ಕೋಟ: ಶಬರಿಮಲೆಗೆ ತೀರ್ಥಯಾತ್ರೆ ಹೊರಟಿದ್ದ ತೆಲಂಗಾಣದ ನಿವಾಸಿಯೊಬ್ಬರು ದಿಕ್ಕು ತಪ್ಪಿ ಕುಂದಾಪುರದಲ್ಲಿ ಬಸ್ಸಿನಿಂದ ಇಳಿದು ಒಂದು ವಾರದಿಂದ ಕೋಟ ಪೊಲೀಸ್ ಠಾಣೆ ವ್ಯಾಪ್ತಿಯ ಮೊಳಹಳ್ಳಿ ಮುಂತಾದ ಕಡೆ ತಿರುಗಾಡುತ್ತಿದ್ದು, ಪೊಲೀಸರು ಆತನ ವಿಳಾಸವನ್ನು ಪತ್ತೆ ಹಚ್ಚಿ ಶುಕ್ರವಾರ ಮನೆಗೆ ಸೇರಿಸಿದರು.
ತೆಲಂಗಾಣದ ಕೊಂಡಾಪುರ ನಿವಾಸಿ ಬಿ.ಶೇಖರ್ ಅವರು ಎಂಟು ದಿನಗಳ ಹಿಂದೆ ಊರಿನಿಂದ ಶಬರಿ ಮಲೆಗೆ ಹೊರಟಿದ್ದು, ದಿಕ್ಕು ತಪ್ಪಿ ಕುಂದಾಪುರದಲ್ಲಿ ಇಳಿದಿದ್ದಾರೆ. ಅನಂತರ ಕಾಲ್ನಡಿಗೆಯಲ್ಲಿ ಸಾಗಿ ಹುಣ್ಸೆಮಕ್ಕಿ, ಬಿದ್ಕಲ್‌ಕಟ್ಟೆ, ಮೊಳಹಳ್ಳಿಯಲ್ಲಿ ತಿರುಗಾಡುತ್ತಿದ್ದು, ಸ್ಥಳೀಯರು ಮಾನಸಿಕ ಅಸ್ವಸ್ಥನಿರಬಹುದು ಎಂದು ಭಾವಿಸಿದ್ದರು.
ಗುರುವಾರ ಸಂಜೆ ಸ್ಥಳೀಯರೊಬ್ಬರು ಕೋಟ ಪೊಲೀಸರಿಗೆ ವಿಚಾರ ತಿಳಿಸಿದ್ದು, ಪೊಲೀಸರು ಆ ವ್ಯಕ್ತಿಯನ್ನು ಠಾಣೆಗೆ ಕರೆತಂದಿದ್ದಾರೆ. ಸರಿಯಾಗಿ ಆಹಾರವಿಲ್ಲದೆ ತೀವ್ರ ಅಸ್ವಸ್ಥಗೊಂಡಿದ್ದ ಈತನಿಗೆ ಪೊಲೀಸರು ಊಟ ನೀಡಿ ವಿಚಾರಿಸಿದಾಗ ಅಣ್ಣನ ಮೊಬೈಲ್ ಸಂಖ್ಯೆಯನ್ನು ನೀಡಿದ್ದಾರೆ. ಆತನಲ್ಲಿ ಮೊಬೈಲ್ ಇಲ್ಲದಿದ್ದರಿಂದ ಪೊಲೀಸರು ಆ ಸಂಖ್ಯೆಯನ್ನು ಸಂಪರ್ಕಿಸಿ ವಿಷಯ ತಿಳಿಸಿದ್ದಾರೆ.
ಶುಕ್ರವಾರ ಬೆಳಗ್ಗೆ ಶೇಖರ್‌ನ ಅಣ್ಣ ಹನುಮಂತ ಹಾಗೂ ಸ್ನೇಹಿತ ಶೇಖರ್ ಅವರು ಠಾಣೆಗೆ ಆಗಮಿಸಿ ಪೊಲೀಸರಿಗೆ ಕೃತಜ್ಞತೆ ಸಲ್ಲಿಸಿ ಊರಿಗೆ ಕರೆದೊಯ್ದರು.
ಈತ ನನ್ನು ಮನೆ ಸೇರಿಸುವ ಪ್ರಯತ್ನದಲ್ಲಿ ಕೋಟ ಉಪ ನಿರೀಕ್ಷಕ ಸಂತೋಷ್ ಎ.ಕಾಯ್ಕಿಣಿ, ಸಿಬಂದಿ ವರ್ಗದ ಸೂರ್ಯ ಹಾಲಾಡಿ, ಮಂಜುನಾಥ, ಸತೀಶ್, ರಾಮಣ್ಣ ಶ್ರಮಿಸಿದರು.