Advertisement

ಮುರಿದ ಮುಷ್ಕರ ಮಾತು ಇನ್ನಷ್ಟು ಸಂಘಟನೆ ಸಾಥ್‌

03:45 AM Apr 04, 2017 | |

ಬೆಂಗಳೂರು: ಸರಕು ಸಾಗಣೆ ವಾಹನಗಳ ಮುಷ್ಕರ ಐದನೇ ದಿನಕ್ಕೆ ಕಾಲಿಟ್ಟಿದ್ದು, ವಿಮಾ ಶುಲ್ಕ ಬೇಡಿಕೆ ಕುರಿತು ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಸಿಡಿಎ) ಸೋಮವಾರ ನಡೆಸಿದ ಸಭೆ ಯಾವುದೇ ತೀರ್ಮಾನ ಕೈಗೊಳ್ಳದ ಕಾರಣ ಮುಷ್ಕರ ಮುಂದುವರಿಯುವಂತಾಗಿದೆ.

Advertisement

ಪ್ರಾಧಿಕಾರವು ಹೈದರಾಬಾದ್‌ನಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಸರಕು ಸಾಗಣೆ ವಾಹನ ಮಾಲೀಕರ ಸಂಘಟನೆಗಳ ಪ್ರತಿನಿಧಿಗಳು ವಿಮಾ ಶುಲ್ಕ ಇಳಿಕೆ ಬೇಡಿಕೆಗೆ ಸ್ಪಂದಿಸದ ಕಾರಣ ಸರಕು ಸಾಗಣೆ ವಾಹನಗಳ ಮಾಲೀಕರು ಅನಿರ್ದಿವಷ್ಟಾವಧಿ ಮುಷ್ಕರವನ್ನು ಇನ್ನಷ್ಟು ತೀವ್ರಗೊಳಿಸುವುದಾಗಿ ತಿಳಿಸಿದ್ದಾರೆ. 

ಈ ಮಧ್ಯೆ, ಐಸಿಡಿಎ ಸಭೆ ಯಶಸ್ವಿಯಾಗದ ಹಿನ್ನೆಲೆಯಲ್ಲಿ ಪೆಟ್ರೋಲಿಯಂ ಡೀಲರ್‌ಗಳು ಹಾಗೂ ಅಡುಗೆ ಅನಿಲ ಸಿಲಿಂಡರ್‌ ವಿತರಕರು ಮಂಗಳವಾರ ಸಭೆ ಕರೆದಿದ್ದು, ಅವರೂ ಹೋರಾಟಕ್ಕಿಳಿದರೆ ಜನ ತೀವ್ರ ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಲಿದೆ. ಇನ್ನೊಂದೆಡೆ ಅಖೀಲ ಭಾರತ ಮೋಟಾರ್‌ ಟ್ರಾನ್ಸ್‌ಪೊàರ್ಟ್‌ ಕಾಂಗ್ರೆಸ್‌ ಕೂಡ ಹೋರಾಟಕ್ಕೆ ಬೆಂಬಲ ಸೂಚಿಸುವ ಸಾಧ್ಯತೆಯಿದ್ದು, ಅದು ಮುಷ್ಕರಕ್ಕಿಳಿದರೆ ದೇಶಾದ್ಯಂತ ಸರಕು- ಸೇವೆ ವಿತರಣೆ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.

ನಾಲ್ಕು ದಿನಗಳ ಮುಷ್ಕರಿಂದ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಸರಕು- ಸೇವೆ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಬೆಂಗಳೂರಿಗೆ ತರಕಾರಿ, ಹಣ್ಣು ಪೂರೈಕೆಗೆ ಹೆಚ್ಚಿನ ಬಿಸಿ ತಟ್ಟದಿದ್ದರೂ ಆಹಾರಧಾನ್ಯಗಳ ಪೂರೈಕೆ ಸೋಮವಾರದಿಂದ ಸಂಪೂರ್ಣ ಸ್ಥಗಿತಗೊಂಡಿರುವುದು ಮುಂದಿನ ದಿನಗಳಲ್ಲಿ ಅಭಾವ ತಲೆದೋರುವ ಆತಂಕ ಮೂಡಿಸಿದೆ.

