Advertisement

KR Nagar: ಬಾಲಕಿಯರಿಗೆ ಕಪಾಳಮೋಕ್ಷ ಖಂಡಿಸಿ ಪ್ರತಿಭಟನೆ

11:43 AM Oct 05, 2023 | Team Udayavani |

ಕೆ.ಆರ್‌.ನಗರ: ವಸತಿ ಶಾಲೆಯ ಪ್ರಾಂಶುಪಾಲರು ವಿದ್ಯಾರ್ಥಿನಿಯರ ಮೇಲೆ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿ ವಿದ್ಯಾರ್ಥಿಗಳು ಶಾಲೆಯ ಮುಂಭಾಗ ಬುಧುವಾರ ಪ್ರತಿಭಟನೆ ನಡೆಸಿದರು.

Advertisement

ತಾಲೂಕಿನ ಹಂಪಾಪುರದಲ್ಲಿ ಇರುವ  ಇಂದಿರಾಗಾಂಧಿ ವಸತಿ ಶಾಲೆಯ ಆವರಣದಲ್ಲಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು ಪ್ರಾಂಶುಪಾಲರ ವಿರುದ್ಧ ಧಿಕ್ಕಾರ ಕೂಗಿದರು. ತಕ್ಷಣ ಅವರನ್ನು ವರ್ಗಾವಣೆ ಮಾಡಬೇಕು. ಆಲ್ಲದೆ ಸಂಬಂಧಪಟ್ಟ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಸ್ಥಳಕ್ಕೆ ಆಗಮಿಸುವವರೆಗೂ ಧರಣಿ ನಡೆಸುತ್ತೇವೆ ಎಂದು ತಿಳಿಸಿದರು.

ಅ.2ರಂದು ಸೋಮವಾರ ಶಾಲೆ ಆವರಣದಲ್ಲಿ ನಡೆದ ಗಾಂಧೀಜಿ ಜಯಂತಿ ಆಚರಣೆ ಸಂದರ್ಭದಲ್ಲಿ ವಿದ್ಯಾರ್ಥಿನಿಯರಿಬ್ಬರು ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಲು ಕಿತ್ತಾಡುತ್ತಿರುವುದನ್ನು ಕಂಡು ಕೋಪಗೊಂಡ ಪ್ರಾಂಶುಪಾಲೆ ವೀಣಾಅಣ್ಣಯ್ಯಹೆಗ್ಡೆ ಸಾಲಿಗ್ರಾಮ ತಾಲೂಕಿನ ಕರ್ತಾಳು ಗ್ರಾಮದ 6ನೇ ತರಗತಿಯ ವರ್ಷಿಣಿ ಮತ್ತು ಮೇಲೂರು 7ನೇ ತರಗತಿಯ ಸೌಮ್ಯ ಎಂಬ ವಿದ್ಯಾರ್ಥಿನಿಯರಿಗೆ ಕಪಾಳಮೋಕ್ಷ ಮಾಡಿ ಹಲ್ಲೆ ಮಾಡಿದ್ದಾರೆ. ಈ ವಿಚಾರ ಸಿಸಿ ಕ್ಯಾಮೆರಾ ಮೂಲಕ ಶಾಲೆಯ ಇತರ ವಿದ್ಯಾರ್ಥಿಗಳ ಗಮನಕ್ಕೆ ಬಂದ ನಂತರ ಶಾಲಾ ಮಂತ್ರಿಮಂಡಲದ ಸಚಿವ ವಿದ್ಯಾರ್ಥಿಗಳು ಬುಧವಾರ ಮಧ್ಯಾಹ್ನದ ಊಟವನ್ನೂ ಸೇವಿಸದೆ ಪ್ರತಿಭಟನೆ ನಡೆಸಿದರು.

ವಿಷಯ ತಿಳಿದು ತಹಶೀಲ್ದಾರ್‌ ಸಿ.ಎಸ್‌.ಪೂರ್ಣಿಮಾ, ಕ್ಷೇತ್ರ ಶಿಕ್ಷಣಾಧಿಕಾರಿ ಆರ್‌.ಕೃಷ್ಣಪ್ಪ, ಬಿಸಿಎಂ ಇಲಾಖೆಯ ತಾಲೂಕು ವಿಸ್ತರಣಾಧಿಕಾರಿ ಚಂದ್ರಕಲಾ, ಪಿಎಸ್‌ಐ ಆರ್‌.ಧನರಾಜ್‌ ಸೇರಿದಂತೆ ಇತರ ಇಲಾಖಾ ಅಧಿಕಾರಿಗಳು ಹಾಗೂ ಕಾಂಗ್ರೆಸ್‌ ಮುಖಂಡ ಎಚ್‌.ಪಿ.ಪ್ರಶಾಂತ್‌ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾನಿರತ ಮಕ್ಕಳ ಆಹವಾಲುಗಳನ್ನು ಆಲಿಸಿ ಪ್ರಾಂಶುಪಾಲರನ್ನು ವರ್ಗಾವಣೆ ಮಾಡಿಸುವ ಭರವಸೆ ನೀಡಿದರೂ ಮಕ್ಕಳು ಇಲಾಖೆಯ ಜಿಲ್ಲಾಧಿಕಾರಿಗಳು ಬಂದು ಸಮಸ್ಯೆ ಬಗೆಹರಿಸುವವರೆಗೆ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.

