Advertisement

ಸುಳ್ಯ: ದಿನಸಿ ಸಾಮಗ್ರಿಗಳಿಗೆ ಮುಗಿಬಿದ್ದ ಜನರು

10:49 PM Mar 26, 2020 | Sriram |

ಸುಳ್ಯ: ಅಗತ್ಯ ವಸ್ತು ಖರೀದಿಗೆ ಕಾಲಾವಕಾಶ ನೀಡಿದ ಹಿನ್ನೆಲೆಯಲ್ಲಿ ಜನರು ಮುಗಿಬಿದ್ದ ದೃಶ್ಯ ಗುರುವಾರ ಸುಳ್ಯದಲ್ಲಿ ಕಂಡು ಬಂತು!

Advertisement

ಬೆಳಗ್ಗೆ 6ರಿಂದ ಮಧ್ಯಾಹ್ನ 12 ಗಂಟೆ ತನಕ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಿದ ಹಿನ್ನೆಲೆಯಲ್ಲಿ ಜನರು ತಂಡೋಪ-ತಂಡವಾಗಿ ಆಗಮಿಸುತ್ತಿದ್ದು, ಜನರು ಸುರಕ್ಷತೆಗೂ ಕವಡೆ ಕಾಸಿನ ಕಿಮ್ಮತ್ತು ನೀಡಿಲ್ಲ. ಹೀಗಾಗಿ ಜಿಲ್ಲಾಡಳಿತ ನೀಡಿದ ಅವಕಾಶ ಕೋವಿಡ್‌ 19 ಹರಡಿಸಲು ಕಾರಣವಾಗುವ ಆತಂಕ ಕೂಡ ಮೂಡಿದೆ.

ಬೇಕಾದ ಸಾಮಗ್ರಿ ಖರೀದಿ
ಎ. 14ರ ತನಕ ಲಾಕ್‌ಡಾನ್‌ ಹಿನ್ನೆಲೆಯಲ್ಲಿ ಜನರು ತಿಂಗಳಿಗೆ ಬೇಕಾದಷ್ಟು ಸಾಮಗ್ರಿ ಖರೀದಿಸುತ್ತಿರುವುದು ದೊಡ್ಡ ಸಮಸ್ಯೆ ತಂದೊಡ್ಡಿದೆ. ಅಗತ್ಯ ಸಾಮಗ್ರಿಗಳಿಗೆ ತೊಂದರೆ ಆಗದು ಎಂದು ತಾಲೂಕು ಆಡಳಿತ ವಿನಂತಿಸಿದರೂ ಕೇರಳದ ಜನರು ಸಾಮಗ್ರಿ ಖರೀದಿಗೆ ಮುಗಿಬೀಳುತ್ತಿದ್ದಾರೆ. ಇದರ ಪರಿಣಾಮ ಸ್ಟಾಕ್‌ ಖಾಲಿ ಆಗುತ್ತಿದ್ದು, ಅಗತ್ಯ ವಸ್ತುಗಳನ್ನು ಎಲ್ಲರಿಗೆ ತಲುಪಿಸಲು ಪರದಾಡುವ ಸ್ಥಿತಿ ಉಂಟಾಗಿದೆ ಎಂದು ಅಂಗಡಿ ಮಾಲಕರೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಮುಚ್ಚಲು ಸೂಚನೆ
ಮಧ್ಯಾಹ್ನ 12 ಗಂಟೆಯಾಗುತ್ತಿದ್ದಂತೆ ಸುಳ್ಯ ಎಸ್‌.ಐ. ಹರೀಶ್‌ ನೇತೃತ್ವದ ತಂಡ ಸೈರನ್‌ ಹಾಕಿ ಅಂಗಡಿ ಮುಚ್ಚುವಂತೆ ಸೂಚನೆ ನೀಡಿದರು. ಅದಕ್ಕೂ ಬಗ್ಗದೆ ಇರುವೆಡೆ ಲಾಠಿ ಎಚ್ಚರಿಕೆ ನೀಡಿದರು. 12 ಗಂಟೆ ತನಕ ತುಂಬಿ ತುಳುಕುತ್ತಿದ್ದ ನಗರ ಮಧ್ಯಾಹ್ನ ಅನಂತರ ಬಿಕೋ ಎನ್ನುತಿತ್ತು. ವಾಹನ, ಜನ ಸಂಚಾರ ಸಂಪೂರ್ಣ ಸ್ಥಬವಾಗಿತ್ತು.

