Advertisement

ಕಬ್ಬು ಅರೆಯೋಕೆ ಶುರುವಾದ್ರೂ ದರ ಪಕ್ಕಾ ಇಲ್ಲ!

11:29 AM Oct 16, 2017 | Team Udayavani |

ಬೆಂಗಳೂರು: ರಾಜ್ಯದಲ್ಲಿ ಕಬ್ಬು ಕಟಾವು ಕಾರ್ಯ ಆರಂಭವಾಗಿದ್ದರೂ ರಾಜ್ಯ ಸರ್ಕಾರ ಮಾತ್ರ ಕಬ್ಬಿನ ದರ ನಿಗದಿ ಮಾಡಲು ಮೀನಮೇಷ ಎಣಿಸುತ್ತಿದೆ. ಸರ್ಕಾರದ ನಿರ್ಲಕ್ಷದ ಧೋರಣೆ ವಿರುದ್ಧ ರೈತರು ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಮತ್ತೆ ಬೀದಿಗಿಳಿದು ಹೋರಾಟಕ್ಕೆ ಚಿಂತನೆ ನಡೆಸಿದ್ದಾರೆ.

Advertisement

ಹಳೇ ಮೈಸೂರು ಭಾಗದಲ್ಲಿ ಕಬ್ಬು ಕಟಾವು ಆರಂಭವಾಗಿ ಎರಡು ತಿಂಗಳು ಕಳೆದಿದ್ದು, ಉತ್ತರ ಕರ್ನಾಟಕ ಭಾಗದಲ್ಲಿ ಮಹಾನವಮಿಯಿಂದಲೇ ಕಾರ್ಖಾನೆಗಳು ಆರಂಭ ಮಾಡಿದ್ದರೂ ಹಿಂಗಾರು ಮಳೆ ಜೋರಾಗಿರುವುದರಿಂದ ಕಬ್ಬು ಕಟಾವು ಕಾರ್ಯಕ್ಕೆ ಅಡ್ಡಿಯಾಗಿದೆ. ಈ ಬಾರಿ ರೈತರು ಕಬ್ಬಿನ ಬೆಲೆಯನ್ನು ಗುಜರಾತ್‌ ಮಾದರಿಯಲ್ಲಿ ನೀಡುವಂತೆ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದು, ರಾಜ್ಯ ಸರ್ಕಾರ ಅಧ್ಯಯನಕ್ಕೆ ಗುಜರಾತ್‌ಗೆ ತೆರಳಲು ನಿರ್ಧರಿಸಿದ್ದು, ಇನ್ನೂ ಕಾಲ ಕೂಡಿ ಬಂದಿಲ್ಲ.

ಗುಜರಾತ್‌ನಲ್ಲಿ ಕಬ್ಬಿನ ಇಳುವರಿ ರಾಜ್ಯಕ್ಕಿಂತ ಕಡಿಮೆ ಇದ್ದರೂ, ಅಲ್ಲಿನ ರೈತರಿಗೆ ಪ್ರತಿ ಟನ್‌ ಕಬ್ಬಿಗೆ 4,440 ರೂ. ನೀಡಲಾಗಿದೆ. ಗುಜರಾತ್‌ನಲ್ಲಿ ಟನ್‌ ಕಬ್ಬಿಗೆ 90 ರಿಂದ 93 ಕೆ.ಜಿ. ಸಕ್ಕರೆ ಉತ್ಪಾದನೆಯಾಗುತ್ತದೆ. ಕರ್ನಾಟಕದಲ್ಲಿ ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿ ಪ್ರತಿ ಟನ್‌ ಕಬ್ಬಿಗೆ 120ರಿಂದ 125 ಕೆ.ಜಿ. ಸಕ್ಕರೆ ಉತ್ಪಾದನೆಯಾಗುತ್ತದೆ. ಹೀಗಾಗಿ ಕರ್ನಾಟಕದ ಕಬ್ಬಿಗೆ ಹೆಚ್ಚಿನ ಬೆಲೆ ನಿಗದಿ ಮಾಡಬೇಕೆನ್ನು ವುದು ರೈತರ ಆಗ್ರಹವಾಗಿದೆ. ಕೇಂದ್ರ ಸರ್ಕಾರ ಈ ಹಂಗಾಮು ವರ್ಷ ಪ್ರತಿ ಟನ್‌ ಕಬ್ಬಿಗೆ
2,550 ರೂ. ಕನಿಷ್ಠ ದರ ನಿಗದಿ ಮಾಡಿದ್ದು, ರಾಜ್ಯ ಸರ್ಕಾರ ಇಳುವರಿ ಆಧಾರದಲ್ಲಿ ಅದಕ್ಕಿಂತಲೂ ಹೆಚ್ಚಿನ ದರ ನೀಡ
ಬೇಕು. ಪ್ರತಿ ಟನ್‌ ಕಬ್ಬಿಗೆ ಕನಿಷ್ಠ 3,600 ರೂ. ಬೆಲೆ ನಿಗದಿ ಪಡಿಸಬೇಕೆಂದು ರೈತರು ಸರ್ಕಾರವನ್ನು ಆಗ್ರಹಿಸಿದ್ದಾರೆ. ಕಳೆದ ವರ್ಷ ರಾಜ್ಯದಲ್ಲಿ 3 ಲಕ್ಷ 75 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗಿದ್ದು, 2 ಕೋಟಿ 5 ಲಕ್ಷ ಮೆಟ್ರಿಕ್‌ ಟನ್‌ ಕಬ್ಬಿನ ಉತ್ಪಾದನೆಯಾಗಿತ್ತು.

