ಹುಬ್ಬಳ್ಳಿ: ಸಿಬಿಐ ವಿಶೇಷ ನ್ಯಾಯಾಲಯವು ರಾಜ್ಯದ ಅಸೋಸಿಯೇಟೆಡ್ ಮೈನಿಂಗ್ ಕಂಪನಿ (ಎಎಂಸಿ)ಹಾಗೂ ಡೆಕ್ಕನ್ ಮೈನಿಂಗ್ ಸಿಂಡಿಕೇಟ್ ಕಂಪನಿಗಳ (ಡಿಎಂಎಸ್‌ಸಿ) ವಿರುದ್ಧ ಸೂಕ್ತ ತನಿಖೆ ನಡೆಸಿ ಉಚ್ಚ ನ್ಯಾಯಾಲಯಕ್ಕೆ ವರದಿ ಸಲ್ಲಿಸದೆ ಸುಪ್ರೀಂಕೋರ್ಟ್‌ನ ಆದೇಶ ಉಲ್ಲಂಘಿಸಿದೆ ಎಂದು ಸಮಾಜ ಪರಿವರ್ತನ ಸಮುದಾಯ ಸಂಸ್ಥೆ ಸಂಸ್ಥಾಪಕ ಎಸ್.ಆರ್. ಹಿರೇಮಠ ಆರೋಪಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಸಿಬಿಐ ವಿಶೇಷ ಕೋರ್ಟ್ ಉಲ್ಲಂ ಸಿರುವ ಕುರಿತು ಸುಪ್ರೀಂ ಕೋರ್ಟ್ ಜು.20ರಂದು ವಿಚಾರಣೆ ನಡೆಸಲಿದೆ ಎಂದರು. ವರ್ಷಕ್ಕೆ 30 ಮಿಲಿಯನ್ ಮೆಟ್ರಿಕ್ ಟನ್ ಮೀರದಂತೆ ಅದಿರು ತೆಗೆಯಬೇಕೆಂಬ ಸುಪ್ರೀಂ ಕೋರ್ಟ್‌ನ ಆದೇಶವನ್ನು ರಾಜ್ಯ ಹಾಗೂ ಕೇಂದ್ರ ಸರಕಾರದ ಗಣಿ ಸಚಿವಾಲಯ ಉಲ್ಲಂಘಿಸುತ್ತಿವೆ.
ಅಲ್ಲದೆ ಕರ್ನಾಟಕದ ಗಣಿ ಇಲಾಖೆಯು 40 ಮಿಲಿಯನ್ ಮೆಟ್ರಿಕ್ ಟನ್ ಅದಿರು ತೆಗೆಯಲು ಕೇಂದ್ರದ ಅನುಮತಿ ಕೋರಿದೆ ಎಂದರು. ತಮ್ಮ ಪ್ರದೇಶದಲ್ಲಿ ಪುನರ್ವಸತಿ ಮತ್ತು ಪುನಶ್ಚೇತನ ಕಾರ್ಯದ ಅನುಷ್ಠಾನ ಕಡ್ಡಾಯ ಮಾಡಿದ್ದರೂ ಅದನ್ನು ಅನುಲಕ್ಷಿಸಿ ಬಳ್ಳಾರಿ ಜಿಲ್ಲೆಯ 30 ಗಣಿ ಕಂಪನಿಗಳ ಗುತ್ತಿಗೆ ರದ್ದುಪಡಿಸಿ ಸರಕಾರದ ವಶಕ್ಕೆ ಪಡೆಯುವಂತೆ ಕೇಂದ್ರ ಉನ್ನತ ಸಮಿತಿಯು (ಸಿಇಸಿ) ಉಚ್ಚ ನ್ಯಾಯಾಲಯಕ್ಕೆ ಶಿಫಾರಸು ಮಾಡಿದೆ.
ಗಣಿ ಕಂಪನಿಗಳು ತಮ್ಮ ವೈಯಕ್ತಿಕ ಲಾಭಕ್ಕಾಗಿ ಪರಿಸರ, ಜನಜೀವನ ನಿರ್ಲಕ್ಷಿಸಿರುವುದು ಸಿಇಸಿ ವರದಿಯಿಂದ ಮೇಲ್ನೋಟಕ್ಕೆ ಕಂಡು ಬರುತ್ತದೆ. ಈ ಕುರಿತು ಸುಪ್ರೀಂಕೋರ್ಟ್‌ಗೆ ಮಧ್ಯಂತರ ಅರ್ಜಿ ಸಲ್ಲಿಸಿ ಮನವರಿಕೆ ಮಾಡಲಾಗುವುದು ಎಂದರು. ಡಿಜಿಪಿ ಸತ್ಯನಾರಾಯಣ ಅವರಿಗೆ ಸರಕಾರ ಕಡ್ಡಾಯ ನಿವೃತ್ತಿ ನೀಡಬೇಕಿತ್ತು.
ಆದರೆ ಸತ್ಯ ಬಯಲು ಮಾಡಿದ ಎಡಿಜಿಪಿ ಡಿ.ರೂಪಾ ವರ್ಗಾವಣೆ ಮಾಡಿದ್ದು ಸರಿಯಲ್ಲ. ಅವರನ್ನು ಮೊದಲಿನ ಸ್ಥಾನಕ್ಕೆ ಮರಳಿ ನಿಯೋಜಿಸಬೇಕು. ಆ ಮೂಲಕ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಹಾಡಬೇಕೆಂದು ಒತ್ತಾಯಿಸಿದರು. ಅಲ್ಲದೆ ಮುಖ್ಯಮಂತ್ರಿ ಭ್ರಷ್ಟರ ಬೆಂಬಲಕ್ಕೆ ನಿಂತಿದ್ದು, ಅವರು ವಿನಾಶಕಾಲೇ ವಿಪರೀತ ಬುದ್ಧಿ ಎಂಬಂತೆ ವರ್ತಿಸುತ್ತಿದ್ದಾರೆಂದು ಹರಿಹಾಯ್ದರು.