ಬೆಂಗಳೂರು: 2011-12ನೇ ಸಾಲಿನಲ್ಲಿ 16.45 ಲಕ್ಷ ರೂ. ಆದಾಯ ತೆರಿಗೆ ಪಾವತಿಸದೆ ವಂಚಿಸಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಿರುವುದಾಗಿಆದಾಯ ತೆರಿಗೆ ಸಂಗ್ರಹ ಅಧಿಕಾರಿಗಳು ಗುರುವಾರ ಮಾಹಿತಿ ನೀಡಿದರು.
ನಗರದಲ್ಲಿರುವ ಆದಾಯ ತೆರಿಗೆ ಇಲಾಖೆ ಕಚೇರಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ-ಗೋವಾ ಪ್ರಧಾನ ಮುಖ್ಯ ಆದಾಯ ತೆರಿಗೆ ಆಯುಕ್ತ ರಜನೀಶ್ ಕುಮಾರ್, ಬುಧವಾರವೇ ಈತನನ್ನು ಬಂಧಿಸಲಾಗಿದ್ದು,ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ ಎಂದರು.
ಸುಮಾರು 200 ಕೋಟಿ ರೂ. ಬೆಲೆಬಾಳುವ ಆಸ್ತಿಯನ್ನು ಸಂಬಂಧಿಕರ ಹೆಸರಿಗೆ ನೋಂದಣಿ ಮಾಡಿ ತೆರಿಗೆ ವಂಚಿಸಿದ್ದಾರೆ. ಇವರಿಂದ 15 ಕೋಟಿ ರೂ. ತೆರಿಗೆ ವಸೂಲು ಮಾಡುತ್ತೇವೆ. ಇದಷ್ಟೇ ಅಲ್ಲ ಬೆಂಗಳೂರಿನಲ್ಲಿ ಭಿನ್ನ ವೃತ್ತಿಯಲ್ಲಿರುವ ದಂಪತಿ 189 ಕೋಟಿ ರೂ. ಮೊತ್ತದ ಆಸ್ತಿ ಮಾರಿದ್ದರೂ ಎರಡು ವರ್ಷದಿಂದ ಆದಾಯ ತೆರಿಗೆ ಪಾವತಿಸಿರಲಿಲ್ಲ.
ಪರಿಶೀಲನೆ ಬಳಿಕ ದಂಪತಿ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿರುವುದು ಕಂಡುಬಂತು. ವೈದ್ಯರು, ವಕೀಲರು ಸೇರಿದಂತೆ ನಾನಾ ವೃತ್ತಿಯವರು ಈ ರೀತಿ ನಡೆದುಕೊಂಡಿರುವುದು ದುರದೃಷ್ಟಕರ ಎಂದು ರಜನೀಶ್‌ಕುಮಾರ್ ಹೇಳಿದರು.
ಬೇನಾಮಿ ಠೇವಣಿ: ವ್ಯಕ್ತಿಯೊಬ್ಬರು ತಮ್ಮ ಲೆಕ್ಕ ವಿವರವಿಲ್ಲದ ಹಣವನ್ನು ಇತರೆ ವ್ಯಕ್ತಿಗಳ ಬ್ಯಾಂಕ್ ಖಾತೆಗೆ ಠೇವಣಿ ಮಾಡಿ ವಂಚಿಸಿರುವುದು ಪರಿಶೀಲನೆ ವೇಳೆ ಕಂಡುಬಂದಿದೆ. ವಿಚಾರಣೆ ಬಳಿಕ ವ್ಯಕ್ತಿಯು ಈ ರೀತಿ 2.15 ಕೋಟಿ ರೂ. ಮೊತ್ತದ ಹಣ ಠೇವಣಿ ಇಟ್ಟಿದ್ದನ್ನು ಒಪ್ಪಿಕೊಂಡಿದ್ದು, 87 ಲಕ್ಷ ರೂ. ತೆರಿಗೆ ಪಾವತಿಸಿದ್ದಾರೆ ಎಂದು ತಿಳಿಸಿದರು.