Advertisement

ತುಮಕೂರಲ್ಲಿ ರಂಗಪ್ರಯೋಗ ಶ್ರೀಮಂತ

05:18 PM Nov 14, 2021 | Team Udayavani |

ತುಮಕೂರು: ತುಮಕೂರಿನಲ್ಲಿ ರಂಗಪ್ರಯೋ ಗಗಳು ಶ್ರೀಮಂತವಾಗುತ್ತಿದೆ ಎಂದು ಬೆಳ್ಳಿ ಬ್ಲೆಡ್‌ ಬ್ಯಾಂಕ್‌ನ ಬೆಳ್ಳಿ ಲೋಕೇಶ್‌ ಹೇಳಿದರು. ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಝೆನ್‌ ಟೀಮ್‌ ಆಯೋಜಿಸಿದ್ದ ಶಿವಮೊಗ್ಗ ರಂಗಾಯಣದ ಹಕ್ಕಿ ಕಥೆ ನಾಟಕಕ್ಕೆ ಚೆಂಡೆ ಬಾರಿಸುವುದರ ಮೂಲಕ ಚಾಲನೆ ನೀಡಿ ಮಾತನಾಡಿ, ಪೌರಾಣಿಕ, ಸಾಮಾಜಿಕ, ಐತಿಹಾಸಿಕ ಹಾಗೂ ಪ್ರಯೋಗಾತ್ಮಕ ನಾಟಕಗಳು ಹೆಚ್ಚುತ್ತಿದ್ದು, ರಂಗಭೂಮಿಗೆ ಹೊಸ ಭಾಷ್ಯ ಬರೆಯಲಿದೆ.

Advertisement

ಇದನ್ನೂ ಓದಿ:- ಕೆಸರಲ್ಲೇ ವಾರದ ಸಂತೆ-ಆಕ್ರೋಶ

ಗುಬ್ಬಿ ವೀರಣ್ಣ, ಮಾಸ್ಟರ್‌ ಹಿರಣ್ಣಯ್ಯ ಮುಂತಾದ ರಂಗ ದಿಗ್ಗಜರು ತುಮಕೂರಿನಲ್ಲಿ ರಂಗ ಭೂಮಿಗೆ ದೊಡ್ಡ ಕೊಡುಗೆ ನೀಡಿದ್ದು, ಅದರ ಮುಂದುವರಿಕೆಯಾಗಿ ಹಲವಾರು ತಂಡಗಳು ಕಾರ್ಯನಿರ್ವಹಿಸುತ್ತಿವೆ ಎಂದರು. ಆಶಾದಾಯಕ ಬೆಳವಣಿಗೆ: ಇಂತಹ ಮಳೆಯಲ್ಲೂ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಪ್ರೇಕ್ಷಕರು ಆಗಮಿಸಿರುವುದು ಒಳ್ಳೆಯ ಬೆಳವಣಿಗೆ. ಮಕ್ಕಳ ನಾಟಕ ಸೇರಿದಂತೆ ಎಲ್ಲಾ ವರ್ಗದ ನಾಟಕಗಳಿಗೆ ಪ್ರೇಕ್ಷಕರು ಬರುತ್ತಿರುವುದು ಆಶಾದಾಯಕ ಬೆಳವಣಿಗೆ. ನಗರದಲ್ಲಿ ನಿರಂತರವಾಗಿ ರಂಗಚಟುವಟಿಕೆಗಳು ನಡೆಯುತ್ತಿವೆ. ಹಾಗೆಯೇ ಹೊಸ ಹೊಸ ಪ್ರಯೋಗಗಳು ನಡೆಯುತ್ತಿದೆ. ಇವತ್ತಿನ ಪಪ್ಪೆಟ್‌ ಮಕ್ಕಳನ್ನು ಹೊಸದೊಂದು ಲೋಕಕ್ಕೆ ಕೊಂಡೊಯ್ಯುತ್ತದೆ ಎಂದು ತಿಳಿಸಿದರು.

ನಿರಂತರ ಪ್ರಯೋಗ ನಡೆಯಲಿ: ರಂಗ ಚಟುವಟಿಕೆಯಲ್ಲಿ ತೊಡಗಿಕೊಂಡವರು ಪ್ರೇಕ್ಷಕರಿಗೆ ಜ್ಞಾನಾರ್ಜನೆ, ಮನರಂಜನೆ ನೀಡುತ್ತಿದ್ದು, ಹೊಸ ತಲೆಮಾರನ್ನು ಪ್ರಭಾವಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಇಂತಹ ಪ್ರಯೋಗಗಳನ್ನು ನಿರಂತರವಾಗಿ ನಡೆಯಲಿ ಎಂದು ಆಶಿಸಿದರು.

