Advertisement
“ಪರೀಕ್ಷೆ’ ಎಂಬುದು ಜೀವನದ ಒಂದು ಭಾಗ. ನಾವೆಲ್ಲರೂ ಜೀವನದಲ್ಲಿ ಒಂದೊಂದು ಪರೀಕ್ಷೆ ಎದುರಿಸಲೇಬೇಕು. ಹೀಗಾಗಿ ಪರೀಕ್ಷೆ ಎಂಬ ಶಬ್ದವೇ ಸಾಮಾನ್ಯವಾಗಿ ನಮ್ಮಲ್ಲಿ ಆತಂಕ-ಭಯ ಹುಟ್ಟಿಸುತ್ತದೆ. ಇತ್ತೀಚೆಗೆ ಮಕ್ಕಳಲ್ಲಿ ಪರೀಕ್ಷೆ ಎಂಬ ಆತಂಕ ಕಾಣಿಸಿಕೊಳ್ಳುತ್ತಿದೆ.
Related Articles
ಪರೀಕ್ಷೆಯ ಮುನ್ನಾ ದಿನ ಮಕ್ಕಳು ಕನಿಷ್ಠ 6 ಗಂಟೆ ನಿದ್ದೆ ಮಾಡಲೇಬೇಕು. ಶೇ.60 ರಷ್ಟು ಮಕ್ಕಳು ಪರೀಕ್ಷೆಯ ಮುನ್ನಾ ದಿನ ನಿದ್ದೆ ಮಾಡುವುದಿಲ್ಲ. ಬದಲಾಗಿ ರಾತ್ರಿಯವರೆಗೆ ಕುಳಿತು ಓದುತ್ತಾರೆ. ಇದು ಮರು ದಿನದ ಪರೀಕ್ಷೆಯ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಹೀಗಾಗಿ ಅವರಲ್ಲಿ ಒತ್ತಡ ಅಧಿಕ ವಾಗುತ್ತದೆ. ಜತೆಗೆ ಬಹುತೇಕ ವಿದ್ಯಾರ್ಥಿಗಳು ಪರೀಕ್ಷೆಯ ದಿನ ಏನೂ ತಿನ್ನುವುದಿಲ್ಲ. ಇದು ಮತ್ತೂಂದು ಸಮಸ್ಯೆಗೆ ಕಾರಣವಾಗುತ್ತದೆ. ಬದಲಾಗಿ ಲಘು ಆಹಾರ ಸೇವಿಸಲೇಬೇಕು.
Advertisement
ಪರೀಕ್ಷೆಯ ಮುನ್ನ ಸಕಾರಾತ್ಮಕ ಭಾವನೆ ಯನ್ನು ಬೆಳೆಸಿಕೊಳ್ಳಬೇಕು. ಮನನ ಮಾಡಿ ಕೊಳ್ಳಬೇಕು. ಇದರ ಮೂಲಕ ಆತ್ಮಸ್ಥೈರ್ಯ ಬೆಳೆಸುವ ಪ್ರಯತ್ನ ಮಕ್ಕಳು ರೂಢಿಸಿಕೊಂಡರೆ ಉತ್ತಮ. ಪರೀಕ್ಷೆಗೆ ಒಂದು ವಾರ ಬಾಕಿ ಉಳಿದಿರುವಾಗಲೇ ಆರಾಮವಾಗಿರಲು ಮಕ್ಕಳು ನಿಯಮಿತವಾಗಿ ಉಸಿರಾ ಟದತ್ತ ಗಮನ ಕೇಂದ್ರೀಕರಿಸಿ ವ್ಯಾಯಾಮ ಮಾಡಿದರೆ ಉತ್ತಮ. ಇದರಿಂದಾಗಿ ದೇಹ ಹಾಗೂ ಮನಸ್ಸು ಶಾಂತವಾಗುತ್ತದೆ. ಇದು ನೆನಪಿನ ಶಕ್ತಿವೃದ್ಧಿಯಾಗಲು ಸಹಕಾರಿ.
