Advertisement

ಭೂಸ್ವಾಧೀನ ಪ್ರಕರಣ ಇತ್ಯರ್ಥಕ್ಕೆ ಪ್ರಾಧಿಕಾರ ರಚನೆ

03:45 AM Jan 16, 2017 | |

ಬೆಂಗಳೂರು: ಹೊಸ ಭೂಸ್ವಾಧೀನ ಕಾಯ್ದೆಯನ್ವಯ ಭೂಸ್ವಾಧೀನ ಕುರಿತ ಪ್ರಕರಣಗಳ ತ್ವರಿತ ವಿಲೇವಾರಿಗಾಗಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಭೂಸ್ವಾಧೀನ, ಪುನಶ್ಚೇತನ ಮತ್ತು ಪುನರ್ವಸತಿ ಪ್ರಾಧಿಕಾರ ರಚಿಸಿ ಸರ್ಕಾರ ಆದೇಶ ಹೊರಡಿಸಿದೆ. ಅಲ್ಲದೆ, ಈ ಪ್ರಾಧಿಕಾರಗಳಿಗೆ ಪೀಠಾಸೀನ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. 

Advertisement

ಆಯಾ ಜಿಲ್ಲೆಯ ಒಂದನೇ ಹೆಚ್ಚುವರಿ ಮತ್ತು ಜಿಲ್ಲಾ ನ್ಯಾಯಾಧೀಶರನ್ನು ಪೀಠಾಸೀನ ಅಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದ್ದು, ಈ ಹುದ್ದೆ ಲಭ್ಯವಿಲ್ಲದ ಕಡೆ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶರು ಪ್ರಾಧಿಕಾರದ ಪೀಠಾಸೀನ ಅಧಿಕಾರಿಗಳಾಗಿರುತ್ತಾರೆ ಎಂದು ಕಂದಾಯ ಇಲಾಖೆ ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ.

ಇದರೊಂದಿಗೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನ್ಯಾಯಯುತ ಪರಿಹಾರ ಮತ್ತು ಪಾರದರ್ಶಕ ಭೂಸ್ವಾಧೀನ, ಪುನಶ್ಚೇತನ ಮತ್ತು ಪುನರ್ವಸತಿ ಕಾಯ್ದೆ-2013ರ ಅನ್ವಯ ರಾಜ್ಯದಲ್ಲಿ ಭೂಸ್ವಾಧೀನ ಪ್ರಕ್ರಿಯೆ ಕೈಗೊಳ್ಳಲು ಪೂರ್ವಸಿದ್ಧತೆಗಳನ್ನು ಸರ್ಕಾರ ಬಹುತೇಕ ಪೂರ್ಣಗೊಳಿಸಿದಂತಾಗಿದೆ. ಇನ್ನು ಮುಂದೆ ಹೊಸ ಭೂಸ್ವಾಧೀನ ಕಾಯ್ದೆ ಪ್ರಕಾರವೇ ಪರಿಹಾರ ಮತ್ತು ಪುನರ್ವಸತಿ ಕಲ್ಪಿಸುವ ಕಾರ್ಯವನ್ನು ಹೊಸದಾಗಿ ರಚಿಸಿರುವ ಪ್ರಾಧಿಕಾರಗಳು ಮಾಡಲಿವೆ. 

ಅಷ್ಟೇ ಅಲ್ಲ, ಸುಪ್ರೀಂಕೋರ್ಟ್‌, ಹೈಕೋರ್ಟ್‌ ಹೊರತುಪಡಿಸಿ ಇತರ ಯಾವುದೇ ನ್ಯಾಯಾಲಯಗಳು ಭೂಸ್ವಾಧೀನ ಸಂಬಂಧಿ ಅರ್ಜಿಗಳ ವಿಚಾರಣೆ ನಡೆಸುವಂತಿಲ್ಲ. ಹೈಕೋರ್ಟ್‌ ಕೆಳಹಂತದಲ್ಲಿ ಕೇವಲ ಪ್ರಾಧಿಕಾರ ಮಾತ್ರ ಇವುಗಳ ವಿಚಾರಣೆ ನಡೆಸಬೇಕಿದ್ದು, ಅದಕ್ಕಾಗಿ ಪ್ರಾಧಿಕಾರಕ್ಕೆ ನ್ಯಾಯಾಂಗದ ಅಧಿಕಾರವನ್ನೇ ಕಾಯ್ದೆಯಲ್ಲಿ ನೀಡಲಾಗಿದೆ. ಜತೆಗೆ, ಪ್ರಾಧಿಕಾರ ನೀಡುವ ಆದೇಶಗಳನ್ನು ಹೈಕೋರ್ಟ್‌ನಲ್ಲಿ ಮಾತ್ರ ಪ್ರಶ್ನಿಸಬಹುದು.