ಆದರೆ, ಈ ವರ್ಷವೂ ಅಷ್ಟೇ ಪ್ರಮಾಣದ ಭೂ ಪ್ರದೇಶ ದಲ್ಲಿ ಕಬ್ಬು ಬೆಳೆಯಲಾಗಿದ್ದರೂ, ಮುಂಗಾರಿನಲ್ಲಿ ಮಳೆಯ
ಕೊರತೆಯಿಂದಾಗಿ ಕಬ್ಬಿನ ಇಳುವರಿ ಕಡಿಮೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.30 ರಿಂದ 35ರಷ್ಟು ಕಬ್ಬಿನ ಕೊರತೆಯಾಗುವ ಅಂದಾಜಿದೆ. ರಾಜ್ಯದಲ್ಲಿ ಸಹಕಾರಿ ಮತ್ತು ಖಾಸಗಿ ಕಾರ್ಖಾನೆಗಳು ಸೇರಿ 67 ಕಾರ್ಖಾನೆಗಳು ಕಾರ್ಯ ನಿರ್ವಹಿಸುತ್ತಿದ್ದು, ಎಲ್ಲ ಕಾರ್ಖಾನೆಗಳು ಸೀಸನ್‌ ಮುಗಿಯುವವರೆಗೂ ನಡೆಯಬೇಕೆಂದರೆ ಕನಿಷ್ಠ 5 ಕೋಟಿ ಟನ್‌ ಕಬ್ಬಿನ
ಅಗತ್ಯವಿದೆ. ಹೀಗಾಗಿ ಈ ವರ್ಷದ ಉತ್ಪಾದನೆ ಗಮನಿ ಸಿದರೆ, ಕಬ್ಬಿಗೆ ಸಾಕಷ್ಟು ಬೇಡಿಕೆಯಿದ್ದು, ಉತ್ತರ ಕರ್ನಾಟಕದ
ಕೆಲವು ಖಾಸಗಿ ಕಾರ್ಖಾನೆಗಳು ಮೊದಲ ಕಂತಿನಲ್ಲಿಯೇ ಕಟಾವು ಮತ್ತು ಸಾರಿಗೆ ವೆಚ್ಚ ಸೇರಿ 3,600 ರೂ.ನೀಡಲು
ನಿರ್ಧರಿಸಿವೆ ಎನ್ನಲಾಗಿದೆ. 

ಎಸ್‌ಎಪಿ ನಿಗದಿಗೆ ಒತ್ತಾಯ: ಕೇಂದ್ರ ಸರ್ಕಾರ ಎಫ್ಆರ್‌ಪಿ ನಿಗದಿ ಮಾಡಿದ ಮೇಲೆ ರಾಜ್ಯ ಸರ್ಕಾರ ರೈತರಿಗೆ ಎಸ್‌ಎಪಿ
(ಸ್ಟೇಟ್‌ ಅಡ್ವೆ„ಸರಿ ಪ್ರೈಸ್‌) ನಿಗದಿ ಮಾಡಬೇಕೆಂದು ರೈತರು ಆಗ್ರಹಿಸುತ್ತಿದ್ದಾರೆ. ಆದರೆ, ಬಹುತೇಕ ಸಕ್ಕರೆ ಕಾರ್ಖಾನೆಗಳು
ರಾಜಕೀಯ ನಾಯಕರ ಹಿಡಿತದಲ್ಲಿರುವುದರಿಂದ ಎಸ್‌ಎಪಿ ನಿಗದಿಗೆ ತಡೆ ಹಿಡಿಯುತ್ತಿವೆ ಎಂಬ ಆರೋಪ ಕೇಳಿ ಬರುತ್ತಿದೆ.
ಗುಜರಾತ್‌, ಹರಿಯಾಣ, ಉತ್ತರ ಪ್ರದೇಶ ರಾಜ್ಯಗಳು ಎಎಸ್‌ಪಿ ಜಾರಿ ಮಾಡಿರುವುದರಿಂದ ರೈತರಿಗೆ ಹೆಚ್ಚಿನ ಬೆಲೆ
ದೊರೆಯುತ್ತಿದ್ದು, ಅದೇ ಮಾದರಿಯನ್ನು ರಾಜ್ಯ ಸರ್ಕಾರ ಅನುಸರಿಸಬೇಕೆಂಬುವುದು ರೈತರ ವಾದ.