ಪರೀಕ್ಷೆಗೂ ಮುನ್ನ ಪರೀಕ್ಷೆಯ ಬಗ್ಗೆ ಮಾತ್ರ ಗಮನಹರಿಸಬೇಕು. ಫಲಿತಾಂಶದ ಬಗ್ಗೆ ಅಲ್ಲ. ಚೆನ್ನಾಗಿ ಗೊತ್ತಿರುವ ಪ್ರಶ್ನೆಗೆ ಮೊದಲು ಉತ್ತರಿಸಿ, ಸ್ವಲ್ಪ ಗೊತ್ತಿರುವ ಪ್ರಶ್ನೆಗೆ ಮತ್ತೆ ಉತ್ತರಿಸುವ ಶೈಲಿ ಸಾಧ್ಯವಾದರೆ ಬೆಳೆಸಿಕೊಳ್ಳಿ. ಬಹುಮುಖ್ಯವಾಗಿ ಪ್ರಶ್ನೆಗಳು “ಕಷ್ಟ’ ಎಂಬ ಬಗ್ಗೆ ಗಾಬರಿಯಾಗಬೇಡಿ.
ಪರೀಕ್ಷೆ ಬಳಿಕ ಚರ್ಚೆ ಬೇಡ!ಪರೀಕ್ಷೆಯ ಬಳಿಕ ಕೆಲವು ವಿದ್ಯಾರ್ಥಿಗಳು ಇತರ ಮಕ್ಕಳ ಜತೆಗೆ ಪ್ರಶ್ನೆ-ಉತ್ತರದ ಬಗ್ಗೆ ಚರ್ಚೆ ಮಾಡುತ್ತಾರೆ. ಒಂದು ವೇಳೆ ಆತಂಕ ಇರುವ ಮಕ್ಕಳಿಗೆ ಇಂತಹ ಚರ್ಚೆಯಿಂದಾಗಿ ತಾವು ತಪ್ಪು ಬರೆದಿದ್ದರೆ ಅಥವಾ ಉತ್ತರ ಗೊತ್ತಿದ್ದೂ ಬರೆಯದಿದ್ದರೆ ಆತಂಕ ಮತ್ತಷ್ಟು ಹೆಚ್ಚಾಗಬಹುದು. ಇದರಿಂದ ಮುಂದಿನ ಪರೀಕ್ಷೆಯ ತಯಾರಿ, ಓದಿನ ಮೇಲೆ ಪರಿಣಾಮ ಬೀರಬಹುದು. ಹೀಗಾಗಿ ಒಂದು ವಿಷಯದ ಪರೀಕ್ಷೆ ಮುಗಿದ ಮೇಲೆ ಆ ಪರೀಕ್ಷೆಯ ವಿಚಾರವನ್ನು ಮರೆತು ಬಿಡಿ; ಬದಲಾಗಿ ಮುಂದಿನ ಪರೀಕ್ಷೆ ಬಗ್ಗೆ ಮಾತ್ರ ನಿಮ್ಮ ಗಮನವನ್ನೆಲ್ಲ ಕೇಂದ್ರೀಕರಿಸಿ. ಪರೀಕ್ಷೆ ನೆಲೆಯಲ್ಲಿ ವಿದ್ಯಾರ್ಥಿಗಳು ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಇತ್ತ ಹೆಚ್ಚಿನ ಲಕ್ಷ್ಯ ಹರಿಸುವುದು ಅತೀ ಮುಖ್ಯ ಜತೆಯಲ್ಲಿ ಮಾನಸಿಕ ಆರೋಗ್ಯ ಚೆನ್ನಾಗಿರ ಬೇಕು. ಕಲಿಕೆಯ ಮಧ್ಯೆ ಐದು ನಿಮಿಷ ಗಳ ರಿಲ್ಯಾಕ್ಸ್ ತೆಗೆದುಕೊಳ್ಳುವುದು ಉತ್ತಮ. ರಿಲ್ಯಾಕ್ಸ್ ವೇಳೆ ಟಿವಿ, ಮೊಬೈಲ್ ದಾಸರಾಗು ವುದಲ್ಲ. ಒಂದು ವೇಳೆ ಮಕ್ಕಳಿಗೆ ಏನೇ ಸಮಸ್ಯೆ ಇದ್ದರೆ ಹೆತ್ತವರಲ್ಲಿ ಮಾತನಾಡಿ ಹಾಗೂ ಅವರು ಕೂಡ ಮಕ್ಕಳ ಜತೆಗೆ ಪರೀಕ್ಷಾ ಸಮಯ
ದಲ್ಲಿ ಹೆಚ್ಚು ಮಾತನಾಡಿ, ಧೈರ್ಯ ತುಂಬಿ. ಫಲಿತಾಂಶದ ಬಗ್ಗೆ ಆಲೋಚನೆ ಬೇಡ; ನನ್ನ ಉತ್ತರಪತ್ರಿಕೆಯನ್ನು ಯಾರು ತಿದ್ದುತ್ತಾರೋ ಎಂಬ ಬಗ್ಗೆ ಯೋಚಿಸಬೇಡಿ- ಬದಲಾಗಿ ಪರೀಕ್ಷೆ ಬರೆಯುವುದು ಮಾತ್ರ ನಮ್ಮ ಕರ್ತವ್ಯ ಎಂಬುದು ಮಕ್ಕಳ ನೆನಪಿನಲ್ಲಿರಲಿ.
