ಹೊಸದಿಲ್ಲಿ: ಹೊಸ ಸಂಸತ್ ಭವನದ ಶಿಲಾನ್ಯಾಸವನ್ನು ಡಿ.10ರಂದು ನಡೆಸಲು ಕೇಂದ್ರ ಸರಕಾರಕ್ಕೆ ಸುಪ್ರೀಂ ಕೋರ್ಟ್ ಷರತ್ತಿನ ಅವಕಾಶ ನೀಡಿದೆ. ಸೆಂಟ್ರಲ್ ವಿಸ್ತಾ ಯೋಜನೆ ಪ್ರಶ್ನೆ ಮಾಡಿ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿರುವ ಅರ್ಜಿ ಇತ್ಯರ್ಥವಾಗುವವರೆಗೆ ಯಾವುದೇ ರೀತಿಯ ನಿರ್ಮಾಣ, ಕಟ್ಟಡಗಳನ್ನು ಕೆಡವಿ ಹಾಕುವುದು, ಮರಗಳನ್ನು ಕಡಿಯುವುದು ಮತ್ತು ಸ್ಥಳಾಂತರ ಮಾಡಲೇಬಾರದು ಎಂದು ನ್ಯಾ| ಎ.ಎಂ.ಖಾನ್ವಿಲ್ಕರ್ ನೇತೃತ್ವದ ನ್ಯಾಯಪೀಠ ಕೇಂದ್ರ ಸರಕಾರಕ್ಕೆ ಸೋಮ ವಾರ ತಾಕೀತು ಮಾಡಿದೆ.
ಕೇಂದ್ರವನ್ನು ಪ್ರತಿನಿಧಿಸಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಡಿ.10ರಂದು ಕೇವಲ ಹೊಸ ಸಂಸತ್ ಭವನಕ್ಕೆ ಶಂಕುಸ್ಥಾಪನೆ ಮಾತ್ರ ನೆರವೇರಿಸಲಾಗು ತ್ತದೆ ಎಂದು ನ್ಯಾಯಪೀಠಕ್ಕೆ ಅರಿಕೆ ಮಾಡಿಕೊಂಡರು.
ಹೊಸ ಸಂಸತ್ ಭವನ ಮತ್ತು ಕೇಂದ್ರ ಸರಕಾರದ ಸಚಿವಾಲಯದ ಹೊಸ ಕಟ್ಟಡ ನಿರ್ಮಾಣ ಕಾರ್ಯ ಶುರುವಾಗಿರುವ ಬಗ್ಗೆ ವರದಿಗಳು ಇವೆಯಲ್ಲ ಎಂದು ನ್ಯಾಯಪೀಠ ಸಾಲಿಸಿಟರ್ ಜನರಲ್ ಮೆಹ್ತಾರನ್ನು ಪ್ರಶ್ನಿ ಸಿತು. “ಶಂಕು ಸ್ಥಾಪನೆ ಮಾತ್ರ ಮಾಡಿದರೆ ಸಾಕು. ಅದಕ್ಕಿಂತ ಹೆಚ್ಚಿನದ್ದನ್ನೇನೂ ಮಾಡು ವಂತಿಲ್ಲ. ಕೋರ್ಟ್‌ಗೆ ನೆಪ ಮಾತ್ರಕ್ಕೆ ಹೇಳಿಕೆ ನೀಡಿದಂತೆ ಮಾಡುವಂತಿಲ್ಲ’ ಎಂದಿತು ನ್ಯಾಯಪೀಠ. ಯೋಜನೆಯನ್ನು ಪ್ರಶ್ನಿಸಿ ಸಲ್ಲಿಕೆ ಮಾಡಲಾಗಿದ್ದ ಹಲವು ಅರ್ಜಿಗಳ ವಿಚಾರಣೆ ನಡೆಸಿದ್ದ ನ್ಯಾಯಪೀಠ ನ.5 ರಂದು ತೀರ್ಪನ್ನು ಕಾಯ್ದಿರಿಸಿತ್ತು.
