Advertisement

ಬಿಜೆಪಿಯಿಂದ ರೈತರ ಬೆನ್ನುಮೂಳೆ ಮುರಿಯುವ ಕಾರ್ಯ

04:19 PM Jun 30, 2017 | Team Udayavani |

ಹುಬ್ಬಳ್ಳಿ: ತಾವು ರೈತರ ಪರ ಎಂದು ಹೇಳಿಕೊಳ್ಳುವ ಬಿಜೆಪಿ ನಾಯಕರು ಬರದಲ್ಲೂ ವಾಣಿಜ್ಯ ಬ್ಯಾಂಕ್‌ಗಳ ಸಾಲ ಮನ್ನಾಕ್ಕೆ ಮುಂದಾಗದೆ ರೈತರ ಬೆನ್ನೆಲುಬು ಮುರಿಯುವ ಕಾರ್ಯಕ್ಕೆ ಮುಂದಾಗಿದ್ದಾರೆ ಎಂದು ವಿಧಾನ ಪರಿಷತ್‌ ಸದಸ್ಯ ವಿ.ಎಸ್‌. ಉಗ್ರಪ್ಪ ಆರೋಪಿಸಿದರು. ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದರು.

Advertisement

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಸೇರಿದಂತೆ ರಾಜ್ಯದ ಬಿಜೆಪಿ ನಾಯಕರು ಮೊದಲು ಸಹಕಾರಿ ಬ್ಯಾಂಕ್‌ಗಳಲ್ಲಿನ ರೈತರ ಸಾಲವನ್ನು ರಾಜ್ಯ ಸರಕಾರ ಮನ್ನಾ ಮಾಡಲಿ, ನಾವು ಕೇಂದ್ರದ ಮೇಲೆ ಒತ್ತಡ ತರಲು ಸಾಧ್ಯವಾಗುತ್ತದೆ ಎಂದು ಹೇಳುತ್ತಿದ್ದರು. 

ರಾಜ್ಯ ಸರಕಾರ ಸಹಕಾರಿ ಸಂಘಗಳಲ್ಲಿ 50 ಸಾವಿರ ರೂ.ವರೆಗಿನ ಸಾಲಮನ್ನಾ ಮಾಡಿದ್ದು, ಇದೀಗ ಮಾತು ಬದಲಿಸಿರುವ ಬಿಜೆಪಿ ನಾಯಕರು ಕೇಂದ್ರದಿಂದ ಸಾಲ ಮನ್ನಾ ಸಾಧ್ಯವಿಲ್ಲ ಎನ್ನುತ್ತಿದ್ದಾರೆ. ಈ ಹಿಂದೆ ಇದೇ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ವಿಧಾನ ಪರಿಷತ್‌ನಲ್ಲಿ ವಿಪಕ್ಷ ನಾಯಕನಾಗಿ

ನಾನು ರೈತರ ಸಾಲಮನ್ನಾಕ್ಕೆ ಒತ್ತಾಯಿಸಿದಾಗ ಕೇಂದ್ರ ಸರಕಾರ ನನಗೇನು ನೋಟು ಮುದ್ರಣ ಯಂತ್ರ ನೀಡಿದೆಯೇ ಎಂದು ರೈತರ ಸಾಲ ಮನ್ನಾ ಅಸಾಧ್ಯ ಎಂದು ಕಡ್ಡಿ ಮುರಿದಂತೆ ಹೇಳಿದ್ದರು. ಇದೀಗ ಅವರೇ ಸಾಲ ಮನ್ನಾ ಹೋರಾಟದ ಮಾತನಾಡುತ್ತಿದ್ದಾರೆ. 

