Advertisement

ತಾಲೂಕು ಕಚೇರಿಯಲ್ಲಿ ರೈತರಿಗೆ ಗೌರವ ಸಿಗ್ತಿಲ್ಲ

02:27 PM Aug 06, 2019 | Team Udayavani |

ಎನ್‌.ಆರ್‌.ಪುರ: ತಾಲೂಕು ಕಚೇರಿಯಲ್ಲಿ ರೈತರ ಯಾವುದೇ ಕೆಲಸ ಸರಿಯಾಗಿ ಆಗುತ್ತಿಲ್ಲ. ರೈತರಿಗೆ ಗೌರವವೂ ನೀಡುತ್ತಿಲ್ಲ ಎಂದು ಸೀತೂರು ಗ್ರಾಪಂಗೆ ಸೇರಿದ ವಿವಿಧ ಗ್ರಾಮಗಳ ಗ್ರಾಮಸ್ಥರು ಆರೋಪಿಸಿದರು.

Advertisement

ಸೋಮವಾರ ಸೀತೂರು ಶಾಲಾ ಆವರಣದಲ್ಲಿ ನಡೆದ ಗ್ರಾಮ ಸಭೆಯಲ್ಲಿ ಗ್ರಾಮ ಲೆಕ್ಕಿಗ ಕುಮಾರಸ್ವಾಮಿ ಕಂದಾಯ ಇಲಾಖೆಯ ಬಗ್ಗೆ ಮಾಹಿತಿ ನೀಡುತ್ತಿದ್ದಾಗ ಗ್ರಾಮಸ್ಥರು ಈ ರೀತಿ ಆರೋಪಿಸಿದರು.

ಮಲೆನಾಡಿನ ರೈತರು ಬಹಳ ಸೌಮ್ಯ ಸ್ವಭಾವದವರು. ಶುದ್ಧ ಹಸ್ತದವರು. ಆದರೆ, ತಾಲೂಕು ಕಚೇರಿಗೆ ಹೋಗಿ ಬೆಳಗ್ಗೆಯಿಂದ ಸಂಜೆ ವರೆಗೆ ಕಾದರೂ ಸರಿಯಾಗಿ ಕೆಲಸ ಆಗುತ್ತಿಲ್ಲ. ಪಹಣಿಗಾಗಿ ಸಾಲಿನಲ್ಲಿ ನಿಂತರೆ ಮಧ್ಯೆ ಬೇರೆಯವರು ಬಂದು ಪಹಣಿ ಪಡೆದುಕೊಂಡು ಹೋಗುತ್ತಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಪಂ ಸದಸ್ಯಎಚ್.ಇ.ದಿವಾಕರ ಮಾತನಾಡಿ, ನೆಮ್ಮದಿ ಕೇಂದ್ರದಲ್ಲಿ ಗಂಟೆಗಟ್ಟಲೆ ಸಾಲಿನಲ್ಲಿ ನಿಲ್ಲಬೇಕಾಗುತ್ತದೆ. ಆದ್ದರಿಂದ, ವಯಸ್ಸಾದವರ ಪರವಾಗಿ ಬೇರೆಯವರು ಬಂದರೆ ಅವರ ಹತ್ತಿರ ದಾಖಲೆ ಕೊಡುವ ವ್ಯವಸ್ಥೆ ಮಾಡಬೇಕೆಂದು ಸಲಹೆ ನೀಡಿದರು. ಮಳೆ ದಾಖಲೆ ನೀಡುವಾಗ ಬಾಳೆಹೊನ್ನೂರು ಹೋಬಳಿಯಲ್ಲಿ ಬರುವ ಮಳೆಯ ದಾಖಲೆಯನ್ನು ಸೀತೂರು ಗ್ರಾಮ ಪಂಚಾಯ್ತಿಗೆ ಸೇರಿಸಬೇಡಿ. ಇಲ್ಲಿ ಮಳೆ ಕಡಿಮೆಯಾಗುತ್ತದೆ. ಈ ಬಗ್ಗೆ ಕಂದಾಯ ಇಲಾಖೆಯವರು ಗಮನ ನೀಡಬೇಕು ಎಂದರು.

ಗ್ರಾಪಂ ಅಧ್ಯಕ್ಷ ಎನ್‌.ಪಿ.ರಮೇಶ್‌ ಮಾತನಾಡಿ, ಆದಾಯ ಸರ್ಟಿಫಿಕೇಟ್ ನೀಡುವಾಗ 32 ಸಾವಿರರು ಪಾಯಿ ಮಿತಿ ಹಾಕಲಾಗಿದೆ. ಇದರಿಂದ ತೊಂದರೆಯಾಗುತ್ತಿದೆ ಎಂದರು.