ಏನಿದು ಪ್ರಾಧಿಕಾರ?: 
ವಿವಿಧ ಯೋಜನೆಗಳಿಗೆ ಸರ್ಕಾರ ಭೂಮಿ ಸ್ವಾಧೀನಪಡಿಸಿಕೊಳ್ಳುವ ಸಂದರ್ಭದಲ್ಲಿ ಭೂಮಾಲೀಕರಿಗೆ ಪರಿಹಾರ ಒದಗಿಸಬೇಕು. ಸಾಕಷ್ಟು ಸಂದರ್ಭದಲ್ಲಿ ಭೂಸ್ವಾಧೀನ ಕುರಿತಂತೆ ವಿವಾದಗಳು ಉದ್ಭವವಾಗಿ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರುವುದರಿಂದ ಭೂಸ್ವಾಧೀನ ವಿಳಂಬವಾಗಿ ಸರ್ಕಾರದ ಯೋಜನೆಗಳು ಕುಂಟುತ್ತಾ ಸಾಗುತ್ತವೆ. ಈ ವಿಳಂಬ ತಪ್ಪಿಸುವ ಉದ್ದೇಶದಿಂದ ಭೂಸ್ವಾಧೀನ ಸಂದರ್ಭದಲ್ಲಿ ಭೂ ಮಾಲೀಕರಿಗೆ ಪರಿಹಾರ, ಪುನಶ್ಚೇತನ ಮತ್ತು ಪುನರ್ವಸತಿ ಕಲ್ಪಿಸುವ ಕಾರ್ಯವನ್ನು ತ್ವರಿತವಾಗಿ ಇತ್ಯರ್ಥಗೊಳಿಸಲು ಭೂಸ್ವಾಧೀನ, ಪುನಶ್ಚೇತನ ಮತ್ತು ಪುನರ್ವಸತಿ ಪ್ರಾಧಿಕಾರ ರಚಿಸುವ ಬಗ್ಗೆ 2013ರ ಕಾಯ್ದೆಯಲ್ಲಿ ಕೇಂದ್ರ ಪ್ರಸ್ತಾಪಿಸಿತ್ತು. ಈ ಕಾಯ್ದೆಯನ್ನು ರಾಜ್ಯದಲ್ಲೂ ಅನುಷ್ಠಾನಗೊಳಿಸಲು ನಿರ್ಧರಿಸಿದ್ದ ರಾಜ್ಯ ಸರ್ಕಾರ, 2015ರಲ್ಲಿ ನಿಯಮಾವಳಿಗಳನ್ನು ರೂಪಿಸಿತ್ತು. ಅದರಂತೆ ಈಗ ಜಿಲ್ಲಾಮಟ್ಟದಲ್ಲಿ ಪ್ರಾಧಿಕಾರಗಳನ್ನು ರಚಿಸಿ, ಅವುಗಳಿಗೆ ಪೀಠಾಸೀನ ಅಧಿಕಾರಿಗಳನ್ನು ನೇಮಿಸಿ ಆದೇಶ ಹೊರಡಿಸಲಾಗಿದೆ.

Advertisement

ಪ್ರಾಧಿಕಾರಗಳಿಗೆ ಪೀಠಾಸೀನ ಅಧಿಕಾರಿಗಳನ್ನು ನೇಮಿಸುವಾಗ ಅವರು ಜಿಲ್ಲಾ ನ್ಯಾಯಾಧೀಶರಾಗಿರಬೇಕು ಅಥವಾ ಕನಿಷ್ಠ ಏಳು ವರ್ಷ ಕಾನೂನು ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದವರಾಗಿರಬೇಕು. ಅವರನ್ನು ನೇಮಕ ಮಾಡುವಾಗ ರಾಜ್ಯ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಬೇಕು ಎಂದು ಕಾಯ್ದೆಯಲ್ಲಿ ಹೇಳಲಾಗಿತ್ತು. ಇದೀಗ ರಾಜ್ಯ ಸರ್ಕಾರ ಹೆಚ್ಚುವರಿ ಮತ್ತು ಜಿಲ್ಲಾ ನ್ಯಾಯಾಧೀಶರು ಅಥವಾ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶರನ್ನು ಪೀಠಾಸೀನ ಅಧಿಕಾರಿಗಳಾಗಿ ನೇಮಕ ಮಾಡಿದೆ.

