗೆ ಬದಲಾವಣೆ ಮಾಡುವಾಗ ಆ ಭದ್ರತಾ ಠೇವಣಿ ಕೂಡಾ ನಾನೇ ಕಟ್ಟಬೇಕಾದುದು ಅನಿವಾರ್ಯ ವಲ್ಲವೇ? ಈವಾಗ ಏಜೆಂಟ್‌ ಕಟ್ಟಿದ ದುಡ್ಡನ್ನು ಆತನಿಗೇ ಹಿಂತುರುಗಿಸಿ ನನ್ನ ದುಡ್ಡಿನೊಡನೆ ನನ್ನ ನೋಂದಾವಣೆ ಮಾಡಬೇಕು. ಆದರೆ ಚಿಂತೆ ಬೇಡ. ಅದು ರಿಫ‌ಂಡೆಬಲ…. ಚೆಕ್‌ ಅನ್ನು ಎಚ್‌ಡಿಎಫ್ಸಿ ಹೆಸರಲ್ಲೂ ಬರೆಯಬಹುದು ಅಥವ ಶ್ರೀರಾಮ್‌ ಲೈಫ್ ಇನ್ಶೂರೆನ್ಸ್‌ ಹೆಸರÇÉಾದರೂ ಬರೆಯಬಹುದು. ಆದರೆ ಮೊದಲನೆಯದ್ದಕ್ಕೆ ಶೇ.1 ಕಮಿಶನ್‌ ಕಟ್‌ ಆಗುತ್ತದೆ, ಎರಡನೆಯದಕ್ಕಾದರೆ ಶೇ. 2. 

Advertisement

ಕಳುಹಿಸಬೇಕಾದ ವಿಳಾಸ: 
ಎಚ್‌ಡಿಎಫ್ಸಿ ಲೈಫ್ ಇನ್ಶೂರೆನ್ಸ್‌
ಸಿ-4/267, 3ನೇ ಮಹಡಿ
ಸೆಕ್ಟರ್‌ 6, ರೋಹಿಣಿ
ನವದೆಹಲಿ- 110085.

ವಿಳಾಸವನ್ನು ನನ್ನಿಂದ ಬರೆಯಿಸಿ ಪುನಃ ಹೇಳಿಸಿ ಖಚಿತಪಡಿಸಿ ಕೊಂಡ. ತಪ್ಪು ವಿಳಾಸಕ್ಕೆ ಲಕೋಟೆ ಕಳುಹಿಸಿದರೆ ಅದು ತಲುಪದೆ ನನಗೆ ಅಗಾಧ ನಷ್ಟ ಉಂಟಾಗುವುದಲ್ಲವೇ?
***
ಇದು ಮೊನ್ನೆ ಶುಕ್ರವಾರ ಸಂಜೆಯ ರೋಚಕ ಘಟನೆ. ಹೇಗಿದೆ? ನಮ್ಮ ರಿಯಲ್‌ ಸ್ಟಾರ್‌ ಉಪ್ಪಿಗೆ ಕೂಡಾ ಹೊಳೆದಿರಲಿಕ್ಕಿಲ್ಲ ಇಂತಹ ಕತೆ. ಹೊಳೆದಿದ್ದರೆ “ಟೋಪಿವಾಲಾ’ದ ಕತೆ, ಚಿತ್ರಕತೆ, ಸಂಭಾಷಣೆ ಸಂಪೂರ್ಣ ಬೇರೆಯೇ ಆಗುತ್ತಿತ್ತು.

ಮೊತ್ತ ಮೊದಲ ವಿಚಾರ ಏನೆಂದರೆ ನಮ್ಮ ಭರತ ಖಂಡದಲ್ಲಿ ಒಂದು ಇನ್ಶೂರೆನ್ಸ್‌ ಪಾಲಿಸಿಯ ಮೇಲೆ ಪ್ರತಿ ವರ್ಷ ಬೋನಸ್‌ ಪಾವತಿ ಮಾಡುವ ಪದ್ಧತಿಯೇ ಇಲ್ಲ. ಬೋನಸ್‌ ಏನಿದ್ದರೂ ಪಾಲಿಸಿಯ ಅಂತ್ಯದಲ್ಲಿ ಮಾತ್ರ ಲಭ್ಯವಾಗುತ್ತದೆ. ಎರಡನೆಯದಾಗಿ ನಮಗೆ ಸಲ್ಲ ಬೇಕಾದ ಬೋನಸ್‌ ಸಹಿತ ಯಾವುದೇ ಮೊತ್ತವನ್ನು ನಮ್ಮ ಏಜೆಂಟರಿಗೆ ಬಿಡಿ ನಮ್ಮ ಸ್ವಂತ ಅಪ್ಪ ಅಮ್ಮನಿಗೇ ಸಲ್ಲಿಸುವ ಪದ್ಧತಿ ಇಲ್ಲ. ಮೂರನೆಯದಾಗಿ, ಎಚ್‌ಡಿಎಫ್ಸಿ ದೇವನಿಗೆ ಪಾವತಿಸಬೇಕಾದ ಮೊತ್ತವನ್ನು ಶ್ರೀರಾಮನಿಗೆ ಹೋಮ ಮಾಡುವ ಕ್ರಮವೂ ಇಲ್ಲ. ಅದಲ್ಲದೆ ಅದರ ಮೇಲೆ ಕಮಿಶನ್‌? ಅಹಾ !! ಮತ್ತು, ಯಾವುದೇ ದೊಡ್ಡ ಸಂಸ್ಥೆ ತನ್ನ ಪ್ರೊಸೀಜರ್‌ ತಪ್ಪಿ ಈ ರೀತಿ ಫೋನ್‌ ಮಾಡಿ, ಈಗ, ಇದೀಗಲೇ ಈ ರೀತಿ ದುಡ್ಡು ಕಳುಹಿಸು ಕುರಿಯೇ ಎಂದು ಅಪ್ಪಣೆ ಮಾಡುವುದಿಲ್ಲ. 

