ಶಿವರಾಜಕುಮಾರ್ ಅಭಿನಯದ “ಟಗರು’ ಚಿತ್ರದ ಚಿತ್ರೀಕರಣ ಕೊನೆಯ ಹಂತ ತಲುಪಿದೆ. ಈಗಾಗಲೇ ಶೇ. 80ರಷ್ಟು ಚಿತ್ರೀಕರಣ ಮುಗಿದಿದ್ದು, ಇನ್ನು ಹಾಡು, ಫೈಟು ಮತ್ತು ಕೆಲವು ದೃಶ್ಯಗಳ ಚಿತ್ರೀಕರಣ ಮುಗಿದರೆ, ಚಿತ್ರ ಸಂಪೂರ್ಣವಾದಂತೆ. ಈ ಮಧ್ಯೆ ಶಿವರಾಜಕುಮಾರ್ ಅವರ ಅಭಿಮಾನಿ ಸಂಘಗಳೇ ಚಿತ್ರದ ಟೀಸರ್ ಬಿಡುಗಡೆ ಮಾಡುವುದಕ್ಕೆ ಸಜ್ಜಾಗಿದೆ.
ಹೌದು, ಶಿವರಾಜಕುಮಾರ್ ಅವರ ಅಭಿಮಾನಿ ಸಂಘಗಳಾದ ಶಿವು ಅಡ್ಡ ಮತ್ತು ರಾಜ್ ಡೈನಾಸ್ಟಿ, ಮುಂದಿನ ತಿಂಗಳು ಅಂದರೆ ನವೆಂಬರ್ 7ರ ಸಂಜೆ ಟೌನ್ ಹಾಲ್‌ನಲ್ಲಿ ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮವನ್ನು ಆಯೋಜಿಸಿದೆ. ಈ ಟೀಸರ್ ಬಿಡುಗಡೆ ಸಮಾರಂಭದಲ್ಲಿ ಶಿವರಾಜಕುಮಾರ್, ಪುಣಿತ್ ರಾಜಕುಮಾರ್, ನಿರ್ದೇಶಕ ಸೂರಿ ಸೇರಿದಂತೆ ಹಲವರು ಭಾಗವಹಿಸಿಲಿದ್ದಾರೆ.
ಅಂದು ಟೀಸರ್ ಬಿಡುಗಡೆಯ ಜೊತೆಗೆ, ಶಿವರಾಜಕುಮಾರ್ ಮತ್ತು ಪುನೀತ್ ರಾಜಕುಮಾರ್ ಅವರ ಹಾಡುಗಳಿಗೆ ನೃತ್ಯ ಕಾರ್ಯಕ್ರಮ ಸಹ ಏರ್ಪಡಿಸಲಾಗಿದೆ. ಇನ್ನು “ಟಗರು’ ಚಿತ್ರವನ್ನು ಡಿಸೆಂಬರ್‌ನಲ್ಲಿ ಬಿಡುಗಡೆ ಮಾಡುವುದಕ್ಕೆ ನಿರ್ಮಾಪಕ ಶ್ರೀಕಾಂತ್ ಸಿದ್ಧತೆ ನಡೆಸಿದ್ದಾರೆ. ಅದಕ್ಕೂ ಮುನ್ನ ಚರಣ್‌ರಾಜ್ ಸಂಯೋಜಿಸಿರುವ ಹಾಡುಗಳು ನವೆಂಬರ್ ತಿಂಗಳಲ್ಲಿ ಬಿಡುಗಡೆಯಾಗಲಿದೆ.
ಚಿತ್ರದುರ್ಗ ಅಥವಾ ಹೊಸಪೇಟೆಯಲ್ಲಿ ಚಿತ್ರದ ಹಾಡುಗಳನ್ನು ಬಿಡುಗಡೆಯಾಗುವ ಸಾಧ್ಯತೆ ಇದೆ. “ಟಗರು’ ಚಿತ್ರವನ್ನು “ದುನಿಯಾ’ ಸೂರಿ ನಿರ್ದೇಶಿಸಿದ್ದಾರೆ. ಚಿತ್ರಕ್ಕೆ ಕಥೆ ಮತ್ತು ಚಿತ್ರಕಥೆ ಅವರದ್ದೇ. ಮಹೇಂದ್ರ ಸಿಂಹ ಛಾಯಾಗ್ರಹಣ ಮಾಡಿದರೆ, “ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಖ್ಯಾತಿಯ ಚರಣ್‌ರಾಜ್ ಸಂಗೀತ ಸಂಯೋಜಿಸಿದ್ದಾರಡೆ.
ಇನ್ನು ಚಿತ್ರದಲ್ಲಿ ಶಿವರಾಜಕುಮಾರ್ ಅವರ ಜೊತೆಗೆ ಮಾನ್ವಿತಾ, ಭಾವನಾ ಮೆನನ್, ದೇವರಾಜ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ವಿಲನ್ ಆಗಿ ಧನಂಜಯ್ ಮತ್ತು ವಸಿಷ್ಠ ಸಿಂಹಾ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಬೆಂಗಳೂರು, ತುಮಕೂರು, ಉಡುಪಿ, ಗೋವಾ ಮುಂತಾದ ಕಡೆ ಚಿತ್ರೀಕರಣ ನಡೆದಿದೆ.