ದಾಖಲೆಗಳನ್ನು ಸಿದ್ಧಪಡಿಸಿ: ಯೋಜನೆಗೆ ಸಂಬಂಧಿಸಿದಂತೆ ಅಗತ್ಯವಾಗಿರುವ ದಾಖಲೆ ಗಳನ್ನು ಸಿದ್ಧಪಡಿಸಿಕೊಳ್ಳಲು ನ್ಯಾಯಪೀಠ ಕೇಂದ್ರ ಸರಕಾರಕ್ಕೆ ಅನುಮತಿ ನೀಡಿತು. ಸೋಮವಾರ ವಿಡೀಯೋ ಕಾನ್ಫರೆನ್ಸ್ ಮೂಲಕ ನಡೆದ ವಿಚಾರಣೆ ವೇಳೆ, ಐದು ನಿಮಿಷಗಳ ಒಳಗಾಗಿ ಕಾಮಗಾರಿ ಕೈಗೆತ್ತಿಕೊ ಳ್ಳುವ ಬಗ್ಗೆ ಸರಕಾರದ ನಿಲುವು ತಿಳಿಸಬೇಕು ಎಂದು ಸಾಲಿಸಿಟರ್ ಜನರಲ್‌ಗೆ ನ್ಯಾಯ ಪೀಠ ತಾಕೀತು ಮಾಡಿತು. ಸರಕಾರದ ಜತೆಗೆ ಚರ್ಚೆ ನಡೆಸಿ ಡಿ.10ರಂದು ಶಂಕು ಸ್ಥಾಪನೆ ಮಾತ್ರ ನೆರವೇರಿಸಲಾಗುತ್ತದೆ. ಯೋಜನೆ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆ ಮುಕ್ತಾಯವಾಗುವವರೆಗೆ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದಿಲ್ಲ ಎಂದು ತುಷಾರ್ ಮೆಹ್ತಾ ಹೇಳಿದರು. ಅದನ್ನು ಕೇಳಿದ ನ್ಯಾಯಪೀಠ ಡಿ.10ರ ಕಾರ್ಯಕ್ರಮವನ್ನು ಸ್ಥಳದಲ್ಲಿ ಯಾವುದೇ ಬದಲಾವಣೆ ಮಾಡಿ ಕೊಳ್ಳದೆ, ನಡೆಸಲು ಅನುಮತಿ ನೀಡಿತು. ಯೋಜನೆ ಕೈಗೆತ್ತಿ ಕೊಂಡು ಕಾಮಗಾರಿ ಪೂರ್ತಿಗೊಳಿಸಲು ಸರಕಾರ ತ್ವರಿತ ನಿರ್ಧಾರ ಕೈಗೊಳ್ಳುತ್ತದೆ ಎಂಬ ನಿರೀಕ್ಷೆ ಇರಲಿಲ್ಲ ಎಂದು ಹೇಳಿತು.
ಕೋರ್ಟ್ ಹೇಳಿದ್ದೇನು?
ಸುಪ್ರೀಂ ಕೋರ್ಟ್ ಪ್ರಕರಣ ಇತ್ಯರ್ಥ ಮಾಡುವವರೆಗೆ ನಿರ್ಮಾಣ ಕಾರ್ಯ ಮಾಡುವಂತಿಲ್ಲ
ಕಟ್ಟಡ ನಿರ್ಮಾಣ, ಕಟ್ಟಡ ಕೆಡವಿ ಹಾಕುವುದು, ಮರಗಳನ್ನು ಕಡಿಯುವುದು, ವರ್ಗಾವಣೆ ಸಲ್ಲದು
10ರಂದು ಬದಲಾವಣೆ ಇಲ್ಲದೆ, ಶಂಕುಸ್ಥಾಪನೆ ನೆರವೇರಿಸಿ
ತ್ವರಿತವಾಗಿ ಕಾಮಗಾರಿ ಪೂರ್ತಿಗೆ ಸರಕಾರ ನಿರ್ಧರಿಸುತ್ತದೆ ಎಂದು ಗೊತ್ತಿರಲಿಲ್ಲ
ಏನೇನು ಕಾಮಗಾರಿಗಳು
ಹೊಸ ಸಂಸತ್ ಭವನ
ಏಕೀಕೃತ ಕೇಂದ್ರ ಸಚಿವಾಲಯ
ಪ್ರಧಾನ ಮಂತ್ರಿಗಳ ಕಚೇರಿ
ಉಪ ರಾಷ್ಟ್ರಪತಿಗೆ ಹೊಸ ನಿವಾಸ
ರಾಷ್ಟ್ರಪತಿ ಭವನದಿಂದ ಇಂಡಿಯಾ ಗೇಟ್ ವರೆಗಿನ 3 ಕಿಮೀ ರಾಜಪಥ ಪುನರ್‌ನಿರ್ಮಾಣ
2022
ಹೊಸ ಸಂಸತ್ ಭವನ ಪೂರ್ತಿಗೊಳ್ಳಲಿರುವ ವರ್ಷ
2024
ಏಕೀಕೃತ ಕೇಂದ್ರ ಸಚಿವಾಲಯ ಪೂರ್ತಿಗೊಳ್ಳಲಿರುವ ವರ್ಷ