ಹಾಗಾಗಿ ಈ ಫೋನ್‌ ಕಾಲ್‌ ಒಂದು ಮೋಸ. ಒಂದು “ಟೋಪಿ ಕಾಲ…’! ಈ ಕರೆಗೆ ಬಲಿಯಾಗಿ ದಿನಕ್ಕೆ ಒಬ್ಬನಾದರೂ ಬಕ್ರಾ ದುಡ್ಡು ಕಳುಹಿಸಿದರೆ ಅವನಿಗೆ ಸಾಕಲ್ಲವೇ? ಇದಕ್ಕೆ ಮೂಲತಃ “ನೈಜೀರಿಯನ್‌ 419 ಸ್ಕಾಮ…’ ಎಂದು ಹೆಸರು. ನೈಜೀರಿಯಾದಲ್ಲಿ ಆರಂಭಗೊಂಡ ಈ ಮೋಸದ ಜಾಲ ಈಗ ಭಾರತದಲ್ಲೂ ಜನಪ್ರಿಯವಾಗುತ್ತದೆ. 419 ಎಂಬುದು ಈ ಮೋಸಕ್ಕಿರುವ ಅಲ್ಲಿನ ಕ್ರಿಮಿನಲ್‌ ಸೆಕ್ಷನ್‌ ನಂಬರ್‌. ನಮ್ಮ 420ಯಂತೆ. 

ನಿಮಗೆ ದುಡ್ಡು ಬರುವ ಯಾವುದೋ ಒಂದು ಕತೆಯನ್ನು ಹೇಳಿ ಅದನ್ನು ಪಡೆಯುವ ಸಂಬಂಧವಾಗಿ ಆ ಫೀಸ್‌ ಈ ಫೀಸ್‌ ಅಂತ ದುಡ್ಡು ಕಿತ್ತುಕೊಳ್ಳುವ ಒಂದು ಸ್ಕ್ಯಾಮ…. ನಿಮಗೆ ಲಾಟರಿಯಲ್ಲಿ ಬಹುಮಾನ ಬಂದಿದೆ, ನಿಮ್ಮ ಇ-ಮೇಲ್‌ ಐಡಿಗೆ ಬಹುಮಾನ ಬಂದಿದೆ. ನಿಮಗೆ ಮೈಕ್ರೋಸಾಫ್ಟಿನಲ್ಲಿ ಕೆಲಸ ಸಿಕ್ಕಿದೆ, ಆಫ್ರಿಕದ ರಾಜನೊಬ್ಬ ಸಾವಿರಾರು ಕೋಟಿ ದುಡ್ಡು ನಿಮಗೆ ಬಿಟ್ಟು ಹೋಗಿ¨ªಾನೆ, ನಿಮಗೆ ಆಂತಾರಾಷ್ಟ್ರೀಯ ಪಾರಿತೋಷಕ ಲಭಿಸಿದೆ ಹೀಗೆ ದಿನಕ್ಕೊಂದು ನೂತನ ಕತೆ ಹೇಳುತ್ತಾರೆ. ಇದರಲ್ಲಿ ಇರುವ ಎರಡು ಮುಖ್ಯ ಅಂಶಗಳೆಂದರೆ, 
1. ನಿಮಗೆ ಸಿಗುವ ದುಡ್ಡು ಅಥವಾ ದೊಡ್ಡ ಲಾಭ
2. ಅದನ್ನು ಪಡೆಯುವ ಮೊದಲು ನೀವು ಕಳುಹಿಸಬೇಕಾದ ಒಂದು ಸಣ್ಣ ಫೀಸ್‌.
ಈ ಕಾರಣಕ್ಕಾಗಿಯೇ ಇದನ್ನು “ನೈಜೀರಿಯನ್‌ ಅಡ್ವಾನ್ಸ್‌ ಫೀ ಸ್ಕ್ಯಾಮ…’ ಎಂದೂ ಕರೆಯುತ್ತಾರೆ. ಆ ಫೀಸ್‌ ಕಳುಹಿಸಿದ ಮೇಲೆ ಆ ದುಡ್ಡು ಕಾಣದಂತೆ ಮಾಯವಾದರೆ ಆ್ಯಕುcವಲ್ಲೀ ನೀವು ಲಕ್ಕಿ! ಏಕೆಂದರೆ, ಬಹುತೇಕ ಅಂತಹ ಇನ್ನೂ ಹಲವು ಫೀಸುಗಳ ಬೇಡಿಕೆ ಬರುತ್ತಾ ಇರುತ್ತದೆ. ಇದರಲ್ಲಿ ಲಕ್ಷಾಂತರ ಕಳಕೊಂಡವರಿ¨ªಾರೆ. ಬಲೆಗೆ ಬಿದ್ದ ಮಿಕವನ್ನು ಕೊನೆಯ ಬಿಂದು ರಕ್ತ ಸಿಗುವವರೆಗೂ ಹಿಂಡುವುದು ಅವರ ಕ್ರಮ. ಚಿಕ್ಕಂದಿನಲ್ಲಿ ವಿಟ್ಲ ಜಾತ್ರೆಯಲ್ಲಿ ಕಬ್ಬಿನ ಹಾಲು ಹಿಂಡುವ ಯಂತ್ರ ನೋಡಲಿಲ್ಲವೇ ನೀವು? ಅದರ ಹಾಗೆ. 

