Advertisement

ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣ ತನಿಖೆಗೆ ಆಗ್ರಹಿಸಿ ಪ್ರತಿಭಟನೆ

04:01 PM Apr 11, 2017 | Team Udayavani |

ಕಲಬುರಗಿ: ಆಳಂದ ತಾಲೂಕು ಕಡಗಂಚಿಯಲ್ಲಿರುವ ಕರ್ನಾಟಕ ಕೇಂದ್ರಿಯ ವಿವಿ ಬಿಬಿಎ ಮೂರನೇ ವರ್ಷದ ದಲಿತ ವಿದ್ಯಾರ್ಥಿ ಆನಂದ ಶಕ್ತಿರಾಜ ಆತ್ಮಹತ್ಯೆಗೆ ಶರಣಾಗಿದ್ದು, ಇದಕ್ಕೆ ವಿವಿಯೇ ನೇರ ಹೊಣೆಯಾಗಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಸಂತ್ರಸ್ಥ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ದಲಿತ ಹಕ್ಕುಗಳ ಸಮಿತಿ ಕರ್ನಾಟಕ ಸಂಘಟನೆ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. 

Advertisement

ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದ ಪ್ರತಿಭಟನಾಕಾರರು, ಉತ್ತರ ಪ್ರದೇಶ ವಾರಣಾಸಿ ಜಿಲ್ಲೆಯ ಚಂಡೋಲಿಯ ಆನಂದ ಶಕ್ತಿರಾಜ ಬಿಬಿಎ ಮೂರನೇ ವರ್ಷದ ವಿದ್ಯಾರ್ಥಿ. ಏ.7ರಂದು ತನ್ನ ವಸತಿ ನಿಲಯದ ಕೊಠಡಿಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಕಳೆದ 15 ದಿನಗಳ ಹಿಂದೆ ವಿವಿ ಆಡಳಿತ ಮಂಡಳಿ ಸಭೆ ನಡೆಸಿ ಹೊರ ರಾಜ್ಯಗಳ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳಿಗೆ ನಿಮ್ಮ ರಾಜ್ಯ ಸರ್ಕಾರಗಳು ವಿದ್ಯಾರ್ಥಿ ವೇತನ ಮಂಜೂರು ಮಾಡುವಲ್ಲಿ ವಿಳಂಬವಾಗುತ್ತಿದೆ. ಆದ್ದರಿಂದ ವಸತಿ ನಿಲಯದ ಊಟದ ಬಾಬತ್ತು ಸ್ವತಃ ನೀವೇ ಕಟ್ಟಬೇಕು ಎಂದು ಒತ್ತಾಯಿಸಿದ್ದಾರೆ. 

ತೀವ್ರ ಬಡತನದ ವಿದ್ಯಾರ್ಥಿಯಾಗಿದ್ದ ಆನಂದ ಶಕ್ತಿರಾಜ್‌ ಊಟದ ಶುಲ್ಕ ಕಟ್ಟಲಾಗದೇ ಸಂಕೋಚಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದರು. ಆನಂದ ಶಕ್ತಿರಾಜ್‌ನ ಪಾರ್ಥಿವ ಶರೀರವನ್ನು ಉತ್ತರ ಪ್ರದೇಶದ ಹುಟ್ಟೂರಿಗೆ ಕಳಿಸಲು ನಿರ್ಧರಿಸಿದ್ದು ಸ್ವಾಗತಾರ್ಹ. 

ಆದರೂ ಪಾರ್ಥಿವ ಶರೀರ ಕೆಡದಂತೆ ಸಂರಕ್ಷಿಸಲು ಯಾವುದೇ ಕ್ರಮ ಕೈಗೊಳ್ಳದೇ ಇರುವುದು ಗಂಭೀರ ವಿಷಯವಾಗಿದೆ. ಪಾರ್ಥಿವ ಶರೀರ ಕೆಡದಂತೆ ನೋಡಿಕೊಳ್ಳದೇ ಇದ್ದದ್ದರಿಂದ ಕೊಳೆತು ನಾರಲಾರಂಭಿಸಿತು. ಇದರಿಂದಾಗಿ ವಿಮಾನಯಾನ ಸಂಸ್ಥೆಯು ಕೊಳೆತ ಶವವನ್ನು ಸಾಗಿಸಲು ನಿರಾಕರಿಸಿತು. 

Advertisement

ಕೊನೆಗೆ ಹೈದ್ರಾಬಾದನಲ್ಲಿ ದಲಿತ ವಿದ್ಯಾರ್ಥಿ ಶವವನ್ನು ಸುಟ್ಟು ಹಾಕುವ ಮೂಲಕ ದಲಿತ ಸಮುದಾಯಕ್ಕೆ ಅವಮಾನ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಮಿತಿ ರಾಜ್ಯ ಸಹ ಸಂಚಾಲಕ ಮಾರುತಿ ಮಾನ್ಪಡೆ, ಶರಣಬಸಪ್ಪ ಮಮಶೆಟ್ಟಿ, ಅಶೋಕ ಮ್ಯಾಗೇರಿ, ಸುಭಾಷ ಹೊಸ್ಮನಿ ಹಾಗೂ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next