Advertisement
ಅದರಲ್ಲೂ ಆ ಕಾಲದ ಚಲನಚಿತ್ರಗಳನ್ನೇ ನೋಡಿಕೊಂಡು ಬೆಳೆದವರಿಗಂತೂ ಅಂಬಾಸಿಡರ್ ಕಾರಿನ ಪರಿಚಯ ಅಚ್ಚಳಿಯದೆ ಉಳಿದುಬಿಟ್ಟಿರುತ್ತದೆ. ವಿಲನ್ ಗಳಿಗೆ ಕಪ್ಪು ಬಣ್ಣದ ಅಂಬಾಸಿಡರ್, ಗಣ್ಯರಿಗೆ, ನಾಯಕನಿಗೆ ಬಿಳಿ, ನೀಲಿ ಬಣ್ಣದ ಅಂಬಾಸಿಡರ್ ಕಾರುಗಳು ಆ ಕಾಲದ ಚಿತ್ರಗಳ ಪರ್ಮನೆಂಟ್ ಗಿರಾಕಿಗಳಾಗಿದ್ದವು! ಅಂಬಾಸಿಡರ್ ಕಾರಿನಲ್ಲೇ ನಡೆಯುತ್ತಿದ್ದ ಫೈಟಿಂಗ್, ಚೇಸಿಂಗ್ ದೃಶ್ಯಗಳನ್ನು ಚಿತ್ರಪ್ರೇಮಿಗಳು ಮರೆಯುವುದುಂಟೇ?
Related Articles
Advertisement
ಈ ಕಾರಿನ ಮಾದರಿಯನ್ನು ಮೊದಲು ಇಂಗ್ಲೆಂಡ್‌ನಲ್ಲಿರುವ ಆಕ್ಸ್ ಫರ್ಢ್ ಕೌಲೆಯಲ್ಲಿರುವ ಮೋರಿಸ್ ಮೋಟಾರ್ ಕಂಪೆನಿ 1957 ರಿಂದ 1959ರವರೆಗೆ ತಯಾರಿಸುತ್ತಿತ್ತು. ಇದೇ ಮೋರಿಸ್ ಆಕ್ಸ್ ಫರ್ಢ್ 3 ಮೊಡೆಲ್ ಅನ್ನು ಸ್ವಲ್ಪ ಬದಲಾವಣೆ ಮಾಡಿ 1957-58ರ ಅಸುಪಾಸಿನಲ್ಲಿ ಭಾರತದಲ್ಲಿ ಅಂಬಾಸಿಡರ್ ಕಾರ್ ಆಗಿ ರೂಪಿಸಲಾಯಿತು. ಸಿ.ಕೆ ಬಿರ್ಲಾ ಒಡೆತನದಲ್ಲಿ ಪಶ್ಮಿಮಬಂಗಾಳದ ಉತ್ತರಪಾರದಲ್ಲಿ ಅಂಬಾಸಿಡರ್ ಘಟಕವನ್ನು ಕೂಡ ತೆರೆಯಲಾಗಿತ್ತು. ಸ್ವಾತಂತ್ರ್ಯಕ್ಕೂ ಮುನ್ನ ಗುಜರಾತ್‌ನಲ್ಲಿ ಮೋರಿಸ್ ಕಂಪೆನಿ ಕಾರುಗಳ ಜೋಡಣಾ ಘಟಕವನ್ನು ಹೊಂದಿತ್ತು. ನಂತರದಲ್ಲಿ ಅದೇ ಉದ್ದಿಮೆ ಹಿಂದೂಸ್ಥಾನ ಮೋಟಾರ್ಸ್ ಹೆಸರಿನಲ್ಲಿ ಅಂಬಾಸಿಡರ್ ಕಾರಿನ ಜನ್ಮಕ್ಕೆ ಕಾರಣವಾಯಿತು.