ಅಂಗಡಿ ಮುಂದೆ ಅಂತರ ಸೂಚಿ
ನಗರ, ಗ್ರಾಮಾಂತರ ಪ್ರದೇಶದಲ್ಲಿ ಅಂಗಡಿ, ಮೆಡಿಕಲ್‌, ತರಕಾರಿ ಮಾರುಕಟ್ಟೆ ಮುಂಭಾಗ 1 ಮೀಟರ್‌ ಅಂತರ ಮಾರ್ಗಸೂಚಿ ಅಳವಡಿಸಲಾಗಿತ್ತು. ಐವರ್ನಾಡು ಪಡಿ ತರ ಅಂಗಡಿ ಮುಂಭಾಗವು ಅಂತರ ಸೂಚಿ ನಿಗದಿಪಡಿಸಿ ಸಾಮಗ್ರಿ ವಿತರಿಸ ಲಾಯಿತು. ದಿನಸಿ ಅಂಗಡಿ ಮುಂಭಾಗದಲ್ಲಿ ಜನರೇ ನೂಕು ನುಗ್ಗಲಿನಲ್ಲಿ ಸಾಮಗ್ರಿ ಪಡೆದುಕೊಳ್ಳಲು ಮುಂದಾಗುತ್ತಿದ್ದರು.

Advertisement

ಗಡಿ ರಸ್ತೆ ಬಂದ್‌
ಮಂಡೆಕೋಲು- ಕೇರಳ ರಸ್ತೆ ನಡುವೆ ಮಂಡೆಕೋಲು ಗ್ರಾ.ಪಂ. ವತಿಯಿಂದ ರಸ್ತೆಗೆ ಮಣ್ಣು ಹಾಕಿ ಸಂಚಾರ ಸಂಪೂರ್ಣ ಸ್ಥಗಿತಗೊಳಿಸಲಾಗಿದೆ. ಗ್ರಾ.ಪಂ. ಕಾರ್ಯಕ್ಕೆ ಅರಣ್ಯ ಇಲಾಖೆ ಕೂಡಾ ಸಾಥ್‌ ನೀಡಿದೆ. ಮಂಡೆಕೋಲಿನ ಕನ್ಯಾನ, ಮುರೂರಿನಲ್ಲಿ ಬ್ಯಾರಿಕೇಡ್‌ ಮೂಲಕ ಸಂಚಾರ ತಡೆಯಲಾಗಿತ್ತು. ಆದರೆ ಕೆಲ ವರು ಬ್ಯಾರಿಕೇಡ್‌ ತೆಗೆದು ನಿಯಮ ಉಲ್ಲಂಘಿಸುತ್ತಿರುವ ಕುರಿತು ಗ್ರಾ.ಪಂ.ಗೆ ದೂರು ಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಯಿತು.