ಎಚ್‌ಡಿಎಫ್ಸಿಯಲ್ಲಿ ನನ್ನ ಸ್ನೇಹಿತರಿಗೆ ದೂರು ನೀಡಿದಾಗ ಅವರು ತಿಳಿಸಿದ್ದು ಇದೀಗ ಈ ಸ್ಕ್ಯಾಮ್‌ ಸಾಮಾನ್ಯವಾಗುತ್ತಿದೆ ಯೆಂದು. “ತುಂಬಾ ಜನರಿಗೆ ಈ ರೀತಿಯ ಫೋನ್‌ ಕಾಲ್‌ ಬರುತ್ತಿದೆ. ದಯವಿಟ್ಟು ನಮ್ಮ ಕಸ್ಟಮರ್‌ ಕೇರ್‌ಗೆ ಬರೆದು ಹಾಕಿ. ಆದರೆ ಕಾಕು ಬ್ರಹ್ಮರಾದ ನಿಮಗೇ ಟೋಪಿ ಹೊಲಿಯುವ ಪ್ರಯತ್ನದ ಈ ಕತೆ ನಿಜಕ್ಕೂ ರೋಚಕವಾಗಿದೆ’ ಎಂದರು. 

ಅದೇನೇ ಇರಲಿ, ಈ ಸಂದರ್ಭದಲ್ಲಿ ಏಳುವ ಮುಖ್ಯ ಪ್ರಶ್ನೆಗಳೆಂದರೆ- ಮೊದಲನೆಯದಾಗಿ, ನನ್ನ ಪಾಲಿಸಿ ನಂಬರ್‌, ವಿಳಾಸ, ಜನ್ಮ ದಿನಾಂಕ ಇತ್ಯಾದಿ ಆ ಧೂರ್ತನಿಗೆ ಸಿಕ್ಕಿ¨ªಾದರೂ ಹೇಗೆ? ಎರಡನೆಯದಾಗಿ, ನಾನು ಎಚ್‌ಡಿಎಫ್ಸಿ/ಶ್ರೀರಾಮ್‌ ಹೆಸರಿಗೆ ಚೆಕ್‌ ಕಳುಹಿಸುತ್ತಿದ್ದರೆ ಆ ಧೂರ್ತ ಅದನ್ನು ಕ್ಯಾಶ್‌ ಮಾಡಿಕೊಳ್ಳುತ್ತಿದ್ದನಾದರೂ ಹೇಗೆ? ಮತ್ತು ಮೂರನೆಯದಾಗಿ, ಇಂತಹ ಸ್ಕ್ಯಾಮುಗಳ ವಿರುದ್ಧ ಪಾಲಿಸಿದಾರರ ಶಿಕ್ಷಣ, ಅರ್ಜಿ ಫಾರ್ಮುಗಳ ಸರಳೀಕರಣ ಇತ್ಯಾದಿ ಕ್ರಮಗಳನ್ನು ಇನ್ಶೂರೆನ್ಸ್‌ ಸುಧಾರಕ IRDA ತನ್ನ ನಿ¨ªೆಯಿಂದ ಎಚ್ಚೆತ್ತು ಸರಿಪಡಿಸುವು ದಾದರೂ ಎಂದು? 
ಈ ಪ್ರಶ್ನೆಗಳಿಂದ ಇನ್ನಷ್ಟು ಪ್ರಶ್ನೆಗಳು ಹುಟ್ಟುತ್ತವೆಯೇ ವಿನಃ ಉತ್ತರ ದೊರಕುವುದಿಲ್ಲ. ಅಲ್ಲವೇ?

– ಜಯದೇವ ಪ್ರಸಾದ ಮೊಳೆಯಾರ

Advertisement

Udayavani is now on Telegram. Click here to join our channel and stay updated with the latest news.

Next