Advertisement

ಸೃಷ್ಟಿಯ ಮುಂದೆ ಕಿರಿಯನೆಂಬ ವಿನಯಶೀಲ ಬದುಕು

10:31 PM Oct 18, 2020 | mahesh |

ಸೃಷ್ಟಿಯ ಎದುರು ವಿನಮ್ರವಾಗಿ ಬದುಕುವುದು ಮನುಷ್ಯನಲ್ಲಿ ಅಗತ್ಯವಾಗಿ ಇರಬೇಕಾದ ಗುಣ. ಸೃಷ್ಟಿ , ಪ್ರಕೃತಿ ಮಹೋನ್ನತವಾದುದು. ಅದರ ವೈಶಾಲ್ಯ, ವೈವಿಧ್ಯಗಳ ಮುಂದೆ ನಮ್ಮ ಜ್ಞಾನ, ತಿಳಿವಳಿಕೆ ಅತ್ಯಂತ ಕನಿಷ್ಠ ಎಂಬ ವಿನಮ್ರತೆ, ವಿನಯಶೀಲತೆ ಸದಾ ನಮ್ಮಲ್ಲಿ ಇರಬೇಕು. ಅಂಥ ಗುಣವೊಂದು ಇದ್ದುದರಿಂದಲೇ ನಮ್ಮ ಹಿರಿಯರು ಎಲ್ಲವೂ ಒಳಿತಾಗುತ್ತದೆ, ಆಗುವುದೆಲ್ಲವೂ ಒಳಿತಿಗಾಗಿಯೇ, ಇಂದಲ್ಲ ನಾಳೆಯಾದರೂ ಒಳ್ಳೆಯದಾಗುತ್ತದೆ ಎಂಬ ಆಶಾವಾದ, ಸಕಾರಾತ್ಮಕ ದೃಷ್ಟಿಕೋನಗಳಿಂದ ಬದುಕಿ ಬಾಳಿದರು. ಸೋಲುಗಳು ಎದುರಾದಾಗ ಅವರು ಎದೆಗುಂದಲಿಲ್ಲ.

Advertisement

ನಮ್ಮ ಹಿರಿಯರು ಮರ-ಗಿಡ, ಕಾಡು ಪ್ರಾಣಿಗಳು, ಗಾಳಿ, ನೀರು, ಅಗ್ನಿಗಳನ್ನೆಲ್ಲ ದೇವರು ಎಂದು ಪರಿಭಾವಿಸಿ ಆರಾಧಿಸುವುದಕ್ಕೆ ಸೃಷ್ಟಿ ಮಹೋನ್ನತವಾದದ್ದು ಅತ್ಯಂತ ಸತ್ಯಶೀಲವಾದದ್ದು, ಅಪಾರ ಶಕ್ತಿ ಸಾಮರ್ಥ್ಯಗಳನ್ನು ಹೊಂದಿರುವಂಥದ್ದು ಎಂಬ ವಿನಮ್ರತೆಯೂ ಒಂದು ಕಾರಣ.

ನಿನ್ನ ಆಳ- ಅಗಲವನ್ನು ವೈಶಾಲ್ಯವನ್ನು ಅರಿಯುವುದಕ್ಕೆ ನಾವು ಅಶಕ್ತರು, ನಿನ್ನೆದುರು ನಾವು ಕಿರಿಯರು ಎಂಬ ವಿನಯಶೀಲತೆ ಅದು. ಸೃಷ್ಟಿಯ ಪೂರ್ಣತ್ವವನ್ನು, ವೈಶಾಲ್ಯವನ್ನು ಅರ್ಥ ಮಾಡಿಕೊಳ್ಳುವಲ್ಲಿ ನಮ್ಮ ಮಿತಿಗಳನ್ನು ಪ್ರಖ್ಯಾತ ಶಿಕ್ಷಣ ಮೇಷ್ಟ್ರು, ವೈಜಾnನಿಕ ಚಿಂತಕ, ಕೀರ್ತಿಶೇಷ ಎಚ್‌. ನರಸಿಂಹಯ್ಯನವರು ಚೆನ್ನಾಗಿ ವಿವರಿಸುತ್ತಾರೆ.

