Advertisement

ಇಂದು(ನ.26) ತುಳಸಿ ವಿವಾಹ; ದೀಪಾವಳಿ ಸಂಭ್ರಮಕ್ಕೆ ತೆರೆ

01:30 PM Nov 26, 2020 | Nagendra Trasi |

ತುಳಸಿ ಕಟ್ಟೆಗೆ ಹಿಂದೂ ಸಂಸ್ಕೃತಿಯಲ್ಲಿ ಬಹಳಷ್ಟು ಪ್ರಾಧಾನ್ಯತೆ ನೀಡಲಾಗಿದೆ. ಸಂಸ್ಕೃತಿ, ಪಾವಿತ್ರ್ಯ, ಆದರ್ಶಗಳನ್ನು ಎತ್ತಿ ಹಿಡಿಯುವ ತುಳಸಿ ವಿವಾಹ ದೀಪಾವಳಿಯ ಅನಂತರ ಬರುವ ವಿಶೇಷ ಹಬ್ಬ. ಕಾರ್ತಿಕ ಮಾಸದ ಉತ್ಥಾನ ದ್ವಾದಶಿಯಂದು ಈ ಬಾರಿ ನ. 26ರಂದು ತುಳಸಿ ವಿವಾಹ ಪೂಜಾ ವಿಧಿಗಳನ್ನು ನಡೆಸಲಾಗುತ್ತದೆ.

Advertisement

ಇದರೊಂದಿಗೆ ದೀಪಾವಳಿ ಸಂಭ್ರಮವೂ ಮುಕ್ತಾಯಗೊಳ್ಳುತ್ತದೆ. ಸಮುದ್ರ ಮಂಥನದ ವೇಳೆ ಧನ್ವಂತರಿ ರೂಪದಲ್ಲಿ ಅವತಾರವೆತ್ತಿದ ವಿಷ್ಣುವಿನ ಕಣ್ಣುಗಳಿಂದ ಸುರಿದ ಸಂತೋಷದ ಕಣ್ಣೀರು ಅಮೃತ ಕಲಶದ ಮೇಲೆ ಬಿದ್ದು ರೂಪ ತಾಳಿದ ಮಾತೆಯೇ ತುಳಸಿ ದೇವಿ ಎನ್ನುವ ಕಥೆ ಪುರಾಣದಲ್ಲಿದೆ. ಲಕ್ಷ್ಮೀಯಂತೆ
ತುಳಸಿಯೂ ವಿಷ್ಣುವಿಗೆ ಸಮರ್ಪಿತಳಾಗಿದ್ದರಿಂದ ತುಳಸಿ ಮಾತೆ, ವೈಷ್ಣವಿ, ಹರಿಪ್ರಿಯಾ, ಸುರವಲ್ಲಿ, ಸಂಜೀವಿನಿ ಎಂದೇ ತುಳಸಿಯನ್ನು ಪೂಜಿಸಲಾಗುತ್ತದೆ.

ಇನ್ನೊಂದು ಕಥೆಯ ಪ್ರಕಾರ ಅಸುರನಾಗಿದ್ದ ಜಲಂಧರನನ್ನು ವಿವಾಹವಾದ ವೃಂದೆ ತಪಸ್ಸು ಮಾಡಿ ಲಕ್ಷ್ಮೀ ನಾರಾಯಣರು ಸದಾ ತಮ್ಮ ಮನೆಯಲ್ಲಿ ವಾಸವಾಗುವಂತೆ ವರ ಪಡೆಯುತ್ತಾಳೆ. ಪತಿವ್ರತೆಯಾದ ವೃಂದಾಳ ತಪಸ್ಸಿನ ಶಕ್ತಿಯ ಪರಿಣಾಮ ಜಲಂಧರನಿಗೆ ಸೋಲೇ ಇರುವುದಿಲ್ಲ. ಅವನ ಉಪಟಳದಿಂದ ಬೇಸೆತ್ತ ದೇವತೆಗಳು ವಿಷ್ಣುವಿನ ಮೊರೆ ಹೋಗುತ್ತಾರೆ. ವಿಷ್ಣು ಜಲಂಧರನ ರೂಪದಲ್ಲಿ ಬಂದು ವೃಂದಾಳ ಪಾವಿತ್ರ್ಯತೆಯನ್ನು ಭಂಗ ಮಾಡಿ ಜಲಂಧರನನ್ನು
ಸಂಹರಿಸುತ್ತಾನೆ. ಇದರಿಂದ ಕೋಪಗೊಂಡ ವೃಂದಾ ವಿಷ್ಣುವಿಗೆ ಪತ್ನಿ ವಿಯೋಗವಾಗಲಿ ಎಂಬ ಶಾಪಕೊಟ್ಟು ಪತಿಯ ಚಿತೆಗೆ ಹಾರುತ್ತಾಳೆ.