ಬ್ರಿಟೀಷ್ ಮೂಲದ ಹೊರತಾಗಿಯೂ ಅಂಬಾಸಿಡರ್ ಅನ್ನು ಭಾರತೀಯರ ವಿಶ್ವಾಸಾರ್ಹ ಕಾರೆಂದು ಪರಿಗಣಿಸಲಾಗುತ್ತದೆ. ಯಾವುದೇ ಭೂಪ್ರದೇಶಗಳಿಗೆ ಹೊಂದುವಂತಹ ಕಾರು ಇದು. ದೃಢವಾದ ನಿರ್ಮಾಣ, ಗುಣಮಟ್ಟವನ್ನು ಕಾಯ್ದುಕೊಂಡಿರುವ ಅಂಬಾಸಿಡರ್ ಈಗಲೂ ಅತ್ಯಂತ ಸುರಕ್ಷಿತ ಕಾರೆನಿಸಿಕೊಂಡಿದ್ದು, ಕಾರಿನೊಳಗೆ ಹೆಚ್ಚು ಸ್ಥಳವಕಾಶ ಕಲ್ಪಿಸಿರುವುದು ಆರಾಮ ಹಾಗೂ ಹೆಚ್ಚು ಅನುಕೂಲ ಪ್ರಯಾಣವನ್ನು ಖಾತ್ರಿ ಪಡಿಸುತ್ತದೆ.
ಕಾಲಕಾಲಕ್ಕೆ ತನ್ನ ವಿನ್ಯಾಸದಲ್ಲಿ ಬದಲಾವಣೆ ಪಡೆದುಕೊಳ್ಳುತ್ತಿದ್ದ ಅಂಬಾಸಿಡರ್, 1957ರಲ್ಲಿ ಮಾರ್ಕ್ 1, 1962ರಲ್ಲಿ ಮಾರ್ಕ್ 2, 1977ರಲ್ಲಿ ಮಾರ್ಕ್ 3, 1979ರಲ್ಲಿ ಮಾರ್ಕ್ 4, 1990ರಲ್ಲಿ ಹೆಚ್ಚು ಪ್ರಿಮೀಯಂ ಸೌಲಭ್ಯಗಳುಳ್ಳ ಅಂಬಾಸಿಡರ್ ನೋವಾ, 1992ರಲ್ಲಿ ಅಂಬಾಸಿಡರ್ 1800 ಐಎಸ್‌ಝಡ್ ವರ್ಷನ್‌ಗಳನ್ನು ಉತ್ಪಾದನೆ ಮಾಡಿ ಮಾರಾಟ ಮಾಡಿತ್ತು. ಅಧುನಿಕ ಕಾಲಘಟ್ಟದಲ್ಲಿ ತನ್ನ ಅಸ್ತಿತ್ವಕ್ಕಾಗಿ ಹೆಚ್ಚು ಪರಿಷ್ಕೃತ ಅಂಬಾಸಿಡರ್ ಕ್ಲಾಸಿಕ್ ಮಾರುಕಟ್ಟೆಗೆ ತಂದಿತ್ತು. 2003ರಲ್ಲಿ ಅದು ಅಂಬಾಸಿಡರ್ ಗ್ರ್ಯಾಂಡ್, 2004 ಅವಿಗೊ, 2013ರಲ್ಲಿ ಅಂಬಾಸಿಡರ್ ಎನ್‌ಕೋರ್ ಪರಿಚಯಸಿತ್ತು.
