ಮಂಗಳೂರು: ದೇವಸ್ಥಾನಗಳಿಗೆ ಪ್ರೀತಿ-ಭಕ್ತಿಯಿಂದ ಹೋಗಬೇಕೇ ವಿನಾ ವ್ಯಾಪಾರದ ದೃಷ್ಟಿಯಿಂದ ಹೋಗಬಾರದು ಎಂದು ಪೊಳಲಿಯ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕ ಚೈತನ್ಯಾನಂದ ಅವರು ಹೇಳಿದರು.
ಕುಲಶೇಖರದ ಶ್ರೀ ವೀರನಾರಾ ಯಣ ದೇವಸ್ಥಾನದಲ್ಲಿ ನಡೆಯುತ್ತಿರುವ ವಾರ್ಷಿಕ ಜಾತ್ರೆ ಕುಂಭ ಮಹೋತ್ಸವದಲ್ಲಿ ಮಂಗಳವಾರ ದಂದು ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಅವರು, ಆಚಾರ,ವಿಚಾರ, ಸಂಸ್ಕೃತಿಯನ್ನು ಪ್ರತಿಯೊ ಬ್ಬರೂ ಪಾಲನೆ ಮಾಡಬೇಕು ಎಂದರು.
ಪಾಲಿಕೆ ಮೇಯರ್ ಭಾಸ್ಕರ್ ಕೆ. ಮಾತನಾಡಿ, ಮನುಷ್ಯರು ಪರಸ್ಪರ ಪ್ರೀತಿ ವಿಶ್ವಾಸದಿಂದ ಇದ್ದರೆ ಸುಂದರ ಸಮಾಜ ನಿರ್ಮಾಣ ಮಾಡಲು ಸಾಧ್ಯ. ದೇವರಿಗೆ ನಮಿಸಿದಾಗ ಕಷ್ಟಗಳು ದೂರವಾಗುತ್ತವೆ. ಹಿರಿಯರು ಪಾಲಿಸಿಕೊಂಡು ಬಂದ ಸಂಸ್ಕೃತಿ, ಪರಂಪರೆಯನ್ನು ಇಂದಿನ ಮಕ್ಕಳಿಗೆ ತಿಳಿಯಪಡಿಸಬೇಕಾದ ಜವಾಬ್ದಾರಿ ಪೋಷಕರ ಮೇಲಿದೆ ಎಂದರು.
ದ.ಕ. ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಕುಲಶೇಖರದ ಶ್ರೀ ವೀರನಾರಾಯಣ ದೇವಸ್ಥಾನ ಆಡಳಿತ ಮೊಕ್ತೇಸರ ಪುರುಷೋತ್ತಮ ಕುಲಾಲ್ ಕಲಾºವಿ ಪ್ರಾಸ್ತಾವಿಕ ಮಾತನಾಡಿದರು.
ಉಪ್ಪಿನಂಗಡಿಯ ನಿವೃತ್ತ ಬಿಎಸ್‌ಎಫ್ ಕಮಾಂಡೆಂಟ್ ಡಿ. ಚಂದಪ್ಪ ಮೂಲ್ಯ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಪದ್ಮನಾಭ ಕೋಟ್ಯಾನ್, ನಿವೃತ್ತ ಯೋಧ ಗೋಪಾಲ ಬೋಳೂರು ಉರ್ವ, ಪೆರ್ಡೂರಿನ ಕುಲಾಲ ಸಂಘ ಗೌರವಾಧ್ಯಕ್ಷ ರಾಮ ಕುಲಾಲ್ ಪಕ್ಕಾಲು, ಅದ್ಯಪಾಡಿಯ ಕುಲಾಲ ಸಂಘದ ಅಧ್ಯಕ್ಷ ಸುಂದರ ಎಸ್. ಬಂಗೇರ ಅದ್ಯಪಾಡಿ, ಕಾರ್ಪೊರೇಶನ್ ಬ್ಯಾಂಕ್ ಪ್ರ,ಕಚೇರಿಯ ಜನರಲ್ ಮ್ಯಾನೇಜರ್ ಇ.ಎಸ್. ನಾಗರಾಜ ಉಡುಪ, ಶ್ರೀ ವೀರನಾರಾಯಣ ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ಭವಾನಿಶಂಕರ್ ಮರೋಳಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ದಾಮೋದರ ಎ., ಮಾತೃ ಮಂಡಳಿ ಅಧ್ಯಕ್ಷೆ ಕೆ.ಸಿ. ಲೀಲಾವತಿ, ಮಮತಾ ಅಣ್ಣಯ್ಯ ಕುಲಾಲ್ ಮುಂತಾದವರು ಇದ್ದರು.
ಪಾಶ್ಚಿಮಾತ್ಯರ ಒಳ್ಳೆಯತನ, ವೈಜ್ಞಾನಿಕ, ತಾಂತ್ರಿಕ ಬೆಳವಣಿಗೆಯನ್ನು ಅನುಸರಿಸುವ ಜತೆಗೆ ನಮ್ಮ ಸಂಸ್ಕೃತಿಯನ್ನು ಬೆಳೆಸಬೇಕಿದೆ. ಭಗವಂತನ ಸಾಕ್ಷಾತ್ಕಾರಕ್ಕಾಗಿ ಕೆಲಸ ಮಾಡಬೇಕು. ಗುರಿ ಮುಟ್ಟಲು ಭಗವಂತನನ್ನು ಶ್ರದ್ಧಾ ಭಕ್ತಿಯಿಂದ ಪೂಜಿಸಬೇಕು ಎಂದು ಸ್ವಾಮಿ ಚೈತನ್ಯಾನಂದ ನುಡಿದರು.