Advertisement
ನೀವು ನೋಡಿರಬಹುದು, ಮೊದಲಮಳೆ ಬೀಸುವುದು ಸಂಜೆಯ ಮೇಲೆಯೇ. ಅಲ್ಲಲ್ಲಿ ಬಿಸಿಗಾಳಿಯ ಸುಳಿ ಸುಳಿದು, ತಂಪನೆಯ ಗಾಳಿ ಅಗಂತುಕನಂತೆ ಬಂದು ಧೂಳೆಬ್ಬಿಸಿದಾಗ ಮಳೆಬರುವ ಗುಮಾನಿ ಏರ್ಪಡುವುದು. ಮೊದಲ ಹನಿ ಬಿದ್ದಾಗಲೇ ಸಂಶಯ ನಿವಾರಿಸಿ ಸ್ಪಷ್ಟವಾಗುವುದು.
Related Articles
Advertisement
ಗಂಧವತೀ ಪೃಥ್ವೀ ಅಂದದ್ದು ಅದಕ್ಕೇ. ಅದರೊಡನೆ ಗಾಳಿ-ಮಳೆಗೆ ಭೂಮಿಯನ್ನು ಅಪ್ಪುವ ಬಗೆ-ಬಗೆಯ ಹೂವುಗಳು ಗಂಧವನ್ನು ಹೆಚ್ಚಿಸುತ್ತವೆ. ಈ ಮಾಸಕ್ಕೆ ಬಿರಿಯುವ ಕೆಂಪು ಹಳದಿ ಹೂಗಳು ನೆಲವನ್ನು ಅಲಂಕರಿಸಿ ಶೋಭಿಸುತ್ತವೆ. ಸಂಜೆಯ ಬೀದಿ ದೀಪಗಳ ಬೆಳಕನ್ನು ಮಳೆಯ ಹನಿಗಳು ಚದುರಿಸಿ ಹನಿಗಳು ಮಿನುಗುವುದನ್ನು ನೋಡುವುದೇ ಅಂದ. ಮಾರ್ಚ್ ಕೊನೆಗೆ ಏಪ್ರಿಲ್ ಆರಂಭಕ್ಕೆ ಶುರುವಾಗುವುದು ಪರಿಸರಣ ಮಳೆ.
ಸಂವಹನೀಯ ಮಳೆಯೆಂದು ಇನ್ನೊಂದು ಹೆಸರು. ವಾತಾವರಣ ಕುದಿದು, ರೇಜಿಗೆಯಾಗುವಷ್ಟು ಬೆವರಿ, ಸಂಜೆಗೆ ತಂಪ ತರುವ ಮಳೆ ಇದು. ಗಾಳಿ ಮತ್ತು ಮಳೆಗೆ ಆಸ್ತಿ-ಪ್ರಾಣ ಹಾನಿಗಳಾಗುವುದೂ ಇದೆ. ಮರಗಳ ಕೊಂಬೆ ಮುರಿದು ಬೀಳುವುದು, ನೀರ್ಗೊಳವೆಗಳು ತುಂಬಿ ಹರಿದು ಕಸವೆಲ್ಲಾ ರಸ್ತೆಗೆ ಪಸರಿಸುವುದು, ಹೂಗಳು ಪಾದಚಾರಿ ಪಥಕ್ಕೆಲ್ಲಾ ಹರಡಿ ಜಾರುವ ಸನ್ನಿವೇಶಗಳೆಲ್ಲವೂ ಮೊದಲ ಮಳೆಗೆ ದಾಖಲಾಗುವ ಸಂಗತಿಗಳು.
ನಗರವೊಂದು ಮಳೆಗಾಲಕ್ಕೆ ಹೇಗೆ ಸಜ್ಜುಗೊಳ್ಳಬೇಕೆಂಬ ದೀರ್ಘಾವಲೋಕನಗಳು ನಡೆಯುವುದೇ ಮೊದಲಮಳೆಯ ಹೊತ್ತಿಗೆ. ಹೋಳಿಹುಣ್ಣಿಮೆಯ ಅನಂತರ ವಸಂತಾಗಮನ ಶುರು. ಮಾವಿನ ಮಳೆ, ಚೈತ್ರದಮಳೆ, ಬೈಸಾಖೀ ಮಳೆ ತದನಂತರ ಆರಂಭವೇ. ಬಾರಿಯ ಹನಿಗಳು ಸೇಚನವಾದರೆ ಸೆಖೆ ದೀರ್ಘವಾಗುವ ನಂಬಿಕೆ. ಎಷ್ಟಾದರೂ ಸೆಖೆಗಾಲವಲ್ಲವೇ.
ಶಿಶಿರದ ಕೊನೆಗೆ ವರ್ಷದ ಹೊಸ ಮಳೆಯ ಆಗಮನ ರಾಜ್ಯಾದ್ಯಂತ ಆಗಿದೆ. ಸಂವತ್ಸರದ ಕೊನೆಯ ಮಳೆಯಿದು. ಆಯಾ ವರುಷದ ಜೂನ್ ಒಂದರಿಂದ ಗಣನೆಗೆ ಬರುವ ಜಲಶಾಸ್ತ್ರದ ಪ್ರಕಾರವೂ ಈ ಹೊಸ ಮಳೆ ಹಳತೇ. ಹೊಸಮಳೆಯ ಬೀಸಗೆ ಕೆರೆಕಟ್ಟೆ ತುಂಬದಿದ್ದರೂ, ಸೆಖೆ ದ್ವಿಗುಣವಾದರೂ, ವಿದ್ಯುತ್ ಸ್ಥಗಿತವಾದರೂ ಮೊದಲ ಮಳೆಯ ಅನುಭೂತಿ ವಿಶಿಷ್ಟ. ಮಳೆ ಚಂಚಲವಾಗಿಯಾದರೂ ಬರುತ್ತಿರಲಿ. ಏಕೆಂದರೆ ಮಳೆಯೆಂಬುದು ಸದಾ ಚಿಗುರೊಡೆಯುವ ಆಶಾಭಾವನೆ.
ವಿಶ್ವನಾಥ ಭಟ್
ಧಾರವಾಡ