Advertisement

ಉತ್ಪಾದನೆ ಕುಂಠಿತ: 
ದೇಶದಲ್ಲಿ ಈ ವರ್ಷ ಶೇ.50ರಷ್ಟು ಕಬ್ಬಿನ ಉತ್ಪಾದನೆ ಕಡಿಮೆಯಾಗಿದ್ದು, ಸಕ್ಕರೆ ಬೆಲೆ ಹೆಚ್ಚಳವಾಗುವ ಲಕ್ಷಣವಿದೆ. ಸದ್ಯ ಪ್ರತಿ ಕ್ವಿಂಟಾಲ್‌ ಸಕ್ಕರೆಗೆ 3600 ರೂ. ಮಾರಾಟವಾಗುತ್ತಿದ್ದು, ಸೀಸನ್‌ ಮುಗಿಯುವವರೆಗೂ ಸಕ್ಕರೆ ಬೆಲೆ ಗಗನಕ್ಕೇರುವ ಸಾಧ್ಯತೆಯಿದೆ. ಈಗಾಗಲೇ ಕೇಂದ್ರ ಸರ್ಕಾರ 10 ಲಕ್ಷ ಮೆಟ್ರಿಕ್‌ ಟನ್‌ ಸಕ್ಕರೆಯನ್ನು ಬ್ರೆಜಿಲ್‌ನಿಂದ ಆಮದು ಮಾಡಿಕೊಳ್ಳಲು ನಿರ್ಧರಿಸಿದೆ ಎಂದು ತಿಳಿದು ಬಂದಿದೆ. 

ಈಗಾಗಲೇ ಕಾರ್ಖಾನೆಗಳು ಆರಂಭವಾಗಿದ್ದರೂ ಸರ್ಕಾರ ಇನ್ನೂ ಬೆಲೆ ನಿಗದಿ ಮಾಡದೆ ಲೆಕ್ಕಾಚಾರದಲ್ಲಿಯೇ ಕಾಲ ಕಳೆಯುತ್ತಿದೆ. ಈ ವರ್ಷ ಕಬ್ಬಿನ ಉತ್ಪಾದನೆ ಕುಂಠಿತವಾಗಿದ್ದು ಕನಿಷ್ಠ 3,600 ರೂ. ನೀಡಬೇಕು. ನಮಗಿಂತ ಕಡಿಮೆ ಇಳುವರಿ ಇರುವ ಗುಜರಾತ್‌ನಲ್ಲಿ ಪ್ರತಿ ಟನ್‌ಗೆ 4,500 ರೂ. ಕೊಡುತ್ತಾರೆ. ನಮಗೇಕೆ ಅಷ್ಟು ಬೆಲೆ ನೀಡುತ್ತಿಲ್ಲ. ಸರ್ಕಾರ ಕಾರ್ಖಾನೆ ಮಾಲೀಕರ ಮಾತಿಗೆ ಮಣಿಯುತ್ತಿದೆ.
 ●ಕುರಬೂರು ಶಾಂತಕುಮಾರ್‌, ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ

ಈ ವರ್ಷ ಇನ್ನೂ ಬೆಲೆ ನಿಗದಿಯಾಗಿಲ್ಲ. ರಾಜ್ಯ ಸರ್ಕಾರ ಎಸ್‌ಎಪಿ ಜಾರಿ ಮಾಡಿದರೆ, ಪ್ರತಿ ವರ್ಷ ಬೆಲೆ ನಿಗದಿಯ ಗಲಾಟೆ
ತಪ್ಪಿಸಬಹುದು. ಇದರಿಂದ ರೈತರಿಗೂ ಮತ್ತು ಕಾರ್ಖಾನೆ ಮಾಲೀಕರಿಗೆ ಇಬ್ಬರಿಗೂ ಅನುಕೂಲವಾಗುತ್ತದೆ. ಗುಜರಾತ್‌ನಲ್ಲಿ ಹೆಚ್ಚಿಗೆ
ಬೆಲೆ ನೀಡುತ್ತಾರೆಂದು ಕೇಳಿದ್ದೇನೆ. ರಾಜ್ಯ ಸರ್ಕಾರ ಆದಷ್ಟು ಬೇಗ ಗುಜರಾತ್‌ ವರದಿ ಪಡೆದು ಬೆಲೆ ನಿಗದಿ ಮಾಡಬೇಕು.
 ●ಲಕ್ಷ್ಮಣ ಸವದಿ, ಮಾಜಿ ಸಚಿವ
 

Advertisement

Udayavani is now on Telegram. Click here to join our channel and stay updated with the latest news.

Next