ಗಂಗಾವತಿ: ನಗರಕ್ಕೆ ಮಂಜೂರಿಯಾಗಿದ್ದ ಬಳ್ಳಾರಿ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರವನ್ನು ಯಲಬುರ್ಗಾಕ್ಕೆ ಸ್ಥಳಾಂತರ ಮಾಡಿದ್ದರಿಂದ ವಿವಿಧ ವಿಷಯಗಳಲ್ಲಿ ಸ್ನಾತಕೋತ್ತರ ವಿದ್ಯಾಭ್ಯಾಸ ಮಾಡಬೇಕೆನ್ನುವ ವಿದ್ಯಾರ್ಥಿಗಳು ಎರಡು ವರ್ಷಗಳಿಂದ ಪರದಾಡುವ ಸ್ಥಿತಿ ಎದುರಾಗಿದೆ.
ಹಲವು ವರ್ಷಗಳಿಂದ ಹೋರಾಟ ನಡೆಸಿದ ಪರಿಣಾಮ ಗಂಗಾವತಿಯ ಕೊಲ್ಲಿ ನಾಗೇಶ್ವರಾವ್ ಸರಕಾರಿ ಮಹಾವಿದ್ಯಾಲಯದಲ್ಲಿ ಸ್ನಾತಕೋತ್ತರ ವಿಷಯಗಳನ್ನು ಕಲಿಯಲು ಪರವಾನಗಿ ನೀಡಲಾಗಿದೆ. 2017-18ನೇ ಸಾಲಿನಲ್ಲಿ ಬಳ್ಳಾರಿ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಸಿಂಡಿಕೇಟ್ ಮತ್ತು ಶೈಕ್ಷಣಿಕ ಆಡಳಿತ ಮಂಡಳಿ ಸಭೆಯಲ್ಲಿ ಗಂಗಾವತಿಗೆ ಪ್ರತ್ಯೇಕ ಸ್ನಾತಕೋತ್ತರ ಕೇಂದ್ರ ಆರಂಭ ಮಾಡಲು ಸುಮಾರು 20 ಲಕ್ಷ ರೂ. ಮೀಸಲಿಟ್ಟು ವಿಶೇಷ ಆಡಳಿತಾಧಿಕಾರಿಯನ್ನು ನೇಮಿಸಿತ್ತು.
ಈ ಮಧ್ಯೆ ಇರಕಲ್ಗಡಾ ಮತ್ತು ಆನೆಗೊಂದಿ ಭಾಗದಲ್ಲಿ ಪಿಜಿ ಕೇಂದ್ರ ಆರಂಭ ಮಾಡಲು ಅಂದಿನ ಶಾಸಕ ಇಕ್ಬಾಲ್ ಅನ್ಸಾರಿ ಸರಕಾರಿ ಭೂಮಿಯನ್ನು ಸರ್ವೇ ಮಾಡುವಂತೆ ಗಂಗಾವತಿ ಹಾಗೂ ಕೊಪ್ಪಳ ತಹಶೀಲ್ದಾರ್ ಕಚೇರಿಗೆ ಪತ್ರ ಬರೆದು ಸೂಚಿಸಿದ್ದರು. ನಂತರ ನಡೆದ ಬೆಳವಣಿಗೆಯಲ್ಲಿ ಗಂಗಾವತಿ ಪಿಜಿ ಕೇಂದ್ರವನ್ನು ಅಂದಿನ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಅವರು ಯಲಬುರ್ಗಾಕ್ಕೆ ಸ್ಥಳಾಂತರ ಮಾಡಿಸಿದ್ದರು. ಈ ಕುರಿತು ಹಲವು ಭಾರಿ ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆ ನಡೆಸಿದರೂ ಪ್ರಯೋಜನವಾಗಲಿಲ್ಲ.