ಸುಳ್ಯದಿಂದ ಆಲೆಟ್ಟಿ ಗ್ರಾಮದ ಕೋಲ್ಚಾರಿನ ಕನ್ನಡಿತೋಡು ಮೂಲಕ ಕೇರಳಕ್ಕೆ ಸಂಪರ್ಕ ಕಲ್ಪಿಸುವ ಅಂತಾರಾಜ್ಯ ರಸ್ತೆಗೆ ಕನ್ನಡಿತೋಡು ಎಂಬಲ್ಲಿ ದ.ಕ.ಜಿಲ್ಲಾಧಿಕಾರಿ ಅವರ ಆದೇಶದಂತೆ ಲೋಕೋಪಯೋಗಿ ಇಲಾಖೆಯ ವತಿಯಿಂದ ಜೇಸಿಬಿ ಮೂಲಕ ರಸ್ತೆಗೆ ಅಡ್ಡಲಾಗಿ ಮಣ್ಣು ಹಾಕಿ ಬಾರಿಕೇಡ್‌ ಅಳವಡಿಸಿ ಬಂದ್‌ ಮಾಡಲಾಗಿದೆ. ಈ ಸ್ಥಳದಲ್ಲಿ ಕರ್ನಾಟಕ, ಕೇರಳ ರಾಜ್ಯದ ತಲಾ ಇಬ್ಬರು ಪೊಲೀಸರನ್ನು, ಅರಣ್ಯ ಇಲಾಖೆಯ ಸಿಬಂದಿಗಳನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ.

ಕೇರಳದ ಪಾಣತ್ತೂರು ಕಡೆಯಿಂದ ಸುಳ್ಯಕ್ಕೆ ಸಂಪರ್ಕಿಸುವ ರಸ್ತೆಯ ಗಡಿ ಪ್ರದೇಶ ಕಲ್ಲಪಳ್ಳಿಯಲ್ಲಿ ರಸ್ತೆಗೆ ಬಾರಿಕೇಡ್‌ ಇರಿಸಿ ಬಂದ್‌ ಮಾಡಲಾಗಿದೆ. ಪರ್ಯಾಯವಾಗಿ ರಂಗತ್ತಮಲೆ ಒಳ ರಸ್ತೆಯಿಂದಾಗಿ ಬಡಡ್ಕ ಭಾಗಕ್ಕೆ ಸಂಚರಿಸುತ್ತಿರುವ ಮಾಹಿತಿ ಪಡೆದ ಅಧಿಕಾರಿಗಳು ರಂಗತ್ತಮಲೆ ರಸ್ತೆಯನ್ನು ಬಂದ್‌ ಮಾಡಲಾಯಿತು. ಸುಳ್ಯದಿಂದ ಕಲ್ಲಪಳ್ಳಿ ಮೂಲಕ ಪಾಣತ್ತೂರು ಕಡೆಗೆ ಹೋಗುವ ರಸ್ತೆಯನ್ನು ಕರ್ನಾಟಕದ ಅಧಿಕಾರಿಗಳು ಮಣ್ಣು ಹಾಕಿ ಮುಚ್ಚಿರುವುದನ್ನು ಕಲ್ಲಪಳ್ಳಿ ಗ್ರಾ.ಪಂ. ಮಾಜಿ ಸದಸ್ಯ ಅರುಣ್‌ ರಂಗತ್ತಮಲೆ ಆಕ್ಷೇಪಿಸಿದ್ದಾರೆ.

ಅಕ್ರಮ ಮದ್ಯ ಮಾರಾಟ ಆರೋಪ
ಮರ್ಕಂಜದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ಪಡಿತರ ಅವಕಾಶ
ಕನಕಮಜಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಮಾ. 27ರಿಂದ ಎ.14 ತನಕ ಸಂಘದ ಬ್ಯಾಂಕಿಂಗ್‌ ಸೇವೆಗಳನ್ನು ಹಾಗೂ ಪಡಿತರ ನ್ಯಾಯಬೆಲೆ ಅಂಗಡಿಗಳನ್ನು ಜಾಲೂÕರು, ಕನಕಮಜಲಿನಲ್ಲಿ ಬೆಳಗ್ಗೆ 10ರಿಂದ ಮಧ್ಯಾಹ್ನ 12 ಗಂಟೆ ತನಕ ನಡೆಸಲು ತೀರ್ಮಾನಿಸಲಾಗಿದೆ ಎಂದು ಆಡಳಿತ ಮಂಡಳಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next