ಬೆಂಗಳೂರು: ಸ್ವಿಮ್ಮಿಂಗ್ ಫುಲ್‌ನ ಡ್ರೆಸಿಂಗ್ ರೂಮ್‌ನ ಲಾಕರ್‌ನಲ್ಲಿಟ್ಟಿದ್ದ ಚಿನ್ನಾಭರಣ ದೋಚಿದ್ದ ಸ್ವಿಮ್ಮಿಂಗ್ ಕೋಚ್ ಹಾಗೂ ಕಳವು ಮಾಲು ಸ್ವೀಕರಿಸಿದ ಆರೋಪಿಯನ್ನು ತಲಘಟ್ಟಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ತಲಘಟ್ಟಪುರ ನಿವಾಸಿ, ಸ್ವಿಮ್ಮಿಂಗ್ ಕೋಚ್ ಮಮತಾ (35) ಮತ್ತು ಕಳವು ಮಾಲು ಸ್ವೀಕರಿಸಿದ ಸ್ವಾಮಿ(ಸ45) ಬಂಧಿತರು. ಆರೋಪಿಗಳಿಂದ 3 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಾಗಿದೆ.
ಆರೋಪಿಗಳು ಕೆಂಬತ್ತಹಳ್ಳಿಯಲ್ಲಿರುವ ಸ್ವಿಮ್ ಸ್ಕ್ವೇರ್ ಎಂಬ ಸ್ವಿಮ್ಮಿಂಗ್‌ಪುಲ್‌ನಲ್ಲಿ ಘಟನೆ ನಡೆದಿದೆ ಎಂದು ಪೊಲೀಸರು ಹೇಳಿದರು.
ಸ್ವಿಮ್ಮಿಂಗ್ ಫುಲ್‌ಗೆ ಬಂದಿದ್ದ ದೂರುದಾರ ಮಹಿಳೆ, ಡ್ರೆಸಿಂಗ್ ರೂಮ್‌ನಲ್ಲಿ ಬಟ್ಟೆ ಹಾಗೂ ಚಿನ್ನಾಭರಣ ಕಳಚಿ ಲಾಕರ್‌ನಲ್ಲಿ ಇಟ್ಟು, ಸ್ವಿಮ್ಮಿಂಗ್ ಮಾಡಲು ಹೋಗಿದ್ದಾರೆ. ಅದನ್ನು ಗಮನಿಸಿದ್ದ ಮಮತಾ ಚಿನ್ನಾಭರಣ ಕಳವು ಮಾಡಿ, ಪತಿಯ ಸ್ನೇಹಿತ ಸ್ವಾಮಿಗೆ ಕೊಟ್ಟು ವಿಲೇವಾರಿಗೆ ಸೂಚಿಸಿದ್ದಳು. ಮತ್ತೂಂದೆಡೆ ದೂರುದಾರ ಮಹಿಳೆ ಸ್ವಿಮ್ಮಿಂಗ್ ಮುಗಿಸಿಕೊಂಡು ಡ್ರೆಸಿಂಗ್ ರೂಮ್‌ಗೆ ಬಂದು ಲಾಕರ್ ತೆರೆದಾಗ ಚಿನ್ನಾಭರಣ ಕಳವು ಆಗಿರುವುದು ಗೊತ್ತಾಗಿದೆ. ಈ ಸಂಬಂಧ ಮಹಿಳೆ ದೂರು ನೀಡಿದ್ದರು. ಬಳಿಕ ಸ್ವಿಮ್ಮಿಂಗ್ ಫುಲ್‌ಗೆ ಬಂದಿದ್ದ ಸಾರ್ವಜನಿಕರು ಹಾಗೂ ಸಿಬ್ಬಂದಿಯನ್ನು ವಿಚಾರಣೆ ನಡೆಸಲಾಗಿತ್ತು. ಇದೇ ವೇಳೆ ಮಮತಾಳನ್ನು ತೀವ್ರ ರೀತಿಯಲ್ಲಿ ವಿಚಾರಣೆ ನಡೆಸಿದಾಗ ಕಳವು ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾಳೆ. ಅಲ್ಲದೆ, ಕಳವು ವಸ್ತುವನ್ನು ಪತಿಯ ಸ್ನೇಹಿತ ಸ್ವಾಮಿಗೆ ನೀಡಿದ್ದಾಗಿ ಹೇಳಿಕೆ ನೀಡಿದ್ದಳು. ಈ ಹಿನ್ನೆಲೆಯಲ್ಲಿ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.