ತುಮಕೂರು ರಂಗಭೂಮಿ ತವರೂರು: ಮಹಾನಗರ ಪಾಲಿಕೆ ಸದಸ್ಯೆ ಗಿರಿಜಾ ಧನಿಯಾಕುಮಾರ್‌ ಮಾತನಾಡಿ, ತುಮಕೂರು ರಂಗಭೂಮಿಯ ತವರೂರು. ತುಮಕೂರು ಜಿಲ್ಲೆಯ ಹಲವಾರು ನಟರು, ನಿರ್ದೇಶಕರು ರಾಜ್ಯ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಇದು ಖುಷಿಯ ಸಂಗತಿ. ತುಮಕೂರಿನಲ್ಲಿ ನಾಟಕ ಪ್ರದರ್ಶನಗಳ ಜೊತೆಗೆ ಮಕ್ಕಳ ಬೇಸಿಗೆ ಶಿಬಿರಗಳು, ರಂಗ ಶಿಬಿರಗಳು ನಡೆಯುವಂತಾಗಲಿ. ಆ ಮೂಲಕ ಮಕ್ಕಳಲ್ಲಿ ರಂಗ ಪ್ರಜ್ಞೆ ಮೂಡಿಸುವ ಸಾರ್ಥಕ ಕೆಲಸವನ್ನು ರಂಗ ತಂಡಗಳು ಮಾಡಲಿ ಎಂದು ನುಡಿದರು.

Advertisement

ಸಮಾಜಮುಖೀ ಕಾರ್ಯಕ್ಕೆ ಪ್ರೇರಣೆ: ರಾಜ್ಯದಲ್ಲೇ ಹೆಸರು ವಾಸಿಯಾಗಿರುವ ರಂಗಾಯಣ ಕಲಾವಿದರು ತುಮಕೂರಿಗೆ ಬಂದು ಫ್ಯಾಂಟಸಿ ರೀತಿಯ ನಾಟಕ ಪ್ರದರ್ಶಿಸಿರುವುದು ಅತ್ಯಂತ ಖುಷಿಯ ಸಂಗತಿ. ಇಂದಿನ ಮೊಬೈಲ್‌, ಯೂಟ್ಯೂಬ್‌ ಯುಗದಲ್ಲೂ ದೊಡ್ಡ ಸಂಖ್ಯೆಯಲ್ಲಿ ನಾಟಕ ಪ್ರದರ್ಶನಕ್ಕೆ ಬಂದಿರುವುದು ಅತ್ಯಂತ ಆಶಾದಾಯಕ ಬೆಳವಣಿಗೆ. ಓದು, ನಾಟಕ ವೀಕ್ಷಣೆ, ಸಂಗೀತ ಆಲಿಸುವುದು ನಮ್ಮನ್ನು ಬೇರೊಂದು ಲೋಕಕ್ಕೆ ಕರೆದುಕೊಂಡು ಹೋಗುತ್ತದೆ. ಅಲ್ಲದೇ ಸಮಾಜಮುಖೀಯಾಗಿ ಕೆಲಸ ನಿರ್ವಹಿಸಲು ಪ್ರೇರಣೆ ನೀಡುತ್ತದೆ.

ಸರ್ಕಾರಗಳು ಕೂಡ ರಂಗ ಕಲೆಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ನೆರವನ್ನು ರಂಗಭೂಮಿಗೂ ಸರ್ಕಾರ ನೀಡಲಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಝೆನ್‌ ಟೀಮ್‌ನ ಉಗಮ ಶ್ರೀನಿವಾಸ್‌, ಕಲಾವಿದ ಟಿ.ಎಚ್‌. ಸುರೇಶ್‌ ಉಪಸ್ಥಿತರಿದ್ದರು. ತೇಜಸ್ವಿನಿ ನಿರೂಪಿಸಿದರು. ಬಳಿಕ ಗಣೇಶ್‌ ಮಂದಾರ್ತಿ ನಿರ್ದೇಶನದ ಹಕ್ಕಿಕಥೆ ಪಪ್ಪೆಟ್‌ ನಾಟಕ ನಡೆಯಿತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next