ಮುಂಬೈ: ಮುಂಬೈನಲ್ಲಿ ನಡೆದ 2008ರ ಉಗ್ರರ ದಾಳಿ ವೇಳೆ ಛತ್ರಪತಿ ಶಿವಾಜಿ ನಿಲ್ದಾಣದಿಂದ ಗಾಯಾಳುಗಳನ್ನು ತಳ್ಳು ಗಾಡಿಯಲ್ಲೇ ಆಸ್ಪತ್ರೆಗೆ ಸೇರಿಸಿ ಮಾನವೀಯತೆ, ಅಪಾರ ಧೈರ್ಯ ಮೆರೆಯುವ ಮೂಲಕ ಜನ ಮೆಚ್ಚುಗೆ ಗಳಿಸಿದವರು ಮೊಹಮ್ಮದ್ ತೌಫೀಕ್ ಅಲಿಯಾಸ್ ಛೋಟೂ ಚಾಯ್ ವಾಲಾ ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ.
23 ವರ್ಷಗಳಿಂದ ಶಿವಾಜಿ ಟರ್ಮಿನಸ್ ಬಳಿಯೇ ಚಹಾ ಮಾರುತ್ತಾ ಬದುಕು ಕಟ್ಟಿಕೊಂಡ ಛೋಟೂರ ಬ್ಯುಸಿ ನೆಸ್ ಈಗ ನೆಲಕಚ್ಚಿಬಿಟ್ಟಿದೆ. ಕೋವಿಡ್ ನಿಂದಾಗಿ ಮುಂಬೈ 5 ತಿಂಗಳು ಅಕ್ಷರಶಃ ಖಾಲಿ ಹೊಡೆಯುತ್ತಿದ್ದ ಕಾರಣ ಛೋಟೂ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.
“”ಇಷ್ಟು ತಿಂಗಳಿಂದ ಸಂಪಾದನೆಯಿಲ್ಲದ ಕಾರಣ ಉಳಿತಾಯದ ಹಣವೆಲ್ಲ ಖಾಲಿಯಾಗಿ ಬಿಟ್ಟಿದೆ. ಈಗ ಫ್ಲಾಸ್ಕ್ ನಲ್ಲಿ ಚಹಾ ತೆಗೆದುಕೊಂಡು ಹೋಗಿ ರಸ್ತೆಯಲ್ಲಿ ಮಾರು ತ್ತಿದ್ದೇವೆ. ಆದರೂ, ಇದರಿಂದ ಕುಟುಂಬವನ್ನು ಹಾಗೂ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮೂವರು ಹುಡುಗರನ್ನು ಸಾಕಲಾಗುತ್ತಿಲ್ಲ.
ಜನವರಿ ತಿಂಗಳಲ್ಲಿ ನಾನು ಚಹಾ ಅಂಗಡಿ ಬಾಡಿಗೆ ಪಡೆದಿದ್ದೆ, ಇದಕ್ಕಾಗಿ 1 ಲಕ್ಷ ರೂಪಾಯಿ ಸಾಲ ಮಾಡಿದ್ದೆ, ಇದಾದ ಕೆಲವೇ ಸಮಯದಲ್ಲಿ ಕೊರೊನಾ ಆರಂಭವಾಗಿ ನನ್ನ ಕನಸುಗಳೆಲ್ಲ ಬುಡ ಮೇಲಾದವು. ವಿವಿಧ ಕಾರಣಗಳಿಂದಾಗಿ ಸಾಲದ ಪ್ರಮಾಣ 3 ಲಕ್ಷ ತಲುಪಿದೆ. ಬೇರೆ ದಾರಿ ಕಾಣದೇ, ವಾಪಸ್ ಬಿಹಾರಕ್ಕೆ ತೆರಳಲು ನಿರ್ಧರಿಸಿದ್ದೇನೆ” ಎನ್ನುತ್ತಾರೆ ಛೋಟೂ.
26/11 ಹೀರೋನ ಸಹಾ ಯಕ್ಕೆ ಮಹಾರಾಷ್ಟ್ರ ಸರ್ಕಾರ ಮುಂದಾಗಬೇಕೆಂದು ಜಾಲತಾಣಗಳಲ್ಲಿ ಅಭಿಯಾನ ಆರಂಭವಾಗಿದ್ದು, ಛೋಟೂರ ಬದುಕು ಬದಲಾಗ ಬಹುದೇ ಕಾದು ನೋಡಬೇಕಿದೆ.