Advertisement

ಗ್ರಾಮ ಲೆಕ್ಕಿಗ ಕುಮಾರಸ್ವಾಮಿ ಮಾಹಿತಿ ನೀಡಿ, ಪ್ರಧಾನ ಮಂತ್ರಿ ಸಮ್ಮಾನ್‌ ಯೋಜನೆಯಡಿ ರೈತರು ಇನ್ನೂ ಅರ್ಜಿ ನೀಡಬಹುದಾಗಿದೆ. ಬೆಳೆ ಸಮೀಕ್ಷೆಗೆ ಬಂದಾಗ ರೈತರು ಸಹಕಾರ ನೀಡಬೇಕು. ರೈತರ ಸಮಸ್ಯೆಯನ್ನು ತಹಶೀಲ್ದಾರ್‌ ಗಮನಕ್ಕೆ ತರುತ್ತೇನೆ ಎಂದು ಭರವಸೆ ನೀಡಿದರು.

ಪೊಲೀಸ್‌ ಇಲಾಖೆಯ ರಘು ಮಾತನಾಡಿ, ಸೀತೂರು ಗ್ರಾಮದ ಅಬ್ಬಿಗುಂಡಿ ಡ್ಯಾಂಗೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದ್ದು, ಇಲ್ಲಿನ ಕೆಲವು ಗ್ರಾಮಸ್ಥರು ಪ್ರವಾಸಿಗರು ಬರದಂತೆ ಕಡಿವಾಣ ಹಾಕಬೇಕು ಎನ್ನುತ್ತಾರೆ. ಕೆಲವರು ಪ್ರವಾಸಿಗರು ಬರಲಿ ಎನ್ನುತ್ತಾರೆ. ಕಳೆದ ವರ್ಷ ಒಬ್ಬ ಪ್ರವಾಸಿಗರು ಇಲ್ಲಿ ಮೃತಪಟ್ಟಿದ್ದರು. ಈ ಬಗ್ಗೆ ಗ್ರಾಮದಜನತೆ ಒಮ್ಮತದ ತೀರ್ಮಾನಕ್ಕೆ ಬರಬೇಕು ಎಂದರು.

ಸಿದ್ಧರಗವಿ ರಸ್ತೆ ಹಾಳಾಗಿದ್ದು, ತಕ್ಷಣ ರಿಪೇರಿ ಮಾಡುವಂತೆ ತಾಲೂಕು ಪಂಚಾಯ್ತಿ ಅಧ್ಯಕ್ಷೆ ಜಯಶ್ರೀ ಮೋಹನ್‌, ಗ್ರಾಪಂ ಅಧ್ಯಕ್ಷ ಎನ್‌.ಪಿ.ರಮೇಶ್‌, ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಎನ್‌.ಪಿ.ರವಿ ಹಾಗೂ ಗ್ರಾಪಂ ಸದಸ್ಯ ಎಚ್.ಇ.ದಿವಾಕರ ಜಿಪಂ ಇಂಜಿನಿಯರ್‌ಗೆ ಆಗ್ರಹಿಸಿದರು. ಗ್ರಾಮಸಭೆಯಲ್ಲಿ ಹೆಮ್ಮೂರಿನ ಅಂಗವಿಕಲ ಮಹಿಳೆ ಎಚ್.ಎಂ.ಶ್ರೀಮತಿ ತಾಲೂಕು ಕಚೇರಿಯಲ್ಲಿ ತನಗೆ ಆದ ತೊಂದರೆ ಹೇಳಿಕೊಂಡು ಕಣ್ಣೀರಿಟ್ಟ ಘಟನೆ ನಡೆಯಿತು.

ಆರೋಗ್ಯ ಇಲಾಖೆ, ಪಶು ವೈದ್ಯ ಇಲಾಖೆ, ಕೃಷಿ ಇಲಾಖೆ, ಶಿಕ್ಷಣ ಇಲಾಖೆ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಗ್ರಾಪಂ ಪಿಡಿಒ ಸಂತೋಷ್‌ಕುಮಾರ್‌ ಸ್ವಾಗತಿಸಿದರು. ಗ್ರಾಪಂ ಕಾರ್ಯದರ್ಶಿ ನವೀನ್‌ ಕಾಮಗಾರಿಗಳ ಯೋಜನಾ ವರದಿ ವಾಚಿಸಿದರು.

ಸೀತೂರು ಗ್ರಾಪಂ ಅಧ್ಯಕ್ಷ ಎನ್‌.ಪಿ.ರಮೇಶ್‌ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ತಾಪಂ ಅಧ್ಯಕ್ಷೆ ಜಯಶ್ರೀ ಮೋಹನ್‌, ಗ್ರಾಪಂ ಉಪಾಧ್ಯಕ್ಷೆ ಸುನಂದ, ಸದಸ್ಯರಾದ ಎಸ್‌.ಕೆ.ಚಿದಂಬರ್‌, ಶಾರದಮ್ಮ, ಬಿ.ಎಸ್‌.ಸುಮಾ, ಶಶಿಕುಮಾರ್‌, ನಾಗವೇಣಿ, ಕೆ.ಎಸ್‌.ಜ್ಯೋತಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next