ಅಂತೂ, ಫಲಿತಾಂಶ ಏನೇ ಇರಲಿ; ಅದನ್ನು ಸ್ವೀಕರಿಸಲೇಬೇಕು. ಯಾಕೆಂದರೆ ಈ ಪರೀಕ್ಷೆಯ ಫಲಿತಾಂಶ ನಿಮ್ಮ ಜೀವನವನ್ನು ವರ್ಣಿಸುವುದಿಲ್ಲ. ಬದಲಾಗಿ ಈ ಪರೀಕ್ಷೆಯಲ್ಲಿ ಮಾತ್ರ ಹೇಗೆ ಫಲಿತಾಂಶ ಇದೆ ಎಂಬುದನ್ನು ಮಾತ್ರ ಹೇಳುತ್ತದೆ. ಜೀವನದ ಪರೀಕ್ಷೆ ಮುಂದೆಯೂ ಇದೆ! ಎಸೆಸೆಲ್ಸಿ ಟಿಪ್ಸ್
– ಆತಂಕ ಸಹಜ, ಆದರೆ ಅತಿಯಾದ ಆತಂಕ ಪಡುವ ಅಗತ್ಯವಿಲ್ಲ.
– ಪರೀಕ್ಷೆ, ಫಲಿತಾಂಶದ ಬಗೆಗೆ ತಲೆಕೆಡಿಸಿಕೊಳ್ಳುವ ಬದಲು ಓದಿನತ್ತ ಗಮನ ಕೇಂದ್ರೀಕರಿಸಿ.
– ಕೊನೆಯ ಹಂತದಲ್ಲಿ ಈವರೆಗೆ ಓದಿದ ವಿಷಯಗಳನ್ನು ಮತ್ತೂಮ್ಮೆ ಓದಿ ಸರಿಯಾಗಿ ಮನದಟ್ಟು ಮಾಡಿ ಕೊಳ್ಳಿ. ಹೊಸದಾಗಿ ಓದು ಆರಂಭಿಸು ವುದು ಆತಂಕವನ್ನು ಹೆಚ್ಚಿಸೀತು.
– ಪರೀಕ್ಷೆಯ ಮುನ್ನಾದಿನ ಕನಿಷ್ಠ 6 ಗಂಟೆ ನಿದ್ದೆ ಮಾಡಿ. ನಿದ್ದೆಗೆಟ್ಟು ಓದುವುದು ಸರಿಯಲ್ಲ.
– ಅಧ್ಯಯನ ಮತ್ತು ಪರೀಕ್ಷೆಯ ವೇಳೆ ದೈಹಿಕ ಮತ್ತು ಮಾನಸಿಕ ಆರೋಗ್ಯದತ್ತಲೂ ಗಮನಹರಿಸಿ.
– ಸಕಾರಾತ್ಮಕ ಮನೋಭಾವ ಮೈಗೂಡಿಸಿಕೊಂಡಲ್ಲಿ ಆತಂಕ ಕಡಿಮೆಯಾಗುತ್ತದೆ.
– ಪರೀಕ್ಷೆ ಎದುರಿಸಿದ ಬಳಿಕ ಆ ಬಗ್ಗೆ ಚರ್ಚೆ ಬೇಡ, ಮುಂದಿನ ವಿಷಯದ ಪರೀಕ್ಷೆಗೆ ಸಜ್ಜಾಗುವುದೇ ನಿಮ್ಮ ಆದ್ಯತೆಯಾಗಲಿ. -ಡಾ| ರಮೀಳಾ ಶೇಖರ್
ಮಾನಸಿಕ ಆರೋಗ್ಯ ತಜ್ಞರು, ಮಂಗಳೂರು