ರಾಜ್ಯದ ಬಿಜೆಪಿ ನಾಯಕರಿಗೆ ಕಾಳಜಿ ಇದ್ದರೆ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಒತ್ತಡ ತಂದು ರೈತರ ಸಾಲ ಮನ್ನಾ ಮಾಡಿಸಲಿ. ಇಲ್ಲವಾದರೆ ಕೇಂದ್ರ ಹಾಗೂ ರಾಜ್ಯದ ಬಿಜೆಪಿ ನಾಯಕರು ರೈತರ ಬಗ್ಗೆ ಡೋಂಗಿತನ ತೋರುತ್ತಿದ್ದಾರೆಂದು ಭಾವಿಸಬೇಕಾಗುತ್ತದೆ ಎಂದರು. 

Advertisement

ಅರಿವಿಲ್ಲದೆ ವಿರೋಧ: ಉಡುಪಿಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿಯವರು ಇಫ್ತಾರ್‌ಕೂಟ ಆಯೋಜಿಸಿದ್ದರ ಬಗ್ಗೆ ಹಿಂದೂ ಧರ್ಮದ ವಾರಸುದಾರರೆನಿಸಿಕೊಂಡ ಕೆಲವರು ಸಂವಿಧಾನ ಹಾಗೂ ಹಿಂದೂ ಧರ್ಮದ ಮೂಲ ಆಶಯಗಳ ಅರಿವಿಲ್ಲದೆ ವಿರೋಧಕ್ಕೆ ಮುಂದಾಗಿದ್ದಾರೆ ಎಂದರು. 

ಆಹಾರ ಪದ್ಧತಿ ಬಗ್ಗೆ ಅನೇಕ ಬಾರಿ ಸುಪ್ರೀಂಕೋರ್ಟ್‌ ಸ್ಪಷ್ಟನೆ ನೀಡಿದೆ. ಆದರೂ ಕೆಲವರು ಉದ್ದೇಶಪೂರ್ವಕವಾಗಿ ಸಮಸ್ಯೆ ಸೃಷ್ಟಿಸಲು ಗೋ ಮಾಂಸ ಕುರಿತಾಗಿ ವಿವಾದ ಸೃಷ್ಟಿಸುತ್ತಿದ್ದಾರೆ. ವೇದ- ಉಪನಿಷತ್‌ಗಳ ಕಾಲದಲ್ಲೂ ಗೋ ಮಾಂಸ ಭಕ್ಷಣೆ ಇತ್ತು ಎಂಬ ಉಲ್ಲೇಖಗಳಿವೆ ಎಂದರು. ಪತ್ರಕರ್ತರಾದ ರವಿ ಬೆಳಗೆರೆ, ಅನಿಲ ಅವರ ವಿರುದ್ಧ ಶಿಕ್ಷೆ ಕುರಿತಾಗಿ ಪ್ರತಿಕ್ರಿಯಿಸಿದ ಅವರು, ಶಾಸಕಾಂಗ, ಮಾಧ್ಯಮ ರಂಗ ಮುಖ್ಯ ಸ್ತಂಭಗಳು.

ಎರಡರ ನಡುವೆ ಸಂಘರ್ಷ ತರವಲ್ಲ. ಹಕ್ಕುಚ್ಯುತಿ ಸಮಿತಿಯ ಪ್ರಕರಣ ವಿಧಾನಸಭೆಯಲ್ಲಿ ನಡೆದಿದ್ದು, ಇದರ ಬಗ್ಗೆ ಹೆಚ್ಚಿನ ಪ್ರತಿಕ್ರಿಯೆ ನೀಡಲಾರೆ. ನೈಸರ್ಗಿಕ ನ್ಯಾಯದಡಿ ಅಗತ್ಯವಿರುವ ಎಲ್ಲ ಕ್ರಮಗಳನ್ನು ಸಮಿತಿ ಕೈಗೊಂಡಿರುತ್ತದೆ. ಪ್ರಕರಣ ಆದಷ್ಟು ಬೇಗ ಕಾನೂನು ಚೌಕಟ್ಟಿನಲ್ಲಿ ಪರಿಹಾರ ಕಾಣುವುದು ಅವಶ್ಯವಾಗಿದೆ ಎಂದರು.  

Advertisement

Udayavani is now on Telegram. Click here to join our channel and stay updated with the latest news.

Next