ಇಳಕಲ್ಲ: ರಾಯಚೂರಿನ ಇಂಜಿನಿಯರ್ ಕಾಲೇಜಿನ ವಿದ್ಯಾರ್ಥಿನಿಯೋರ್ವರ ಸಾವು ಸಂಶಯಾಸ್ಪದವಾಗಿದೆ. ಕಾರಣ ಅವರ ಸಾವಿನ ತನಿಖೆ ಕೇವಲ ಕಾಟಾಚಾರಕ್ಕೆ ಆಗದೆ ಅದು ನಿಷ್ಪಕ್ಷಪಾತದಿಂದ ಆಗಬೇಕು ಎಂದು ತಾಲೂಕಿನ ಎಲ್ಲ ವಿಶ್ವಕರ್ಮ ಸಮಾಜ ಬಾಂಧವರು ಆಗ್ರಹಿಸಿದರು.
ಮೌನ ಮೆರವಣಿಗೆಯಲ್ಲಿ ನೂರಾರು ಅಕ್ಕಸಾಲಿಗರು, ವಿಶ್ವಕರ್ಮ ಸಮಾಜದ ಯುವಕರು ಹಾಗೂ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
Advertisement
ಇಲ್ಲಿಯ ಗಾಂಧಿ ಚೌಕದಿಂದ ಮೇಣಬತ್ತಿ ಹಿಡಿದು ನಗರದ ಪ್ರಮುಖ ಬೀದಿಗಳಲ್ಲಿ ಮೌನ ಮೆರವಣಿಗೆ ಮೂಲಕ ಸಂಚರಿಸಿ ಕಂಠಿ ವೃತ್ತದಲ್ಲಿ ಒಂದು ನಿಮಿಷ ಮೌನ ಆಚರಿಸಿದರು. ಸಮ್ಮಿಶ್ರ ಸರಕಾರದ ಆಡಳಿತದಲ್ಲಿ ಗೂಂಡಾಗಳನ್ನು ನಿಯಂತ್ರಿಸಲು ವಿಫಲವಾಗಿದ್ದು, ಇದರಿಂದ ಇಂಥ ಅನೇಕ ವಿದ್ಯಾರ್ಥಿಗಳು ಕಿರುಕುಳ ಅನುಭವಿಸುವಂತಾಗಿದೆ. ಮುಖ್ಯ ಮಂತ್ರಿಗಳು ರಾಜ್ಯದಲ್ಲಿರುವ ವಿದ್ಯಾರ್ಥಿನಿಯರಿಗೆ ಸೂಕ್ತ ರಕ್ಷಣೆ ಒದಗಿಸಬೇಕು. ವಿದ್ಯಾರ್ಥಿನಿ ಸಾವಿಗೆ ಕಾರಣರಾದವರನ್ನು ಶೀಘ್ರದಲ್ಲಿ ಗಲ್ಲು ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿದರು.