Advertisement

ಮನೆಯ ಪಾಯಾಪಾಯಗಳು

09:22 AM May 14, 2019 | Hari Prasad |

ಕಟ್ಟಿದ ಮನೆ, ನೋಡುವುದಕ್ಕೆ ಚಂದ ಕಾಣುತ್ತದೆ. ಆದರೆ ಇದನ್ನು ಗಟ್ಟಿಮುಟ್ಟಾಗಿ ಇಟ್ಟುಕೊಳ್ಳುವ ಪಾಯ ನಮ್ಮ ಕಣ್ಣಿಗೆ ಬೀಳುವುದಿಲ್ಲ. ಈ ಪಾಯ ಅನ್ನೋದು ಒಟ್ಟು ಮನೆಯ ಕಟ್ಟುವ ಖರ್ಚಿನಲ್ಲಿ ಶೇ. 5, 10ರಷ್ಟನ್ನು ನುಂಗುತ್ತದೆ. ಪಾಯ ಹಾಕಲು ಮಣ್ಣಿನ ಗುಣಧರ್ಮ ಬಹಳ ಮುಖ್ಯ.

Advertisement

ಪ್ರತಿಯೊಬ್ಬರಿಗೂ ತಮ್ಮ ಮನೆಗೆ ಗಟ್ಟಿಮುಟ್ಟಾದ ಒಂದು ಪಾಯವನ್ನು ಹಾಕಲೇ ಬೇಕಾದ ಅಗತ್ಯ ಇರುತ್ತದೆ. ಆದರೆ ಒಂದು ಮನೆಗೆ ಆ ಕಡೆ ತೀರಾ ಅತಿ ಎನ್ನುವಷ್ಟು ಹೆಚ್ಚುವರಿ ಪಾಯವನ್ನೂ ಹಾಕದೆ, ಅದೇ ರೀತಿಯಲ್ಲಿ ತುಂಬ ದುರ್ಬಲ ಎನ್ನುವಂತಹ ಪಾಯವನ್ನೂ ಹಾಕುವ ತಪ್ಪು ಮಾಡದೆ ಮುಂದುವರೆಯುವುದು ಹೇಗೆ? ಇದು ದೊಡ್ಡ ತಲೆ ನೋವು ಅಂದುಕೊಳ್ಳಬೇಡಿ.

ಇಷ್ಟಕ್ಕೂ ಮನೆಗಳ ಗೋಡೆಗಳು, ನೆಲ, ಸೂರು, ಕಿಟಕಿ ಬಾಗಿಲುಗಳು ಸದಾ ಕಾಲ ನಮ್ಮ ಕಣ್ಣಿಗೆ ಬೀಳುತ್ತವಾದರೂ, ಈ ಪಾಯ ಎನ್ನುವ ದುಬಾರಿ ಸಂಗತಿ ಒಮ್ಮೆ ಹಾಕಿದ ಮೇಲೆ ಮಣ್ಣಿನಿಂದಲೇ ಮುಚ್ಚಲ್ಪಟ್ಟು ನಮಗೆ ಮತ್ತೆ ಸುಲಭದಲ್ಲಿ ಕಾಣವುದೂ ಇಲ್ಲ.

ಸಾಮಾನ್ಯವಾಗಿ, ಒಂದು ಮನೆಯ ಒಟ್ಟಾರೆ ಖರ್ಚಿನಲ್ಲಿ ಶೇ. ಐದರಿಂದ ಹತ್ತರಷ್ಟನ್ನು ಕಬಳಿಸುವ ಈ ಮಟ್ಟದ ಕಾಮಗಾರಿ ನಡೆಯುವಾಗ ಮನೆ ಯಜಮಾನರಿಗೆ ಹಣವೆಲ್ಲ ಮಣ್ಣಿನಲ್ಲಿ ಮುಚ್ಚಿಹೋಗುತ್ತಿರುವ ಅನುಭವ ಆಗುವುದು ಸಹಜ. ಹಾಗಾಗಿ, ನಮ್ಮ ಮನೆಗೆ ಎಷ್ಟು ಬೇಕೋ ಅಷ್ಟು ಮಾತ್ರ ಪಾಯಹಾಕಿದರೆ, ಬೇಕೆಂದರೆ ಒಂದು ಮಹಡಿ ಹೆಚ್ಚುವರಿಯಾಗಿ ಕೂಡ ಪಾಯ ಹಾಕಿ ಸಾಕಷ್ಟು ಹಣವನ್ನು ಉಳಿಸುವುದರ ಜೊತೆಗೆ ಮನೆಯ ಸುರಕ್ಷತೆಯ ಬಗ್ಗೆ ಆತಂಕವಿಲ್ಲದೆ ಇರಬಹುದು.

