Advertisement

ಕಳ್ಳ ಹಾದಿಯಲ್ಲಿ ಊಟ ಮಾಡುತ್ತಿದ್ದರು…

01:10 PM Jul 18, 2019 | Sriram |

ತರಬೇತಿಯ ಅವಧಿಯಲ್ಲಿ ನಮಗೆ ಸಿಗುತ್ತಿದ್ದ ಸಂಬಳ ಕಡಿಮೆಯಿತ್ತು. ಹಾಗಿದ್ದೂ ನಮ್ಮ ಜೊತೆಗಿದ್ದ ಹಲವರು ದಿನವೂ ಹೋಟೆಲ್‌ನಲ್ಲಿ ಊಟ ಮಾಡಿ ಬರುತ್ತಿದ್ದರು. ಲೆಕ್ಕ ಹಾಕಿ ನೋಡಿದರೆ, ದಿನವೂ ಹೋಟೆಲಿಗೆ ಹಣ ನೀಡಿದರೆ, 15 ದಿನಕ್ಕೇ ನಮ್ಮ ಸಂಬಳದ ಹಣ ಮುಗಿದು ಹೋಗುತ್ತಿತ್ತು. ಹೀಗಿರುವಾಗ, ಗೆ‌ಳೆಯರಿಗೆ ಜಾಸ್ತಿ ಹಣ ಎಲ್ಲಿ ಸಿಗುತ್ತೆ ಎಂದು ತಿಳಿವ ಕುತೂಹಲವಾಯಿತು.

Advertisement

ಹದಿನೈದು -ಇಪ್ಪತ್ತು ವರ್ಷಗಳ ಹಿಂದಿನ ಕಥೆ ಇದು. ಆಗ ಪೊಲೀಸರನ್ನು ಭಯ, ಕುತೂಹಲಗಳ ಬೆರಗು ಗಣ್ಣಿನಿಂದ ನೋಡುತ್ತಿದ್ವಿ. ನಮ್ಮೂರಿಗೆ ಪೊಲೀಸರು ಬಂದರೆಂದರೆ ಅಘೋಷಿತ ಕರ್ಪ್ಯೂ. ಊರಲ್ಲಿ ಯಾರೋ ಹೊಡೆದಾಡಿ ಸ್ಟೇಷನ್‌ ಮೆಟ್ಟಿಲೇರಿರಬೇಕು. ಯಾರಾದರೂ ಬಾವಿಯಲ್ಲಿ ಮುಳುಗಿ ಸತ್ತಿರಿರಬೇಕು ಹೀಗೆ ಯಾವುದಾದರೂ ಪ್ರಬಲ ಕೇಸಿದ್ದಾಗ ಮಾತ್ರ ಪೊಲೀಸರು ಬರುತ್ತಿದ್ದದ್ದು. ಇಂಥ ಸಮಯದಲ್ಲೇ ನಾನು ಆಗ ತಾನೇ ಟಿಸಿಎಚ್‌ ಮುಗಿಸಿದ್ದೆ. ಆ ಸಮಯದಲ್ಲಿ ಪೊಲೀಸ್‌ ನೇಮಕಾತಿಗೆ ಸಿಇಟಿ ಆಧಾರದ ಮೇಲೆ ಅರ್ಜಿ ಆಹ್ವಾನಿಸಿದರು.

ಪರೀಕ್ಷೆ ಬರೆದೆ. ಉತ್ತೀರ್ಣನಾದೆ. ಯಾವುದಕ್ಕೆ ಭಯ ಬೀಳುತ್ತಿದ್ದೇನೋ ಅದೇ ಇಲಾಖೆಯಲ್ಲಿ ಪೇದೆಯಾಗಿ ಸೇರಿದೆ. ನಮಗೆ ತರಬೇತಿ ಕೊಡುತ್ತಿದ್ದರು. ಪ್ರತಿದಿನ ಬೆಳಗ್ಗೆ ನಾಲ್ಕಕ್ಕೆ ಮಾಸ್ಟರ್‌ ನಾಗರಾಜ ಜೋರಾಗಿ ವಿಶಿಲ್‌ ಹೊಡೆದು ಎಲ್ಲರನ್ನೂ ಎಬ್ಬಿಸುತ್ತಿದ್ದರು. ಒಂದರ್ಧ ಗಂಟೆ ಬಿಟ್ಟು ಮತ್ತೆ ವಿಶಿಲ್‌ ಹೊಡೆದಾಗ ಎಲ್ಲರೂ ಎದ್ದೇಳಬೇಕಿತ್ತು. ಈ ಸಮಯದಲ್ಲಿ ಯಾರು ಹಾಸಿಗೆಯಿಂದ ಏಳುತ್ತಿರಲಿಲ್ಲವೋ ಅಂತವರ ಹಾಸಿಗೆ ಮೇಲೆ ನೀರನ್ನು ಚೆಲ್ಲಿ ಎಬ್ಬಿಸುತ್ತಿದ್ದರು.

