ಶ್ರೀನಗರ: ದಕ್ಷಿಣ ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯಲ್ಲಿ ಪೊಲೀಸರ ಗಸ್ತು ಪಡೆಯ ಮೇಲೆ ಶನಿವಾರ ಉಗ್ರರ ದಾಳಿ ನಡೆದಿದೆ. ಘಟನೆಯಲ್ಲಿ ಒಬ್ಬ ಪೊಲೀಸ್ ಸಿಬ್ಬಂದಿ ಹುತಾತ್ಮರಾಗಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಕೇಂದ್ರ ಗೃಹ ಸಚಿವ ರಾಜನಾಥ್‌ಸಿಂಗ್ ಅವರು ಅನಂತ್‌ನಾಗ್‌ಗೆ ಭೇಟಿ ನೀಡಲಿರುವ ಮುನ್ನಾ ದಿನವೇ ಈ ಬೆಳವಣಿಗೆ ನಡೆದಿದೆ. ರಾಜನಾಥ್ ಅವರು ಭಾನುವಾರ ಭದ್ರತಾ ಸಿಬ್ಬಂದಿಯೊಂದಿಗೆ ಸಭೆ ನಡೆಸಲಿರುವ ಸ್ಥಳದಿಂದ ಸುಮಾರು ಒಂದು ಕಿ.ಮೀ. ದೂರದಲ್ಲಿ ಈ ದಾಳಿ ನಡೆಸಲಾಗಿದೆ.
ಅನಂತ್‌ನಾಗ್‌ನ ಬಸ್ ನಿಲ್ದಾಣದ ಸಮೀಪ ಪೊಲೀಸ್ ಸಿಬ್ಬಂದಿಯ ಮೇಲೆ ಉಗ್ರರು ಏಕಾಏಕಿ ಗುಂಡಿನ ಮಳೆಗರೆದಿದ್ದಾರೆ. ಪರಿಣಾಮ ಕಾನ್‌ಸ್ಟೆàಬಲ್ ಇಮಿ¤ಯಾಜ್ ಅಹ್ಮದ್ ಮೃತಪಟ್ಟರೆ, ಮತ್ತಿಬ್ಬರು ಗಾಯಗೊಂಡಿದ್ದಾರೆ. ಘಟನೆ ಬೆನ್ನಲ್ಲೇ ಆ ಪ್ರದೇಶದಲ್ಲಿ ಉಗ್ರರಿಗಾಗಿ ಶೋಧ ಕಾರ್ಯ ಆರಂಭವಾಗಿದೆ.
ಸಿಎಂ ಭೇಟಿಯಾದ ರಾಜನಾಥ್: ಶನಿವಾರವೇ ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡಿರುವ ರಾಜನಾಥ್ ಅವರು ಶ್ರೀನಗರದಲ್ಲಿ ಸಿಎಂ ಮೆಹಬೂಬಾ ಮುಫ್ತಿ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಮುಕ್ತ ಮನಸ್ಸಿನಿಂದ ನಾನಿಲ್ಲಿಗೆ ಬಂದಿದ್ದೇನೆ. ಕಾಶ್ಮೀರ ವಿವಾದ ಬಗೆಹರಿಸಲು ನೆರವಾಗುವ ಯಾರೊಂ ದಿಗೆ ಬೇಕಿದ್ದರೂ ಮಾತುಕತೆಗೆ ಸಿದ್ಧ ಎಂದು ಅವರು ಹೇಳಿದ್ದಾರೆ. ಅವರು 4 ದಿನಗಳ ಕಾಲ ಕಣಿವೆ ರಾಜ್ಯದಲ್ಲಿರಲಿದ್ದು, ವಿವಾದ ಪರಿಹಾರ ನಿಟ್ಟಿನಲ್ಲಿ ಹೆಜ್ಜೆಯಿಡಲಿದ್ದಾರೆ. ನಾಗರಿಕ ಸಮಾಜದ ವಿವಿಧ ನಿಯೋಗಗಳನ್ನೂ ಅವರು ಭೇಟಿಯಾಗಲಿದ್ದಾರೆ.
ಇದು ಸಿಂಗ್ ನಿಯೋಗ ಭೇಟಿ: ಇದೇ ವೇಳೆ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಕಾಂಗ್ರೆಸ್‌ನ ತಂಡವೊಂದು ಭಾನುವಾರ ಕಣಿವೆ ರಾಜ್ಯಕ್ಕೆ ಆಗಮಿಸಲಿದ್ದು, ರಾಜ್ಯದ ನೈಜ ಭದ್ರತಾ ಸ್ಥಿತಿಗತಿಗಳನ್ನು ಅಧ್ಯಯನ ಮಾಡಲಿದೆ.
ಉಗ್ರರ ಹತ್ಯೆ: ಉತ್ತರ ಕಾಶ್ಮೀರದ ಸೋಪೋರ್‌ನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ಉಗ್ರರನ್ನು ಭದ್ರತಾ ಪಡೆ ಹೊಡೆದುರುಳಿಸಿದೆ. ಉಗ್ರರು ಅವಿತುಕೊಂಡಿರುವ ಬಗ್ಗೆ ಸಿಕ್ಕಿದ ಖಚಿತ ಮಾಹಿತಿ ಮೇರೆಗೆ ರಿಬಾನ್ ಪ್ರದೇಶವನ್ನು ಭದ್ರತಾ ಪಡೆ ಸುತ್ತುವರಿದಿತ್ತು. ಆಗ ಉಗ್ರರು ಗುಂಡಿನ ದಾಳಿ ಆರಂಭಿಸಿದ್ದು, ಕೆಲ ಗಂಟೆ ಚಕಮಕಿ ನಡೆದಿದೆ.