ಪಾಯ ಏಕೆ? ಹೇಗೆ?
ಮಣ್ಣಿನಲ್ಲಿ ಬಹುತೇಕ ಮುಚ್ಚೇಹೋಗುವ ಈ ಮುಖ್ಯಭಾಗ, ಒಂದು ರೀತಿಯಲ್ಲಿ ಮಧ್ಯಸ್ಥ. ಇಡೀ ಮನೆಯ ಭಾರವನ್ನು ಹೊರುತ್ತ, ತನ್ನ ಪಾದತಳದ ಹರನ ಮೂಲಕ ಅಡಿಪಾಯದ ಮಣ್ಣಿಗೆ ಹೆಚ್ಚಾ ಕಡಿಮೆ ಸರಿಸಮನಾಗಿ ಹಂಚಬೇಕು. ಹೀಗಾಗಲು ಸಹಕರಿಸುವುದು ಪಾಯದ ಅಗಲ. ನಮ್ಮ ಮನೆಗಳ ಗೋಡೆಗಳು ಇಟ್ಟಿಗೆಯದಾದರೆ ಸಾಮಾನ್ಯವಾಗಿ ಒಂಭತ್ತು ಇಂಚು ಇಲ್ಲವೇ ನಾಲ್ಕೂವರೆ ಇಂಚು ಆಗಿದ್ದರೆ ಅವುಗಳಿಗೆ ಹಾಕುವ ಪಾಯ ಕಡೇ ಪಕ್ಷ ನಾಲ್ಕರಿಂದ ಐದು ಪಟ್ಟು ಅಗಲ ಇರುತ್ತದೆ.

Advertisement

ಒಂಭತ್ತು ಇಂಚು ಗೋಡೆಗೆ ಮೂರರಿಂದ ನಾಲ್ಕು ಅಡಿ ಅಗಲದ ಪಾಯ ಹಾಕಲಾದರೆ, ಅರ್ಧ ಇಟ್ಟಿಗೆ ಗೋಡೆಗೆ ಒಂದೂವರೆ ಇಲ್ಲವೇ ಎರಡು ಅಡಿಯ ಪಾಯ ಹಾಕಲಾಗುತ್ತದೆ. ಹಾಗಾಗಿ, ಗೋಡೆಗಳ ಮೂಲಕ ಪಾಯದ ಮೇಲೆ ಬರುವ ಭಾರವನ್ನು ಪಾಯದ ಅಗಲದ ಹರವಿನ ಮೂಲಕ ವಿಸ್ತಾರವಾದ ಸ್ಥಳದಲ್ಲಿ ಬೀಳುವಂತೆ ಮಾಡಲಾಗುತ್ತದೆ.

ಮಣ್ಣಿನ ಭಾರ ಹೊರುವ ಗುಣ
ಸಾಮಾನ್ಯವಾಗಿ ಮಣ್ಣಿಗೆ ಪ್ರತಿ ಚದುರ ಅಡಿಗೆ ಒಂದರಿಂದ ಎರಡು ಮೆಟ್ರಿಕ್‌ ಟನ್‌ನಷ್ಟು ಭಾರವನ್ನು ಹೊರುವ ಸಾಮರ್ಥ್ಯ ಇರುತ್ತದೆ. ಇದನ್ನು ಮಣ್ಣಿನ ಭಾರ ಹೊರುವ ಗುಣ ಅಥವಾ “ಲೋಡ್‌ ಬೇರಿಂಗ್‌ ಕ್ಯಪಾಸಿಟಿ’ ಎಂದು ಹೇಳಲಾಗುತ್ತದೆ. ನಾವು ನಾಲ್ಕು ಅಡಿ ಅಗಲದ ಪಾಯ ಹಾಕಿದರೆ ಆಗ ಅದು ಎಂಟು ಟನ್‌ ಭಾರ ಹೊರುವ ಸಾಮರ್ಥ್ಯ ಹೊಂದುತ್ತದೆ.