ದಿನವೊಂದಕ್ಕೆ ಹನ್ನೆರಡು ಕಿ.ಮೀ ಓಟ, ಜೊತೆಗೆ ಪರೇಡ್‌, ಲಾಠಿ, ರೈಫ‌ಲ್‌ ಬಳಸುವುದರ ಬಗೆಗೆ ಕಠಿಣ ತರಬೇತಿ ನೀಡುತ್ತಿದ್ದರು. ಆದರೆ ಅದಕ್ಕೆ ತಕ್ಕ ಆಹಾರ ನಮಗೆ ಸಿಗುತ್ತಿರಲಿಲ್ಲ. ದಿನನಿತ್ಯ ಮುದ್ದೆ – ಅನ್ನಸಾರು. ವಾರಕ್ಕೊಮ್ಮೆ ಚಿಕನ್‌ .ಉತ್ತರ ಕರ್ನಾಟಕದಿಂದ ಬಂದ ನಮಗೆ ಮುದ್ದೆ ತಿನ್ನುವುದು ತಿಳಿದಿರಲಿಲ್ಲ. ಕಿವುಚಿ-ಕಿವುಚಿ ರಾಡಿ ಮಾಡುತ್ತಿದ್ವಿ. ಅದು ಗಂಟಲಲ್ಲಿ ಇಳಿಯಲು ಮೀನಮೇಷ ಮಾಡುತ್ತಿತ್ತು. ಮೇಲಾಗಿ ಇದ್ದದನ್ನು ತಿಂದು ಹೋಗೋಣ ಎಂದರೆ ರುಚಿಯಾಗಿ ಮಾಡುತ್ತಿರಲಿಲ್ಲ. ಹಾಗಾಗಿ ಹೊಟ್ಟೆ ತುಂಬದೇ ರಾತ್ರಿ ಎಲ್ಲಾ ತಾಳ ಹಾಕುವ ಪರಿಸ್ಥಿತಿ.ಉದರ ಸಮಸ್ಯೆಯಿಂದ ಪಾರಾಗಲು ಸೇಬುಹಣ್ಣು,ಉತ್ತತ್ತಿ, ಬ್ರೇಡ್‌ ಜಾಮ್‌ ಮೊರೆ ಹೋಗುತ್ತಿದ್ದೆವು.

ಇನ್ನು ಕೆಲವರು ತರಬೇತಿ ಶಾಲೆಯಲ್ಲಿ ಸ್ವಲ್ಪ ಊಟ ಮಾಡಿ, ನಮ್ಮ ಶಾಲೆಯ ಎದುರಿಗಿದ್ದ ಉಡುಪಿ ಮೂಲದ ಪಂಜುರ್ಲಿ ಖಾನಾವಳಿಗೆ ಖಾಯಂ ಗಿರಾಕಿಗಳಾಗಿದ್ದರು. ಆಗೆಲ್ಲಾ ಕಡಿಮೆ ವೇತನವಿತ್ತು. ಆದರೂ ಇವರಿಗೆಲ್ಲಾ ಹಣ ಎಲ್ಲಿಂದ ಬರುತ್ತದೆ ಎಂದು ವಿಚಾರಿಸದೇ ನಮ್ಮ ಪಾಡಿಗೆ ನಾವು ಪ್ರತಿನಿತ್ಯ ಹಸಿವಿನ ಬಗ್ಗೆ ಚರ್ಚೆ ಮಾಡುತ್ತಿದ್ದೆವು. ಇವರು ಮಾತ್ರ ನಮಗೂ ಅದಕ್ಕೂ ಸಂಬಂಧವೇ ಇಲ್ಲದಂತೆ ಚೆನ್ನಾಗಿ ತಿಂದು ತೇಗುತ್ತಿದ್ದರು.

