Advertisement

ಸನಿಹದಿಂದಲೇ ಬಾಹ್ಯಾಕಾಶ ವೀಕ್ಷಿಸಿ ಖುಷಿ ಪಟ್ಟ ವಿದ್ಯಾರ್ಥಿ, ಸಾರ್ವಜನಿಕರು

09:55 PM Nov 06, 2019 | mahesh |

ಮಹಾನಗರ: ಕಣ್ಣಿಗೆ ನಿಲುಕದಷ್ಟು ಎತ್ತರದಲ್ಲಿರುವ ಆಕಾಶ, ಆಕಾಶಕಾಯಗಳನ್ನು ಸನಿಹದಿಂದಲೇ ನೋಡುವ ಅವಕಾಶ…ಚಂದ್ರಲೋಕಕ್ಕೆ ಖುದ್ದು ಪಯಣಿಸಿ ಬಂದ ಅನುಭವ…, ರಾಕೆಟ್‌ ಉಡಾವಣೆ, ಸ್ಯಾಟಲೈಟ್‌ಗಳ ಕಾರ್ಯಗಳು..ಎಲ್ಲವನ್ನು ಹತ್ತಿರದಿಂದ ವೀಕ್ಷಿಸುವ ಖುಷಿ…ಅಷ್ಟಕ್ಕೂ ಇದೆಲ್ಲವೂ 3ಡಿ ಮಹಿಮೆ…

Advertisement

ಖಗೋಳಶಾಸ್ತ್ರ ಲೋಕದ ಸಮಗ್ರ ಪರಿಚಯ, ಬಾಹ್ಯಾಕಾಶ ತಂತ್ರಜ್ಞಾನದ ಬಗ್ಗೆ ವಿದ್ಯಾರ್ಥಿ, ಸಾರ್ವಜನಿಕರಲ್ಲಿ ಆಸಕ್ತಿ ಹುಟ್ಟಿಸುವ ಸಲುವಾಗಿ ಮಂಗಳೂರಿನ ಪಿಲಿಕುಳ ತ್ರೀಡಿ ತಾರಾಲಯದಲ್ಲಿ ಬುಧವಾರದಿಂದ ಆರಂಭಗೊಂಡ 3ಡಿ ಮತ್ತು 2ಡಿ ಅಂತಾರಾಷ್ಟ್ರೀಯ ಫುಲ್‌ ಡೋಮ್‌ ಚಿತ್ರೋತ್ಸವದಲ್ಲಿ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಮೊದಲ ದಿನದ ಪ್ರದರ್ಶನವನ್ನು ನೋಡಿ ಸಂಭ್ರಮಿಸಿದರು.

ಸ್ಕೈ ನೈಟ್‌-ಬರ್ತ್‌ ಆಫ್‌ ದಿ ಪ್ಲಾನೆಟ್‌-2ಡಿ, ಡೈನೋಸರ್ ಅಟ್‌ ಡಸ್ಕ್-3ಡಿ, ಅಪೋಲೋ 11 ಪ್ಲಸ್‌ ಡಿ6 ಸಿಮ್ಯುಲೇಶನ್‌-2ಡಿ, ವೈಲೆಸ್ಟ್‌ ವೆದರ್‌ ಇನ್‌ ಸೋಲಾರ್‌ ಸಿಸ್ಟಮ್‌-3ಡಿ, ಸ್ಪೇಸ್‌ ನೆಕ್ಸ್‌ r-3ಡಿ ಚಿತ್ರಗಳನ್ನು ಬುಧವಾರ ಏರ್ಪಡಿಸಲಾಗಿತ್ತು. 3ಡಿ ಕನ್ನಡಕಗಳನ್ನು ಹಾಕಿಕೊಂಡು ಈ ಚಿತ್ರಗಳನ್ನು ವೀಕ್ಷಿಸುವುದರಲ್ಲಿರುವ ಸಂಭ್ರಮವೇ ಬೇರೆ. ಆಕಾಶಕಾಯಗಳು, ರಾಕೆಟ್‌ ಚಂದ್ರಲೋಕ ಪ್ರಯಾಣ, ಮಾನವ ಸಹಿತ ಮತ್ತು ಮಾನವರಹಿತ ರಾಕೆಟ್‌ ಉಡಾವಣೆಯ ದೃಶ್ಯಗಳು, ಅಲ್ಲಿನ ರೋಚಕ ಸನ್ನಿವೇಶಗಳು ಸೇರಿದಂತೆ ಬಾಹ್ಯಾಕಾಶ ಸಂಸ್ಥೆ ಮತ್ತು ಬಾಹ್ಯಾಕಾಶದಲ್ಲಾಗುವ ಪ್ರತಿ ಚಟುವಟಿಕೆಗಳನ್ನು ಸನಿಹದಿಂದಲೇ ನೋಡಿ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಕಣ್ತುಂಬಿಕೊಂಡರು. 3ಡಿ ಮತ್ತು 2ಡಿ ಚಿತ್ರಗಳ ವೀಕ್ಷಣೆ ವಿದ್ಯಾರ್ಥಿಗಳಲ್ಲಿ ಬಾಹ್ಯಾಕಾಶ ತಂತ್ರಜ್ಞಾನಗಳ ಬಗ್ಗೆ ಕುತೂಹಲ ಮತ್ತು ಆಸಕ್ತಿ ಹುಟ್ಟಿಸುವುದು ಸ್ಪಷ್ಟ ಎಂದು ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ವಿಶೇಷ ಕಾರ್ಯದರ್ಶಿ ಡಾ| ಎಚ್‌. ಹೊನ್ನೇಗೌಡ ತಿಳಿಸಿದರು.

