Advertisement

ಪ್ರಬಲ ಸಾಕ್ಷ್ಯ ಇದ್ದರಷ್ಟೇ ಅಪರಾಧಿಗೆ ಶಿಕ್ಷೆ

04:26 PM Jul 06, 2018 | |

ಚಿತ್ರದುರ್ಗ: ಕಾನೂನು ಚೌಕಟ್ಟಿನಲ್ಲಿ ಸಾಕ್ಷಿಗಳನ್ನು ಕಟ್ಟಿ ಹಾಕಿದಾಗ ಮಾತ್ರ ಅಪರಾಧಿಗಳನ್ನು ಮಟ್ಟ ಹಾಕಬಹುದು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್‌.ಬಿ. ವಸ್ತ್ರಮಠ ಹೇಳಿದರು.

Advertisement

ಹಿರಿಯೂರು ತಾಲೂಕಿನ ಐಮಂಗಲ ಪೊಲೀಸ್‌ ತರಬೇತಿ ಶಾಲೆಯಲ್ಲಿ ದಾವಣಗೆರೆ ಪೂರ್ವ ವಲಯ ಮತ್ತು ಹುಬ್ಬಳ್ಳಿ-ಧಾರವಾಡ ನಗರದ ಸೇವಾನಿರತ ಮುಖ್ಯಪೇದೆಗಳಿಗೆ ಗುರುವಾರ ಆರಂಭಗೊಂಡ ಪುನಶ್ಚೇತನ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಅಪರಾಧ ಕೃತ್ಯಗಳಾದ ಮೋಸ, ವಂಚನೆ, ಕೊಲೆ, ಸುಲಿಗೆ, ದರೋಡೆ, ಅತ್ಯಾಚಾರ ಇವು ಯಾವಾಗ ಯಾವ ರೀತಿಯಲ್ಲಿ ಆಗುತ್ತವೆ ಎಂಬುದನ್ನು ನಿರೀಕ್ಷೆ ಮಾಡಲು ಆಗುವುದಿಲ್ಲ. ಹಾಗಾಗಿ ಎಲ್ಲಿ ಏನೇ ಅನಾಹುತಗಳು ನಡೆದಾಗ ಕೂಡಲೇ ಸ್ಥಳಕ್ಕೆ ತೆರಳಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಬೇಕು. ಆರೋಪಿಗಳು ಪೊಲೀಸರಿಗಿಂತಲೂ ಚಾಣಾಕ್ಷರಿರುತ್ತಾರೆ.

ಅದಕ್ಕಾಗಿ ಎಲ್ಲವನ್ನು ಸಂಶಯದ ದೃಷ್ಟಿಯಿಂದ ನೋಡಿ ವಿಚಾರಣೆ ನಡೆಸಬೇಕು. ಅಗತ್ಯ ಸಾಕ್ಷ್ಯಾಗಳನ್ನು ನ್ಯಾಯಾಲಯಕ್ಕೆ ಒದಗಿಸಿದಾಗ ಮಾತ್ರ ಅಪರಾಧಿಗಳಿಗೆ ಶಿಕ್ಷೆ ವಿಧಿಸಬಹುದು. ಇಲ್ಲವಾದಲ್ಲಿ ಶಿಕ್ಷೆಯಿಂದ ತಪ್ಪಿಸಿಕೊಳ್ಳುವ ಸಾಧ್ಯತೆಗಳಿರುತ್ತದೆ ಎಂದು ಎಚ್ಚರಿಸಿದರು. ಸರ್ಕಾರಿ ಕೆಲಸಕ್ಕೆ ಸೇರಿದ ಮೇಲೆ ಎಲ್ಲವೂ ಮುಗಿಯಿತೆಂದು ಸುಮ್ಮನೆ ಕೂರಬಾರದು.

ಜೀವನದಲ್ಲಿ ಕಲಿಯುವುದು ಸಾಕಷ್ಟಿದೆ. ವಕೀಲರು, ಪೊಲೀಸರು, ನ್ಯಾಯಾಧಿಧೀಶರು, ಅಧಿಕಾರಿಗಳು ದಿನವೂ ಕಲಿಯುವುದಿದೆ. ಜ್ಞಾನವನ್ನು ಬೆಳೆಸಿಕೊಂಡು ಎತ್ತರಕ್ಕೆ ಏರಿದಾಗ ಮಾತ್ರ ಸಮಾಜದ ವೇಗಕ್ಕೆ ಹೊಂದಿಕೊಂಡು
ಕೆಲಸ ಮಾಡಲು ನೆರವಾಗಲಿದೆ. ಇಲ್ಲವಾದಲ್ಲಿ ನಗೆಪಾಟಲಿಗೆ ಈಡಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