ಒಂದು ಕೋಣೆಯ ಗೋಡೆ ಹತ್ತು ಅಡಿ ಉದ್ದ ಇದ್ದರೆ, ಅದರ ಉದ್ದಕ್ಕೂ ಪಾಯ ಇದ್ದರೆ, ಆಗ ಆ ಗೋಡೆಯ ಕೆಳಗಿರುವ ಪಾಯ ಒಟ್ಟಾರೆಯಾಗಿ ಎಂಭತ್ತು ಟನ್‌ ಭಾರ ಹೊರುವ ಸಾಮರ್ಥ್ಯ ಹೊಂದುತ್ತದೆ. ಒಂದು ದೊಡ್ಡ ಲಾರಿಯ ಭಾರ ಹಾಗೂ ಸರುಕೂ ಸೇರಿ ಇಪ್ಪತ್ತು ಟನ್‌ ಇದ್ದರೆ, ಇಂಥ ನಾಲ್ಕು ಲಾರಿಗಳನ್ನು ಈ ಪಾಯ ಹೊರುವ ಸಾಮರ್ಥ್ಯ ಹೊಂದಿರುತ್ತದೆ.

ಪಾಯದ ಅಗಲ
ನುರಿತ ಆರ್ಕಿಟೆಕ್ಟ್ ಇಂಜಿನಿಯರ್‌ ಗಳಿಂದ ಮಣ್ಣಿನ ಪರೀಕ್ಷೆ ಮಾಡಿಸಿ, ಅದರ ಭಾರ ಹೊರುವ ಸಾಮರ್ಥ್ಯ ನಿರ್ಧರಿಸಿ ನಂತರ ಸೂಕ್ತ ಪಾಯದ ವಿನ್ಯಾಸ ಮಾಡಿಸುವುದು ಸೂಕ್ತ. ಎಲ್ಲಾ ಕಡೆಯೂ ಲೆಕ್ಕಾಚಾರದಲ್ಲಿ ಮಾಡುವವರು ಸಿಗುವುದಿಲ್ಲ. ಆದರೆ ಸರಿಯಾದ ರಸ್ತೆ ಸಂಪರ್ಕ ಇಲ್ಲದ ಊರುಗಳಲ್ಲೂ ಮನೆ ಮಠ ಕಟ್ಟವುದು ಇದ್ದದ್ದೇ.

ನಮ್ಮ ಪೂರ್ವಜರು ಯಾವುದೇ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಓದದೇನೇ ನೂರಾರು ವರ್ಷ ಬಾಳುವ ಮನೆಗಳನ್ನು ಕಟ್ಟಲಿಲ್ಲವೇ? ಎಂದು ಪ್ರಶ್ನಿಸುವವರೂ ಉಂಟು. ಇಲ್ಲಿ ಗಮನಿಸಬೇಕಾದ ಅಂಶ ಏನೆಂದರೆ, ವರ್ಷಾನುಗಟ್ಟಲೆ ಅನುಭವ ಪಡೆದ ಗಾರೆ ಮೇಸ್ತ್ರಿಗಳಿಗೂ ವಿವಿಧ ವಸ್ತುಗಳ ಬಗ್ಗೆ, ಮಣ್ಣಿನ ಗುಣಾವಗುಣಗಳ ಬಗ್ಗೆ ಒಂದು ಅಂದಾಜಿರುತ್ತದೆ. ಬಹುಮಹಡಿ ಕಟ್ಟಡಗಳನ್ನು ಅಂದಾಜಿನ ಮೇಲೆ ಕಟ್ಟುವುದು ದುಸ್ಸಾಹಸ ಆಗುವುದಾದರೂ, ಸಣ್ಣದೊಂದು ಮನೆಯನ್ನು ಸುಭದ್ರವಾಗಿ ಕಟ್ಟುವಷ್ಟು ಪರಿಣಿತಿ ಪಡೆದುಕೊಳ್ಳುವುದು ಅಷ್ಟೇನೂ ಕಷ್ಟವಲ್ಲ. ಪರಿಣಿತರು ಸಿಗದ ಸಂದರ್ಭಗಳಲ್ಲಿ ಒಂದಷ್ಟು ಅಂದಾಜಾಗಿಯೇ ಲೆಕ್ಕಾಚಾರ ಮಾಡಿ ಮುಂದುವರೆದರೆ, ಹೆಚ್ಚು ತೊಂದರೆ ಏನೂ ಆಗುವುದಿಲ್ಲ.

