ಕಾಪು: ಕನ್ನಡ ಮಾಧ್ಯಮ ಶಾಲೆಗಳಲ್ಲಿ ಪಠ್ಯದೊಂದಿಗೆ ಬದುಕಿನ ಶಿಕ್ಷಣವನ್ನು ಕಲಿಸಲಾಗುತ್ತದೆ. ಇಂದು ಸಾಧನೆಯ ತುತ್ತ ತುದಿಯಲ್ಲಿ ಇರುವವರೆಲ್ಲರೂ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಕಲಿತವರೇ ಆಗಿದ್ದಾರೆ. ಈ ನಿಟ್ಟಿನಲ್ಲಿ ಶತಮಾನಗಳನ್ನು ಪೂರೈಸಿರುವ ಶಾಲೆಗಳು ಮುಚ್ಚಿ ಹೋಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಹೊಣೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ಕಾಪು – ಪೊಲಿಪು ಸರಕಾರಿ ವಿದ್ಯಾ ಸಂಸ್ಥೆಗಳ ಶತ, ವಜ್ರ, ಸ್ವರ್ಣ ಸಂಭ್ರಮ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಶುಕ್ರವಾರ ಅವರು ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಶಾಸಕ / ಶತ, ವಜ್ರ, ಸ್ವರ್ಣ ಸಂಭ್ರಮ ಸಮಿತಿ ಗೌರವಾಧ್ಯಕ್ಷ ಲಾಲಾಜಿ ಆರ್. ಮೆಂಡನ್ ಮಾತನಾಡಿ, ಎಲ್ಲರ ಪಾಲ್ಗೊಳ್ಳುವಿಕೆ ಮತ್ತು ಸಹಕಾರದೊಂದಿಗೆ ಪೊಲಿಪು ವಿದ್ಯಾ ಸಂಸ್ಥೆಗಳನ್ನು ಇನ್ನಷ್ಟು ಅಭಿವೃದ್ಧಿ ಪಡಿಸಲು ಯೋಜನೆ ರೂಪಿಸಲಾಗುವುದು ಎಂದು ತಿಳಿಸಿದರು. ಮಾಜಿ ಸಚಿವರಾದ ವಿನಯಕುಮಾರ್ ಸೊರಕೆ ಮತ್ತು ಪ್ರಮೋದ್ ಮಧ್ವರಾಜ್ ಮಾತನಾಡಿದರು.
ಜಿ.ಪಂ. ಅಧ್ಯಕ್ಷ ದಿನಕರ ಬಾಬು, ತಾ.ಪಂ. ಅಧ್ಯಕ್ಷೆ ನೀತಾ ಗುರುರಾಜ್, ಜಿ.ಪಂ. ಸದಸ್ಯರಾದ ಗೀತಾಂಜಲಿ ಸುವರ್ಣ, ಶಿಲ್ಪಾ ಜಿ. ಸುವರ್ಣ, ದ.ಕ. ಮತ್ತು ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್‌ಪಾಲ್ ಸುವರ್ಣ, ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಡಾ| ದೇವಿಪ್ರಸಾದ್ ಶೆಟ್ಟಿ, ಕಾಪು ಬಿಲ್ಲವರ ಸಂಘದ ಗೌರವಾಧ್ಯಕ್ಷ ಪ್ರಭಾಕರ ಪೂಜಾರಿ, ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ್ ನಾವಡ, ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಮುಖ್ಯ ಅತಿಥಿಗಳಾಗಿದ್ದರು.
ಶತ, ವಜ್ರ, ಸ್ವರ್ಣ ಸಂಭ್ರಮ ಸಮಿತಿಯ ಕಾರ್ಯಾಧ್ಯಕ್ಷ ಸರ್ವೋತ್ತಮ ಕುಂದರ್, ಮುಂಬಯಿ ಸಮಿತಿಯ ಅಧ್ಯಕ್ಷ ಸುರೇಂದ್ರ ಎನ್. ಸುವರ್ಣ, ಪೊಲಿಪು ಮೊಗವೀರ ಮಹಾಸಭಾದ ಅಧ್ಯಕ್ಷ ಪ್ರವೀಣ್ ಡಿ. ಕುಂದರ್, ಮುಂಬಯಿ ಸಭಾದ ಅಧ್ಯಕ್ಷ ದೇಜಪ್ಪ ಕಾಂಚನ್, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಉದಯ ಶಂಕರ್, ಪೊಲಿಪು ಮಹಿಳಾ ಮಂಡಳಿ ಅಧ್ಯಕ್ಷೆ ಇಂದಿರಾ ಕಾಂಚನ್, ಮೊಗವೀರ ಮಹಿಳಾ ಸಭಾ ಅಧ್ಯಕ್ಷೆ ಹರಿಣಾಕ್ಷಿ ಕುಂದರ್, ಪ್ರಮುಖರಾದ ಜಗದೀಶ್ ಬಂಗೇರ, ಯಶೋಧಾ ಎಸ್. ಕುಂದರ್, ತಿಲೋತ್ತಮಾ ಸಾಲ್ಯಾನ್, ಪ್ರಾಂಶುಪಾಲ ಪಂಢರೀನಾಥ ಎಸ್., ಪ್ರೌಢ, ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿಯರಾದ ರಮಣಿ ವೈ., ಎಚ್.ಎಸ್. ಅನಸೂಯ ಉಪಸ್ಥಿತರಿದ್ದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ಕಿರಣ್ ಆಳ್ವ ಸ್ವಾಗತಿಸಿದರು. ಸಂಚಾಲಕ ಸಂದೀಪ್ ಕುಮಾರ್ ವಂದಿಸಿದರು. ಶಿಕ್ಷಕ ಕೆ.ಕೆ. ಪೇಜಾವರ್ ನಿರೂಪಿಸಿದರು.
ಅಪೂರ್ವ ಸಾಧನೆ: ನಳಿನ್
100 ವರ್ಷ ಪೂರೈಸಿರುವ ಶಾಲೆಯ ಆವರಣದಲ್ಲೇ ಪ್ರೌಢ ಮತ್ತು ಪದವಿ ಪೂರ್ವ ಕಾಲೇಜು ಕೂಡ ಸಂಯೋಜಿತಗೊಂಡಿದ್ದು, ಏಕ ಕಾಲದಲ್ಲಿ ಮೂರು ಶಿಕ್ಷಣ ಸಂಸ್ಥೆಗಳು ಶತ, ವಜ್ರ, ಸ್ವರ್ಣ ಸಂಭ್ರಮವನ್ನು ಆಚರಿಸುತ್ತಿರುವುದು ರಾಜ್ಯದಲ್ಲೇ ಅತೀ ವಿಶಿಷ್ಟವಾದ ಸಾಧನೆಯಾಗಿದೆ.
- ನಳಿನ್ ಕುಮಾರ್ ಕಟೀಲು, ಸಂಸದರು ಮತ್ತು ಬಿಜೆಪಿ ರಾಜ್ಯಾಧ್ಯಕ್ಷರು