ಬೆಂಗಳೂರು: ಗ್ರಾಮ ಪಂಚಾಯತ್, ತಾ.ಪಂ. ಮತ್ತು ಜಿ.ಪಂ. ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಅಧಿಕಾರಾವಧಿ ಐದು ವರ್ಷಗಳಿಂದ 30 ತಿಂಗಳಿಗೆ ಇಳಿಕೆ, ಅಧ್ಯಕ್ಷ-ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸ ಗೊತ್ತುವಳಿಯನ್ನು 15 ತಿಂಗಳಿಗೆ ಮುನ್ನ ಮಂಡಿಸಲು ಅವಕಾಶ ನಿರಾಕರಣೆ ಸಹಿತ ಹಲವು ಬದಲಾವಣೆಗಳನ್ನು ಒಳಗೊಂಡ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್‌ರಾಜ್ ತಿದ್ದುಪಡಿ ಮಸೂದೆಗೆ ಮಂಗಳವಾರ ವಿಧಾನಸಭೆಯಲ್ಲಿ ಅನುಮೋದನೆ ನೀಡಲಾಯಿತು.
ಮಂಗಳವಾದ ಸದನದಲ್ಲಿ ಮಸೂದೆಯ ವಿವರ ನೀಡಿದ ಸಚಿವ ಕೆ.ಎಸ್. ಈಶ್ವರಪ್ಪ, ರಾಜ್ಯದಲ್ಲಿ 6,021 ಗ್ರಾ.ಪಂ., 226 ತಾ.ಪಂ. ಮತ್ತು 30 ಜಿ.ಪಂ. ಗಳು ಕಾರ್ಯ ನಿರ್ವಹಿಸುತ್ತಿವೆ. ಕಾನೂನಿಗೆ ತಿದ್ದುಪಡಿ ತಂದು ಮಸೂದೆ ಮಂಡಿಸಲಾಗಿದ್ದು, ಅನುಮೋದನೆ ನೀಡಬೇಕು ಎಂದು ಮನವಿ ಮಾಡಿದರು.
ಮಸೂದೆಯ ಕುರಿತು ಮಾತನಾಡಿದ ಬಿಜೆಪಿಯ ಕುಮಾರ್ ಬಂಗಾರಪ್ಪ, ಗ್ರಾ.ಪಂ. ಚುನಾವಣೆಗಳು ರಾಜಕೀಯ ಪಕ್ಷದ ಚಿಹ್ನೆ ಇಲ್ಲದೇ ನಡೆದರೂ ಅಧ್ಯಕ್ಷರು, ಉಪಾಧ್ಯಕ್ಷರ ಆಯ್ಕೆ ವೇಳೆ ಸಾಕಷ್ಟು ಅವ್ಯವಸ್ಥೆಯಾಗುತ್ತಿದೆ. ಅಪಹರಣ, ಹಲ್ಲೆಗಳು ಸಂಭವಿಸುತ್ತಿವೆ. ಹಾಗಾಗಿ ಗೊತ್ತುಪಡಿಸಿದ ಮೀಸಲಾತಿ ಯಡಿ ಅತಿ ಹೆಚ್ಚು ಮತ ಪಡೆದವರನ್ನೇ ಅಧ್ಯಕ್ಷ, ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡುವ ವ್ಯವಸ್ಥೆ ತಂದರೆ ಒಳಿತು. ಇಲ್ಲವೇ ಅಧ್ಯಕ್ಷರು, ಉಪಾಧ್ಯಕ್ಷ ರನ್ನು ನೇರವಾಗಿ ಆಯ್ಕೆ ಮಾಡುವ ವ್ಯವಸ್ಥೆ ತರುವ ಬಗ್ಗೆಯೂ ಚಿಂತಿಸಬಹುದು ಎಂದು ಸಲಹೆ ನೀಡಿದರು.
ಬಳಿಕ ಪ್ರತಿಕ್ರಿಯಿಸಿದ ಕೆ.ಎಸ್. ಈಶ್ವರಪ್ಪ, ರಾಜ್ಯದ ಗ್ರಾಮೀಣ ಪ್ರದೇಶದ ಜನರಿಗೆ ಅನುಕೂಲ ಕಲ್ಪಿಸುವುದಕ್ಕಾಗಿ ಮಸೂದೆ ಮಂಡಿಸಲಾಗಿದ್ದು, ವಿಪಕ್ಷಗಳ ಸಲಹೆ, ಸೂಚನೆಯೂ ಅಗತ್ಯವಿತ್ತು. ಸದ್ಯದಲ್ಲೇ ಪಂಚಾಯತ್ ಚುನಾವಣೆ ನಡೆಯಲಿರುವುದರಿಂದ ಅನುಮೋದನೆ ಪಡೆಯುವ ಅನಿವಾರ್ಯತೆ ಇದೆ ಎಂದರು.
ತಾ.ಪಂ. ವ್ಯವಸ್ಥೆ ರದ್ದುಪಡಿಸಬೇಕಾದರೆ ಸಂಸತ್
ನಲ್ಲಿ ತಿದ್ದುಪಡಿ ತರಬೇಕಿದೆ. ನಕಲಿ ಜಾತಿ ಪ್ರಮಾಣ ಪತ್ತ ಸಲ್ಲಿಸುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗುವುದು. ನಿರ್ದಿಷ್ಟ ಜಾತಿ, ಸಮುದಾಯದವರು ಇಲ್ಲದ ಕಡೆ ಜಾತಿ ಮೀಸಲಾತಿ ಕಾಯ್ದಿರಿಸದಿರುವ ಬಗ್ಗೆಯೂ ನಿಯಮಾವಳಿ ರೂಪಿಸಲು ಪರಿಶೀಲಿಸಲಾಗುವುದು ಎಂದರು.
ಪ್ರಮುಖ ಅಂಶಗಳು
-l ಗ್ರಾ.ಪಂ., ತಾ.ಪ., ಜಿ.ಪಂ. ಅಧ್ಯಕ್ಷ, ಉಪಾ ಧ್ಯಕ್ಷರ ಅಧಿಕಾರಾವಧಿ 30 ತಿಂಗಳಿಗೆ ಕಡಿತ
– ಅಧ್ಯಕ್ಷ, ಉಪಾಧ್ಯಕ್ಷರ ವಿರುದ್ಧ 15 ತಿಂಗಳಿಗೆ ಮುಂಚೆ ಅವಿಶ್ವಾಸ ಗೊತ್ತುವಳಿ ಇಲ್ಲ
– ಮತದಾನ ಮುಕ್ತಾಯವಾಗುವ 48 ತಾಸು ಮೊದಲು ಮಾತ್ರ ನೀತಿಸಂಹಿತೆ ಜಾರಿ
– ವಾರ್ಡ್ ಮೀಸಲಾತಿ ಅವಧಿ 10 ವರ್ಷಗಳಿಂದ ಐದು ವರ್ಷಕ್ಕೆ ಇಳಿಕೆ
– ಅಧಿಕಾರ ದುರ್ಬಳಕೆ ಮತ್ತಿತರ ಆರೋಪ ಸಾಬೀತಾದರೆ ಚುನಾವಣೆ ಸ್ಪರ್ಧೆ ನಿರ್ಬಂಧ ಅವಧಿ 6 ವರ್ಷಕ್ಕೆ ವಿಸ್ತರಣೆ