ಗಟ್ಟಿ ಮಣ್ಣು ಇರುವ ಸ್ಥಳಗಳಲ್ಲಿ ಒಂಭತ್ತು ಇಂಚು ಗೋಡೆಗೆ ಮೂರು ಅಥವಾ ಮೂರೂವರೆ ಅಡಿ ಅಗಲದ ಪಾಯ ಹಾಕುವ ಪರಿಪಾಠವಿದೆ. ನಿಮ್ಮ ಮನೆ ಒಂದೆರಡು ಮಹಡಿ ಇದ್ದರೆ, ಇಷ್ಟು ಅಗಲದ ಪಾಯ ಸಾಮಾನ್ಯವಾಗಿ ಸಾಕಾಗುತ್ತದೆ. ಇನ್ನು ನಿಮ್ಮ ಮನೆಯ ಪಾಯದ ಮಣ್ಣು ಅಷ್ಟೇನೂ ಗಟ್ಟಿ ಇಲ್ಲ ಎಂದೆನಿಸಿದರೆ, ನಾಲ್ಕು ಅಡಿ ಅಗಲದ ಪಾಯ ಹಾಕಬಹುದು.

ಆದರೆ, ಅಡಿಪಾಯದ ಮಟ್ಟದ ಮಣ್ಣು ತೀರ ಮೆದುವಾಗಿದ್ದರೆ, ಭರ್ತಿ ಮಣ್ಣಾಗಿದ್ದು, ಅಗೆದಾಗ ತಾಜ್ಯ, ಪ್ಲಾಸ್ಟಿಕ್‌, ಇತ್ಯಾದಿ ಸಿಕ್ಕರೆ, ಎಚ್ಚೆತ್ತುಕೊಂಡು ಮಾಮೂಲಿ ಸೈಜು ಕಲ್ಲಿನ ಪಾಯದ ಬದಲು ಅದಕ್ಕಿಂತ ಹಗುರ ಹಾಗೂ ಗಟ್ಟಿಯಾದ ಆರ್‌ ಸಿ ಸಿ ಕಾಲಂ ಹಾಗೂ ಫ‌ುಟಿಂಗ್‌ ಅಂದರೆ ಪಾಯ ಹಾಕುವುದು ಉತ್ತಮ. ಇದೇ ರೀತಿಯಲ್ಲಿ ಸಾಮಾನ್ಯವಾಗೇ ಗಟ್ಟಿಮುಟ್ಟಾಗಿರುವ ಮಣ್ಣಿನಲ್ಲಿ ನಾಲ್ಕೂವರೆ ಇಂಚು ಗೋಡೆಯ ಪಾಯ ಒಂದೂವರೆ ಅಡಿ ಇಲ್ಲವೆ ಎರಡು ಅಡಿ ಅಗಲ ಇದ್ದರೆ ಸಾಕಾಗುತ್ತದೆ.