Advertisement

ಹೀಗೇ, ಆರೇಳು ತಿಂಗಳು ಕಳೆಯಿತು. ಒಂದು ದಿನ ರವಿವಾರ ರಾತ್ರಿ ನಾನು ಉಂಡಾಡಿ ಗುಂಡಣ್ಣರ ಜೊತೆ ಊಟಕ್ಕೆ ಹೋಗಿದ್ದೆ. ನಮ್ಮ ಹಾಗೆ ನಮ್ಮ ತರಬೇತಿ ಶಾಲೆಯ ಅನೇಕರು ಊಟಕ್ಕೆ ಬಂದಿದ್ದರು. ಊಟ ಆಯಿತು. ಜೊತೆಗಿದ್ದ ಗೆಳೆಯ ಗಾಳಿಗೌಡ್ರು “ನೀವ್ಯಾರೂ ಬಿಲ್‌ ಕೊಡಬೇಡಿ. ನಾವು ಕೊಡ್ತೀವಿ. ನೀವು ಊಟ ಮಾಡಿ ಮುಂದೆ ನಡೆಯಿರಿ’ ಎಂದರು. ನಾವು ಊಟ ಮಾಡಿ ಹೊರಗಡೆ ಇದ್ದ ಅಂಗಡಿಯ ಗಲ್ಲಾಪೆಟ್ಟಿಗೆಗೆ ಎದುರಾಗಿ ನಿಂತೆವು. ಇವರಿಬ್ಬರು ಮಾತ್ರ ಊಟ ಮಾಡಿ, ಹೊರ ಬರಲು ತಯಾರು ಇರಲಿಲ್ಲ. ನಾವು ಕೂಗಿ ಕರೆದರೆ, ಅಲ್ಲಿಯೇ ಕೈ ಸನ್ನೆ ಮಾಡಿ ನೀವು ಮುಂದೆ ಹೋಗ್ರಿ ಎಂದು ಬಾಯಿ ಸನ್ನೆ ಮಾಡುತ್ತಿದ್ದರು. ಇವರೇಕೆ ಹೀಗೆ ಮಾಡುತ್ತಾರೆಂದು ರಸ್ತೆ ಪಕ್ಕದಲ್ಲಿದ್ದ ಗಿಡಗಳ ಮರೆಯಲ್ಲಿ ನಿಂತುಕೊಂಡು ನೋಡುತ್ತಿದ್ದೆವು. ಆಗ ತಿಳಿಯಿತು ಅಸಲಿಯತ್ತು.

ಯಾವಾಗ,ಗಲ್ಲಾ ಪೆಟ್ಟಿಗೆಯ ಹತ್ರ ಬಿಲ್‌ ಕೊಡಲು ಗಿರಾಕಿಗಳು ಜಾಸ್ತಿ ಸೇರುತ್ತಿದ್ದರೋ ಆವಾಗ ಇವರು ದುಡ್ಡು ಕೊಟ್ಟವರಂತೆ ನಟಿಸುತ್ತಾ ಒಬ್ಬೊಬ್ಬರಾಗಿ ಹೊರ ಬಂದು ನಮ್ಮ ಬ್ಯಾರೆಕ್‌ ಕಡೆ ಮುಖ ಮಾಡುತ್ತಿದ್ದರು. ಹಿಂದಿನಿಂದ ಪಂಜುರ್ಲಿ ಮಾಲೀಕ ಇವರ ಬುಜಕ್ಕೆ ಕೈ ಹಾಕಿ ನಿಲ್ಲಿಸಿ, “ಊಟ ಮಾಡಿದ ಬಿಲ್‌ ಕೊಡಿ’ ಎಂದರೆ ನಮ್ಮ ಸ್ನೇಹಿತರು ಆಗಲೇ ಕೊಟ್ಟು ಹೋಗ್ಯಾರಲ್ಲ ಅಂತ ತಪ್ಪಿಸಿಕೊಳ್ಳುತ್ತಿದ್ದರು. ಆವತ್ತು ಈ ರೀತಿ ಆಗಲ್ಲಿಲ್ಲ. ಮಾಲೀಕ ಕಾದು ಕುಳಿತವನಂತೆ ಯಾರೂ ದುಡ್ಡು ಕೊಟ್ಟಿಲ್ಲ ಕೊಡ್ರಪ್ಪಾ ಅಂತ ಹಠಕ್ಕೆ ಬಿದ್ದಾಗ ಆರುನೂರ ಎಪ್ಪತೈದು ರೂಪಾಯಿ ನೀಡಿ ಬಂದರು. ಹೋಟೆಲ್‌ ಮಾಲೀಕನಿಗೆ ಮೋಸ ಮಾಡುವ ಇಂಥ ಘಟನೆಗಳು ಮೇಲಿಂದ ಮೇಲೆ ನಡೆದ್ದದರಿಂದಲೇ ಮುಂದೆ ಹೋಟೆಲ್‌ ಮುಚ್ಚುವ ಪರಿಸ್ಥಿತಿ ಬಂತು ಅಂತ ಆಮೇಲೆ ತಿಳಿದು ಬೇಸರವಾಯಿತು.

-ಮಲ್ಲಪ್ಪ ಫ‌ ಕರೇಣ್ಣನವರ ಬ್ಯಾಡಗಿ

Advertisement

Udayavani is now on Telegram. Click here to join our channel and stay updated with the latest news.

Next