ಪಾರ್ವತಿಯು ವೃಂದೆಯ ಚಿತೆಯ ಸುತ್ತಲೂ ತುಳಸಿ, ನೆಲ್ಲಿ, ಹುಣಸೆ ಗಿಡಗಳನ್ನು ನೆಟ್ಟು ವೃಂದಾವನವೊಂದನ್ನು ನಿರ್ಮಿಸುತ್ತಾಳೆ. ಇಲ್ಲಿ ಹಚ್ಚಹಸುರಾಗಿ ಬೆಳೆದ ತುಳಸಿ ರುಕ್ಮಿಣಿಯಾಗಿ ಜನಿಸಿ ತುಳಸಿ ವಿವಾಹದ ದಿನವಾದ ಉತ್ಥಾನ ದ್ವಾದಶಿಯಂದು ಕೃಷ್ಣನನ್ನು ವರಿಸುತ್ತಾಳೆ. ಈ ವಿವಾಹೋತ್ಸವದ ಸ್ಮರಣೆಯೇ ತುಳಸಿ ವಿವಾಹ ಎಂದು ಆಚರಿಸುವ ಸಂಪ್ರದಾಯವಿದೆ.

ತುಳಸಿ ವಿವಾಹದ ಪೂಜಾ ಕಾರ್ಯಕ್ರಮಗಳು ಸಂಜೆ ಅಥವಾ ಮುಂಜಾನೆ ನಡೆಸುವ ಪದ್ಧತಿ ಇದೆ. ಇದಕ್ಕಾಗಿ ವೃಂದಾವನ ಅಥವಾ ತುಳಸಿ ಕಟ್ಟೆಯನ್ನು ಶುಭ್ರಗೊಳಿಸಿ,ಸುಣ್ಣ ಬಣ್ಣಗಳಿಂದ ಅಲಂಕರಿಸಿ, ರಂಗೋಲಿ ಬಿಡಿಸಿ, ಮಾವಿನ ತಳಿರು ತೋರಣ ಕಟ್ಟಲಾಗುತ್ತದೆ. ಇದರಲ್ಲಿ ಹುಣಸೆ, ನೆಲ್ಲಿ ಗಿಡಗಳನ್ನು ನೆಟ್ಟು ಪೂಜಿಸಲಾಗುತ್ತದೆ.

Advertisement

ಕಟ್ಟೆಯಲ್ಲಿ ಕೃಷ್ಣನ ಪ್ರತಿಮೆ ಇಟ್ಟು ಅರಿಸಿನ, ಕುಂಕುಮ, ಮಂಗಲಸೂತ್ರ ಮೊದಲಾದ ಮಂಗಲಕರ ದ್ರವ್ಯಗಳನ್ನಿಟ್ಟು ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಗುತ್ತದೆ. ನೈವೇದ್ಯದ ರೂಪದಲ್ಲಿ ಕೊಬ್ಬರಿ, ಬೆಲ್ಲ, ಖರ್ಜೂರ, ಬಾಳೆಹಣ್ಣು, ಕಬ್ಬು, ತಾಂಬೂಲವನ್ನು ಸಮರ್ಪಿಸಲಾಗುತ್ತದೆ. ಈ ದಿನ ದೀಪದಾನ ಹೆಚ್ಚಿನ ಮಹತ್ವವನ್ನು ಪಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next