ಈ ಕಾರಿನ ಇನ್ನೊಂದು ವಿಶೇಷತೆಯೆಂದರೇ ದೇಶಕ್ಕೆ ಮೊದಲ ಡೀಸೆಲ್ ಇಂಜಿನ್ ಅನ್ನು ಪರಿಚಯಿಸಿದ್ದು ಅಂಬಾಸಿಡರ್. ಹಿಂದೂಸ್ಥಾನ್ ಮೋಟಾರ್ಸ್ ಸತತ 56 ವರ್ಷಗಳ ಕಾಲ ಈ ಕಾರುಗಳ ಉತ್ಪಾದನೆ ಮಾಡಿತ್ತು. ಅಷ್ಟು ಕಾರುಗಳ ಪೈಕಿ ಶೇ.16% ನ್ನು ಭಾರತ ಸರ್ಕಾರವೇ ಕೊಂಡುಕೊಂಡಿತ್ತು. ಈ ಕಾರು ಭಾರತದ ಘಟಾನುಘಟಿ ನಾಯಕರ ಮೆಚ್ಚಿನ ಕಾರು ಕೂಡ ಆಗಿತ್ತು. ಭಾರತದಲ್ಲಿ ಅತೀ ಹೆಚ್ಚು ವರುಷಗಳ ಕಾಲ ಉತ್ಪಾದನೆಯಾದ ಕಾರೆಂದರೇ ಅಂಬಾಸಿಡರ್ ಮಾತ್ರ. ಸಮೀಕ್ಷೆ ಪ್ರಕಾರ ಭಾರತದ ಕಾರು ಅಪಘಾತ ಪ್ರಕರಣಗಳಲ್ಲಿ ಅತೀ ಹೆಚ್ಚು ಜನರ ಪ್ರಾಣವನ್ನು ಉಳಿಸಿರುವ ಕಾರು ಇದು. 2013ರಲ್ಲಿ ವರ್ಲ್ಡ್ ಬೆಸ್ಟ್ ಟ್ಯಾಕ್ಸಿ ಎಂಬ ಪ್ರಶಸ್ತಿಯನ್ನು ಕೂಡ ಪಡೆದುಕೊಂಡಿತು. ಆ ಮೂಲಕ ವಿಶ್ವದಲ್ಲೇ ಮನೆ ಮಾತಾಗಿತ್ತು.
ಕಾರು ಎಂದರೆ ಅಂಬಾಸಿಡರ್ ಎಂಬ ಕಲ್ಪನೆಯನ್ನು ಅಂಬಾಸಿಡರ್ ಮೂಡಿಸಿತ್ತು. 1990ರ ನಂತರ ಭಾರತಕ್ಕೆ ವಿದೇಶಿ ಕಾರುಗಳು ಬರಲು ಆರಂಭಿಸಿದಾಗ ಹಳೆ ವಿನ್ಯಾಸವನ್ನು ಹೊಂದಿದ್ದ ಅಂಬಾಸಿಡರ್ ಕ್ರಮೇಣ ತನ್ನ ಆಕರ್ಷಣೆಯನ್ನು ಕಳೆದುಕೊಳ್ಳಲಾರಂಭಿಸಿತು. ಹಣಕಾಸಿನ ಕೊರತೆ ಕೂಡ ಅಂಬಾಸಿಡರ್ ಕಾರು ನೇಪತ್ಯಕ್ಕೆ ಸರಿಯಲು ಪ್ರಮುಖ ಕಾರಣ. ನಂತರದ ದಿನಗಳಲ್ಲಿ ನಿರ್ದಿಷ್ಟ ಮಟ್ಟದ ಗ್ರಾಹಕರನ್ನು ಸೆಳೆಯುವಲ್ಲಿ ಇದು ವಿಫಲವಾಯಿತು. ಹಿಂದೂಸ್ಥಾನ್ ಮೋಟಾರ್ ಸಂಸ್ಥೆ 2000ದಿಂದ ಈಚೇಗೆ ಭಾರೀ ನಷ್ಟವನ್ನು ಅನುಭವಿಸಿತು. ತನ್ನ ನೌಕರರಿಗೆ ಸಂಬಳವನ್ನು ಕೂಡ ಕೊಡಲಾಗಲಿಲ್ಲ. ಅಂತಿಮವಾಗಿ 2014ರಲ್ಲಿ ಅಂಬಾಸಿಡರ್ ಕಾರುಗಳ ಉತ್ಪಾದನೆಗೆ ಹಿಂದೂಸ್ಥಾನ್ ಮೋಟಾರ್ಸ್ ಗುಡ್ ಬೈ ಹೇಳಿತು. ಆದರೇ ಭಾರತೀಯರ ಮನದಲ್ಲಿ ಇವತ್ತಿಗೂ ಈ ಕಾರು ಅಚ್ಚಳಿಯದೇ ಉಳಿದಿದೆ. ಇಂದಿಗೂ ಕೂಡ ಕಾರುಗಳನ್ನು ಟ್ಯಾಕ್ಸಿಗಳ ರೂಪದಲ್ಲಿ ರೈಲ್ವೇ ನಿಲ್ದಾಣಗಳಲ್ಲಿ ಕಾಣಬಹುದಾಗಿದೆ.