ಸ್ನಾತಕೋತ್ತರ ಕೇಂದ್ರ ಆರಂಭಕ್ಕೆ ಅಧಿಕ ಪದವಿ ಕಾಲೇಜುಗಳಿರಬೇಕು. ಸ್ಥಳೀಯ ವಿದ್ಯಾರ್ಥಿಗಳು ಈಗಾಗಲೇ ಅನ್ಯ ವಿಶ್ವವಿದ್ಯಾಲಯದಲ್ಲಿ ಪಿಜಿ ಕೋರ್ಸ್ ಮಾಡುವ ಅಂಕಿ ಸಂಖ್ಯೆ ಗಮನಿಸಿ ಸ್ಥಳೀಯ ಜನಪ್ರತಿನಿಧಿಗಳು, ಉನ್ನತ ಶಿಕ್ಷಣ ಸಚಿವರು ಪಿಜಿ ಕೇಂದ್ರ ಆರಂಭ ಮಾಡಲು ಸರಕಾರ ಮತ್ತು ವ್ಯಾಪ್ತಿಯ ವಿವಿಗಳಿಗೆ ಪತ್ರ ಬರೆಯಬೇಕು. ಗಂಗಾವತಿ, ಕಾರಟಗಿ, ಕನಕಗರಿ ತಾಲೂಕಿನಲ್ಲಿ ಒಟ್ಟು 24 ಪದವಿ ಕಾಲೇಜುಗಳಿದ್ದು ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳಿದ್ದಾರೆ. ಪಿಜಿ ಕೋರ್ಸ್ ಓದಲು ವಿದ್ಯಾರ್ಥಿನಿಯರಿಗೆ ಅವಕಾಶ ಕಡಿಮೆ ಇದೆ. ಸ್ಥಳೀಯವಾಗಿ ಪಿಜಿ ಕೋರ್ಸ್ ಇದ್ದರೆ ವಿದ್ಯಾಭ್ಯಾಸ ಮಾಡಲು ಅನುಕೂಲವಾಗುತ್ತದೆ.
ಸದ್ಯ ಗಂಗಾವತಿಯ ಕೊಲ್ಲಿನಾಗೇಶ್ವರಾವ್ ಸರಕಾರಿ ಮಹಾವಿದ್ಯಾಲಯದಲ್ಲಿ ಇತಿಹಾಸ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರ, ಕನ್ನಡ, ಸಮಾಜಶಾಸ್ತ್ರ, ಪತ್ರಿಕೋದ್ಯಮ ಕೋರ್ಸ್‌ಗಳಿಗೆ ತಲಾ 30 ಸೀಟ್‌ಗಳು ವಾಣಿಜ್ಯ ಶಾಸ್ತ್ರದ ಕೋರ್ಸ್‌ಗೆ 120 ಸೀಟುಗಳಿವೆ. ಎರಡು ವರ್ಷಗಳಿಂದ ಪಿಜಿ ಕೋರ್ಸ್ ಸೇರಬಯಸುವವರ ಸಂಖ್ಯೆ ಅಧಿಕವಾಗಿದೆ. ಪಿಜಿ ಓದ ಬಯಸುವವರು ಡೋನೇಶನ್ ಕೊಟ್ಟು ಕೊಪ್ಪಳ, ಹೊಸಪೇಟೆ, ಬಳ್ಳಾರಿ, ಗದಗ, ಹುಬ್ಬಳ್ಳಿ, ಧಾರವಾಡದಲ್ಲಿ ವಿದ್ಯಾಭ್ಯಾಸ ಮಾಡುವ ಸ್ಥಿತಿ ಇದೆ. ಬಡ ಮತ್ತು ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸ್ನಾತಕೋತ್ತರ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.
ಸಂಸದರು ಶಾಸಕರು ಕೂಡಲೇ ಸರಕಾರದ ಮಟ್ಟದಲ್ಲಿ ಯತ್ನಿಸಿ ಉನ್ನತ ಶಿಕ್ಷಣ ಇಲಾಖೆಯ ಪರವಾನಗಿಯೊಂದಿಗೆ ಗಂಗಾವತಿಯಲ್ಲಿ ಪಿಜಿ ಕೇಂದ್ರ ಆರಂಭಕ್ಕೆ ಯತ್ನಿಸಬೇಕಿದೆ. ಗಂಗಾವತಿ ವಾಣಿಜ್ಯ ವಿಷಯದಲ್ಲಿ ಸಾಕಷ್ಟು ಸಾಧನೆ ಮಾಡಿದೆ. ಸಮೀಕ್ಷೆ ಪ್ರಕಾರ ಇಲ್ಲಿಯ ವಿದ್ಯಾರ್ಥಿಗಳು ಪದವಿ ನಂತರ ಸ್ನಾತಕ ಪದವಿ ಸೇರುವುದು ಬಹಳ ಕಡಿಮೆ. ಸ್ನಾತಕೋತ್ತರ ಕೇಂದ್ರ ಆರಂಭಿಸುವ ಮೂಲಕ ಗಂಗಾವತಿಯಲ್ಲಿ ಉನ್ನತ ಶಿಕ್ಷಣ ಕ್ರಾಂತಿ ಮಾಡಬೇಕಿದೆ.
•ಕೆ. ನಿಂಗಜ್ಜ