Advertisement

ಕಡಲ ತೀರದಲ್ಲಿ ಸಸ್ಪೆನ್ಸ್‌ ಅಲೆ

05:41 AM Mar 17, 2019 | |

ಒಂದು ಸಿನಿಮಾಗೆ ಮುಖ್ಯವಾಗಿ ಬೇಕಿರುವುದೇ ಕಥೆ. ಆ ಗಟ್ಟಿ ಕಥೆಗೊಂದು ಬಿಗಿ ಹಿಡಿತದ ಚಿತ್ರಕಥೆ ಕೂಡ ಅಷ್ಟೇ ಮುಖ್ಯ. ಅದರಲ್ಲೂ ಎಲ್ಲವನ್ನೂ ಬ್ಯಾಲೆನ್ಸ್‌ ಮಾಡುವಂತಹ ನಿರೂಪಣೆ ನಿರ್ದೇಶಕರಿಗೆ ಸಿದ್ಧಿಸಿದ್ದರೆ ಮಾತ್ರ ಪ್ರೇಕ್ಷಕರನ್ನು ತಾಳ್ಮೆಯಿಂದ ಕೂರಿಸಲು ಸಾಧ್ಯ. ಅದೆಷ್ಟೋ ಚಿತ್ರಗಳಲ್ಲಿ ಇದು ಸಾಧ್ಯವೂ ಇದೆ, ಅಸಾಧ್ಯವೂ ಇದೆ. “ಅರಬ್ಬೀ ಕಡಲ ತೀರದಲ್ಲಿ’ ಚಿತ್ರದಲ್ಲೂ ಸಣ್ಣ ಪ್ರಮಾಣದ “ತಾಕತ್ತು’ ಇದೆ.

Advertisement

ಹಾಗಾಗಿ, “ಕಡಲ’ ಕೊರೆತ ಅಲ್ಲಲ್ಲಿ ಹೆಚ್ಚಾಗಿದ್ದರೂ, ಅದನ್ನು ಸಹಿಸಿಕೊಂಡು ಕೊಂಚ ಧೈರ್ಯದಿಂದ ತಾಳ್ಮೆಗೆಡದೆ ನೋಡಿದರೆ, ಕ್ಲೈಮ್ಯಾಕ್ಸ್‌ ಹೊತ್ತಿಗೆ ಕಥೆಯಲ್ಲಿ ಹಿಡಿಯಷ್ಟು ಇರುವ ತಾಕತ್ತು ಅರ್ಥವಾಗುತ್ತೆ. ಇದೊಂದು ಸಸ್ಪೆನ್ಸ್‌ ಕಥಾನಕ ಹೊಂದಿರುವ ಚಿತ್ರ. ಇಲ್ಲೊಂದಷ್ಟು ಗೊಂದಲಗಳಿವೆ. ಹಾಗಂತ ಆ ಗೊಂದಲ ಹೆಚ್ಚು ಹೊತ್ತು ಉಳಿಯುವುದೂ ಇಲ್ಲ. ಎಲ್ಲವನ್ನೂ ಅಲ್ಲಲ್ಲೇ ಸ್ಪಷ್ಟಪಡಿಸುತ್ತಾ ಹೋಗುವ ನಿರ್ದೇಶಕರು, ಕಂಟಿನ್ಯುಟಿ ಬಗ್ಗೆ ಹೆಚ್ಚು ಗಮನಹರಿಸಿಲ್ಲ ಎಂಬುದಕ್ಕೆ ಸಾಕಷ್ಟು ದೃಶ್ಯಗಳಲ್ಲಿನ ಎಡವಟ್ಟುಗಳು ಸಾಕ್ಷಿಯಾಗುತ್ತವೆ.

 ಮೊದಲೇ ಹೇಳಿದಂತೆ ಇದು ಸಸ್ಪೆನ್ಸ್‌ ಕಥೆ ಆಗಿರುವುದರಿಂದ ಸಾಕಷ್ಟು ಸೂಕ್ಷ್ಮಅಂಶಗಳಿಗೆ ಇಲ್ಲಿ ಜಾಗ ಕಲ್ಪಿಸಲಾಗಿದೆ. ಆರಂಭದಲ್ಲಿ ಕಥೆ ನಿಧಾನವೆನಿಸಿದರೂ, ದ್ವಿತಿಯಾರ್ಧದಲ್ಲಿ ಅದರ ವೇಗ ದುಪ್ಪಟ್ಟಾಗುತ್ತದೆ. ಅದಕ್ಕೆ ಕಾರಣ, ತೆರೆಯ ಮೇಲೆ ಒಂದರ ಮೇಲೊಂದು ಕಾಣಸಿಗುವ ತಿರುವುಗಳು. ನೋಡುಗರು ಅದು ಹೀಗೆ ಆಗುತ್ತೆ ಅಂದುಕೊಳ್ಳುವ ಹೊತ್ತಿಗೆ, ಅಲ್ಲಿ ಬೇರೇನೋ ಆಗಿರುತ್ತೆ. ಕಡಲ ತೀರದ ಕಥೆಯಲ್ಲಿ ಚಿಟಿಕೆಯಷ್ಟು ಸಸ್ಪೆನ್ಸ್‌ ತೀವ್ರತೆ ನೋಡುಗರಿಗೊಂದು ಹೊಸ ಅನುಭವ ಕಟ್ಟಿಕೊಡುತ್ತದೆ.