ಶಾಲೆಯಲ್ಲಿ 6 ರಿಂದ 10ನೇ ತರಗತಿವರೆಗೆ ಒಟ್ಟು 216 ವಿದ್ಯಾರ್ಥಿಗಳು ಓದುತ್ತಿದ್ದು, ಪ್ರಾಂಶುಪಾಲರಿಂದ ಡಿ. ದರ್ಜೆಯ ನೌಕರರವರೆಗೆ 20 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಸರ್ಕಾರ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಮೂಲಭೂತ ಸವಲತ್ತುಗಳನ್ನು ನೀಡುತ್ತಿದ್ದರೂ ನೌಕರರು ಅವುಗಳನ್ನು ಸಮರ್ಪಕವಾಗಿ ಮಕ್ಕಳಿಗೆ ತಲುಪಿಸುವಲ್ಲಿ ವಿಫ‌ಲರಾಗಿದ್ದಾರೆ. ಇದಕ್ಕೆ ಸಾಕ್ಷಿ ಮೇಲ್ವಿಚಾರಕ ಲೋಕೇಶ ಗೈರು ಹಾಜರಾಗಿರುವುದು.

Advertisement

ಈ ಸಂದರ್ಭದಲ್ಲಿ ಹಾಜರಿದ್ದ ನೂರಾರು ಮಂದಿ ಪೋಷಕರು ಮಾತನಾಡಿ, ಸಾಲಿಗ್ರಾಮ ತಾಲೂಕು ಕುಪ್ಪಹಳ್ಳಿಯಲ್ಲಿದ್ದ ವಸತಿ ಶಾಲೆಯನ್ನು ಹಂಪಾಪುರಕ್ಕೆ ಸ್ಥಳಾಂತರಿಸಲಾಗಿದ್ದು, ತಾಲೂಕಿನ ದೂರದ ಗ್ರಾಮಗಳ ಮಕ್ಕಳನ್ನು ವಸತಿ ಶಾಲೆಯ ಸಿಬ್ಬಂದಿಯನ್ನು ನಂಬಿ ದಾಖಲು ಮಾಡಿದ್ದೇವೆ. ಆದರೆ, ಇಲ್ಲಿನ ಸಿಬ್ಬಂದಿ ಮಕ್ಕಳ ಬಗ್ಗೆ ಬೇಜವಾಬ್ದಾರಿತನದಿಂದ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ಬೇಡಿಕೆ ಈಡೇರದಿದ್ದರೆ ಜಿಲ್ಲಾ ಕಚೇರಿ ಬಳಿ ಧರಣಿ:

ಬಿಸಿಎಂ ಇಲಾಖೆಯ ವಿದ್ಯಾರ್ಥಿ ನಿಲಯದ ಕಟ್ಟಡಕ್ಕೆ ವಸತಿ ಶಾಲೆಯನ್ನು ಸ್ಥಳಾಂತರಿಸಲಾಗಿದ್ದು, ಮಕ್ಕಳ ಸಂಖ್ಯೆಗೆ ತಕ್ಕಂತೆ ಕೊಠಡಿಗಳು ಇಲ್ಲದಿರುವುದರ ಜತೆಗೆ ಶುದ್ಧ ಕುಡಿಯುವ ನೀರು, ಶೌಚಾಲಯ ಸೇರಿದಂತೆ ಮೂಲಭೂತ ಸೌಕರ್ಯಗಳಿಲ್ಲ. ಇದರಿಂದ ನಮ್ಮ ಮಕ್ಕಳ ಶೈಕ್ಷಣಿಕ ಪ್ರಗತಿ ಕುಂಠಿತಗೊಂಡಿದೆ. ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸೇರಿದಂತೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳಿಗೆ ದೂರು ನೀಡಿದರೂ ಇಲ್ಲಿಯವರೆಗೆ ಸಮಸ್ಯೆಗಳಿಗೆ ಪರಿಹಾರ ಒದಗಿಸಿಲ್ಲ ಎಂದು ಪೋಷಕರು ದೂರಿದರು. ವಿದ್ಯಾರ್ಥಿಗಳ ಮೇಲೆ ಸದಾ ದ್ವೇಷದ ಮನೋಭಾವನೆಯನ್ನಿಟ್ಟುಕೊಂಡು ಕಾರ್ಯನಿರ್ವಹಿಸುತ್ತಿರುವ ಶಾಲೆಯ ಪ್ರಾಂಶುಪಾಲೆ ವೀಣಾ ಅಣ್ಣಯ್ಯಹೆಗ್ಡೆ ಅವರನ್ನು ಕೂಡಲೇ ವರ್ಗಾವಣೆಗೊಳಿಸಿ ಬದಲಿ ಪ್ರಾಂಶುಪಾಲರನ್ನು ನೇಮಕ ಮಾಡಿ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಕಲ್ಪಿಸಿಕೊಡಬೇಕು.  ಬೇಡಿಕೆಗಳು ಈಡೇರದಿದ್ದರೆ ಇಲಾಖೆಯ ಜಿಲ್ಲಾ ಕಚೇರಿಯ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next