ಅವರು ಹೇಳುವಂತೆ ಸಾವಯವ ಅಂದರೆ ಕಾರ್ಬನ್‌ ಸಂಯುಕ್ತಗಳಿಂದ ರಚನೆಯಾದ ನಮ್ಮ ಶರೀರವೇ ನಮ್ಮ ಮಿತಿ. ನಾವು ಅನುಭವಿಸುವುದು, ತಿಳಿದುಕೊಳ್ಳುವುದು, ಅರ್ಥಮಾಡಿಕೊಳ್ಳುವುದು ಏನಿದ್ದರೂ ಈ ಮಿತಿಯಲ್ಲಿಯೇ. ಉದಾಹರಣೆಗೆ ನಮ್ಮ ಕಣ್ಣು ಗ್ರಹಿಸಬಹುದಾದ ಬಣ್ಣಗಳ ಮಿತಿ, ಕವಿ ಕೇಳಿಸಿಕೊಳ್ಳುವ ಶಬ್ದದ ತರಂಗಗಳ ಮಿತಿ. ಅದಕ್ಕಿಂತ ಆಚೆಗಿನದ್ದನ್ನು ನಾವು ಗ್ರಹಿಸಲಾರೆವು. ನಮಗಿಂತ ಹೆಚ್ಚಿನ ಬಣ್ಣಗಳನ್ನು, ಪ್ರತಿಫ‌ಲವನ್ನು ಸ್ವೀಕರಿಸುವ ಸಾಮರ್ಥ್ಯವುಳ್ಳ ಕಣ್ಣನ್ನು ಹೊಂದಿರುವ ಒಂದು ಹಕ್ಕಿ ನಾವು ಕಾಣುವ ಪ್ರಪಂಚಕ್ಕಿಂತ ಬೇರೆಯದಾದ ಪ್ರಪಂಚವನ್ನು ಕಾಣಬಹುದು. ನಮ್ಮ ಕಿವಿಗಿಂತ ಹೆಚ್ಚಿನ ಶಬ್ದ, ತರಂಗಗಳನ್ನು ಕೇಳಿಸಿಕೊಳ್ಳುವ ಸಾಮರ್ಥ್ಯದ ಕಿವಿಯನ್ನು ಹೊಂದಿರುವ ನಾಯಿ ನಾವು ಆಲಿಸಲಾಗದ ಸದ್ದುಗಳನ್ನು ಆಲಿಸಬಹುದು. ಕೆಲವೊಮ್ಮೆ ಮನೆಯ ನಾಯಿ ಸುಮ್ಮನೆ ಬೊಗಳುತ್ತಿರುತ್ತದೆ. ನಾವು ನೋಡಿದರೆ ಏನೂ ಇರುವುದಿಲ್ಲ. ಯಾರಿಗೆ ಗೊತ್ತು ನಮಗೆ ಕಾಣದ ಯಾವುದೋ ಒಂದು ಅದಕ್ಕೆ ಕಾಣಿಸಿರಬಹುದು, ಕೇಳಿಸಿರಬಹುದು.

ಹಾಲಿವುಡ್‌ನಲ್ಲಿ ಅನ್ಯಗ್ರಹ ವಾಸಿಗಳ ಮೇಲೆ ತಯಾರಾಗುವ ಸಿನೆಮಾಗಳನ್ನು ನೋಡಿ. ಅವುಗಳಲ್ಲಿ ಬರುವ ಎಲ್ಲ ಅನ್ಯಗ್ರಹವಾಸಿ ಪಾತ್ರಗಳಿಗೆ ನಕ್ಷತ್ರದಂತಹ ಕಣ್ಣು, ಹಾವಿನಂತಹ ಕೈ, ಮೂಗಿರಬೇಕಾದಲ್ಲಿ ಕಣ್ಣು… ಹೀಗೆಲ್ಲ ಇರುತ್ತದೆ. ಅನ್ಯಗ್ರಹವಾಸಿಗಳನ್ನು ನಾವು ಕಲ್ಪಿಸಿಕೊಳ್ಳುವುದು ಹೀಗೆ. ಅದು ನಮ್ಮ ಕಲ್ಪನಾ ಸಾಮರ್ಥ್ಯದ ಮಿತಿ. ನಮಗಿಂತ ಅವುಗಳನ್ನು ಎಷ್ಟೇ ಭಿನ್ನವಾಗಿ ಕಲ್ಪಿಸಿಕೊಂಡರೂ ಕಿವಿ, ಮೂಗು, ಕೈ, ಕಾಲುಗಳಿದ್ದೇ ಇರುತ್ತವೆ. ಏಕೆಂದರೆ ಅದಕ್ಕಿಂತ ಮೀರಿದ್ದನ್ನು ನಾವು ಕಂಡಿಲ್ಲ. ಕೇಳಿಲ್ಲ. ನಮ್ಮ ಗ್ರಹಣ ಶಕ್ತಿ ತಿಳಿವಳಿಕೆಯ ಶಕ್ತಿಯ ಮಿತಿಗೆ ಇದೂ ಒಂದು ಉದಾಹರಣೆ. ನಮ್ಮ ಈ ಮಿತಿಗಳನ್ನು ತಿಳಿದುಕೊಂಡು “ಎನಗಿಂತ ಕಿರಿಯರಿಲ್ಲ’ ಎಂಬ ವಿನೀತ ಭಾವದಿಂದ ಬದುಕುವುದು ಜೀವನಕ್ಕೆ ಹೊಸ ಅರ್ಥವನ್ನು ಕೊಡುತ್ತದೆ.

Advertisement

( ಸಾರ ಸಂಗ್ರಹ)

Advertisement

Udayavani is now on Telegram. Click here to join our channel and stay updated with the latest news.

Next