ಹಾಗಂತ ಇಡೀ ಚಿತ್ರ ಅಂಥದ್ದೊಂದು ಅನುಭವಕ್ಕೆ ಕಾರಣವಾಗುವುದಿಲ್ಲ. ಇಲ್ಲಿ ಬೆಚ್ಚಿಬೀಳಿಸುವ ಅಂಶಗಳಿಲ್ಲ. ಆದರೆ, ಸಾಕಷ್ಟು ಪ್ರಶ್ನೆಗಳಿಗೆ ಜಾಗ ಮಾಡಿಕೊಡುವಂತಹ ಸನ್ನಿವೇಶಗಳಿವೆ. ನಿರ್ದೇಶಕರು ಹೆಚ್ಚು ಪರೀಕ್ಷಿಸದೆ, ಎಲ್ಲವನ್ನೂ ಅಲ್ಲಲ್ಲೇ ಸ್ಪಷ್ಟಪಡಿಸುವ ಮೂಲಕ ಹೊಸದೇನನ್ನೋ ಹೇಳುವ ಪ್ರಯತ್ನ ಮಾಡಿರುವುದು ಸಮಾಧಾನದ ವಿಷಯ. ಇಲ್ಲಿ ಯಾವುದೇ ಕಮರ್ಷಿಯಲ್‌ ಅಂಶಗಳನ್ನು ನಿರೀಕ್ಷಿಸುವಂತಿಲ್ಲ.

ಹಾಗೆಯೇ ಇಲ್ಲಿ ಹೊಡಿ ಬಡಿ ಕಡಿ ಎಂಬ ಸದ್ದೂ ಇಲ್ಲ. ಬೆರಳೆಣಿಕೆಯ ಪಾತ್ರಗಳನ್ನಿಟ್ಟುಕೊಂಡು ಆಸೆ, ದುರಾಸೆ, ಪ್ರೀತಿ, ಅನುಮಾನ ಇತ್ಯಾದಿ ಅಂಶಗಳೊಂದಿಗೆ ಕಡಲ ತೀರದ ಸಸ್ಪೆನ್ಸ್‌ ಕಥೆ ಹೇಳಲಾಗಿದೆ. ಆ ಸಸ್ಪೆನ್ಸ್‌ ಬಗ್ಗೆ ಕುತೂಹಲವಿದ್ದರೆ ಕಡಲ ತೀರದಲ್ಲೊಮ್ಮೆ ಕೂತು ಬರಬಹುದು. ಕಥೆ ಬಗ್ಗೆ ಹೇಳುವುದಾದರೆ, ವಂಶಿ ಕೃಷ್ಣ ಮನೋಹರ್‌ ಎಂಬಾತ ಒಬ್ಬ ಮಾಡೆಲ್‌ ಫೋಟೋಗ್ರಾಫ‌ರ್‌. ಹಲವು ಪ್ರಶಸ್ತಿ ಪಡೆದಾತ.

Advertisement

ಅವನಲ್ಲೊಂದು ಸಮಸ್ಯೆ ಸದಾ ಕಾಡುತ್ತಿರುತ್ತೆ. ನಾನು ಎಲ್ಲೋ ಕಳೆದು ಹೋಗುತ್ತೇನೆ, ಇನ್ನೆಲ್ಲೋ ಅನುಮಾನಗಳನ್ನು ಹುಟ್ಟಿಸಿಕೊಳ್ಳುತ್ತೇನೆ, ಮತ್ತೆಲ್ಲೋ ವಾಸ್ತವಕ್ಕೆ ಬರುತ್ತೇನೆ ಎಂಬ ಪ್ರಶ್ನೆಗಳಲ್ಲೇ ಬದುಕುತ್ತಿರುತ್ತಾನೆ. ಚಿಕ್ಕಂದಿನಲ್ಲೇ ಕುಟುಂಬದವರೆಲ್ಲರೂ ಅಗಲಿದ್ದರಿಂದ ಅವನು ಕುಂದಾಪುರ ಬಳಿ ಇರುವ ದೊಡ್ಡ ಮನೆ ಬಿಟ್ಟು, ಬೆಂಗಳೂರು ಸೇರಿರುತ್ತಾನೆ. ಫೋಟೋಗ್ರಾಫ್ನಲ್ಲಿ ಅವನ ಸಾಧನೆ ಬಗ್ಗೆ ಸಂದರ್ಶನ ಮಾಡಲೆಂದು ಒಬ್ಟಾಕೆ ಬರುತ್ತಾಳೆ.