Advertisement

ಆಧುನಿಕ ಸಮಾಜದಲ್ಲಿ ಜ್ಞಾನವನ್ನು ಹೆಚ್ಚಿಸಿಕೊಂಡು ಕೆಲಸ ಮಾಡದಿದ್ದರೆ ಸಮಾಜದಲ್ಲಿ ಮೋಸ ವಂಚನೆಗೆ ಬಲಿಯಾಗಬೇಕಾಗುತ್ತದೆ. ಇಲ್ಲವಾದಲ್ಲಿ ಯಾಮಾರಿಸುವವರು ಇದ್ದೇ ಇರುತ್ತಾರೆ. ಭಾರತದಲ್ಲಿ ಎಷ್ಟೊಂದು ಅನ್ಯಾಯ, ಮೋಸ, ವಂಚನೆ ನಡೆಯುತ್ತದೆ ಎಂದು ಹಿಂದೆಯೇ ಇಂಗ್ಲೆಂಡಿನವರಿಗೆ ತಿಳಿದಿತ್ತು. ಹಾಗಾಗಿ ಬ್ರಿಟಿಷರು ನಮ್ಮ ದೇಶದಲ್ಲಿ ಬಿಟ್ಟುಹೋಗಿರುವ ಐಪಿಸಿಯನ್ನೇ ಹಿಡಿದುಕೊಂಡು ಹೋಗುತ್ತಿದ್ದೇವೆ.

ಸಮಾಜವನ್ನು ಕಾಯುವ ನಿಮ್ಮ ಮೇಲೆ ಸಾರ್ವಜನಿಕರು ಇಟ್ಟುಕೊಂಡಿರುವ ಗೌರವ ನಂಬಿಕೆಗೆ ಧಕ್ಕೆ ಬಾರದಂತೆ ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸಬೇಕು. ನಿಮ್ಮ  ಮೇಲಿರುವ ಸಮವಸ್ತ್ರಕ್ಕೆ ಸಿಗುವ ಗೌರವ ಬೇರೆ ಯಾರಿಗೂ
ಇಲ್ಲ. ಇದೊಂದು ಪವಿತ್ರವಾದ ಕೆಲಸ ಎಂದು ಭಾವಿಸಿ. ಯಾವುದೇ ಸಂದರ್ಭಗಳಲ್ಲಿ ನೊಂದು ನ್ಯಾಯ ಬಯಸಿ ಪೊಲೀಸ್‌ ಠಾಣೆಗೆ ಬರುವವರ ಬಳಿ ಕೆಟ್ಟದಾಗಿ ವರ್ತಿಸಬೇಡಿ. ಸೌಜನ್ಯದಿಂದ ಕಷ್ಟಗಳನ್ನು ಆಲಿಸಿ ಸಾಧ್ಯವಾದಷ್ಟು ನ್ಯಾಯ ಕೊಡಿಸುವ ಕೆಲಸ ಮಾಡಿ ಎಂದು ಮುಖ್ಯಪೇದೆಗಳಿಗೆ ಕಿವಿಮಾತು ಹೇಳಿದರು.

ಐಮಂಗಲ ಪೊಲೀಸ್‌ ತರಬೇತಿ ಶಾಲೆಯ ಪ್ರಾಂಶುಪಾಲ ಹಾಗೂ ಎಸ್ಪಿ ಪಿ. ಪಾಪಣ್ಣ ಅಧ್ಯಕ್ಷತೆ ವಹಿಸಿ ಮಾತನಾಡಿ ಪುನಶ್ಚೇತನ ಕಾರ್ಯಾಗಾರದಲ್ಲಿ ನ್ಯಾಯಾಧೀಶರು, ವಕೀಲರು, ಪೊಲೀಸ್‌ ಅಧಿಕಾರಿಗಳು ಹಾಗೂ ಸಂಪನ್ಮೂಲ
ವ್ಯಕ್ತಿಗಳು ತಿಳಿಸುವ ವಿಚಾರವನ್ನು ಗಮನವಿಟ್ಟು ಆಲಿಸಬೇಕು. ಅದನ್ನು ವೃತ್ತಿ ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದು ತಿಳಿಸಿದರು.

ನಿವೃತ್ತ ಡಿವೈಎಸ್ಪಿ ರುದ್ರಮುನಿ, ಸತೀಶ್‌, ಅಪರಾಧ ಶಾಸ್ತ್ರಜ್ಞ ಪ್ರೊ| ನಟರಾಜ್‌, ಆಕಾಶವಾಣಿಯ ಪ್ರದೀಪ್‌ಕುಮಾರ್‌, ಇನ್ಸಪೆಕ್ಟರ್‌ ವರದರಾಜ್‌ ಮತ್ತಿತರರು ಇದ್ದರು. ಅಮೂಲ್ಯ ಪ್ರಾರ್ಥಿಸಿದರು. ಇನ್ಸ್‌ಪೆಕ್ಟರ್‌ ಪರಶುರಾಮ ಸ್ವಾಗತಿಸಿದರು. ಸತೀಶ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next