ಪಾಯದ ಆಳದ ನಿರ್ಧಾರ
ಬಿಸಿಲಿಗೆ ಒಣಗಿ ಕುಗ್ಗದೆ, ನೀರು ಹೀರಿಕೊಂಡು ಹಿಗ್ಗದೆ, ವರ್ಷವಿಡೀ ಒಂದೇ ರೀತಿಯಾಗಿ ಇರುವ ಕೆಳ ಮಣ್ಣಿನ ಮಟ್ಟದವರೆಗೂ ಅಗೆದು ಪಾಯಹಾಕಲು ವಿವಿಧ ಕಾರಣಗಳಿವೆ. ಮಳೆ ಅಥವಾ ಮತ್ತೂಂದರ ಮೂಲಕ ಹರಿಯುವ ನೀರು ಪಾಯದ ಕೆಳಗಿನ ಮಣ್ಣಿಗೆ ಬಿದ್ದು, ಅದು ತೇವಗೊಂಡರೆ, ಅದರ ಭಾರ ಹೊರುವ ಸಾಮರ್ಥ್ಯ ಸ್ವಲ್ಪ ಕಡಿಮೆ ಆಗುತ್ತದೆ. ಈ ಕಾರಣದಿಂದ, ನಾವು ಅಡಿಪಾಯವನ್ನು ನಾಲ್ಕೈದು ಅಡಿ ಆಳದಲ್ಲಿ ಹಾಕುವುದು.

ಜೊತೆಗೆ ಅಕ್ಕ ಪಕ್ಕದಲ್ಲಿ ಇರುವ ಮರಗಳ ಬೇರೂ ಕೂಡ ಪಾಯ ಆಳವಿಲ್ಲದಿದ್ದರೆ ಒಳ ನುಸುಳಿ ಹಾನಿ ಮಾಡುವ ಸಾಧ್ಯತೆ ಇರುತ್ತದೆ. ಇನ್ನು, ಇಲಿ ಹೆಗ್ಗಣಗಳು ಬಿಲಗಳನ್ನು ತೋಡಿ, ಮಣ್ಣು ಹೊರಹಾಕಿಯೂ ಹೆಚ್ಚು ಆಳ ಇಲ್ಲದ ಪಾಯಗಳಿಗೆ ಹಾನಿ ಮಾಡುವ ಸಾಧ್ಯತೆ ಇರುತ್ತದೆ. ಈ ಎಲ್ಲ ಅಂಶಗಳನ್ನು ಪರಿಶೀಲಿಸಿ ಪಾಯದ ಆಳವನ್ನು ಸುಮಾರು ಮೂರರಿಂದ ಐದು ಅಡಿಗಳವರೆಗೆ ಹಾಕುವ ಸಂಪ್ರದಾಯ ಉಂಟಾಗಿದೆ.

ಕೆಲವೊಮ್ಮೆ ಮೇಲೆ ಸಡಿಲವಾಗಿರುವ ಮಣ್ಣು ಅಗೆದ ನಂತರ ಗಟ್ಟಿಪದರಕ್ಕೆ ದಾರಿ ಮಾಡಬಹುದು. ಸಾಮಾನ್ಯವಾಗಿ ಗಿಡ ಗಂಟಿಗಳ ಬೇರುಗಳು, ಹುಲ್ಲು ಹುಪ್ಪಡಿಗಳಿಂದಾಗಿ ಯಾವುದೇ ಮಣ್ಣಿನ ಮೇಲ್‌ ಪದರ ಅಷ್ಟೊಂದು ಗಟ್ಟಿಯಾಗಿ ಇರುವುದಿಲ್ಲ. ಕೆಳಗೆ ಹೋದಷ್ಟೂ ವಾತಾವರಣದ ವೈಪರಿತ್ಯಗಳಿಗೆ ಒಳಗಾಗದೇ ಉಳಿದ ಗಟ್ಟಿ ಪದರದ ಮಣ್ಣು ಸಿಗುತ್ತದೆ. ಇಂಥ ಮಟ್ಟ ಗುರುತಿಸಿ ಪಾಯ ಹಾಕಿದರೆ, ಹೆಚ್ಚು ಖರ್ಚೂ ಆಗದೆ ಸದೃಢ ಪಾಯ ನಮ್ಮದಾಗುತ್ತದೆ.

— ಆರ್ಕಿಟೆಕ್ಟ್ ಕೆ. ಜಯರಾಮ್‌
ಹೆಚ್ಚಿನ ಮಾಹಿತಿಗೆ- 98441 32826.

Advertisement

Udayavani is now on Telegram. Click here to join our channel and stay updated with the latest news.

Next