ಪ್ರತಿ ಪ್ರಾಧಿಕಾರಕ್ಕೆ ಪೀಠಾಸೀನ ಅಧಿಕಾರಿ ಜತೆಗೆ ಒಬ್ಬ ರಿಜಿಸ್ಟ್ರಾರ್‌ ಅವರನ್ನು ನೇಮಕ ಮಾಡಬೇಕು. ಜತೆಗೆ ಕಾರ್ಯದೊತ್ತಡಕ್ಕೆ ಅನುಗುಣವಾಗಿ ಪ್ರಾಧಿಕಾರಕ್ಕೆ ಬೇಕಾದ ಇತರ ಸಿಬ್ಬಂದಿಯನ್ನು ಒದಗಿಸಬೇಕಾಗುತ್ತದೆ.

ಪ್ರಾಧಿಕಾರ ರಚನೆ ಮತ್ತು ಅದಕ್ಕೆ ಪೀಠಾಸೀನ ಅಧಿಕಾರಿಗಳ ನೇಮಕ ವಿಚಾರದಲ್ಲಿ ಸರ್ಕಾರದ ತೀರ್ಮಾನವೇ ಅಂತಿಮವಾಗಿರುವುದರಿಂದ ಈ ಕುರಿತು ಬೇರೆ ಯಾವುದೇ ವಿವಾದ ಉದ್ಭವಿಸುವ ಸಾಧ್ಯತೆ ಇಲ್ಲ. ಆದರೆ, ಪ್ರಾಧಿಕಾರಕ್ಕೆ ಬೇಕಾದ ಅಗತ್ಯ ಮೂಲ ಸೌಕರ್ಯಗಳನ್ನು ಸರ್ಕಾರ ತಕ್ಷಣ ಒದಗಿಸಿ ಅವು ಶೀಘ್ರ ಕಾರ್ಯ ನಿರ್ವಹಿಸುವಂತೆ ಮಾಡುವುದೇ ಎಂಬುದನ್ನು ಕಾದು ನೋಡಬೇಕು.

ಯೋಜನೆಗಳು ತ್ವರಿತಗೊಳ್ಳುವ ಸಾಧ್ಯತೆ
ಭೂಸ್ವಾಧೀನ ವಿವಾದಗಳಿಂದಾಗಿ ಅತಿ ಹೆಚ್ಚು ಸಮಸ್ಯೆಗೊಳಗಾಗುವುದು ಅತಿ ಪ್ರಮುಖವಾದ ನೀರಾವರಿ, ರಸ್ತೆ ಮತ್ತು ರೈಲ್ವೆ ಯೋಜನೆಗಳು. ನ್ಯಾಯಾಲಯಗಳಲ್ಲಿ ಭೂಸ್ವಾಧೀನ ಕುರಿತ ವಿವಾದಗಳು ಇತ್ಯರ್ಥಗೊಳ್ಳುವುದು ತಡವಾಗುವುದರಿಂದ ಇಂತಹ ಪ್ರಮುಖ ಯೋಜನೆಗಳು ಜಾರಿಯಾಗಿ ದಶಕಗಳು ಕಳೆದರೂ ಪೂರ್ಣಗೊಳ್ಳುವುದಿಲ್ಲ. ಒಂದೆಡೆ ಯೋಜನೆ ವಿಳಂಬವಾಗುವುದರ ಜತೆಗೆ ಯೋಜನಾ ವೆಚ್ಚ ಏರಿಕೆಯಾಗಿ ಸರ್ಕಾರದ ಬೊಕ್ಕಸಕ್ಕೂ ಹೊರೆಯಾಗುತ್ತದೆ. ಕೆಲವು ಯೋಜನೆಗಳ ವೆಚ್ಚ ದುಪ್ಪಟ್ಟಾಗಿರುವ ಉದಾಹರಣೆಗಳೂ ಇವೆ. ಇನ್ನು ಕೆಲವೆಡೆ ದಶಕಗಳು ಕಳೆದರೂ ಭೂಸ್ವಾಧೀನ ವಿವಾದ ಇತ್ಯರ್ಥವಾಗಿಲ್ಲ. ಇದೀಗ ಪ್ರಾಧಿಕಾರಗಳ ರಚನೆಯಿಂದ ಕೆಳ ನ್ಯಾಯಾಲಯಗಳಲ್ಲಿ ಬಾಕಿ ಇರುವ ಭೂಸ್ವಾಧೀನ ವಿವಾದಗಳು ಪ್ರಾಧಿಕಾರಕ್ಕೆ ವರ್ಗಾವಣೆಯಾಗಲಿದ್ದು, ತ್ವರಿತವಾಗಿ ಇತ್ಯರ್ಥಗೊಳ್ಳುವ ಸಾಧ್ಯತೆ ಇದೆ.

– ಪ್ರದೀಪ್‌ ಕುಮಾರ್‌ ಎಂ.

Advertisement

Udayavani is now on Telegram. Click here to join our channel and stay updated with the latest news.

Next