ಎಪಿಎಂಸಿ ಮಾರುಕಟ್ಟೆಗೆ ತಟ್ಟಿದ ಬಿಸಿ
ಗುರುವಾರ ಮಧ್ಯರಾತ್ರಿಯಿಂದ ಮುಷ್ಕರ ಆರಂಭವಾಗಿದ್ದರೂ ಆಹಾರ ಪದಾರ್ಥ, ತರಕಾರಿ ಪೂರೈಕೆಯಲ್ಲಿ ಹೆಚ್ಚಿನ ವ್ಯತ್ಯಾಸ ಕಂಡುಬಂದಿರಲಿಲ್ಲ. ಆದರೆ ಎಪಿಎಂಸಿ ಮಾರುಕಟ್ಟೆಗೆ ಸೋಮವಾರ ಬೇಳೆಕಾಳು, ಆಹಾರಧಾನ್ಯ ಪೂರೈಕೆ ಸಂಪೂರ್ಣ ಸ್ಥಗಿತಗೊಂಡಿತ್ತು. ಅಲ್ಲದೇ ಇತರೆ ಪ್ರದೇಶಕ್ಕೆ ಸಾಗಣೆಯೂ ಬಂದ್‌ ಆಗಿದೆ. ಸದ್ಯದ ದಾಸ್ತಾನು ಮಾರಾಟವಾಗುವವರೆಗೆ ಪರಿಸ್ಥಿತಿ ನಿಭಾಯಿಸಬಹುದಾಗಿದ್ದು, ನಂತರ ಅಭಾವ ಕಾಡುವ ಸಾಧ್ಯತೆ ಇದೆ.

Advertisement

ಆಹಾರಧಾನ್ಯಗಳಿಗೆ ಹೋಲಿಸಿದರೆ ತರಕಾರಿ, ಹಣ್ಣು ಪೂರೈಕೆಯಲ್ಲಿ ಹೆಚ್ಚಿನ ವ್ಯತ್ಯಾಸ ಉಂಟಾಗಿಲ್ಲ. ನಗರದ ಪ್ರಮುಖ ಮಾರುಕಟ್ಟೆಗಳು ಮಾತ್ರವಲ್ಲದೇ ಹಾಪ್‌ಕಾಮ್ಸ್‌ಗಳಲ್ಲೂ ಪೂರೈಕೆ ಬಹುತೇಕ ಯಥಾಸ್ಥಿತಿಯಲ್ಲಿದ್ದಂತಿದೆ. ಆದರೆ ಮುಷ್ಕರ ಮುಂದುವರಿದರೆ ಇದರಲ್ಲೂ ವ್ಯತ್ಯಯ ಉಂಟಾಗಿ ಜನ ಪರದಾಡುವ ಸ್ಥಿತಿ ನಿರ್ಮಾಣವಾಗುವ ಭೀತಿ ಮೂಡಿದೆ.

ಲಾರಿ ಮಾಲಿಕರು ನಡೆಸುತ್ತಿರುವ ಮುಷ್ಕರದಿಂದ ಸಾಕಷ್ಟು ಸಮಸ್ಯೆಯಾಗುತ್ತಿದೆ. ಹೀಗಾಗಿ ಮುಷ್ಕರ ವಾಪಸ್‌ ಪಡೆಯಬೇಕು. ರಾಜ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಮಾತುಕತೆ ನಡೆಸಿ ಪರಿಹರಿಸಿಕೊಡಲಾಗುವುದು. ಬಹುತೇಕ ಬೇಡಿಕೆಗಳು ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುತ್ತವೆ. ಲಾರಿ ಮಾಲಿಕರ ಮುಷ್ಕರ ಮುಂದುವರೆದರೆ, ಅಗತ್ಯ ವಸ್ತುಗಳ ಸಾಗಾಣಿಕೆಗೆ ಪರ್ಯಾಯ ವ್ಯವಸ್ಥೆ ಮಾಡುವ ಕುರಿತು ಚಿಂತನೆ ನಡೆದಿದೆ.
– ರಾಮಲಿಂಗಾರೆಡ್ಡಿ, ಸಾರಿಗೆ ಸಚಿವ 

ಸೋಮವಾರದ ಸಭೆ ವಿಫ‌ಲವಾಗಿರುವುದರಿಂದ ಹೋರಾಟ ತೀವ್ರಗೊಳಿಸಲಾಗುವುದು. ಏ.8ರಿಂದ ಅಖೀಲ ಭಾರತ ಮೋಟಾರ್‌ ಟ್ರಾನ್ಸ್‌ಪೊàರ್ಟ್‌ ಕಾಂಗ್ರೆಸ್‌ ಕೂಡ ಹೋರಾಟ ಬೆಂಬಲಿಸುವ ಭರವಸೆ ನೀಡಿದ್ದು, ರಾಷ್ಟ್ರಾದ್ಯಂತ ಮುಷ್ಕರ ತೀವ್ರಗೊಳಿಸಲಾಗುವುದು.
– ಜಿ.ಆರ್‌.ಷಣ್ಮುಖಪ್ಪ, ದಕ್ಷಿಣ ವಲಯ ಸಾಗಣೆದಾರರ ಕಲ್ಯಾಣ ಸಂಸ್ಥೆ ಅಧ್ಯಕ್ಷ  

Advertisement

Udayavani is now on Telegram. Click here to join our channel and stay updated with the latest news.

Next