ಅವಳ ಮೇಲೆ ಅವನಿಗೆ ಮನಸ್ಸಾಗಿ, ಮದುವೆ ಹಂತಕ್ಕೂ ಹೋಗುತ್ತೆ. ನಂತರ ತನ್ನೂರಿಗೆ ಹೋಗುವ ಆ ದಂಪತಿಗೆ ಅಲ್ಲೊಂದು ಅಚ್ಚರಿ. ಅವರಿಗಷ್ಟೇ ಅಲ್ಲ, ನೋಡುಗರಿಗೂ ಅದು ಅಚ್ಚರಿಯೇ? ಆಮೇಲೆ ಏನೆಲ್ಲಾ ಆಗುತ್ತೆ ಎಂಬುದನ್ನು ತಿಳಿಯುವ ಆಸಕ್ತಿ ಇದ್ದರೆ ಚಿತ್ರ ನೋಡಬಹುದು. ಕೃಷ್ಣೇಗೌಡ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅದೇ ಚಿತ್ರದ ಹೈಲೈಟ್‌. ಮೃದು ಸ್ವಭಾವದ ಫೋಟೋಗ್ರಾಫ‌ರ್‌ ಆಗಿ, ಪಕ್ಕಾ ಪೊರ್ಕಿಯಾಗಿಯೂ ತಮ್ಮ ಪಾತ್ರವನ್ನು ತೂಗಿಸಿಕೊಂಡು ಹೋಗಿದ್ದಾರೆ.

ಡೈಲಾಗ್‌ ಡಿಲವರಿ ಜೊತೆಗೆ ಕೊಂಚ ಬಾಡಿಲಾಂಗ್ವೇಜ್‌ ಕಡೆಯೂ ಗಮನಹರಿಸಿದ್ದರೆ ಚೆನ್ನಾಗಿರುತ್ತಿತ್ತು. ಎರಡು ಶೇಡ್‌ನ‌ಲ್ಲಿ ಕಾಣಿಸಿಕೊಂಡಿರುವ ವೈಷ್ಣವಿ ಇಲ್ಲಿ ಗಮನಸೆಳೆಯುತ್ತಾರೆ. ಮುಖ್ಯವಾಗಿ ಚಿತ್ರಕ್ಕೆ ತಿರುವು ಕೊಡುವ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸುಂದರ್‌ ಇಲ್ಲಿ ಇಷ್ಟವಾಗುತ್ತಾರೆ. ಉಳಿದಂತೆ ಬರುವ ಪಾತ್ರಗಳು ಪೂರಕವಾಗಿವೆ. ಎ.ಟಿ.ರವೀಶ್‌ ಸಂಗೀತದಲ್ಲಿ ಹೇಳಿಕೊಳ್ಳುವಂತಹ ಸ್ವಾದವಿಲ್ಲ. ಎಂ.ಆರ್‌.ಸೀನು ಅವರ ಛಾಯಾಗ್ರಹಣ ಕಡಲ ತೀರದ ಅಂದವನ್ನು ಹೆಚ್ಚಿಸಿದೆ.

ಚಿತ್ರ: ಅರಬ್ಬೀ ಕಡಲ ತೀರದಲ್ಲಿ
ನಿರ್ಮಾಣ: ಕೃಷ್ಣೇಗೌಡ
ನಿರ್ದೇಶನ: ವಿ. ಉಮಾಕಾಂತ್‌
ತಾರಾಗಣ: ಕೃಷ್ಣೇಗೌಡ, ವೈಷ್ಣವಿ, ಸುಂದರ್‌, ರಮೇಶ್‌ಭಟ್‌, ಬಿರಾದಾರ್‌ ಇತರರು

* ವಿಭ

Advertisement

Udayavani is now on Telegram. Click here to join our channel and stay updated with the latest news.

Next