Advertisement

ಶಾಲೆಯ ಆವರಣವನ್ನು ಹಚ್ಚ ಹಸಿರಾಗಿಸಿದ ಶಿಕ್ಷಕಿ ಮಂಜುಳಾ ಹೂಗಾರ

06:35 PM Jul 21, 2023 | Team Udayavani |

ರಬಕವಿ ಬನಹಟ್ಟಿ: ಸಮೀಪದ ಜಗದಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ಮಂಜುಳಾ ಹೂಗಾರ ಒಬ್ಬ ಮಾದರಿ ಶಿಕ್ಷಕಿ. ವಿದ್ಯಾರ್ಥಿಗಳಿಗೆ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳ ಮೂಲಕ ಸರ್ವಾಂಗೀಣ ಅಭಿವೃದ್ಧಿಯತ್ತ ಗಮನ ನೀಡುತ್ತಿದ್ದಾರೆ.

Advertisement

ತಾವು ಸೇವೆ ಸಲ್ಲಿಸಿದ ಸರ್ಕಾರಿ ಶಾಲೆಗಳನ್ನು ಹಚ್ಚ ಹಸಿರನ್ನಾಗಿಸಿದ್ದಾರೆ. ಸದ್ಯ ಜಗದಾಳ ಗ್ರಾಮದ ಹೊರ ವಲಯದಲ್ಲಿರುವ ಹಿರಿಯ ಪ್ರಾಥಮಿಕ ಶಾಲೆಯ ಆವರಣ ಹಚ್ಚ ಹಸಿರಿನಿಂದ ಕಂಗೋಳಿಸುತ್ತಿರುವುದಕ್ಕೆ ಕಾರಣಿ ವ್ಯಕ್ತಿ ಹೂಗಾರ. ಶಾಲೆಯ ಆವರಣದಲ್ಲಿ 350 ಕ್ಕೂ ಹೆಚ್ಚು ಗಿಡಗಳನ್ನು ಹಚ್ಚಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಶಾಲೆಗೆ ಬಂದು ಹಚ್ಚಿದ ಗಿಡಗಳು ಇಂದು ಫಲವನ್ನು ನೀಡುತ್ತಿವೆ.

ಶಾಲೆಯ ಆವರಣದಲ್ಲಿ ಪೇರಲ, ಮಾವು. ತೆಂಗು, ಡ್ರ‍್ಯಾಗನ್ ಫ್ರುಟ್, ಸೀತಾ ಫಲ, ಪಪ್ಪಾಯಿ, ರಾಮ ಫಲ, ಬಾಳೆ ಹಣ್ಣು, ನುಗ್ಗೆ ಕಾಯಿ ಗಿಡ, ಕರಿಬೇವು ಗಿಡಗಳನ್ನು ಬೆಳೆಸಿದ್ದಾರೆ. ಇಲ್ಲಿಯ ಹಣ್ಣುಗಳನ್ನು ಶಾಲೆಯ ಮಕ್ಕಳಿಗೆ ತಿನ್ನಲು ನೀಡುತ್ತಾರೆ. ಇನ್ನೂ ಭವಿಷ್ಯತ್ತಿನಲ್ಲಿ ಶಾಲೆ ಆರ್ಥಿಕವಾಗಿಯೂ ಪ್ರಗತಿಯಾಗಬೇಕು ಎಂಬ ನಿಟ್ಟಿನಲ್ಲಿ ಹತ್ತಾರು ಹೆಬ್ಬೇವು ಮತ್ತು ಸಾಗಾವಣಿ, ಬೇವು ಹುಣಸೆ ಹಣ್ಣು ಸೇರಿದಂತೆ ಅನೇಕ ಮರಗಳನ್ನು ಬೆಳೆಸುತ್ತಿದ್ದಾರೆ.
ಶಾಲೆಯ ಶಿಕ್ಷಕರ, ವಿದ್ಯಾರ್ಥಿಗಳ ಹುಟ್ಟು ಹಬ್ಬದ ದಿನದಂದು ಅವರ ಹೆಸರಿನಲ್ಲಿ ಸಸಿ ನೆಟ್ಟು ಗಿಡದ ಜವಾಬ್ದಾರಿಯನ್ನು ಅವರಿಗೆ ನೀಡುತ್ತಾರೆ. ಇದರಿಂದಾಗಿ ಶಾಲೆ ಹಸಿರಿನಿಂದ ಕಂಗೊಳಿಸುತ್ತಿದೆ.

ಇನ್ನೂ ಶಾಲೆಯ ವಿದ್ಯಾರ್ಥಿಗಳಿಗೆ ವಿಶೇಷ ಕಲಿಕಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅವರ ಜ್ಞಾನಾರ್ಜನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ರಸ ಪ್ರಶ್ನೆ, ಯೋಗಾಸನ, ಪ್ರಾಣಾಯಾಮ, ಹಾಡು, ನೃತ್ಯಗಳನ್ನು ಕಲಿಸುತ್ತಿದ್ದಾರೆ.

ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಪಡೆದುಕೊಂಡಿರುವ ಮಂಜುಳಾ ಹೂಗಾರ ರಾಜ್ಯ ಮಟ್ಟದ ಶಾಲಾ ಶಿಕ್ಷಕರ ಕ್ರೀಡಾಕೂಟದಲ್ಲಿ ವೇಟ್ ಲಿಫ್ಟಿಂಗ್ ಮತ್ತು ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ದಿನನಿತ್ಯ ಶಾಲೆಯ ಮತ್ತು ಮಕ್ಕಳ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಮಂಜುಳಾ ಹೂಗಾರ ಒಬ್ಬ ಮಾದರಿ ಶಿಕ್ಷಕಿಯಾಗಿದ್ದಾರೆ.

Advertisement

-ಕಿರಣ ಶ್ರೀಶೈಲ ಆಳಗಿ

Advertisement

Udayavani is now on Telegram. Click here to join our channel and stay updated with the latest news.

Next