ಸಂಚಾರಿ ತಾರಾಲಯ ಆಕರ್ಷಣೆ
ಶಾಲಾ ವಿದ್ಯಾರ್ಥಿಗಳಿಗೆ ವಿಶೇಷ ಆಕರ್ಷಣೆಯಾಗಿ ಎರಡು ಸಂಚಾರಿ ತಾರಾಲಯಗಳನ್ನು ಖಗೋಳಶಾಸ್ತ್ರ ಸಂಬಂಧಿ ಕಾರ್ಯಕ್ರಮ, ಚಿತ್ರ ಪ್ರದರ್ಶನಗಳನ್ನು ವೀಕ್ಷಿಸಲು ಸಿದ್ಧಪಡಿ ಸಲಾಗಿತ್ತು. ಈ ತಾರಾಲಯಗಳಲ್ಲಿಯೂ ವಿದ್ಯಾರ್ಥಿಗಳು ಚಿತ್ರ ವೀಕ್ಷಿಸಿ ಖುಷಿ ಪಟ್ಟರು. ವಿಜ್ಞಾನ, ತಂತ್ರಜ್ಞಾನ ಇಲಾಖೆಗೆ ಸಂಬಂಧಿಸಿದ ಸಂಸ್ಥೆಗಳಿಂದ ಶೈಕ್ಷಣಿಕ ವಸ್ತು ಪ್ರದರ್ಶನವನ್ನೂ ಆಯೋಜಿಸಲಾಗಿತ್ತು.

ಬಸ್‌ನಲ್ಲಿ ಬಾಹ್ಯಾಕಾಶ ಪ್ರಪಂಚ
ವಿಶ್ವೇಶ್ವರಯ್ಯ ಮ್ಯೂಸಿಯಂನ ಸಹಕಾರ ದಿಂದ ಬಾಹ್ಯಾಕಾಶ ವಿಜ್ಞಾನ ಮ್ಯೂಸಿಯೋ ಬಸ್‌ ವ್ಯವಸ್ಥೆ ಮಾಡಿ ಬಾಹ್ಯಾಕಾಶ ಚಟುವಟಿಕೆಗಳ ಬಗ್ಗೆ ಚಿತ್ರ ಮಾಹಿತಿ ಒದಗಿಸಲಾಗುತ್ತಿದೆ. ಈಗಾಗಲೇ ಕ್ಯಾಲಿಕಟ್‌ ಪ್ರಾದೇಶಿಕ ವಿಜ್ಞಾನ ಕೇಂದ್ರದ ವತಿಯಿಂದ ಕೇರಳದ ಒಂದು ಬಸ್‌ ಆಗಮಿಸಿದೆ.

Advertisement

ನ. 10ರ ವರೆಗೆ ಪ್ರದರ್ಶನ
ಚಿತ್ರ ಪ್ರದರ್ಶನವು ನ. 10ರ ವರೆಗೆ ಸಾರ್ವಜನಿಕರಿಗಾಗಿ ಮುಂದುವರಿಯಲಿದೆ. 7ರಂದು ಜಿಲ್ಲೆಯ ಸರಕಾರಿ ಶಾಲೆಗಳ ಆಯ್ದ ವಿದ್ಯಾರ್ಥಿಗಳಿಗೆ ವೀಕ್ಷಣೆಗೆ ಅವಕಾಶ ಒದಗಿಸಲಾಗಿದೆ. ಪ್ರದರ್ಶನ ವೀಕ್ಷಣೆಗೆ ಬುಕ್‌ ಮೈ ಶೋನಲ್ಲಿ ಮುಂಗಡ ಕಾಯ್ದಿರಿಸಿಕೊಳ್ಳಬಹುದು. ಸ್ಥಳದಲ್ಲೇ ನೋಂದಣಿಗೂ ಅವಕಾಶವಿದೆ.

Advertisement

Udayavani is now on Telegram. Click here to join our channel and stay updated with the latest news.

Next