ಕಿನ್ನಿಗೋಳಿ: ಕೋವಿಡ್-19 ಮಹಾಮಾರಿಯಿಂದ ಬಹಳಷ್ಟು ಉದ್ಯೋಗಿಗಳು ಆರ್ಥಿಕವಾಗಿ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಹೀಗಾಗಿ ಉದ್ಯೋಗಕ್ಕಾಗಿ ದೇಶವಿದೇಶಗಳಲ್ಲಿ ವಾಸ ಮಾಡಿಕೊಂಡಿದ್ದ ಜಿಲ್ಲೆಯ ಯುವಕರು ಇದೀಗ ತವರಿಗೆ ಆಗಮಿಸಿ ಕೃಷಿ ಕಾಯಕದಲ್ಲಿ ತೊಡಗಿಕೊಳ್ಳುತ್ತಿದ್ದಾರೆ.
ಕೋವಿಡ್-19 ದಿಂದ ಲಾಕ್‌ಡೌನ್ ಘೋಷಿಸಿದ ವೇಳೆ ಹಲವು ಕಂಪೆನಿಗಳು ಮುಚ್ಚಿದ್ದವು. ಹೀಗಾಗಿ ಅವರೆಲ್ಲ ತಮ್ಮ ತಮ್ಮ ತವರಿಗೆ ಮರಳಿ ಸುಮ್ಮನಿರದೇ ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. ಕೆಲಸವನ್ನು ಕಳೆದುಕೊಂಡ ಬಹಳಷ್ಟು ಮಂದಿ ಇದೀಗ ಕೃಷಿಯನ್ನು ಅವಲಂಬಿಸಿದ್ದಾರೆ. ಹೀಗಾಗಿ ಹಡಿಲು ಬಿದ್ದ ಫಲವತ್ತಾದ ಭೂಮಿ ಹಸಿರಾಗುತ್ತಿದೆ.
ಕಿನ್ನಿಗೋಳಿ ಪರಿಸರದಲ್ಲಿ ಹಲವು ಮಂದಿ ಕೃಷಿ ಕಡೆ ಒಲವು ತೋರ್ಪಡಿಸುತ್ತಿದ್ದಾರೆ. ಪಕ್ಷಿಕರೆ ಪಂಜದ ಶ್ರೀಹರಿ ಸ್ಪೋರ್ಟ್ಸ್ ಕ್ಲಬ್‌ನ ಸದಸ್ಯರು ಕೃಷಿಯತ್ತ ಮುಖ ಮಾಡಿ ನಮ್ಮ ನಡೆ ಕೃಷಿಯ ಕಡೆ ಎಂಬ ಯೋಜನೆ ರೂಪಿಸಿ ಕಾರ್ಯಪ್ರವೃತ್ತರಾಗಿದ್ದಾರೆ. ಒಂದು ಎಕರೆ ಹಡಿಲು ಭೂಮಿಯಲ್ಲಿ ಭತ್ತದ ಬೇಸಾಯ ಮಾಡಲು ಪ್ರಾರಂಭಿಸಿದ್ದಾರೆ. ಕ್ಲಬ್‌ನಲ್ಲಿ 60 ಸದಸ್ಯರಿದ್ದು ಬೇರೆ ಬೇರೆ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ.
ಸಂಸ್ಥೆಯ ಗೌರವಾಧ್ಯಕ್ಷ ರಾಮದಾಸ್ ಶೆಟ್ಟಿ ಅವರು ಮಾರ್ಗದರ್ಶನ ನೀಡುತ್ತಿದ್ದು ನಾಟಿಗೆ ಪೂರ್ವಭಾವಿ ಸಿದ್ಧತೆ ನಡೆಯುತ್ತಿದೆ. ಒಂದು ವೇಳೆ ಈ ಪ್ರಯತ್ನದಲ್ಲಿ ಯಶಸ್ಸು ಗಳಿಸಿದಲ್ಲಿ ಮುಂದಿನ ವರ್ಷ ಇನ್ನಷ್ಟು ಪಾಳು ಬಿದ್ದ ಗದ್ದೆಗಳನ್ನು ಆಯ್ಕೆ ಮಾಡಿ ಬೇಸಾಯ ಮಾಡುವುದು ಇವರ ಯೋಜನೆಯಾಗಿದೆ.